ಲೇಖನ
– ಶಿಲ್ಪಾ ಮೃತ್ಯುಂಜಯ ಮಿಣಜಿಗಿ
ಹವ್ಯಾಸಿ ಬರಹಗಾರರು
ಧಾರವಾಡ
ಉದಯರಶ್ಮಿ ದಿನಪತ್ರಿಕೆ
ಕನ್ನಡ ಸಾಹಿತ್ಯಕ್ಕೆ ಸುಮಾರು 1500 ವರ್ಷಗಳ ಇತಿಹಾಸವಿದೆ ಈ ಸಾಹಿತ್ಯದಲ್ಲಿ ಅನೇಕ
ಪ್ರಮುಖವಾದಂತಹ ಘಟ್ಟಗಳನ್ನು ನೋಡಬಹುದು. ಅವುಗಳಲ್ಲೇ ಅತೀ ಪ್ರಾಮುಖ್ಯತೆ ಪಡೆದಂತಹ ಸಾಹಿತ್ಯ ವಚನ ಸಾಹಿತ್ಯ ಎಂದು ಹೇಳಬಹುದಾಗಿದೆ. ಇದನ್ನು ಕನ್ನಡ ಸಾಹಿತ್ಯ ಕೀರ್ತಿ ಶಿಖರದ ಕಾಲ ಎಂದು ಪರಿಗಣಿಸಲಾಗಿದೆ. 12ನೇ ಶತಮಾನದಲ್ಲಿ ಅನೇಕ ಜನ ಶರಣ ಶರಣೆಯರು ಕನ್ನಡ ಸಾಹಿತ್ಯಕ್ಕೆ ವಚನಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಇವರಲ್ಲಿ ಶಂಕರ ದಾಸಿಮಯ್ಯನವರು ಒಬ್ಬರು.
*ಶಂಕರ ದಾಸಿಮಯ್ಯ ನವರ ಪರಿಚಯ
ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ (ಸ್ಕಂದ ಶಿಲೆ )ಕಂದಗಲ್ಲಿನವರು.
ಮೂಲತಃ ಶೈವ ಬ್ರಾಹ್ಮಣರಾಗಿದ್ದು,

ನಂತರ ನವಿಲೇ ಶಂಕರಲಿಂಗನ ಕೃಪೆಯಿಂದ ಲಿಂಗಾಯತ ಧರ್ಮ ಪಾಲಿಸಿದವರೆಂದು ಶಂಕರ ದಾಸಿಮಯ್ಯನ ರಗಳೆ ಮತ್ತು ಬಸವ ಪುರಾಣಗಳಲ್ಲಿ ಕಾಣಬಹುದು. ಇವರು ಶಿವನಿಂದ ಹಣೆಗಣ್ಣಿನ ಆಶೀರ್ವಾದ ಪಡೆದವರು ಎಂದು ಐತಿಹ್ಯವಿದೆ. ಶಿವದಾಸಿ ಇವರ ಧರ್ಮ ಪತ್ನಿ. ಶಿವದಾಸಿಮಯ್ಯ ಇವರ ಸಹೋದರ.
ಇವರ ಕಾಯಕ ಜುಲಿಗ್ (ನೆಯುವದು )ಮತ್ತು ಬಣ್ಣಗಾರಿಕೆ ಇವರ ವೃತ್ತಿ.
ಇವರು ಲಿಂಗಾಯತ ಧರ್ಮದ ಕಾಯಕ ತತ್ವವನ್ನು ಎತ್ತಿಹಿಡಿದವರು, ಜಡೆ ಶಂಕರಲಿಂಗ ತನ್ನ ಆರಾಧ್ಯ ದೈವ ಎಂದು ಹೇಳಿಕೊಂಡಿದ್ದಾರೆ. ಇವರು ತಮ್ಮ ಧ್ಯಾನದ ಬಲದಿಂದ ಶಿವನ ಹಣೆಗಣ್ಣನ್ನು ಆಶೀರ್ವಾದ ರೂಪದಲ್ಲಿ ಪಡೆದುಕೊಳ್ಳುತ್ತಾರೆ ಎಂದು ಹರಿಹರನು ತನ್ನ ರಗಳೆಯಲ್ಲಿ ಹೇಳಿದ್ದಾನೆ.
