ಲೇಖನ
– ವೀಣಾ ಹೇಮಂತ ಗೌಡ ಪಾಟೀಲ
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಅವಶ್ಯಕತೆಯ ಅರಿವು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದ್ದು, ಇದೀಗ ಪಾಲಕತ್ವದ ಅವಶ್ಯಕತೆಯ ಅರಿವು ಸಾರ್ವತ್ರಿಕವಾಗಿ ಮುನ್ನೆಲೆಗೆ ಬಂದಿದೆ.
ಮಕ್ಕಳ ಕಣ್ಣಿಗೆ ಕಂಡದ್ದನ್ನು, ಕೇಳಿದ್ದನ್ನೆಲ್ಲ ಕೊಡಿಸುವುದು, ಮಕ್ಕಳು ಹೇಳಿದಂತೆಯೇ ನಡೆಯುವುದು, ಮಕ್ಕಳು ಬಯಸಿದ್ದನ್ನೇ ಉಣ ಬಡಿಸುವುದು ಒಳ್ಳೆಯ ಪಾಲಕತ್ವ ಎಂಬ ತಪ್ಪು ಕಲ್ಪನೆ ಬಹುತೇಕ ಜನರಲ್ಲಿ ಇದೆ.
ಪಾಲಕತ್ವ ಅಂದ್ರೆ ನಮ್ಮ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಮಕ್ಕಳ ಹೇಳುವ ಎಲ್ಲ ಮಾತುಗಳಿಗೆ ಶರಣಾಗತರಾಗುವುದು ಅಂತ ಅರ್ಥ ಅಲ್ಲ.
ಪಾಲಕತ್ವ ಪ್ರತಿಯೊಬ್ಬ ತಂದೆ ತಾಯಿಯು ಹೊರಲೇ ಬೇಕಾದ ಒಂದು ಉನ್ನತ ಜವಾಬ್ದಾರಿ. ಮಾನಸಿಕವಾಗಿ ಮಾಗಿದ ಪಾಲಕತ್ವ ಒಳ್ಳೆಯ ನಾಗರಿಕರನ್ನು ಈ ಸಮಾಜಕ್ಕೆ ಕಾಣಿಕೆಯಾಗಿ ನೀಡುತ್ತದೆ
ಸುಮಾರು 30- 32ರ ವಯಸ್ಸಿನ ಬಿಸಿ ರಕ್ತದ ಪಾಲಕರಲ್ಲಿ ಮಕ್ಕಳ ಮೇಲೆ ಪ್ರಾಬಲ್ಯ ತುಸು ಹೆಚ್ಚೇ ಇರುತ್ತದೆ. ಅಂತಹ ಪಾಲಕರು ತಮಗೆ ಎಲ್ಲಾ ತಿಳಿದಿದೆ, ತಾವು ಹೇಳಿದಂತೆಯೇ ಮಕ್ಕಳು ಕೇಳಬೇಕು ಎಂಬಂತಹ ಧೋರಣೆಯನ್ನು ಹೊಂದಿದ್ದು, ಮಕ್ಕಳ ಮೇಲೆ ವಿಪರೀತ ಒತ್ತಡ ಹೇರಿ ತಮ್ಮಿಚ್ಛೆಯಂತೆಯೇ ನಡೆಸಿಕೊಳ್ಳುತ್ತಾರೆ. ಆದರೆ ಅವರಿಗೆ ಅರಿವಿಗೆ ಬಾರದ ಇನ್ನೊಂದು ವಿಷಯವಿದೆ.. ಮುಂದಿನ ಹದಿನೈದು ವರ್ಷಗಳಲ್ಲಿ ಅಪ್ಪ ಅಮ್ಮ ಮಧ್ಯ ವಯಸ್ಸನ್ನು ದಾಟಿದರೆ ಮಕ್ಕಳು ಹರೆಯಕ್ಕೆ ಬರುತ್ತಾರೆ. ಇದೀಗ ಪಾಲಕರಿಗೆ ತಾವು ಮಕ್ಕಳ ಮೇಲೆ ಎಸಗಿದ ಕೃತ್ಯಗಳು ತಮಗೆ ಬೂಮರಾಂಗ ಆಗುತ್ತದೆ. ಬೂಮರಾಂಗ್ ಎಂಬ ಇಂಗ್ಲಿಷಿನ ಪದಕ್ಕೆ ಕನ್ನಡದಲ್ಲಿ ತಿರುಗುಬಾಣ ಅಂತ ಹೇಳಬಹುದು.. ಮಕ್ಕಳು ಅಪ್ಪ ಅಮ್ಮನಿಗಿಂತ ಮನೋ ದೈಹಿಕವಾಗಿ ಹೆಚ್ಚು ಪ್ರಬಲರಾಗಿದ್ದು ಮಕ್ಕಳನ್ನು ಒಲಿಸಿಕೊಳ್ಳಲು ಅಪ್ಪ ಅಮ್ಮ ದಮ್ಮಯ್ಯ ಗುಡ್ಡೆ ಹಾಕಬೇಕಾಗುತ್ತದೆ, ಗೋಗರೆಯಬೇಕಾಗುತ್ತದೆ.
