ಇಂದು (ಸೆಪ್ಟಂಬರ್ ೨೧, ರವಿವಾರ) ಅಂತರಾಷ್ಟ್ರೀಯ ಶಾಂತಿ ದಿನ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಬಿ.ವಿ.ಹಿರೇಮಠ
ಶಿಕ್ಷಕರು, ಹವ್ಯಾಸಿ ಬರಹಗಾರರು
ಇಂಡಿ
ಮೊ: 9972658355
ಉದಯರಶ್ಮಿ ದಿನಪತ್ರಿಕೆ
ಜಾಗತಿಕ ಶಾಂತಿ (Global Peace) ಇಂದಿನ ಅಗತ್ಯಗಳಲ್ಲಿ ಒಂದು. ಮನುಕುಲವು ವಿಶ್ವದ ವಿವಿಧ ಭಾಗಗಳಲ್ಲಿ ಹಲವು ಸುದೀರ್ಘ ಮತ್ತು ಹೊಸ ಸಂಕಷ್ಟಗಳನ್ನು ಎದುರಿಸುತ್ತಿದೆ. ತೊಂದರೆಗಳು, ಅಸಮಾನತೆಗಳು, ಭಯ, ಭಯೋತ್ಪಾದನೆ, ಆರ್ಥಿಕ ಮತ್ತು ಮಾನವೀಯ ಸಂಕಷ್ಟಗಳು ಇವೆಲ್ಲವುಗಳ ನಿವಾರಣೆಗೆ ಶಾಂತಿಯೇ ಏಕಮಾರ್ಗವಾಗಿದೆ.
ರಾಷ್ಟ್ರ ರಾಷ್ಟ್ರಗಳ ಮಧ್ಯ ನಡೆಯುವ ಯುದ್ಧಗಳು, ಗೊಂದಲಗಳು ಅಲ್ಲಿನ ನಾಗರಿಕರನ್ನು ಹೆಚ್ಚು ಸಮಸ್ಯಗಳಿಗೆ ಒಳಪಡಿಸುತ್ತಿವೆ. ಅನೇಕರು ವಲಸೆಗೊಳ್ಳುವ ಪರಿಸ್ಥಿತಿಗೆ ತಲುಪುತ್ತಾರೆ. ಮೂಲ ಅಗತ್ಯತೆಗಳಾದ ಆಹಾರ, ಶುದ್ಧ ನೀರು, ವೈದ್ಯಕೀಯ, ಆಶ್ರಯ ಕಳೆದುಕೊಳ್ಳಬೇಕಾಗುತ್ತದೆ.
ಯುದ್ಧ ಹಾಗೂ ಭಯೋತ್ಪಾದನೆ, ಅಂತರಾಷ್ಟ್ರೀಯ ಶಾಂತಿಯನ್ನು ಕದಡುವುದಲ್ಲದೇ, ಆರ್ಥಿಕ ವ್ಯವಸ್ಥೆಯ ನಾಶಕ್ಕೂ ಕಾರಣಾವಗಿದೆ. ರಾಜಕೀಯ, ಸಾಮಾಜಿಕ ಸ್ಥಿರತೆ ಕೆಡುತ್ತದೆ. ಭ್ರಷ್ಟಚಾರ, ನ್ಯಾಯ, ಪರಿಸರ, ಸಮಾಜದ ಒಗ್ಗೂಡುವಿಕೆಗೆ ಹಾನಿಯಾಗುತ್ತದೆ.
ಹಾಗಾಗಿ ಶಾಂತಿಯನ್ನು ಸಾಧಿಸಲು ವಿಶ್ವದ ರಾಷ್ಟ್ರಗಳು ಮುಂದಾಗಬೇಕು. “ನೀನೂ ಬೆಳೆ, ಇನ್ನೊಬ್ಬರನ್ನು ಬೆಳೆಯಬಿಡು” ಎನ್ನುವ ಭಾರತೀಯ ಸಂಸ್ಕೃತಿಯ ಪಾಠ ಎಲ್ಲರಿಗೂ ತಿಳಿಯಬೇಕು. “ವಸುಧೈವ ಕುಂಟುಂಕಂʼ (ಜಗತ್ತೇ ಒಂದು ಕುಟುಂಬ) ಎಂಬ ಮಾತು ಇಂದಿನ ಕಾರ್ಯವಾಗಬೇಕು.
ಅಂತರಾಷ್ಟ್ರೀಯ ಸಹಕಾರ ಒಪ್ಪಂದಗಳ ಮೂಲಕ ಮಾನವ ಹಕ್ಕುಗಳನ್ನು ಗೌರವಿಸಬೇಕು. ಶಾಲೆಗಳಲ್ಲಿ,ಸಮುದಾಯಗಳಲ್ಲಿ, ಮಾಧ್ಯ,ಗಳಲ್ಲಿ ಶಾಂತಿಯ ಅನಿವಾರ್ಯತೆಯನ್ನು ಹಾಗೂ ಅದರ ಮಹತ್ವವನ್ನು ತಿಳಿಸಿಕೊಡಬೇಕು. ಪುರುಷರು ಮತ್ತು ಮಹಿಳೆಯರ ಸಮಾನ ಪಾಲ್ಗೊಳ್ಳುವಿಕೆ, ಯುವಕರಲ್ಲಿ ಹೆಚ್ಚುತ್ತಿರುವ ಮಾನಸಿಕ ಕ್ರೌರ್ಯಗಳು ನಿರ್ಮೂಲನೆಯಾಗಿ ಶಾಂತಿ ನಿರ್ಮಾಣಗೊಳ್ಳಬೇಕು.
