ಇಂದು (ಸೆಪ್ಟಂಬರ್ ೨೪ ಬುಧವಾರ) “ರಾಷ್ಟ್ರೀಯ ಸೇವಾ ಯೋಜನೆ” ದಿನಾಚರಣೆಯ ತನಿಮಿತ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಖ್ಯಾತ ತತ್ವಜ್ಞಾನಿ ಅರಿಸ್ಟಾಟಲ್ ಅವರು, ಜೀವನದ ಸಾರವೇನು? ಇತರರಿಗೆ ಸೇವೆ ಸಲ್ಲಿಸುವುದು ಮತ್ತು ರಾಷ್ಟ್ರಕ್ಕೆ ಏನನ್ನಾದರೂ ಕೊಡುಗೆ ನೀಡುತ್ತಾ, ಸದಾ ಒಳ್ಳೆಯದನ್ನು ಮಾಡುವುದು ಎಂದು ಹೇಳಿದ್ದಾರೆ. ಎನ್.ಎಸ್.ಎಸ್. ನ ಮೂಲ ಮಂತ್ರ ನನಗಾಗಿ ಅಲ್ಲ ನಿನಗಾಗಿ (ಓoಣ ಒe buಣ ಙou) ಅಂದರೆ ನಾನು ನನಗಾಗಿ ಮಾತ್ರವಲ್ಲ. ನಿಮೆಲ್ಲರಿಗಾಗಿ ಮತ್ತು ಈ ಸಮಾಜಕ್ಕಾಗಿ ಸೇವೆ ಸಲ್ಲಿಸಲು ಎಂಬ ಅರ್ಥವನ್ನು ತಿಳಿಸುತ್ತದೆ. ನಮ್ಮ ಬದುಕು ನಿಸ್ವಾರ್ಥ ಸೇವೆ ಮತ್ತು ಬೇರೆ ವ್ಯಕ್ತಿಗಳೊಂದಿಗೆ ಕೂಡಿಕೊಂಡು ಮಾನವೀಯತೆಯನ್ನು ಎತ್ತಿ ತೋರಿಸುವ ಅಗತ್ಯತೆಯನ್ನು ಈ ಧ್ಯೇಯವಾಕ್ಯವು ಪ್ರತಿಬಿಂಬಿಸುತ್ತದೆ.
ಈ ಯೋಜನೆಯು ರಾಷ್ಟ್ರ ನಿರ್ಮಾಣ ಮತ್ತು ಶ್ರಮದ ಮಹತ್ವವನ್ನು ಸಾರುತ್ತಾ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಮಯ ಪರಿಪಾಲನೆ ಮತ್ತು ದಕ್ಷತೆ ಮೈಗೂಡಿಸಿಕೊಳ್ಳುವಂತಹ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ವಿವಿಧ ಆಯಾಮಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ನೀಡುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಸೂಕ್ತ ವಾತಾವರಣ ನಿರ್ಮಾಣ ಮಾಡುತ್ತಿದೆ. ಅವರಲ್ಲಿ ಸುಪ್ತವಾಗಿರುವ ಅದಮ್ಯ ಚೇತನ, ಪ್ರತಿಭೆ, ಅಂತಃಶಕ್ತಿ, ಚಕ್ಷಗುಣ ಮತ್ತು ಸೇವಾ ಮನೋಭಾವನೆಗೆ ಉತ್ತೇಜನ ನೀಡಿ ಅವರು ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ಸಮರ್ಥವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮತ್ತು ಸಮುದಾಯದ ನಾಯಕರಾಗಿ ಹೊರಹೊಮ್ಮುವಂತೆ ಶಿಕ್ಷಣ ಮತ್ತು ತರಬೇತಿಯನ್ನು ಸಮರ್ಥವಾಗಿ ನೀಡುತ್ತದೆ.

