Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಭಯುತ್ಪಾದನೆ ವಿರುದ್ಧ ಭಾರತ-ರಷ್ಯಾ ಒಟ್ಟಾಗಿ ಹೋರಾಟ

ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ಬಲಿ

ಫಲಿತಾಂಶ ಆಧಾರಿತ ಶಿಕ್ಷಣ ಅಗತ್ಯ :ಡಾ.ಬಿ.ವೈ.ಖಾಸ್ನಿಸ್

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕಾಯಕಯೋಗಿ ಹೂಗಾರ ಮಾದಯ್ಯನವರು
ವಿಶೇಷ ಲೇಖನ

ಕಾಯಕಯೋಗಿ ಹೂಗಾರ ಮಾದಯ್ಯನವರು

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ.ಭವ್ಯ ಅಶೋಕ್ ಸಂಪಗಾರ್
ಕ್ಷಯ ರೋಗ ವೈದ್ಯಾಧಿಕಾರಿ
ಜಿಲ್ಲಾಸ್ಪತ್ರೆ, ಬೆಳಗಾವಿ

ಉದಯರಶ್ಮಿ ದಿನಪತ್ರಿಕೆ

ಹೂಗಾರರೆಂದರೆ ಹೂವು-ಪತ್ರೆಗಳ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದ ಸಮಾಜವೆಂದು ಅರ್ಥೈಸಿಕೊಳ್ಳಬಹುದು. ಈ ಸಮಾಜದ ಬಗ್ಗೆ ಚಾಲುಕ್ಯ ಮಹಾರಾಜ ಮಂಗಲೇಶನ ಶಾಸನದಲ್ಲಿ ಲಿಖಿತ ವರದಿಗಳಿವೆ. ಹೆಚ್ಚಿನ ಭಾಗ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹರಡಿರುವ ಹೂವಿನ ಮನಸ್ಸಿನವರಾದ ಇವರು ದೇಶದ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಇತಿಹಾಸದ ಪ್ರಕಾರ ‘ಪುಷ್ಪದ ಸೋಮಯ್ಯ’, ‘ಬಾಹೂರು ಬೊಮ್ಮಯ್ಯ’, ‘ಹೂವಿನ ಅಲ್ಲಮ’, ‘ಬಿಲ್ವಪತ್ರೆಯ ವೀರಣ್ಣ’, ‘ಗುಂಡುಕತ್ತರಿಯ ನಾಚಯ್ಯ’ ಮುಂತಾದ ಹೂಗಾರ ಸಮಾಜಕ್ಕೆ ಸೇರಿದ ಪ್ರಮುಖರ ವಿವರಣೆಗಳಿವೆ. ಹರಿಹರ ಮಹಾಕವಿಯ ನಂಬಿಯಣ್ಣನ ರಗಳೆಯಲ್ಲಿ ‘ಪುಷ್ಪದತ್ತ’ನೆಂಬ ಪಾತ್ರವಿದೆ. ಇವನನ್ನು ಹೂಗಾರರ ಮೊದಲ ಪ್ರತಿನಿಧಿಯಾಗಿ ಕಾಣಬಹುದು.
ಈ ಸಮಾಜದ ಆದಿಪುರುಷನೆಂದು ಶರಣ ‘ಹೂಗಾರ ಮಾದಯ್ಯ’ನವರನ್ನು ಗೌರವಿಸಲಾಗುತ್ತದೆ.
