ಇಂದು (ಸೆಪ್ಟಂಬರ್ ೨೧, ರವಿವಾರ) ಅಂತರಾಷ್ಟ್ರೀಯ ಶಾಂತಿ ದಿನದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿದ್ರಾಮ. ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ದಲೈಲಾಮಾ ಅವರು “ನಾವು ನಮ್ಮೊಂದಿಗೆ ಶಾಂತಿ ಕಾಯ್ದುಕೊಳ್ಳುವವರೆಗೆ ನಾವು ಹೊರಗಿನ ಜಗತ್ತಿನಲ್ಲಿ ಎಂದಿಗೂ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ನಾವು ನಮ್ಮ ರಾಷ್ಟçದ ಜನರಲ್ಲಿ ಪ್ರೀತಿ, ದಯೆ, ಗೌರವ, ಸಹಾನುಭೂತಿ, ಸಹಾಯ, ಸಹಕಾರ, ಸಮನ್ವಯತೆ ಮತ್ತು ಸಾಮರಸ್ಯತೆ, ಸಮಗ್ರತೆ, ರಾಷ್ಟ್ರೀಯತೆ, ಐಕ್ಯತೆ ಮತ್ತು ಸಹಿಂಷ್ಣುತೆಯನ್ನು ಬೆಳೆಸುತ್ತಾ, ಇಡೀ ಜಗತ್ತಿಗೆ ಶಾಂತಿಯ ಮಂತ್ರದ ಸಂದೇಶವನ್ನು ಸಾರಬೇಕಾಗಿದೆ. ಜಗತ್ತಿನಲ್ಲಿ ಇಂದು ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಬಾಹ್ಯಾಕಾಶ-ವೈದ್ಯಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಪ್ರಗತಿಯನ್ನು ಸಾಧಿಸಿದರೂ ಜನರ ಜನರ ಮಧ್ಯೆ, ರಾಷ್ಟ್ರ-ರಾಷ್ಟ್ರಗಳ ನಡುವೆ ಪ್ರೀತಿ, ಗೌರವ, ಸೌಹಾರ್ಧತೆ, ಶಾಂತಿ, ಸಹಕಾರ, ಸಮನ್ವಯತೆ ಮತ್ತು ಸಹಮತ ಇಲ್ಲದಾಗಿದೆ. ಜಗತ್ತಿನಲ್ಲಿ ಅಹಿಂಸೆ, ಕದನ, ಯುದ್ಧದದಂತಹ ಭೀತಿಯು ಆವರಿಸುತ್ತಿದೆ. ಈ ಕಾರಣಕ್ಕಾಗಿ ವಿಶ್ವಸಂಸ್ಥೆಯು ಜಗತ್ತಿನ ಎಲ್ಲ ರಾಷ್ಟçಗಳಲ್ಲಿ ಅಹಿಂಸೆ, ಕದನ ವಿರಾಮ ಮತ್ತು ಉತ್ತಮ ಬಾಂಧವ್ಯ ಬೆಸೆಯುವಂತೆ ಉತ್ತೇಜನ ನೀಡಲು ಪ್ರತಿ ವರ್ಷ ಸಪ್ಟಂಬರ ೨೧ ರಂದು ಅಂತರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತಿದೆ. ನೆರೆಹೊರೆ ರಾಷ್ಟ್ರಗಳ ಮಧ್ಯೆ ಉತ್ತಮ ಬಾಂಧವ್ಯ ಬೆಸೆದು ಕಷ್ಟಕಾಲದಲ್ಲಿ ಆ ರಾಷ್ಟ್ರಗಳು ಪರಸ್ಪರ ಸಹಾಯ-ಸಹಕಾರ ನೀಡುವಂತಾಗಬೇಕು. ಜಗತ್ತಿನಲ್ಲಿ ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಒಳ್ಳೆಯ ಸ್ನೇಹಪರ, ಸುಮಧುರ ಮತ್ತು ಅನೋನ್ಯ ಸಂಬಂಧಗಳು ಏರ್ಪಡಬೇಕು. ಕಷ್ಟದಲ್ಲಿರುವ ಮತ್ತು ವಿಪತ್ತು ಎದುರಿಸುವ ಹಿಂದುಳಿದ ರಾಷ್ಟ್ರಗಳಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಸಹಾಯ ಹಸ್ತವನ್ನು ಚಾಚುವ ಮತ್ತು ಸಹಾಯ-ಸಹಕಾರವನ್ನು ನೀಡುವಂತಾಗಬೇಕು.