ಆಚರಣೆಯ ಹಿನ್ನೆಲೆ
ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಒಂದು ಸೇವಾ ಯೋಜನೆಯಾಗಿದ್ದು, ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಸಾರ್ವಜನಿಕ ಸೇವಾ ಸಂಸ್ಥೆ. ಇದನ್ನು ಭಾರತ ಸರ್ಕಾರವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಮಹಾತ್ಮಾ ಗಾಂಧೀಜಿಯವರ ಜನ್ಮದಿನದ ಶತವರ್ಷವಾದ ೧೯೬೯ ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಇದರ ಪ್ರಮುಖ ಉದ್ಧೇಶ ಬಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ಈ ಸ್ವಯಂ ಪ್ರೇರಿತ ಸೇವಾ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಲೋಕಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ, ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಯನ್ನು ಒಡಮೂಡಿಸುತ್ತದೆ.
“ನನಗಾಗಿ ಅಲ್ಲ ನಿನಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜನ್ಮ ಶತಾಬ್ದಿ ವರ್ಷ ೨೪.೦೯.೧೯೬೯ ರಂದು ಅಂದಿನ ಕೇಂದ್ರ ಶಿಕ್ಷಣ ಮಂತ್ರಿಗಳಾಗಿದ್ದ ಡಾ. ಎ.ಕೆ.ಆರ್.ವಿ.ರಾವ್ ಅವರಿಂದ ಉದ್ಘಾಟನೆಯಾಯಿತು. ಸೇವಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಮತ್ತು ಉತ್ತಮ ಭವಿಷ್ಯವನ್ನು ರೂಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪ್ರಸ್ತುತ ರಾಷ್ಟ್ರದೆಲ್ಲೆಡೆ ಸರಿ ಸುಮಾರು ೩೯೬ ವಿಶ್ವವಿದ್ಯಾಲಯಗಳಲ್ಲಿ ೧೬೩೩೧ ಕಾಲೇಜುಗಳು ಮತ್ತು ೨೮,೬೨೧ ಶಾಲೆಗಳಲ್ಲಿ ಹೀಗೆ ಒಟ್ಟು ೩೮.೬ ಲಕ್ಷ ಸ್ವಯಂ ಸೇವಕರು ಈ ಯೋಜನೆಯಲ್ಲಿ ತೊಡಗಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆಯ ಲಾಂಛನ
ರಾಷ್ಟ್ರೀಯ ಸೇವಾ ಯೋಜನೆಯ ಚಿಹ್ನೆಯು ಚಕ್ರದ ಗುರುತು. ಈ ಚಕ್ರವು ಸದಾ ಚಲನಶೀಲತೆಯನ್ನು ಅಭಿವ್ಯಕ್ತಗೊಳಿಸುತ್ತಾ, ಅಭಿವೃದ್ಧಿಯ ಸಂಕೇತವನ್ನು ಸೂಚಿಸುತ್ತದೆ. ಈ ಚಕ್ರವನ್ನು ಒರಿಸ್ಸಾ ರಾಜ್ಯದ ಕೊನಾರ್ಕ ಸೂರ್ಯ ದೇವಾಲಯದ ರಥದ ಚಕ್ರವನ್ನು ಆಧಾರವಾಗಿರಿಸಿ ನಿರ್ಮಿಸಲಾಗಿದೆ. ಇದರಲ್ಲಿ ೮ ಅಡ್ಡಪಟ್ಟಿಗಳಿದ್ದು, ಪ್ರತಿಯೊಂದು ಕಾಲದ ಸಂಕೇತವನ್ನು ತಿಳಿಸುತ್ತವೆ. ಚಿಹ್ನೆಯಲ್ಲಿರುವ ಕೆಂಪು ಬಣ್ಣವು ಜೀವನದಲ್ಲಿ ಉತ್ಸಾಹ, ತ್ಯಾಗವನ್ನು ಬಿಳಿ ಬಣ್ಣವು ಶಾಂತಿ ಮತ್ತು ಸಹಬಾಳ್ವೆಯನ್ನು ಮತ್ತು ಆಕಾಶ ನೀಲಿ ಬಣ್ಣವು ಸಮೃದ್ಧಿಯನ್ನು ಪ್ರತಿಬಿಂಬಿಸುತ್ತವೆ.