ಭವ್ಯ ಭಾರತ ದೇಶದ ಸಂಸ್ಕೃತಿಯು ಐದು ಸಾವಿರ ವರ್ಷಗಳಿಗಿಂತಲೂ ಹಳೆಯದಾಗಿದೆ. ‘ಜೀವ ಮತ್ತು ಪರಮಾತ್ಮ’, ‘ಸೃಷ್ಟಿ-ಅಂತ್ಯ’ ಮುಂತಾದ ವಿಷಯಗಳ ಕುರಿತು ಇಲ್ಲಿ ನಡೆದಿರುವಷ್ಟು ಆಳವಾದ ಅಧ್ಯಯನ ಪ್ರಪಂಚದ ಮತ್ತೆಲ್ಲಿಯೂ ನಡೆದಿಲ್ಲ. ಇಲ್ಲಿ ಸಾರ್ಥಕ ಬದುಕನ್ನು ನಡೆಸುವ ಕುರಿತು ಹಲವಾರು ಚಿಂತನೆಗಳು ನಡೆದಿದ್ದು ಅವುಗಳಲ್ಲಿ ಅತ್ಯಂತ ಅಪ್ಯಾಯಮಾನವೆನಿಸುವುದು ಹನ್ನೆರಡನೆಯ ಶತಮಾನದಲ್ಲಿ ಬಂದ “ಶರಣತತ್ವ”. ವೈದಿಕ ಪರಂಪರೆಯಲ್ಲಿ ಬೋಧಿಸಿದ ಹಾಗೂ ಮಾನವನ ಸಂಪೂರ್ಣ ಆಯುಷ್ಯ ಕಳೆದರೂ ತಿಳಿದುಕೊಳ್ಳಲು ಅಸಾಧ್ಯವಾದ ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ವೇದಾಂಗಗಳು, ಎರಡು ಮಹಾಕಾವ್ಯಗಳು, ಆರು ದರ್ಶನ ಶಾಸ್ತ್ರಗಳು ಇವುಗಳನ್ನೆಲ್ಲಾ ನಿರಾಕರಿಸಿದ ಶರಣರು ಸರಳ ಭಾಷೆಯನ್ನು ಬಳಸಿ ವಚನಸಾಹಿತ್ಯದ ಮೂಲಕ ಜಗತ್ತಿಗೆ ಸಮಾನತೆಯ,ಸಧ್ಭಕ್ತಿಯ, ಸದಾಚಾರದ ಸನ್ಮಾರ್ಗವನ್ನು ತೋರಿದವರು.
ವಿರಾಗಿಣಿ ಮಹಾಶರಣೆ ಅಕ್ಕಮಹಾದೇವಿಯವರು ತನ್ನ ವಚನದಲ್ಲಿ ಹೀಗೆ ಹೇಳುತ್ತಾರೆ,
“ಉಸುರಿನ ಪರಿಮಳವಿರಲು


ಕುಸುಮದ ಹಂಗೇಕಯ್ಯಾ?
ಕ್ಷಮೆ ದಮೆ ಶಾಂತಿ ಸೈರಣೆಯಿರಲು ಸಮಾಧಿಯ ಹಂಗೇಕಯ್ಯಾ?
ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ
ಚೆನ್ನಮಲ್ಲಿಕಾರ್ಜುನ”.
ತಮ್ಮ ಉಸಿರನ್ನೇ ಹೂ ಪತ್ರೆಗಳನ್ನಾಗಿಸಿಕೊಂಡು, ಕ್ಷಮಾಗುಣ, ಶಾಂತಿ, ಇಂದ್ರಿಯ ನಿಗ್ರಹಗಳನ್ನು ರೂಢಿಯಾಗಿಸಿಕೊಂಡು ಬದುಕುತ್ತಿರುವವರಿಗೆ ಜಪ-ತಪಗಳ ಅಗತ್ಯವಿಲ್ಲ. ಇಡೀ ಪ್ರಪಂಚವನ್ನೇ ತಾವೆಂದು ಅರಿತುಕೊಂಡವರಿಗೆ ಏಕಾಂತದಲ್ಲಿ ಆಧ್ಯಾತ್ಮಿಕ ಅನುಸಂಧಾನವು ಬೇಕಿಲ್ಲ. ಅಂಥಹ ಪಥದಲ್ಲಿ ನಡೆಯುತ್ತಿರುವವರು ಲೌಕಿಕ ಬದುಕಿನಲ್ಲಿ ಇದ್ದುಕೊಂಡೇ ಪ್ರತಿ ಗಳಿಗೆಯೂ ಪರಮಾತ್ಮನ ಸಾಂಗತ್ಯವನ್ನು ಪಡೆಯಬಹುದು ಎನ್ನುವುದೇ ಈ ವಚನದ ಅರ್ಥ.
ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಶರಣರು ಮತ್ತು ಅವರ ವಚನಗಳು ಪ್ರಸ್ತುತ ಎನಿಸಿರುವುದಕ್ಕೆ ಇದೇ ಕಾರಣವಾಗಿದೆ. ಅವರ ಬೋಧನೆಯು ಆಧ್ಯಾತ್ಮವನ್ನು ಸರಳಗೊಳಿಸಿದ್ದಲ್ಲದೆ ಸಾಮಾನ್ಯ ಜನರಿಗೂ ಅನ್ವಯವಾಗುವಂತೆ ಪರತತ್ವವನ್ನು ಸಾರಿದವು. ಅತ್ಯಂತ ಕ್ಲಿಷ್ಟಕರವಾದ ಮಾರ್ಗಗಳಿಂದ ದೇವರ ಅನುಗ್ರಹ ಪಡೆಯಬೇಕೆಂಬ ಸಂಕುಚಿತ ಚಿಂತನೆಯಿಂದ ಹೊರಬಂದ ಶರಣರು ತಾವುಗಳು ದಿನನಿತ್ಯ ಮಾಡುತ್ತಿರುವ “ಕಾಯಕವೇ ಕೈಲಾಸ”ವೆನ್ನುವ ಸುಲಭೋಪಾಯವನ್ನು ಸಾರಿದರು. ಭೇದ-ಭಾವಗಳಿಂದ ಮುಕ್ತವಾದ ಸಮ-ಸಮಾಜದ ನಿರ್ಮಾಣದಲ್ಲಿ ತೊಡಗಿಸಿಕೊಂಡರು. ಸಂಸಾರದಲ್ಲಿ ಬಂಧಿಯಾದವರು ಕೂಡ ಸನ್ಮಾರ್ಗದಲ್ಲಿ ನಡೆದರೆ ಸಾಧನೆಯು ಸಾಧ್ಯವಿದೆಯೆಂದು ನಿರೂಪಿಸಿದರು. ಧರ್ಮಚಿಂತನೆಯಲ್ಲಿಯೇ ಮಾಡಿದ “ಕಾಯಕ” ಹಾಗೂ ತಾವು ದುಡಿದದ್ದನ್ನು ಸಮಾಜದೊಡನೆ ಹಂಚಿಕೊಳ್ಳುವ “ದಾಸೋಹ” ಇವೆರಡೂ ಶರಣರ ಜೀವಾಳವಾಗಿದ್ದವು. ಅದರಿಂದಲೇ ಶರಣತತ್ವವು ಬೇರೆಲ್ಲಾ ಚಿಂತನೆಗಳನ್ನು ಮೀರಿ ಪ್ರಬಲವಾಗಿ ನಿಂತಿದೆ.
ಶರಣತತ್ವಗಳಾದ ಅರಿವು, ಆಚಾರ, ಅನುಭಾವ, ಕಾಯಕ, ದಾಸೋಹಗಳನ್ನು ಜೀವನದುದ್ಧಕ್ಕೂ ಪಾಲಿಸಿ ನಮಗೆಲ್ಲರಿಗೂ ಮಾದರಿಯಾದಂತಹ ಶರಣ ಬಳಗದವರೆಲ್ಲರ ಪೂರ್ಣ ಪರಿಚಯ ಇಂದಿಗೂ ಲಭ್ಯವಾಗಿಲ್ಲ. ಕಲ್ಯಾಣದಲ್ಲಿ ಐಕ್ಯವಾಗಿರುವ ಅಂತಹ ಏಳುನೂರ ಎಪ್ಪತ್ತು ಅಮರಗಣಂಗಳಲ್ಲಿ “ಹೂಗಾರ ಮಾದಯ್ಯ”ನವರು ವಿಶೇಷರೆನಿಸಿಕೊಳ್ಳುತ್ತಾರೆ.