ಯುದ್ಧಗಳು ಸರ್ವನಾಶದ ಆಕರಗಳು. ಇವು ಮನುಷ್ಯರಿಗೆ ಅಷ್ಟೆ ಅಲ್ಲ ಪರಿಸರ ಹಾಗೂ ಅದರಲ್ಲಿನ ಜೀವಿಸಂಕುಲಕ್ಕೂ ತೊಂದರೆಯನ್ನು ತಂದೊಡ್ಡುತ್ತದೆ. ಪರಿಸರದ ಸಮತೋಲನವೇ ನಾಶವಾದರೆ ನಮ್ಮನ್ನು ನಾವೇ ನಾಶಮಾಡಿಕೊಂಡಂತೆ ಅಲ್ಲವೇ? “ಕೆಟ್ಟ ಮೇಲೆ ಬುದ್ಧಿ ಬಂತು” ಎಂಬ ಹಾಗೆ ಎಲ್ಲವೂ ನಾಶ ಹೊಂದಿದ ಮೇಲೆ ತಲೆ ಮೇಲೆ ಕೈ ಹೊತ್ತು ಕುಳಿತರೆ ಪ್ರಯೋಜನವೇನು?
“ಒಂದು ನಿಮಿಷದ ಸಿಟ್ಟು ಅರವತ್ತು ನಿಮಿಷದ ಆನಂದವನ್ನು ಹಾಳು ಮಾಡುತ್ತದೆ” ಎಂಬ ಗಾದೆ ಮಾತಿನ ತಾತ್ಪರ್ಯ ಅರಿವಾಗಬೇಕು. ಜಾಗತಿಕ ಶಾಂತಿ ತಕ್ಷಣದ ಫಲವೇನಲ್ಲ. ಆದರೆ ಧೃಢವಾದ ನಿರ್ದಾರ, ಸಣ್ಣ ಸಣ್ಣ ಹೆಜ್ಜೆ ಹಾಗೂ ಒಪ್ಪಂದಗಳು ದೊಡ್ಡ ದೊಡ್ಡ ಬದಲಾವಣೆ ತರುತ್ತವೆ. ಪ್ರತಿ ರಾಷ್ಟ್ರ ನಾಯಕರು ಕೇವಲ ತಮ್ಮ ರಾಷ್ಟ್ರದ ಹಿತವನ್ನು ಬಯಸದೇ ವಿಶ್ವದ ಹಿತಕ್ಕಾಗಿ ಮುನ್ನಡಿಯಿಡಬೇಕು.ಪ್ರೀತಿ ಇಲ್ಲದ ಮೇಲೆ –
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡಗಟ್ಟುವುದು ಹೇಗೆ?
ಈ ಮೇಲಿನ ಜಿ.ಎಸ್.ಶಿವರುದ್ರಪ್ಪನವರ ಕವನದ ಸಾಲುಗಳು ಇಂದಿನ ಪ್ರಸ್ತುತೆಯಲ್ಲವೇ? ಪ್ರೀತಿಯ ನೋಟ, ಪ್ರೀತಿಯ ಮಾತು, ಪ್ರೀತಿಯ ಮನಸ್ಥಿತಿ ಎಂತಹ ಪರಿಸ್ಥಿತಿಗಳನ್ನು ಶುದ್ಧಗೊಳಿಸುತ್ತವೆಯಂತೆ, ಅಂತಹುದರಲ್ಲಿ ಶಾಂತಿ ಸ್ಥಾಪನೆಯಾಗುವುದಿಲ್ಲವೇ? ಪ್ರೀತಿಗೆ ಅಂಗುಲಿಮಾಲಾನಂತಹ ರಾಕ್ಷಸರೇ ಶರಣಾಗಿರುವಾಗ ಹುಲು ಮಾನವರಿಗೆ ಕಷ್ಟವೇ? ಜಗತ್ತು ಇತರ ರಾಷ್ಟ್ರಗಳ ಮೇಲೆ ಕ್ರೌರ್ಯ ಬಿತ್ತುವಾಗಲೇ ಶಾಂತಿಯ ಬೆಳಕನ್ನು ಪಸರಿಸಿದ ರಾಷ್ಟ್ರ ನಮ್ಮದು. ನಮ್ಮ ಚರಿತೆಯನ್ನು ತಿಳಿದು ಇತರ ರಾಷ್ಟ್ರಗಳು ಬದಲಾಗಲಿ, ಶಾಂತಿ ಎಲ್ಲೆಡೆ ಸ್ಥಾಪನೆಯಾಗಲಿ.