ಕಾರ್ಯಕ್ರಮದ ಧ್ಯೇಯೋದ್ಧೇಶಗಳು
ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು, ಅಧ್ಯಯನದ ಜೊತೆಗೆ ಜೀವನದ ವಾಸ್ತವಿಕತೆಯ ಪ್ರಜ್ಞೆಯನ್ನು ಬೆಳೆಸುವುದು. ತಮ್ಮ ವೃತ್ತಿ-ಗೌರವ ಮತ್ತು ಕಾಯಕದ ಬಗ್ಗೆ ಸದಾ ಕಾಳಜಿಯನ್ನು ತೋರುತ್ತಾ, ಭ್ರಾತೃತ್ವ, ಸಮಾನತೆ, ಮೈತ್ರಿ, ಸೌಹಾರ್ದತೆ, ಸಹಕಾರ, ಸೇವಾ ಮನೋಭಾವನೆ, ಪರಸ್ಪರ ಸಮನ್ವಯತೆ ಮತ್ತು ಸಹ ಜೀವನ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದ ಋಣವನ್ನು ತೀರಿಸಲು ಪ್ರಯತ್ನಿಸಬೇಕು. ಪ್ರಕೃತಿ ವಿಕೋಪ, ಭೂಕಂಪ, ಪ್ರವಾಹ, ಬೆಂಕಿ ಅನಾಹುತ ಮತ್ತು ಇನ್ನಿತರ ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಸಂದರ್ಭಗಳಲ್ಲಿ ಸಂತ್ರಸ್ತರ ನೆರವಿಗೆ ಬರುವುದು. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವದರ ಜತೆಗೆ ಸಂಘಟನೆ, ವ್ಯವಸ್ಥಾಪನಾ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳನ್ನು ರೂಢಿಸಿಕೊಳ್ಳುವುದು ಮತ್ತು ನಡೆ-ನುಡಿಗಳಲ್ಲಿ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಆದರ್ಶತೆಯನ್ನು ಮೆರೆದು ರಾಷ್ಟ್ರೀಯ ಭಾವೈಕ್ಯತೆಯನ್ನು ಒಡಮೂಡಿಸುವುದೇ ಈ ಯೋಜನೆಯ ಪ್ರಮುಖ ಧ್ಯೇಯೋದ್ಧೇಶವಾಗಿವೆ.
೨೦೨೫ ನೇಯ ವರ್ಷದ ಘೋಷವಾಕ್ಯ
ಯುವ ನಾಯಕತ್ವ ಮತ್ತು ಸಮಾಜ ಸೇವೆಯನ್ನು ಕೇಂದ್ರೀಕರಿಸುವ ಮಹೋನ್ನತವಾದ ಧ್ಯೇಯದೊಂದಿಗೆ ನನ್ನ ಭಾರತಕ್ಕಾಗಿ ಯುವಕರು ಮತ್ತು ಡಿಜಿಟಲ್ ಭಾರತಕ್ಕಾಗಿ ಯುವಕರು ಎಂಬ ಘೋಷವಾಕ್ಯದೊಂದಿಗೆ ಡಿಜಿಟಲ್ ಶಾಕ್ಷರತೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಎತ್ತಿ ತೋರಿಸುತ್ತದೆ. ಯುವಕರನ್ನು ಸಬಲೀಕರಣಗೊಳಿಸುತ್ತಾ, ಕೌಶಲ್ಯಗಳೊಂದಿಗೆ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುವಂತೆ ಉತ್ತೇಜಿಸುವುದು ಈ ವರ್ಷದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ.