ಈ ದಿನದ ಆಚರಣೆಯ ಹಿನ್ನೆಲೆ
೧೯೮೨ ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಗತ್ತಿನ ಎಲ್ಲ ರಾಷ್ಟçಗಳಲ್ಲಿ ಮತ್ತು ಜನರಲ್ಲಿ ಶಾಂತಿ ನೆಲೆಸಲು ಮತ್ತು ರಾಷ್ಟ್ರಗಳಲ್ಲಿ ಉತ್ತಮ ಬಾಂಧವ್ಯ ಏರ್ಪಡಲು ಈ ವಿಶ್ವ ಶಾಂತಿ ದಿನದ ಆಚರಣೆಯ ಕುರಿತು ತೀರ್ಮಾನಿಸಲಾಯಿತು. ಹೀಗಾಗಿ ಪ್ರತಿ ವರ್ಷ ಸಪ್ಟಂಬರ ೨೧ ರಂದು ವಿಶ್ವದೆಲ್ಲೆಡೆ ಅಂತರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತಿದೆ. ಶಾಂತಿ ಸಂದೇಶ ಹೊತ್ತು ತರುವ ಪಾರಿವಾಳ ಈ ದಿನದ ಸಂಕೇತವಾಗಿದೆ. ಈ ವರ್ಷದ ಅಂತರಾಷ್ಟ್ರೀಯ ಶಾಂತಿ ದಿನದ ಪ್ರಮುಖ ಉದ್ಧೇಶವು ಜಗತ್ತಿನೆಲ್ಲೆಡೆ ಸಾಮಾನ್ಯ ಜನರಲ್ಲಿ ಪರಸ್ಪರ ಶಾಂತಿ, ಸಹಕಾರ, ಭಾವೈಕ್ಯತೆ-ಸೌಹಾರ್ಧತೆ ಮತ್ತು ಧರ್ಮ ಸಹಿಷ್ಣುತೆಯನ್ನು ಮೈಗೂಡಿಸುವುದು ಮತ್ತು ಒಗ್ಗಟ್ಟಿನ ಮಂತ್ರವನ್ನು ಜಪಿಸುವುದೇ ಆಗಿದೆ.
ಆಚರಣೆಯ ಮಹತ್ವ
ಆದ್ದರಿಂದ ನಾವೆಲ್ಲರೂ ಅಂತರಾಷ್ಟ್ರೀಯ ಶಾಂತಿ ದಿನಾಚರಣೆಯ ಮೂಲಕ ಶಿಸ್ತು,-ಶಾಂತಿ, ಅಹಿಂಸೆ, ಸಂಯಮ, ತಾಳ್ಮೆಯಂತಹ ಗುಣಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಪರಸ್ಪರ ಸಹೋದರತೆಯಿಂದ ಬದುಕಬೇಕು. ದ್ವೇಷ-ಅಸೂಯೆ, ಮೇಲು-ಕೀಳು ಎಂಬ ಭಾವನೆಯನ್ನು ತೊರೆದು ಪ್ರೀತಿ-ವಿಶ್ವಾಸದಿಂದ ನಾವೆಲ್ಲರೂ ಒಂದೇ ಎಂಬ ಐಕ್ಯತೆ-ಸದ್ಭಾವನೆಯ ಮಂತ್ರವನ್ನು ಜಪಿಸಬೇಕು. ಗೌತಮ ಬುದ್ಧ ಅವರು, “ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ನೀವು ಗೆಲ್ಲುವುದು ಉತ್ತಮವಾಗಿದೆ. ಇದು ನಿಜವದ ವಿಜಯವಾಗಿದೆ. ಇದನ್ನು ನಿಮ್ಮಿಂದ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿರುವುದು ನಿಜಕ್ಕೂ ಸತ್ಯವಾದ ಮಾತು. ಅಂದಾಗ ಮಾತ್ರ ವಿಶ್ವ ಶಾಂತಿ ದಿನದ ಆಚರಣೆಯು ನಿಜಕ್ಕೂ ಅರ್ಥಪೂರ್ಣವಾಗುತ್ತದೆ. ರಾಷ್ಟ್ರದ ಪ್ರಗತಿಗಾಗಿ ಪ್ರತಿಯೊಬ್ಬರೂ ಅಳಿಲು ಸೇವೆ ಸಲ್ಲಿಸುತ್ತಾ, ವಿಶ್ವ ಶಾಂತಿ ನೆಲೆಸುವಂತೆ ನಾವು ಬದುಕಿ, ಇತರರಿಗೂ ಬದುಕಲು ಉತ್ತಮ ಪರಿಸರ ಕಲ್ಪಿಸಿ ಕೊಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ.
