ಲೇಖನ
– ವೀಣಾ ಹೇಮಂತಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಕೆಲ ಜನರನ್ನು ನಾವು ಸದಾ ನೋಡುತ್ತೇವೆ, ಸದಾ ಚಟುವಟಿಕೆಯಿಂದ ಇರುವ ಅವರು ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿರುತ್ತಾರೆ. ಸದಾ ಹೊಸತೇನನ್ನಾದರೂ ಹುಡುಕುತ್ತಾ ಕ್ರಿಯಾಶೀಲರಾಗಿರುವ ಅವರು ನಾವೆಲ್ಲ ಇಂದಿನ ಆಧುನಿಕ ಜಗತ್ತಿನಲ್ಲಿ ಕರೆಯುವ ಹೈ ಪರ್ಫಾರ್ಮರ್
ಆಗಿ ಹೊರಹೊಮ್ಮುತ್ತಾರೆ. ಅವರ ಸಾಧನೆಯೇನು ಒಮ್ಮಿಂದೊಮ್ಮೆಲೆ ಉದ್ಭವವಾದ ಮೂರ್ತಿಯಲ್ಲ.. ನಿತ್ಯ ನಿರಂತರ ಪರಿಶ್ರಮದ ಫಲ.
ಬಹಳಷ್ಟು ಬಾರಿ ಇಂಥವರ ಕುರಿತು ನಾವು ನಕಾರಾತ್ಮಕವಾಗಿ ಮಾತನಾಡುತ್ತೇವೆ. ಕಾರಣ ಅವರು ಮಾಡುತ್ತಿರುವ ಕೆಲಸ ಕಾರ್ಯಗಳ, ಅವರ ನಿರಂತರ ತೊಡಗಿಕೊಳ್ಳುವಿಕೆಯ ಹಿಂದಿನ ಶ್ರಮದ ಅರಿವು ನಮಗೆ ಇರುವುದಿಲ್ಲ. ಅವರೊಂದಿಗಿದ್ದೂ ಅವರಂತಾಗದವರು ಅವರ ಕುರಿತು ನಕಾರಾತ್ಮಕವಾಗಿ ಮಾತನಾಡುವುದರ ಬದಲು ಅವರ ಈ ಹೆಚ್ಚಿನ ಕಾರ್ಯಕ್ಷಮತೆಯ ಹಿಂದಿರುವ ರಹಸ್ಯವನ್ನು ಅರಿಯಬೇಕು.. ಬಹುಶಹ ಸಾಧಿಸಬೇಕೆಂಬ ಪ್ರತಿಯೊಬ್ಬರಿಗೂ ಕೂಡ ಇದೊಂದು ದಿಕ್ಸೂಚಿಯಾಗಿ ತಮ್ಮ ಬದುಕಿನಲ್ಲಿ ಮುಂದುವರೆಯಲು ಕಾರಣವಾಗಬಹುದು.
ಅತ್ಯಧಿಕ ಕಾರ್ಯಕ್ಷಮತೆಯುಳ್ಳವರು ಕಠಿಣ ಸವಾಲುಗಳನ್ನು ತಮಗೆ ತಾವೇ ಕೇಳಿಕೊಳ್ಳುತ್ತಾರೆ. ಆ ಸವಾಲುಗಳಿಗೆ ತಮ್ಮದೇ ಆದ ರೀತಿಯ ಪ್ರಯತ್ನಗಳ ಮೂಲಕ ಉತ್ತರಗಳನ್ನು ಕಂಡುಕೊಳ್ಳುತ್ತಾರೆ. ತಾವು ಕಂಡುಕೊಳ್ಳುವ ಉತ್ತರಗಳಲ್ಲಿ ತಮ್ಮದೇ ಸರಿ! ಎಂಬ ಭಾವಕ್ಕಿಂತ ಸರಿಯಾದದ್ದು ಯಾವುದು? ಎಂಬುದರ ಕುರಿತು ಅವರು ಹೆಚ್ಚು ಧೇನಿಸುತ್ತಾರೆ.

