ನಾವು – ನಮ್ಮ ಮಕ್ಕಳು(ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಕುರಿತ ಲೇಖನ ಮಾಲಿಕೆ)
ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಮನೆಯಲ್ಲಿ ಅಮ್ಮ ಅಡುಗೆ ಮಾಡುವಾಗ ಮಕ್ಕಳು ಕೂಡ ಹಾಗೆ ಮಾಡುವ ಕೆಲಸಗಳನ್ನು ತದೇಕ ಚಿತ್ತದಿಂದ ನೋಡುತ್ತಾರೆ. ತಾಯಿಯ ಮಾತುಗಳನ್ನು, ಹಾವಭಾವಗಳನ್ನು, ಅಡುಗೆ ಮಾಡುವ ಸಮಯದಲ್ಲಿ ಆಕೆಯ ವೈಖರಿಯನ್ನು ಮಕ್ಕಳು ಅನುಕರಿಸುತ್ತಾರೆ. ಪ್ರಾಯೋಗಿಕವಾಗಿ ಹೀಗೆ ವಸ್ತುಗಳನ್ನು ಮುಟ್ಟಿ ನೋಡಿ ಅನುಭವಿಸಿ ಕಲಿಯುವ ಶಿಕ್ಷಣ ಪದ್ಧತಿಯನ್ನು ನಮ್ಮಲ್ಲಿ ಅನುಷ್ಠಾನಗೊಳಿಸಬೇಕು. ಇದು ಮಕ್ಕಳ ಕಲಿಕಾ ಆಸಕ್ತಿಗೆ ನೆರವಾಗುತ್ತದೆ.
ಸಾಧಾರಣವಾಗಿ ಶಿಕ್ಷಣದಲ್ಲಿ ನಾವು ‘ನೋಡಿ ಕಲಿ ಮಾಡಿ ಕಲಿ’ ಎಂಬ ಮಾತುಗಳನ್ನು ಕೇಳಿದ್ದೇವೆ, ಆದರೆ ಸರ್ವೋತ್ಕೃಷ್ಟವಾದ ಶಿಕ್ಷಣ ಪದ್ಧತಿ ಎಂದರೆ ಪರಿಕಲ್ಪನೆ ಆಧಾರಿತ ಶಿಕ್ಷಣ.ಪ್ರಾತ್ಯಕ್ಷಿಕೆಗಳ ಮೂಲಕ ಸ್ವತಹ ಅರಿತು ಕಲಿಯುವ ಈ ಶಿಕ್ಷಣ ಪದ್ಧತಿಯ ಮೂಲಕ ಮಕ್ಕಳನ್ನು ಸರ್ವೋತ್ಕೃಷ್ಟ ವಿದ್ಯಾರ್ಥಿಯನ್ನಾಗಿಸಬಹುದು.
ಒಂದು ಭಾಷೆಯನ್ನು ಕಲಿಯಬೇಕಾದರೆ ನಾವು ವರ್ಣಮಾಲೆಯಲ್ಲಿನ ಅಕ್ಷರಗಳನ್ನು ಅವುಗಳ ಉಚ್ಚಾರಗಳನ್ನು ಕಲಿಯುತ್ತೇವೆ. ಸ್ಲೇಟುಗಳಲ್ಲಿ ಪುಸ್ತಕಗಳಲ್ಲಿ ಮತ್ತೆ ಮತ್ತೆ ಬರೆದು ಅಕ್ಷರಗಳನ್ನು ಕಲಿಯುತ್ತೇವೆ. ಪ್ರತಿಯೊಂದು ಮಗುವಿನ ಕಲಿಯುವಿಕೆಯ ವಿಧಾನ ವಿಭಿನ್ನವಾಗಿರುತ್ತದೆ. ಪರಿಕಲ್ಪನೆ ಆಧಾರಿತ ಶಿಕ್ಷಣದಲ್ಲಿ ಕಾರ್ಯ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಮನದಟ್ಟಾಗುವಂತೆ ಕಲಿಸಲಾಗುತ್ತದೆ.

ಕೃಷಿ ವಿಷಯದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಇಂತಿಷ್ಟು ಜಾಗವನ್ನು ನೀಡಿ ಆ ಜಾಗದಲ್ಲಿ ಅವರಿಗೆ ವಿವಿಧ ಬೆಳೆಗಳನ್ನು ಬೆಳೆಯಲು ಅನುವು ಮಾಡಿಕೊಡುವುದಲ್ಲದೆ ಬಿತ್ತನೆಗೆ ಬಳಸುವ ಬೀಜಗಳು,ಅಲ್ಲಿ ಬೆಳೆಗಳನ್ನು ಬೆಳೆಯುವಾಗ ಬರುವ ತೊಂದರೆಗಳು, ರಾಸಾಯನಿಕ ಗೊಬ್ಬರಗಳ ಬಳಕೆ ಇಳುವರಿಯ ಪ್ರಮಾಣ, ಕೊಯ್ಲು ಮಾಡುವ ವಿಧಾನ, ಕಳೆ ತೆಗೆಯುವ, ರಾಶಿ ಮಾಡುವ ಹೀಗೆ ಹತ್ತು ಹಲವು ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತದೆ.