೨೦೨೫ ನೇಯ ವರ್ಷದ ಘೋಷವಾಕ್ಯ: ಪ್ರತಿ ಮನೆ, ಶಾಲೆ-ಕಾಲೇಜು, ಸಮುದಾಯ ಮತ್ತು ರಾಷ್ಟ್ರಗಳ ನಡುವೆ ಪರಸ್ಪರ ಶಾಂತಿಯನ್ನು ಬೆಳೆಸುವ ಗುರಿಯನ್ನು ಹೊಂದಬೇಕು ಮತ್ತು ಪರಸ್ಪರ ಗೌರವ ಮತ್ತು ವೈವಿಧ್ಯತೆಯನ್ನು ಉತ್ತೇಜಿಸುವುದು ಈ ದಿನದ ಆಚರಣೆಯು ಮಹತ್ವ ಪಡೆದುಕೊಂಡಿದೆ. “ಶಾಂತಿಯುತ ಪ್ರಪಂಚಕ್ಕಾಗಿ ಶಾಂತಿಯ ಸಂಸ್ಕೃತಿಯನ್ನು ಬೆಳೆಸುವುದು” ಎಂಬುದು ೨೦೨೫ ನೇಯ ವರ್ಷದ ಧ್ಯೇಯವಾಕ್ಯವಾಗಿದೆ. ರಾಷ್ಟ್ರಗಳಲ್ಲಿ ವಿಶ್ವ ಶಾಂತಿ ಕಾಪಾಡುವ ಮಹೋನ್ನತವಾದ ಉದ್ದೇಶದಿಂದ ಆದ್ದರಿಂದ ಮಾನವರಾದ ನಾವರೆಲ್ಲರೂ ‘ಸರ್ವಜನಾ: ಸುಖಿನೋ ಭವಂತು’ ಎಂಬ ಶ್ಲೋಕದಂತೆ ಸರ್ವ ಜನರ ಸುಖ ಮತ್ತು ಕಲ್ಯಾಣದ ಸಂದೇಶವನ್ನೇ ಸಾರುವ ಎಲ್ಲ ಧರ್ಮಗಳು ಒಂದೇ ಎಂಬುದನ್ನು ಅರಿತು, ‘ಆ ಧರ್ಮ ಈ ಧರ್ಮ’ ಎಂಬ ಭೇದ-ಭಾವವನ್ನು ಅಳಿಸಿ ಈ ಜಗತ್ತಿನಲ್ಲಿ ಇರುವದು ‘ಮಾನವ ಧರ್ಮ’ ಮಾತ್ರ ಎಂಬುದನ್ನು ಅರಿಯಬೇಕು. ಗಡಿ, ಸಶಸ್ತ್ರ ಮತ್ತು ಭಯೋತ್ಪಾದನೆಯಂತಹ ಕಾರಣಗಳಿಂದ ನಡೆಯುತ್ತಿರುವ ಯುದ್ಧದಂತಹ ಸಂಘರ್ಷಗಳನ್ನು ತಡೆಯಲು ಶಾಂತಿ ಮಂತ್ರವೊಂದೇ ಸಾಧನವಾಗಬೇಕು. ಮತ್ತು ವಿಶ್ವವು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು.