ಬಾದಾಮಿಯ ಸಮೀಪದ ಒಂದು ಹಳ್ಳಿಯಲ್ಲಿ ಶಿವಾಲಯವೊಂದಿತ್ತು. ಅಲ್ಲಿ “ಮಹಾದೇವ”ನೆಂಬ ಪರಮಶಿವಭಕ್ತನು ಅರ್ಚಕರಾಗಿ ಪರಮಾತ್ಮನ ಸೇವೆಯಲ್ಲಿ ತೊಡಗಿದ್ದರು. ಅವರಿಗೆ ಅನಂತನ ಹುಣ್ಣಿಮೆಯ ದಿನದಂದು ಮಗನೊಬ್ಬ ಜನಿಸಿದನು. ಶಿವನ ಅನುಯಾಯಿಗಳಾದ ಅವರು ಮಗನನ್ನು “ಮಹಾದೇವ”ನೆಂದೇ ಕರೆದರು. ಅಪ್ಪ-ಮಗನ ಹೆಸರು ಒಂದೇ ಆದದ್ದರಿಂದ ಊರಿನವರು ಮಗನನ್ನು ಚಿಕ್ಕಮಹಾದೇವ, ಮಾದಣ್ಣ, ಚಿಕ್ಕ ಮಾದಣ್ಣ, ಮಾದಯ್ಯ ಹೀಗೆ ಕರೆಯಲಾರಂಭಿಸಿದರು. ಚಿಕ್ಕ ಮಾದಯ್ಯನೂ ಕೂಡ ಅಪ್ಪನಂತೆಯೇ ಶಿವಭಕ್ತನಾಗಿ ದೇವಸ್ಥಾನದಲ್ಲಿ ಹೂ-ಪತ್ರೆಗಳಿಂದ ದೇವರನ್ನು ಅಲಂಕರಿಸಿ ಪೂಜಿಸುತ್ತಾರೆ. ಅಲಂಕಾರವು ಅದೆಷ್ಟು ಆಕರ್ಷಕವಾಗಿರುತ್ತದೆಂದರೆ ಸುತ್ತಲಿನ ಊರುಗಳ ಜನರೆಲ್ಲ ಅದನ್ನು ನೋಡಲೆಂದೇ ಗಾಡಿಗಳನ್ನು ಕಟ್ಟಿಕೊಂಡು ಬರುತ್ತಿರುತ್ತಾರೆ. ಚಿಕ್ಕ ಮಾದಯ್ಯನು ಮುಂದಿನ ದಿನಗಳಲ್ಲಿ ‘ಮಹಾದೇವಿ’ಯವರನ್ನು ಮದುವೆಯಾಗಿ ‘ಲಿಂಗಣ್ಣ’ನೆಂಬ ಮಗನನ್ನು ಪಡೆಯುತ್ತಾರೆ. ಐಹೊಳೆಯ ಅರಸು ಮನೆತನವು ಇವರುಗಳು ಪೂಜೆ ಮಾಡುತ್ತಿದ್ದ ಆಲಯಕ್ಕೆ ನಿರಂತರ ಭೇಟಿ ನೀಡುತ್ತಿದ್ದರು. ಆ ರೀತಿಯಾಗಿ ಚಿಕ್ಕ ಮಾದಯ್ಯನ ತಂದೆಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಅರಸರಿಗೆ “ಶಿವಯೋಗಿ ಮಲ್ಲರಸ ಅಥವಾ ಮಾದರಸ” ಎಂಬ ಮಗ ಜನಿಸಿರುತ್ತಾರೆ. ಕಾಲಾನಂತರದಲ್ಲಿ ಚಿಕ್ಕಮಾದಯ್ಯನ ತಂದೆಗೂ, ಇವರಿಗೂ ಸ್ನೇಹ ಬೆಳೆಯುತ್ತದೆ. ಕಲಕುರ್ಕಿಯ ಶಿವಯೋಗಿ ಮಲ್ಲರಸರಿಗೆ “ಸಕಲೇಶ ಮಾದರಸ”ರೆಂಬ ಪುತ್ರಸಂತಾನವಾಗುತ್ತದೆ. ಇವರು ಅಣ್ಣ ಬಸವಣ್ಣನ ಅನುಯಾಯಿಗಳಾಗಿದ್ದಲ್ಲದೆ, ಚಿಕ್ಕಮಾದಯ್ಯನಿಗೆ ಕಲ್ಯಾಣದಲ್ಲಿ ಶರಣರು ಮಾಡುತ್ತಿರುವ ಕ್ರಾಂತಿಯ ಕುರಿತು ಹೇಳುತ್ತಲೇ ಇರುತ್ತಾರೆ. ಇದರಿಂದ ಪ್ರಭಾವಿತರಾದ ಚಿಕ್ಕ ಮಾದಯ್ಯನವರು ಹೆಂಡತಿ-ಮಕ್ಕಳನ್ನು ಕಟ್ಟಿಕೊಂಡು ಕಲ್ಯಾಣಕ್ಕೆ ಹೋಗಿ ಬಸವಣ್ಣನವರನ್ನು ಭೇಟಿಯಾಗುವ ಕನಸು ಕಾಣುತ್ತಾರೆ. ಹೆಂಡತಿಯೂ ಒಪ್ಪಿದ್ದರಿಂದ ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಕಲ್ಯಾಣಕ್ಕೆ ಹೋಗುತ್ತಾರೆ. ಅಲ್ಲಿ ಬಸವಣ್ಣ ಮೊದಲಾದ ಶರಣರ ಸಾಮಿಪ್ಯ ದೊರೆತು ಅಲ್ಲಿನ ಪರಿಸರ ಅವರನ್ನು ಅಲ್ಲಿಯೇ ಉಳಿದುಕೊಳ್ಳಲು ಪ್ರೇರೇಪಿಸುತ್ತದೆ. ಚಿಕ್ಕ ಮಾದಯ್ಯನು ಕಲ್ಯಾಣದಲ್ಲಿ ನೆಲೆಗೊಂಡು ನಸುಕಿನಲ್ಲಿಯೇ ಎದ್ದು ಕಾಡು-ಮೇಡು ಅಲೆದಾಡಿ ತರಹೇವಾರಿ ಹೂ-ಪತ್ರೆಗಳನ್ನು ತಂದು ಶರಣರ ಲಿಂಗಪೂಜೆಗೆ ಸಹಾಯ ಮಾಡಲು ಆರಂಭಿಸುತ್ತಾರೆ. ಹೂವಿನ ಚಿಕ್ಕ ಮಾದಯ್ಯ ಬರುಬರುತ್ತ ಹೂಗಾರ ಮಾದಯ್ಯನೆಂದೇ ಪ್ರಸಿದ್ಧಿಯಾಗುತ್ತಾರೆ. ಇವರ ಕುರಿತಾಗಿ ಪರಿಪೂರ್ಣ ಮಾಹಿತಿ ಇಲ್ಲವಾದರೂ, ಅವರು ರಚಿಸಿದ ವಚನಗಳ ಪುರಾವೆಗಳು ದೊರೆಯದಿದ್ದರೂ ಭೀಮಕವಿಯ ‘ಬಸವಪುರಾಣ’, ಸೋಮನಾಥನ ‘ಶರಣ ಚರಿತಾಮೃತ’, ಅಕ್ಕ ಅನ್ನಪೂರ್ಣ ಅವರ ‘ಜಾನಪದ ಸಾಹಿತ್ಯದಲ್ಲಿ ಶರಣರು’ ಮುಂತಾದ ಕೃತಿಗಳಲ್ಲಿ ಸ್ವಲ್ಪ ಮಟ್ಟಿನ ಪರಿಚಯವಿದೆ.
ಜಾನಪದ ಸಾಹಿತ್ಯದಲ್ಲಿ ಹೂಗಾರ ಮಾದಯ್ಯನವರ ಬಗ್ಗೆ ಹಲವಾರು ಉದಾಹರಣೆಗಳನ್ನು ಕಾಣಬಹುದು.
“ಬಾದನಿಗೆ ಬಾಸಿಂಗ
ಭೂಮಿತಾಯಿಗೆ ದಂಡೆ
ಸಾಲಶರಣರಿಗೆ ಸರಮಾಲೆ
ಸಾಲಶರಣರಿಗೆ ಸರಮಾಲೆ
ಕಟಿಕೊಂಡು ಮಾದಯ್ಯ ಗೆದ್ದ ಕೈಲಾಸ” ಎಂಬ ಜನಪದ ಗೀತೆಯನ್ನು ನಾವು ನೆನಪಿಸಿಕೊಂಡರೆ ಇಲ್ಲಿನ ಮಾದಯ್ಯನೇ ಹೂಗಾರ ಮಾದಯ್ಯನವರೆಂದು ಮನವರಿಕೆಯಾಗುತ್ತದೆ. ಅವರ ಬದುಕಿನ ಬಗ್ಗೆ ಜನಪದರು “ಕಲ್ಯಾಣದ ಮನೆ ಆಯ್ತು ಎಲ್ಲ ಶಿವಶರಣರಿಗೆ
ಮಲ್ಲೆ ಮಾದೇವಿ ಲಿಂಗಣ್ಣ
ಮಲ್ಲೆ ಮಾದೇವಿ ಲಿಂಗಣ್ಣ ಮಗನೊಡನೆ ಉಲ್ಲಾಸದಿಂದಿದ್ದ ಮಾದಣ್ಣ” ಎನ್ನುತ್ತಾರೆ.
