ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು
ಉದಯರಶ್ಮಿ ದಿನಪತ್ರಿಕೆ
ದಸರಾ ಉದ್ಘಾಟನೆ, ಸಾಹಿತ್ಯ ಸಮ್ಮೇಳನ ಉದ್ಘಾಟನೆ ಇವೆಲ್ಲ ಬಂದಾಗ, ಆ ವಲಯದ ಜನರಿಗೆ “ಈ ಬಾರಿ ಯಾರಾಗ್ತಾರೆ?” ಎಂದು ಆಸಕ್ತಿ ಕೆರಳುವುದು ಸಹಜವೆ. ಅದೇ ಈ ವರ್ಷವೂ ಇತ್ತು.
ಜಗತ್ಪ್ರಸಿದ್ದ ದಸರಾ ಉದ್ಘಾಟನೆ ಮಾಡಲು ಸಾಹಿತಿಯೊಬ್ಬರನ್ನು ಆರಿಸಿದ್ದೂ ಆಯಿತು, ಆಹ್ವಾನಿಸಿದ್ದೂ ಆಯಿತು.
ಆ ಸಾಹಿತಿ ಇಲ್ಲಿಯವರೆಗೆ ಯಾರಿಗೆ ತಿಳಿದಿದ್ದರೋ ಇಲ್ಲವೋ ನನಗಂತು ತಿಳಿಯದು. ಆದರೆ ನನಗೆ ತಿಳಿದಿರಲಿಲ್ಲ ಎಂಬುದು ಸತ್ಯ. ‘ಬಾನು ಮುಷ್ತಾಕ್’ ಮತ್ತವರ ‘ಎದೆಯ ಹಣತೆ’ ಎಷ್ಟು ಜನಕ್ಕೆ ಗೊತ್ತಿತ್ತು ನಿಜ ಹೇಳಿ? ಅಷ್ಟೇ ಅಲ್ಲ ದೀಪಾ ಬಾಸ್ತಿ ಮತ್ತವರ ‘ಹಾರ್ಟ್ ಆಫ್ ದಿ ಲ್ಯಾಂಪ್’ ಕೂಡಾ. ಗೊತ್ತಾಗುವಂತೆ ಮಾಡಿದ್ದು “ಬೂಕರ್” ಪ್ರಶಸ್ತಿ ಅಲ್ಲವೇ?

ಬೇರೆ ಭಾಷೆಗಳಿಂದ ಇಂಗ್ಲಿಷ್ ಗೆ ಭಾಷಾಂತರ ಮಾಡಲಾಗುವ ಸಣ್ಣ ಕಥೆಗಳಿಗೆ ಕೊಡಮಾಡುವ ಬೂಕರ್ ಪ್ರಶಸ್ತಿ ಬಂದ ಮೇಲೆಯೇ ಇವರ ಮತ್ತು ಈ ಪುಸ್ತಕಗಳ ಹೆಸರು ಹೆಚ್ಚಾಗಿ ಕೇಳಿಬಂದದ್ದು, ಮತ್ತೂ ಮತ್ತೂ ಸಾಲದೆನಿಸುವಷ್ಟು ಪುಸ್ತಕಗಳಿಗೆ ಬೇಡಿಕೆ ಹೆಚ್ಚಾದದ್ದು.
ಹಾಗಾದರೆ, ಡಿ ವಿ ಗುಂಡಪ್ಪನವರ ʼಮಂಕುತಿಮ್ಮನ ಕಗ್ಗʼದಂತಹ ಕೃತಿಗಳು, ಕೆ ಪಿ ಪೂರ್ಣಚಂದ್ರ ತೇಜಸ್ವಿ, ಎಸ್ ಎಲ್ ಭೈರಪ್ಪ, ಯಂಡಮೂರಿ ವೀರೇಂದ್ರನಾಥ್, ತ್ರಿವೇಣಿ ಹೀಗೆ ಹಲವಾರು ಗಣ್ಯ ಸಾಹಿತಿಗಳ ಕೃತಿಗಳು ಇವಾವು ಪ್ರಶಸ್ತಿಗಳಿಗೆ ಅರ್ಹವಲ್ಲವೇ? ಅದನ್ನು ಕೇಳುವುದಕ್ಕೆ ಅವು ಭಾಷಾಂತರ ಆಗಿಯೇ ಇಲ್ವಲ್ಲ. ಅವುಗಳೂ ಸಹ ಭಾಷಾಂತರ ಆಗಿದ್ದರೆ ಆವಾಗ ಬೆಲೆ ತಿಳಿಯುತಿತ್ತು.
ಅದಂತು ನಿಜ ಹೀಗೆ ಹಲವಾರು ಸೃಜನಾತ್ಮಕ ಪುಸ್ತಕಗಳು ಎಲೆಮರೆಯ ಕಾಯಿಯಂತೆ ಮರೆಯಾಗೇ ಇವೆ. ನಮ್ಮ ದೇಶದ ‘ಯೋಗ’ದ ಬೆಲೆ ತಿಳಿಯಬೇಕಾದರೆ ಬೇರೆ ದೇಶದವರು ಅದರ ಪ್ರಾಮುಖ್ಯತೆಯನ್ನು ತಿಳಿಸಿಕೊಡಬೇಕಾಯಿತು. ನಾವು ವಿದೇಶದವರ ಆಜ್ಞಾಪಾಲಕರು. ಅವರು ಒಪ್ಪಿದ ಮೇಲೆಯೇ ನಮಗೆ ಅದರ ಮೌಲ್ಯ ತಿಳಿಯುವುದು. ಇರಲಿ ಮುಖ್ಯ ವಿಷಯಕ್ಕೆ ಬರೋಣ.