ಕೊನೆಯ ನುಡಿ
ಜಗತ್ತಿನಲ್ಲಿ ಏಕತೆಯಲ್ಲಿ ಅನೇಕತೆಯನ್ನು ಹೊಂದಿದ ರಾಷ್ಟ್ರ ನಮ್ಮದು. ಸರ್ವಧರ್ಮ ಸಹಿಂಷ್ಣುತೆಯ ನಾಡು. ಭಾರತವು ಭಾವ ಸಂಗಮ ಮತ್ತು ಸಾಂಸ್ಕೃತಿಕ ನೆಲೆವೀಡು ಮತ್ತು ತವರೂರು. ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ನಮ್ಮ ರಾಷ್ಟ್ರದ ಮಹನೀಯರಾದ ಗೌತುಮ ಬುದ್ಧ, ಸ್ವಾಮಿ ವಿವೇಕಾನಂದ ಮತ್ತು ಮದರ ಥೇರೆಸಾರವರ ಆದರ್ಶ, ತತ್ವ ಮತ್ತು ಮೌಲ್ಯಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಭಾರತವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ನಾವೆಲ್ಲರೂ ಕಂಕಣಬದ್ಧರಾಗೋಣ. ಅಷ್ಟೇ ಅಲ್ಲದೇ ನಾವೆಲ್ಲ ಒಂದೇ ಎಂಬ ಐಕ್ಯತೆಯ ಮಂತ್ರದ ಬಗ್ಗೆ ಜನಜಾಗೃತಿ ಮತ್ತು ಅರಿವು ಮೂಡಿಸುವುದರ ಮೂಲಕ ಭಾರತವನ್ನು ಭಯೋತ್ಪಾದನಾ ಮುಕ್ತ ರಾಷ್ಟ್ರವನ್ನಾಗಿಸಲು ಪಣ ತೊಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ರಾಷ್ಟ್ರದಲ್ಲಿ ಸೌಹಾರ್ಧತೆ ಮತ್ತು ಸಾಮರಸ್ಯತೆಯನ್ನು ಕಾಪಾಡುವಲ್ಲಿ ಮತ್ತು ರಾಷ್ಟ್ರ ರಕ್ಷಣೆಯಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕು. ದೇಶದ ಐಕ್ಯತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಆದ್ದರಿಂದ ನಾವೆಲ್ಲರೂ ಒಗಟ್ಟಾಗಿ ರಾಷ್ಟ್ರದಲ್ಲಿ ಶಾಂತಿ, ಸಹಕಾರ-ಸಮನ್ವಯತೆ, ಸೌಹಾರ್ಧತೆ, ಧರ್ಮ ಸಹಿಂಷ್ಣುತೆ, ಸಾಮರಸ್ಯತೆ, ಐಕ್ಯತೆ, ಸಹೋದರತೆ, ಭ್ರಾತೃತ್ವ ಮತ್ತು ಸಮಷ್ಠಿ ಭಾವದಿಂದ ಬಾಳಿ-ಬದುಕಿ ಭಾರತ ದೇಶದ ಶಾಂತಿ ಎಂಬ ಮೂಲಮಂತ್ರವನ್ನು ಇಡೀ ಜಗತ್ತಿಗೆ ಮಾದರಿಯಾಗುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸೋಣ. ರಾಷ್ಟ್ರ-ರಾಷ್ಟ್ರಗಳ ನಡುವೆ ಉತ್ತಮ ಸಂಬಂಧಗಳು ಏರ್ಪಟ್ಟು ಇಡೀ ಜಗತ್ತು ‘ವಸುದೈವ ಕುಟುಂಬಕಂ’ ಎನ್ನುವ ಸಮಷ್ಠಿಭಾವ ಮೂಡಬೇಕು. ಜಗತ್ತಿನಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ರಾಷ್ಟ್ರಗಳ ಮಧ್ಯೆ ಶಾಂತಿ ಅವಶ್ಯಕತೆಯಿದೆ. ಈ ವಿಶ್ವ ಶಾಂತಿ ದಿನದಂದು ಜಗತ್ತಿನಲ್ಲಿ ಶಾಂತಿ-ಸಹಬಾಳ್ವೆ ನೆಲೆಸುವಂತೆ ಮತ್ತು ನಿಕಟ ಸಂಪರ್ಕವು ಬೆಸೆದು ಒಳ್ಳೆಯ ಸಾಮರಸ್ಯತೆಯು ನಿರ್ಮಾಣವಾಗಬೇಕೆಂಬುದೇ ನಮ್ಮೆಲ್ಲರ ಆಶಯವಾಗಬೇಕು ಎಂಬುದು ನನ್ನ ಅಂಬೋಣ.