ಹೀಗೆಯೇ ಮತ್ತೊಂದು ಜನಪದ ಗೀತೆಯಲ್ಲಿ ಹೂ-ಪತ್ರೆಗಳು ಮಾದಯ್ಯನವರೊಡನೆ ಸಂಭಾಷಣೆ ನಡೆಸಿ ಶರಣರ ಪೂಜೆಗೆ ಬರಲು ಉತ್ಸುಕವಾಗಿರುತ್ತವೆ ಎಂದು ಹೇಳಲಾಗಿದೆ. ಹೂಗಾರ ಮಾದಯ್ಯನವರ ಕಾಯಕ ಧರ್ಮವನ್ನು ಪರೀಕ್ಷಿಸಲೆಂದೇ ಜಂಗಮನ ರೂಪದಲ್ಲಿ ಬರುವ ಶಿವನು ಅವರನ್ನು ಕೈಲಾಸಕ್ಕೆ ಕರೆದೊಯ್ಯುವ ಆಮಿಷವೊಡ್ಡಿದಾಗ ಅದನ್ನು ಅವರು ತಿರಸ್ಕರಿಸಿ ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಎತ್ತಿಹಿಡಿಯುತ್ತಾರೆ. ಇದನ್ನು ಮೆಚ್ಚಿದ ಪರಶಿವನು,
“ಶರಣರ ಬಳದೊಳ ಒಂಟಿಗನು ಮಾದಯ್ಯ
ಕಾಯಕಕ ಬಂಟಿಗನು
ಕಲ್ಯಾಣದ ಹೊಸಮತವ ಸಾರುವ ಗಂಟೆ ಈತನು”
ಎಂದು ಕೊಂಡಾಡುತ್ತಾನೆ. ಇವೆಲ್ಲಾ ಹೂಗಾರ ಮಾದಯ್ಯನವರ ಕಾಯಕ ನಿಷ್ಠೆಯನ್ನು ಸಾರುತ್ತವೆ.
ಜನಪದರ ಕತೆಯೊಂದರಲ್ಲಿ ಮಾದಯ್ಯನವರು ಮರಣಿಸುವ ಘಟನೆಯಿದೆ. ಆಗ ಶರಣರ “ಮರಣವೇ ಮಹಾನವಮಿ” ಎಂಬದನ್ನು ಬಲವಾಗಿ ನಂಬಿದ್ದ ಪತ್ನಿ ಮಹಾದೇವಿ ಅವರ ಶರೀರವನ್ನು ತೊಳೆದು, ಭಸ್ಮ ಲೇಪನ ಮಾಡಿ, ಕ್ರಿಯಾಸಮಾಧಿ ನಿರ್ಮಾಣದ ಸಿದ್ದತೆಯಲ್ಲಿರುತ್ತಾಳೆ. ಇದರಿಂದ ಗಾಬರಿಗೊಂಡ ಪುತ್ರ ಲಿಂಗಣ್ಣನು ಸಕಲೇಶ ಮಾದರಸರನ್ನು ಕರೆತರುತ್ತಾನೆ. ಆಗ ಅವರು ಬಂದವರೇ ಶರೀರದ ಮೇಲೆ ಕೈಯ್ಯಿಟ್ಟು, “ಏಳೇಳು ಮಾದಯ್ಯ ಏಳು ಲಿಂಗಾರ್ಚನೆಗೆ ಕೋಳಿ ಕೂಗುದಕ ಜಾವವಿಲ್ಲ
ಕಾಯಕಕೆ ಏಳು ಕಲ್ಯಾಣ ಶರಣರಿಗೆ ತರುವರ್ಯಾರು ಮಾಗಿಯೋಳು ಹೂ ಪತ್ರಿ ಚಾಗಿ ಮಾದಯ್ಯ ಹೋಗೇಳು” ಎಂದಾಗ
“ಮಾದನ ಜೀವ ಗಾಳಿಯೋಳ್ ಬಂದು ಕಳೆ ತುಂಬಿ ಹುಸಿದೇಹ ತಾಳಿ ಹೊಸಬೆಳಕು ಕಣ್ತೆರೆದು” ಎಂಬಂತೆ ಮಾದಯ್ಯನವರು ಜ್ಞಾನ ತಿಳಿದು ಎದ್ದು ಕೂರುತ್ತಾರೆ.