ಅಂತೆಯೇ ಮನೆಯಲ್ಲಿ ಆಟವಾಡಿಕೊಂಡಿರುವ ಮಕ್ಕಳನ್ನು ನಾವು ಪ್ರಾಪ್ತ ವಯಸ್ಸಿಗೆ ಬಂದಾಗ ಶಾಲೆಗೆ ಕಳುಹಿಸುತ್ತೇವೆ.

ಶಾಲೆಗೆ ಏಕೆ ಹೋಗಬೇಕು, ಏನನ್ನು ಕಲಿಯಬೇಕು ಯಾವ ರೀತಿ ಕಲಿಯಬೇಕು, ಪ್ರತಿಯೊಂದು ಕಲಿಕೆಯೂ ಮತ್ತೊಂದು ಕಲಿಕೆಗೆ ಅವಕಾಶ ಮಾಡಿಕೊಡುತ್ತವೆ ಎಂಬುದರ ಅರಿವು ಮಕ್ಕಳಿಗೆ ಇರುವುದಿಲ್ಲ..
ತಾವು ಶಾಲೆಯಲ್ಲಿ ಕಲಿಯುವ ಪಾಠವನ್ನು ಜೀವನದಲ್ಲಿ ಎಲ್ಲಿ ಅಳವಡಿಸಿಕೊಳ್ಳಬೇಕು ಎಂಬುದರ ಅರಿವು ಮಕ್ಕಳಿಗೆ ಇರುವುದಿಲ್ಲ. ಯಾವುದೇ ಅಂಕುಶಗಳಿಲ್ಲದ ಸ್ವಚ್ಛಂದವಾದ ವಾತಾವರಣದಲ್ಲಿ ಮಕ್ಕಳ ಕಲಿಕೆಗೆ ಅವಕಾಶಗಳು ಹೆಚ್ಚು.
ಮಕ್ಕಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಹೇಳಿ ಕೊಡುವಾಗ ಅವರ ಆಸಕ್ತಿಗಳನ್ನು ಗುರುತಿಸಬೇಕು, ಆ ಗುರುತಿಸುವಿಕೆ ಮುಂದಿನ ಕಲಿಕೆಗೆ ದಾರಿಯಾಗಬೇಕು. ಮಗುವಿನ ಆಸಕ್ತಿಗನುಗುಣವಾಗಿ ಕಲಿಸುವ ವಿಧಾನ ಹೆಚ್ಚು ಉಪಯುಕ್ತಕರ. ಕೆಲ ಮಕ್ಕಳಿಗೆ ಬಿಡಿ,ಎಷ್ಟೋ ಬಾರಿ ದೊಡ್ಡವರಿಗೂ ಕೂಡ ರಸ್ತೆಗಳು, ನಕಾಶೆಗಳು, ವರ್ತುಲಗಳು ಮತ್ತು ಕೆಲ ವಿಷಯಗಳು ಗೊಂದಲವನ್ನು ಹುಟ್ಟಿಸುತ್ತವೆ. ಅಂತಹವರಿಗೆ ಪ್ರಾಯೋಗಿಕವಾಗಿ ವಿಷಯವನ್ನು ಮನದಟ್ಟು ಮಾಡಿಸಬಹುದು. ಈ ಶಿಕ್ಷಣ ಪದ್ಧತಿಯಲ್ಲಿ
ಕಲಿಕಾ ನ್ಯೂನ್ಯತೆ ಇರುವ, ವರ್ತನಾ ದೋಷಗಳಿರುವ ಮಕ್ಕಳಿಗೆ ಕೂಡ ಕಲಿಸಲು ಸಾಧ್ಯ
ತರಗತಿಯ ಕೋಣೆಯಲ್ಲಿ ವಿಷಯದ ಕುರಿತ ಬೋಧನಾ ವಿಧಾನವೇ ಪ್ರಮುಖ ಪಾತ್ರ ವಹಿಸುತ್ತದೆ.