ಶಂಕರ ದಾಸಿಮಯ್ಯನವರು ಅನುಭವ ಮಂಟಪದಲ್ಲಿ ತಮ್ಮದೇ ಆದಂತಹ ವಚಗಳನ್ನು ಸ್ಪಷ್ಟವಾಗಿ ಹೇಳಿದಂತಹವರು. ಇವರ ಬಹಳ ವಚನಗಳು ಸಿಗುವುದಿಲ್ಲ.
ದೊರೆತ ವಚನಗಳಲ್ಲಿ ಶರಣರನ್ನು ಸ್ಮರಿಸಿಕೊಳ್ಳುವ ಕಾರ್ಯ ಮಾಡಿದ್ದಾರೆ.
“ಎನ್ನ ಕಾಯಕ್ಕೆ ಗುರುವಾದನಯ್ಯ ಬಸವಣ್ಣನು
ಎನ್ನ ಜೀವಕ್ಕೆ ಲಿಂಗಾವಾದನಯ್ಯ ಚನ್ನಬಸವಣ್ಣನು
ಎನ್ನ ಪ್ರಾಣಕ್ಕೆ ಪ್ರಸಾದವಾದನಯ್ಯ ಮರುಳ ಶಂಕರ ದೇವರು
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯ ಪ್ರಭುದೇವರು ಇಂತಿವರ ಕರುಣದಿಂದಾನು ಬದುಕಿದೆನಯ್ಯ ನಿಜಗುರು ಶಂಕರದೇವ”
ಎಂದು ತಮ್ಮ ವಚನದಲ್ಲಿ ಸ್ಮರಿಸುತ್ತಾರೆ ಶಂಕರ ದಾಸಿಮಯ್ಯನವರು.
ಬಣಗಾರರು ಎಲ್ಲಿರುತ್ತಾರೋ ಅಲ್ಲಿ ಶಂಕರಲಿಂಗನ ದೇವಸ್ಥಾನ ಕಾಣಬಹುದಾಗಿದೆ. ಆದಿಕಾಲದಿಂದಲೂ ನೇಕಾರಿಕೆಗೆ ಹೆಸರುವಾಸಿಯಾದ ಇಲಕಲ್ಲ ದಲ್ಲಿ ಮತ್ತು ಕಂದಗಲ್ ನಲ್ಲಿ, ಗೋಕಾಕ್, ಹುಬ್ಬಳ್ಳಿ, ವಿಜಯಪುರ, ಗದಗ ಸೇರಿದಂತೆ ಹಲವೆಡೆಗಳಲ್ಲಿ ಶಂಕರ ಲಿಂಗನ ದೇವಸ್ಥಾನ ಕಾಣಬಹುದಾಗಿದೆ ಎಂದರೆ ಇದಕ್ಕೆ ಪ್ರಮುಖ ಕಾರಣ ದಾಸಿಮಯ್ಯನವರು. ಆದ್ದರಿಂದಲೇ ಇವರನ್ನು ಬಣಗಾರ ಸಮಾಜದ ಗುರುಗಳೆoದು ಪೂಜಿಸುತ್ತಾರೆ.
ಈಗಲೂ ಸಹ ಶ್ರಾವಣ ಮಾಸದಲ್ಲಿ ನವಿಲೇ ಜಡೆಶಂಕರ ಲಿಂಗನಿಗೆ ಪಾದಯಾತ್ರೆ ಹೊರಡುವದರ ಮೂಲಕ ಭಕ್ತರು ತಮ್ಮ ಭಕ್ತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ.
ಇಂತಹ ಶರಣರ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಅಳವಡಿಸಿದರೆ, ಕಥೆಗಳ ರೂಪದಲ್ಲಿ ಹೇಳಿದರೆ ಸಮಾಜದಲ್ಲಿ ಪರಿಣಾಮಕಾರಿಯಾದಂತಹ ಪರಿವರ್ತನೆ ತರಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನಿಸಿಕೆ.