ಭರವಸೆ ನೀಡುವ ಬದಲು ಅವರು ಕಾರ್ಯನಿರ್ವಹಣೆಯತ್ತ ಹೆಚ್ಚಿನ ಗಮನವನ್ನು ಹರಿಸುತ್ತಾರೆ. ಫಲಿತಾಂಶ ಕೇಂದ್ರಿತ ಅವರ ಪ್ರಯತ್ನಗಳು ಅವರು ಮಾಡುವ ಕೆಲಸಕ್ಕಿಂತ ಹೆಚ್ಚು ಜೋರಾಗಿ ಸದ್ದು ಮಾಡುತ್ತವೆ.
ಎಷ್ಟೋ ಬಾರಿ ಬೇರೆಯವರು ಅಷ್ಟಾಗಿ ಗಮನ ಹರಿಸದ ವಿಷಯಗಳನ್ನು, ವಸ್ತುಗಳ ಮೇಲೆ ಇವರ ಲಕ್ಷ್ಯ ಇರುತ್ತದೆ. ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದನ್ನು ಕಲಾವಿದ ಕಂಡ.. ಬಹುಶಹ ಕಲಾವಿದ ಕಾಣದ್ದನ್ನು ಓರ್ವ ನಿಪುಣ ಕಾರ್ಯ ತಂತ್ರಜ್ಞ ಕಂಡುಕೊಳ್ಳುತ್ತಾನೆ ಎಂಬಂತೆ ಇಂತಹವರು ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯನಿರ್ವಹಿಸದೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಆರಂಭದಲ್ಲಿಯೇ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮುಂದೆ ಅವು ದೊಡ್ಡ ಸಮಸ್ಯೆಗಳಾಗಿ ಕಾಡುವುದನ್ನು ತಪ್ಪಿಸುತ್ತಾರೆ.
ಏನಾದರೂ ತಪ್ಪು ಇಲ್ಲವೇ ಅವಘಡ ಘಟಿಸಿದಾಗ ಅವರು ಬೇರೆಯವರತ್ತ ಬೆರಳು ತೋರುವುದಿಲ್ಲ. ಅದು ತಮ್ಮ ಕೆಲಸವಲ್ಲದೇ ಹೋದಾಗಲೂ ಕೂಡ ಅವರು ಸಮಸ್ಯೆಯ ಪರಿಹಾರದ ಕುರಿತು ಚಿಂತಿಸಿ ಕಾರ್ಯನಿರ್ವಹಿಸಿ ಯಶಸ್ವಿಯಾಗುತ್ತಾರೆ.

ಅಧಿಕ ಕಾರ್ಯಕ್ಷಮತೆಯುಳ್ಳವರು ಬರೀ ಬಾಯಿ ಮಾತಿನ ಬಡಾಯಿ ಕೊಚ್ಚದೆ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ತಾವು ಮಾಡುವ ಕೆಲಸದ ಕುರಿತು ಸ್ಪಷ್ಟತೆ ಇರುತ್ತದೆ. ಅವರಲ್ಲಿ ಒಬ್ಬ ನಾಯಕ ಸದಾ ಜಾಗೃತನಾಗಿದ್ದು ತನ್ನ ಸುತ್ತ ಇರುವ ಇತರರನ್ನು ಕೂಡ ಪ್ರೇರೇಪಿಸುವ ಅವರು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಾರೆ.
ಅಂತಹ ವ್ಯಕ್ತಿಗಳ ಕೈಯಲ್ಲಿ ದೊರೆಯುವ ಮಷೀನರಿ ಸಾಮಾನುಗಳಿಂದ ಹಿಡಿದು ಲ್ಯಾಪ್ಟಾಪ್ ಗಳವರೆಗಿನ ಎಲ್ಲ ವಸ್ತುಗಳು ಉತ್ತಮಿಕೆಯ ಹಾದಿ ಹಿಡಿಯುತ್ತವೆ. ಅವರು ಕೈ ಇಟ್ಟ ಕೆಲಸಗಳು ಅತ್ಯಂತ ಸರಳವಾಗಿ, ಸೂಕ್ತವಾಗಿ ಹಾಗೂ ಪರಿಪೂರ್ಣವಾಗಿ ಕೈಗೂಡುತ್ತವೆ.
ಅತ್ಯುತ್ತಮ ಕಾರ್ಯಕ್ಷಮತೆಯುಳ್ಳ ಜನರು ಯಾವುದೇ ತೊಂದರೆಗಳಿಗೆ ಹೆದರುವುದಿಲ್ಲ. ಬೇರೆಯವರು ಏನು ಮಾಡಬೇಕೆಂದು ಗೊತ್ತಾಗದೆ ತಡಬಡಾಯಿಸಿದಾಗ, ಅವರ ತಲೆ ಓಡದೆ ಇದ್ದಾಗ ಕೂಡ ಇವರು ಅತ್ಯಂತ ಶಾಂತವಾಗಿ ಯೋಚಿಸುವ ಮತ್ತು ಕಾರ್ಯಗತಗೊಳಿಸುವ ಶಕ್ತಿಯನ್ನು ಹೊಂದಿರುತ್ತಾರೆ.
ಆತ್ಮವಿಶ್ವಾಸ ಮತ್ತು ಪರಿಹರಿಸಲಾರದ ಸಮಸ್ಯೆ ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬ ಆತ್ಮವಿಶ್ವಾಸ ಮತ್ತು ಭರವಸೆ ಅವರನ್ನು ಕೈಹಿಡಿದು ನಡೆಸುತ್ತದೆ.
ಸ್ನೇಹಿತರೆ, ಬೇರೆಯವರ ಪ್ರಗತಿಯನ್ನು ಕಂಡು ಅಚ್ಚರಿ ಪಡುವ ಮುನ್ನ, ಅಸೂಯೆ ಪಟ್ಟುಕೊಳ್ಳುವ ಮುನ್ನ, ಏನಾದರೂ ತಪ್ಪಾಗಿ ಹೇಳುವ ಮುನ್ನ ಅದರ ಹಿಂದೆ ಅಡಗಿರುವ ಅವರ ಕಠಿಣ ಪರಿಶ್ರಮ ಮತ್ತು ನಿರಂತರತೆ ಇರುತ್ತದೆ ಎಂಬುದನ್ನು ಅರಿಯಬೇಕು.
ಉಳಿದವರು ಮುಂಜಾನೆಯ ಸವಿ ನಿದ್ದೆಯನ್ನು ಆಸ್ವಾದಿಸುತ್ತಿರುವಾಗ ಅವರು ತಮ್ಮ ಕನಸುಗಳ ಬೆನ್ನಟ್ಟಿರುತ್ತಾರೆ. ಬೇರೆಯವರು ಮೋಜು ಮಸ್ತಿಗಳಲ್ಲಿ ತೊಡಗಿಕೊಂಡಾಗ ಅವರು ತಮ್ಮ ಚಟುವಟಿಕೆಗಳಲ್ಲಿ ಸಂತಸವನ್ನು ತೃಪ್ತಿಯನ್ನು ಕಂಡುಕೊಳ್ಳುತ್ತಾರೆ.
ಅವರಿಗೇನು ಬಿಡು! ಎಲ್ಲವೂ ಅವರ ಕಾಲ ಬುಡಕ್ಕೆ ಬಂದು ಬೀಳುತ್ತದೆ, ತಗ್ಗು ಇರುವಲ್ಲಿಯೇ ನೀರು ಹರಿಯುತ್ತದೆ ಎಂಬ ಮಾತುಗಳು ಇಂಥವರನ್ನು ಕಂಡಾಗ ನಮ್ಮ ಬಾಯಿಂದ ಎಷ್ಟೋ ಬಾರಿ ಉದುರಬಹುದು. ಆದರೆ ಆ ರೀತಿ ತಮ್ಮ ತಗ್ಗು ಎಂದೂ ಮಣ್ಣಿನಿಂದ ತುಂಬದೇ ಇರುವಂತೆ ನಿರಂತರವಾಗಿ ಪರಿಶ್ರಮವಹಿಸುವ ವ್ಯಕ್ತಿಗಳು ತಮ್ಮ ಕಾಯಕದಲ್ಲಿಯೇ ಕೈಲಾಸವನ್ನು ಕಾಣುತ್ತಾರೆ.
ಅಂತಹ ವ್ಯಕ್ತಿಗಳ ಕುರಿತು ಹಗುರವಾಗಿ ಮಾತನಾಡುವ ಬದಲು ನಮ್ಮ ಯುವಜನತೆ ಅಂತಹ ಜನರಲ್ಲಿರುವ ಛಲ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನಗಳನ್ನು ತಮ್ಮದಾಗಿಸಿಕೊಂಡು ಬದುಕಿನಲ್ಲಿ ಮುಂದೆ ಸಾಗಲಿ ಎಂಬ ಆಶಯದೊಂದಿಗೆ..