ತರಗತಿಯ ಬೋಧನಾ ವಿಧಾನದಲ್ಲಿ ಒಂದು ಸೀಮಿತ ಚೌಕಟ್ಟಿನಲ್ಲಿ ಕಲಿಯುತ್ತಾರೆ,ಆದರೆ ಪರಿಕಲ್ಪನೆ ಆಧಾರಿತ ಶಿಕ್ಷಣದಲ್ಲಿ ವಿಸ್ತೃತ ಅಧ್ಯಯನದ ಅಗತ್ಯವಿರುತ್ತದೆ ಮಕ್ಕಳಲ್ಲಿ ಪ್ರಶ್ನೆ ಕೇಳಿ ಉತ್ತರ ಪಡೆಯುವ ಅವಕಾಶ ಇರುತ್ತದೆ. ಇಲ್ಲಿ ಮಕ್ಕಳ ಅರಿವನ್ನು ವ್ಯಾಪಕತೆಯತ್ತ ಕೊಂಡೊಯ್ಯಬಹುದು.
ವಿಷಯ ಆಧಾರಿತ ಕಲಿಕೆಯಲ್ಲಿ ಮಕ್ಕಳು ಅಂತಿಮವಾಗಿ ಕಂಠಪಾಠ ಮಾಡಿ, ಪ್ರಶ್ನೋತ್ತರಗಳನ್ನು ಉರು ಹೊಡೆದು ಪರೀಕ್ಷೆಯಲ್ಲಿ ಬರೆದು ಅಂಕಗಳಿಸುವುದು ಮುಖ್ಯವಾಗಿ ಮುಂದಿನ ಜೀವನದಲ್ಲಿ ಅವರಿಗೆ ಈ ಕಲಿಕೆ ಬಹುತೇಕ ಅನುಪಯುಕ್ತವಾಗುತ್ತದೆ.
ಪರಿಕಲ್ಪನೆ ಆಧಾರಿತ ಕಲಿಕೆಯಲ್ಲಿ ಮಕ್ಕಳು ವಿಷಯದ ಆಳವನ್ನು ಅರಿಯುವುದರಿಂದ ಅದು ಅವರ ಜೀವಮಾನ ಪೂರ್ಣ ಅನುಭವವಾಗಿ ನೆನಪಿನ ಬಿತ್ತಿಗಳಲ್ಲಿ ಉಳಿದು ಹೋಗುತ್ತದೆ.
ಪರಿಕಲ್ಪನೆ ಆಧರಿತ ಕಲಿಕೆಯ ಅಭೂತಪೂರ್ವ ಆರಂಭವಾಗುವುದು ಪ್ರಶ್ನೆ ಕೇಳುವ ಗುಣದಿಂದ, ಒಳಹೊಕ್ಕು ನೋಡುವ ಕುತೂಹಲದಿಂದ ಮತ್ತು ಕಲಿಕೆಗೆ ಪೂರಕವಾದ ಗೆಲುವಿನ ವಾತಾವರಣವನ್ನು ಸೃಷ್ಟಿಸುವ ಮೂಲಕ ಸಾಧ್ಯವಾಗುತ್ತದೆ. ಮನಸ್ಸಿನಲ್ಲಿ ಮೂಡುವ ವಿಚಾರಗಳನ್ನು ಗಹನವಾಗಿ ಯೋಚಿಸುವ ಶಕ್ತಿ ಮೂಡುವುದು ಪರಿಕಲ್ಪನೆ ಆಧಾರಿತ ಕಲಿಕೆಯಲ್ಲಿ ಹೆಚ್ಚಾಗಿ ಕಾಣಬಹುದು. ಕಲಿಕಾ ನ್ಯೂನ್ಯತೆಯನ್ನು ಹೊಂದಿರುವ ಮಗು ಕೂಡ ಪರಿಕಲ್ಪನೆ ಆಧರಿತ ಕಲಿಕೆಯಲ್ಲಿ ಸ್ವಾವಲಂಬನೆ ಪಡೆದುಕೊಳ್ಳಲಿದೆ.
ಪರಿಕಲ್ಪನೆ ಆಧರಿತ ಕಲಿಕೆಯ ಮಕ್ಕಳಲ್ಲಿ ತಪ್ಪು ಸರಿಗಳ ವಿವೇಚನೆ, ನಿರ್ಧಾರ ಮಾಡುವ ಶಕ್ತಿ, ಗ್ರಹಿಕೆಯ ಆಳ ಹೆಚ್ಚುತ್ತದೆ.. ಇದು ಅವರ ಮಾನಸಿಕ ಸಂತುಲನವನ್ನು ಕಾಯುತ್ತದೆ.
ಹೊಸ ವಿಷಯಗಳನ್ನು ಮುಟ್ಟಿ ನೋಡಿ ಅನುಭವಿಸಿ ಪ್ರಾಯೋಗಿಕವಾಗಿ ಕಲಿಯುವ ಮಕ್ಕಳಲ್ಲಿ ವರ್ತನಾದೋಷಗಳು ಕಡಿಮೆಯಾಗುತ್ತಾ ಹೋಗುತ್ತವೆ .