ನಂತರದಲ್ಲಿ ದಂಪತಿಗಳು ಅಲ್ಲಿಯೇ ಕದಳಿ ವನವೊಂದನ್ನು ಸ್ಥಾಪಿಸಿದ್ದು ಈಗಲೂ ಕಾಣಬಹುದಾಗಿದೆ.
ಹೀಗೆ ಜಾನಪದದ ಮೂಲಕ ಪರಿಚಿತರಾಗುವ ಹೂಗಾರ ಮಾದಯ್ಯನವರ ಕುರಿತು ಇನ್ನಷ್ಟು ಸಂಶೋಧನೆಯ ಅಗತ್ಯವಿದೆ. ನಮ್ಮದೇ ಬಳಗದ ಹಿರಿಯ ಲೇಖಕಿಯಾದ ಡಾ.ದಾನಮ್ಮ ಝಳಕಿಯವರೂ ಕೂಡ ಹೂಗಾರ ಮಾದಯ್ಯನವರ ಚರಿತ್ರೆಯ ಕುರಿತು ಬರೆದಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿವಿಧೆಡೆ ಜಯಂತಿ ಆಚರಣೆ ನಡೆದಿದೆ. ಭವಿಷ್ಯದಲ್ಲಿ ಸರ್ಕಾರ ಮತ್ತು ಸಾರ್ವಜನಿಕರು ಅವರ ಜಯಂತಿ ಉತ್ಸವವನ್ನೂ ಮತ್ತು ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವ ಕುರಿತು ಪ್ರಯತ್ನಿಸುವ ಅಗತ್ಯವಿದೆ.
ಈ ಮೂಲಕ ಹೂಗಾರ ಸಮಾಜದ ಉದ್ದಾರವೂ ಮತ್ತು ಅವರ ಸಾಧನೆಗಳನ್ನು ಗೌರವಿಸುವ ಕಾರ್ಯವೂ ಆಗಬೇಕಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಭಯುತ್ಪಾದನೆ ವಿರುದ್ಧ ಭಾರತ-ರಷ್ಯಾ ಒಟ್ಟಾಗಿ ಹೋರಾಟ

ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ಬಲಿ

ಫಲಿತಾಂಶ ಆಧಾರಿತ ಶಿಕ್ಷಣ ಅಗತ್ಯ :ಡಾ.ಬಿ.ವೈ.ಖಾಸ್ನಿಸ್

ಡಿ.೬ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಭಯುತ್ಪಾದನೆ ವಿರುದ್ಧ ಭಾರತ-ರಷ್ಯಾ ಒಟ್ಟಾಗಿ ಹೋರಾಟ
    In (ರಾಜ್ಯ ) ಜಿಲ್ಲೆ
  • ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಹಿಳೆಯರೇ ಹೆಚ್ಚು ಬಲಿ
    In (ರಾಜ್ಯ ) ಜಿಲ್ಲೆ
  • ಫಲಿತಾಂಶ ಆಧಾರಿತ ಶಿಕ್ಷಣ ಅಗತ್ಯ :ಡಾ.ಬಿ.ವೈ.ಖಾಸ್ನಿಸ್
    In (ರಾಜ್ಯ ) ಜಿಲ್ಲೆ
  • ಡಿ.೬ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ರಾಣಿ ಚೆನ್ನಮ್ಮ ವಿವಿ: ಎಂಸಿಎ ಕೋರ್ಸಿಗೆ ಪ್ರವೇಶಾತಿ
    In (ರಾಜ್ಯ ) ಜಿಲ್ಲೆ
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಶಿಷ್ಯವೇತನ ಕ್ಕಾಗಿ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಡಿ.೭ ರಂದು ಸಾರ್ವಜನಿಕ ರಸ್ತೆ ಸಂಚಾರ ಮಾರ್ಗ ಬದಲಾವಣೆ
    In (ರಾಜ್ಯ ) ಜಿಲ್ಲೆ
  • ಭೈರವಾಡಗಿ ಪಿಕೆಪಿಎಸ್ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ: ರೈತರಲ್ಲಿ ಆತಂಕ ತಂದ ಅಕಾಲಿಕ ಮಳೆ
    In (ರಾಜ್ಯ ) ಜಿಲ್ಲೆ
  • ಗೋವಿನ ಜೋಳ & ತೊಗರಿ ಖರೀದಿ ಕೇಂದ್ರ ತೆರೆಯಲು ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.