ಬೂಕರ್ ಪ್ರಶಸ್ತಿ ಒಳಗೊಂಡ 50 ಸಾವಿರ ಪೌಂಡನ್ನು ಸಮನಾಗಿ ಇಬ್ಬರು ಲೇಖಕಿಯರಿಗೂ ಹಂಚಲಾಯಿತು. ಅಂದರೆ ಮೂಲಲೇಖಕಿ ಮತ್ತು ಆ ಕೃತಿಯನ್ನು ಭಾಷಾಂತರ ಮಾಡಿದ ಲೇಖಕಿ ಇಬ್ಬರೂ ಈ ಪ್ರಶಸ್ತಿಗೆ ಅರ್ಹರು ಎಂದಹಾಗಾಯಿತು.
ಬಾನು ಮುಷ್ತಾಕ್‌ರ ʼಎದೆಯ ಹಣತೆʼ ಉತ್ತಮ ಕೃತಿಯೆ. ಆದರೆ ಅದನ್ನು ದೀಪಾ ಬಾಸ್ತಿ ಇಂಗ್ಲೀಷ್ ಗೆ ಭಾಷಾಂತರ ಮಾಡಿ “ಹಾರ್ಟ್ ಆಫ್ ದಿ ಲ್ಯಾಂ ಪ್” ಮಾಡದಿದ್ದರೆ, ಬೂಕರ್ ಪ್ರಶಸ್ತಿ ಬರುತಿತ್ತೇ? ನೊ ಸಾಧ್ಯವೇ ಇಲ್ಲ. ಅಂದಮೇಲೆ ಇಲ್ಲಿ ಏನು ಅರ್ಥ ಆಯಿತು. ಬೇರು ಎಸ್ಟು ಸ್ತ್ರಾಂಗ್ ಎಂದು ತಿಳಿಸಿಕೊಡುವುದೇ ಆ ಮರದ ಹಣ್ಣುಗಳು ಮತ್ತು ಮರದಿಂದ ಸಿಗುವ ನೆರಳು ಎಷ್ಟರಮಟ್ಟಿಗೆ ಜನಕ್ಕೆ ಸಿಗುತ್ತಿದೆʼ ಎಂಬುವುದರಿಂದ ಅಲ್ಲವೆ?
ಅಂದಮೇಲೆ ಒಬ್ಬರಿಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಎಂದು ದಸರಾ ಉದ್ಘಾಟನೆಗೆ ಆಹ್ವಾನಿಸುವುದು, ಅದನ್ನು ಸಿಗುವಂತೆ ಮಾಡಿದವರ ಹೆಸರೂ ಇಲ್ಲದಂತೆ ಮಾಡುವುದು ಎಷ್ಟರಮಟ್ಟಿಗೆ ಸರಿ? ಇಲ್ಲಿ ಬಾನು ಮುಷ್ತಾಕ್ ಅರ್ಹತೆ, ದೀಪಾ ಬಾಸ್ತಿಗೆ ಇರಲಿಲ್ಲವೇ? ಇಬ್ಬರನ್ನೂ ಒಟ್ಟಿಗೆ ದಸರಾ ಉದ್ಘಾಟನೆಗೆ ಅಹ್ವಾನಿಸಬಹುದಿತ್ತಲ್ಲವೇ? ಇದು ದೀಪಾ ಬಾಸ್ತಿಗೆ ಆದ ಅನ್ಯಾಯವೆಂದು ಯಾರಿಗೂ ಅನ್ನಿಸುವುದಿಲ್ಲವೇ?
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಆದರೆ ಎಲ್ಲರಿಗೂ ತಿಳಿದಿರುವಂತೆಯೆ ಇಷ್ಟು ಮುಕ್ತವಾಗಿ ಮೋಸವಾಗುತ್ತಿದೆ. ಇನ್ನು ಕಾಣದಂತೆ ಅನ್ಯಾಯಕ್ಕೆ ಗುರಿಯಾಗಿ ನೊಂದ ಮನಗಳು ಅದೆಷ್ಟೋ..
ಇನ್ನೊಂದು ವಿಚಾರ. ಸಾಹಿತ್ಯ ಸಮ್ಮೇಳನ ಸಾಹಿತ್ಯದ ಕಾರ್ಯಕ್ರಮವಾಗಿರುವುದರಿಂದ ಅದಕ್ಕೆ ಸಾಹಿತಿಗಳನ್ನೇ ಆರಿಸಬೇಕು ಸರಿ. ಆದರೆ ದಸರಾ, ಸಾಂಸ್ಕೃತಿಗ ನಗರಿ ಮೈಸೂರಿನ ಪರಾಂಪರಾನುಗತ ವೈಭವದ ಹಬ್ಬವಲ್ಲವೇ. ಅದಕ್ಕೆ ಸಾಹಿತಿಗಳನ್ನೇ ಆರಿಸಬೇಕೆಂಬ ನಿಯಮವೇನಿದೆ? ಯಾಕೆ ವಿಜ್ಞಾನಿಗಳು, ಯೋಧರು, ಪ್ರಗತಿಪರ ರೈತರು, ಸಮಾಜಸೇವಕರು, ಶಿಕ್ಷಣ ಕ್ಷೇತ್ರದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ಈ ರೀತಿ ಯಾರೂ ಇಲ್ಲವೆ? ಕುದುರೆಯ ಕಣ್ಣಿಗೆ ಪಟ್ಟಿಕಟ್ಟಿದಂತೆ, ಒಂದು ಎಂದರೆ ಒಂದೇ ದಾರಿಯಲ್ಲಿ ನಡೆಯಬೇಕೆ?.. ಯೋಚಿಸಬೇಕಾಗಿದೆ.