ಮಕ್ಕಳ ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸುವ ಮೂಲಕ, ಬೆನ್ನು ತಟ್ಟುವ ಮೂಲಕ ಅವರನ್ನು ಇನ್ನಷ್ಟು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಬಹುದು.
ಉದಾಹರಣೆಗೆ ಕಲಿಕಾ ನ್ಯೂನ್ಯತೆ ಇರುವ ಮಕ್ಕಳು ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಿದಾಗ ಅವರ ಪುಸ್ತಕದಲ್ಲಿ ಹಸಿರು ಬಣ್ಣದ ಪೆನ್ಸಿಲಿನಿಂದ ನಕ್ಷತ್ರಗಳನ್ನು ಕೊಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತದೆ. ಹೀಗೆ ಪ್ರೋತ್ಸಾಹಿಸಲ್ಪಟ್ಟ ಮಕ್ಕಳು ತಾವೇ ಮುಂದಾಗಿ ಇನ್ನಿತರ ಮಕ್ಕಳಿಗೆ ಮಾದರಿಯಾಗುವಂತೆ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಬೆಳವಣಿಗೆಯನ್ನು ತೋರುತ್ತಾರೆ. ಒಂದೊಳ್ಳೆಯ ಪ್ರೋತ್ಸಾಹವೇ ಮಕ್ಕಳಿಗೆ ಪ್ರೇರಣಾದಾಯಿಯಾಗಿ ಕಾರ್ಯನಿರ್ವಹಿಸುತ್ತದೆ. ಧನಾತ್ಮಕ ಹೊಗಳಿಕೆ ಮತ್ತು ಪ್ರೋತ್ಸಾಹಗಳು ಎಂತಹದ್ದೇ ಕಲಿಕಾ ನ್ಯೂನ್ಯತೆ ಇದ್ದರೂ ಕೂಡ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯದಂತೆ ಪರಿಕಲ್ಪನೆ ಆಧಾರಿತ ಶಿಕ್ಷಣದಲ್ಲಿ ಕಾಣಬಹುದು
ಹೊಸ ವಿಷಯಗಳನ್ನು ಮುಟ್ಟಿ ನೋಡಿ ಅನುಭವಿಸಿ ಪ್ರಾಯೋಗಿಕವಾಗಿ ಕಲಿಯುವ ಮಕ್ಕಳಲ್ಲಿ ವರ್ತನಾದೋಷಗಳು ಕಡಿಮೆಯಾಗುತ್ತಾ ಹೋಗುತ್ತವೆ .
ಮಕ್ಕಳ ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸುವ ಮೂಲಕ, ಬೆನ್ನು ತಟ್ಟುವ ಮೂಲಕ ಅವರನ್ನು ಇನ್ನಷ್ಟು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಬಹುದು.
ಉದಾಹರಣೆಗೆ ಕಲಿಕಾ ನ್ಯೂನ್ಯತೆ ಇರುವ ಮಕ್ಕಳು ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಿದಾಗ ಅವರ ಪುಸ್ತಕದಲ್ಲಿ ಹಸಿರು ಬಣ್ಣದ ಪೆನ್ಸಿಲಿನಿಂದ ನಕ್ಷತ್ರಗಳನ್ನು ಕೊಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತದೆ. ಹೀಗೆ ಪ್ರೋತ್ಸಾಹಿಸಲ್ಪಟ್ಟ ಮಕ್ಕಳು ತಾವೇ ಮುಂದಾಗಿ ಇನ್ನಿತರ ಮಕ್ಕಳಿಗೆ ಮಾದರಿಯಾಗುವಂತೆ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಬೆಳವಣಿಗೆಯನ್ನು ತೋರುತ್ತಾರೆ. ಒಂದೊಳ್ಳೆಯ ಪ್ರೋತ್ಸಾಹವೇ ಮಕ್ಕಳಿಗೆ ಪ್ರೇರಣಾದಾಯಿಯಾಗಿ ಕಾರ್ಯನಿರ್ವಹಿಸುತ್ತದೆ. ಧನಾತ್ಮಕ ಹೊಗಳಿಕೆ ಮತ್ತು ಪ್ರೋತ್ಸಾಹಗಳು ಎಂತಹದ್ದೇ ಕಲಿಕಾ ನ್ಯೂನ್ಯತೆ ಇದ್ದರೂ ಕೂಡ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯದಂತೆ ಪರಿಕಲ್ಪನೆ ಆಧಾರಿತ ಶಿಕ್ಷಣದಲ್ಲಿ ಕಾಣಬಹುದು. ಅತ್ಯುತ್ತಮ ಕಲಿಕಾ ವಿಧಾನವಾಗಿ ಪರಿಕಲ್ಪನೆ ಆದರೆ ಶಿಕ್ಷಣವನ್ನು ಎಲ್ಲ ಶಾಲೆಗಳಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಸೂಕ್ತ