ಆಚರಣೆಯ ಮಹತ್ವ
ತೃತೀಯ ವಿಶ್ವದ ರಾಷ್ಟ್ರಗಳಲ್ಲಿ ಒಂದಾದ ಭಾರತದಂತಹ ದೇಶ ಎಲ್ಲ ಸಮಸ್ಯೆಗಳನ್ನು ಮೀರಿ ಬೆಳೆಯಬೇಕಾದರೆ ಈ ದೇಶದ ಯುವಕರು ಅಭಿವೃದ್ಧಿ ಪರವಾದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದಾಗ ಮಾತ್ರ ಸಾಧ್ಯ. ಎನ್.ಎಸ್.ಎಸ್ ಯೋಜನೆಯು ಕೇವಲ ವಿದ್ಯಾರ್ಥಿ ಸಂಘಟನೆ ಮಾತ್ರವಾಗಿರದೆ ಅದೊಂದು ಸಮುದಾಯಿಕ ಜಾಗೃತಿಯ ಚಳುವಳಿಯಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಜನರ ಸಂಕಷ್ಟಗಳು, ಮೂಲಭೂತ ಸಮಸ್ಯೆಗಳು ಮತ್ತು ವಾಸ್ತವಿಕ ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕನ ಮಾಡುವ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುವದರ ಜೊತೆಯಲ್ಲಿ ಗ್ರಾಮೀಣ ಬದುಕನ್ನು ಹಸನುಗೊಳಿಸಲು ಪೂರಕವಾಗಿದೆ. ಹೀಗೆ ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವಾ ಮನೋಭಾವನೆ, ಉತ್ತಮ ನಾಗರೀಕತೆ, ವೃತ್ತಿಗೌರವ, ಸಹಬಾಳ್ವೆ, ಭ್ರಾತೃತ್ವ, ಜಾತ್ಯಾತೀತತೆ, ಭಾವೈಕ್ಯತೆ ಮತ್ತು ಉತ್ತಮ ನಾಯಕತ್ವ ಗುಣಗಳಂತಹ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ.
ಕೊನೆಯ ನುಡಿ
ಆದ್ದರಿಂದ ಇಂದಿನ ಯುವಕರು ನಾಳಿನ ಭವ್ಯ ಭಾರತದ ಕುಡಿಗಳು’ಎನ್ನುವಂತೆ ಎಲ್ಲಾ ಸ್ವಯಂ ಸೇವಕ-ಸೇವಕಿಯರು ತಮ್ಮ ವ್ಯಕ್ತಿತ್ವ ವಿಕಸನಗೊಳ್ಳಲು ಪೂರಕವಾಗುತ್ತಾ, ರಾಷ್ಟ್ರ ಕಟ್ಟುವ ಕೆಲಸದಲ್ಲಿ ಯುವ ಪಡೆ ಪಾಲ್ಗೊಳ್ಳುವಂತಾಗಲಿ. ಅದಕ್ಕಂತಲೇ ರುತ್ ಬೇಡರ್ ಗಿನ್ಸಬರ್ಗ ಅವರು, ನಿಜವಾದ ಬದಲಾವಣೆ, ನಿರಂತರ ಬದಲಾವಣೆ ಎಂಬುದು ಒಂದೊಂದೇ ಹೆಜ್ಜೆ ನಡೆಯುತ್ತದೆ. ಅದುವೇ ಮುಂದೆ ರಾಷ್ಟ್ರದ ಅಭ್ಯುದಯಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರು ಈ ರಾಷ್ಟ್ರೀಯ ಸೇವಾ ಯೋಜನೆಯ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ವಿದ್ಯಾರ್ಥಿ ಜೀವನದಲ್ಲಿ ಮತ್ತು ಮುಂದೆಯೂ ಹೀಗೆಯೇ ನಮ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ಪರಿವರ್ತನೆಯನ್ನು ತರುವ ನಿಟ್ಟಿನಲ್ಲಿ ಎಸ್.ಎಸ್.ಎಸ್ ಚಟುವಟಿಕೆಗಳು ಮುಂದುವರೆಯಲೆಂಬುದೇ ನನ್ನ ಮಹದಾಸೆಯಾಗಿದೆ.