ಇದರ ಬದಲಾಗಿ ಪಾಲಕರು ತಮ್ಮ ಸಿಟ್ಟು, ಹಠ, ಅಹಂಕಾರಗಳನ್ನು ಬಿಟ್ಟು ಮಕ್ಕಳನ್ನು ಚಿಕ್ಕಂದಿನಿಂದಲೇ ಪ್ರೀತಿಯಿಂದ, ಸಮತೋಲನದಿಂದ ಬೆಳೆಸಿದರೆ ಅದುವೇ ಪಾಲಕರು ಮತ್ತು ಮಕ್ಕಳ ನಡುವಣ ಸೇತುವೆಯಾಗಿ ಒಳ್ಳೆಯ ಬಾಂಧವ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆ.

ಈ ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳಿಗೆ ಸಾಮಾಜಿಕವಾಗಿ ಬೆರೆಯುವ ಅವಕಾಶಗಳು ಹೆಚ್ಚಾಗಿದ್ದವು. ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಇದೀಗ ವಿಭಕ್ತ ಕುಟುಂಬಗಳು ಹೆಚ್ಚಾಗಿದ್ದು ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿಗಳ ಮಹಾಪೂರವೇ ದೊರೆಯುತ್ತಿದ್ದರೂ ಸಾಮಾಜಿಕ ಸಂವಹನ ಸಾಧ್ಯವಾಗುತ್ತಿಲ್ಲ.
ಪಾಲಕತ್ವ ಎನ್ನುವುದು ಕೇವಲ ವಿಜ್ಞಾನವಲ್ಲ, ಅದೊಂದು ಅಭೂತಪೂರ್ವ ಕಲೆ. ಪ್ರಾರಂಭಿಕ ಹಂತದಲ್ಲಿ ಮಕ್ಕಳ ಎರಡು ವಿಷಯಗಳಲ್ಲಿ ನಾವು ಹೆಚ್ಚು ಗಮನ ಹರಿಸಬೇಕು
1 ನಡವಳಿಕೆ 2 ಶಿಕ್ಷಣ
ಪ್ರಸ್ತುತ ದಿನಮಾನಗಳಲ್ಲಿ ಸಮುದಾಯಿಕ ಮತ್ತು ಸಾಮಾಜಿಕ ಒತ್ತಡದಿಂದ ನಾವು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆಯೇ ಹೊರತು ಮಕ್ಕಳ ನಡುವಳಿಕೆಯ ಕುರಿತು ಗಮನ ಹರಿಸುತ್ತಿಲ್ಲ. ಒಳ್ಳೆಯ ನಡವಳಿಕೆಯನ್ನು ಕಲಿತ ಮಕ್ಕಳು ಒಳ್ಳೆಯ ಶಿಕ್ಷಣವನ್ನು ಕೂಡ ಪಡೆಯಬಲ್ಲರು, ಆದರೆ ಒಳ್ಳೆಯ ಶಿಕ್ಷಣ ಪಡೆದ ಮಕ್ಕಳಲ್ಲಿ ಒಳ್ಳೆಯ ನಡವಳಿಕೆ ಇರುತ್ತದೆ ಎಂಬುದು ಸಂದೇಹಾಸ್ಪದ.
ಮಕ್ಕಳು ಶಿಕ್ಷಣವನ್ನು ಪಾಲಕರಿಂದ, ಶಿಕ್ಷಕರಿಂದ, ಅಂತರ್ಜಾಲದ ನೆರವಿನಿಂದ ಕಲಿಯಬಹುದು ಆದರೆ ನಡವಳಿಕೆಯನ್ನು ಮಕ್ಕಳಿಗೆ ಪಾಲಕರೇ ಕಲಿಸಬೇಕು.
ಪಾಲಕರಲ್ಲಿ ಅತಿಯಾದ ಸಿಟ್ಟು, ಅಸಹನೆ ಒಳ್ಳೆಯದಲ್ಲ. ಮಕ್ಕಳಿಗೆ ಅವರ ತಂದೆಯೇ ಹೀರೋ, ಓರ್ವ ಪರಿಪೂರ್ಣ ವ್ಯಕ್ತಿ ಆಗಬೇಕೆಂದರೆ ತಂದೆ ತಮ್ಮ ಕಚೇರಿಯ ಮನೆಯ ಮತ್ತು ಸಮುದಾಯಿಕ ಕೆಲಸಗಳನ್ನು ಆಯಾ ಸಮಯಕ್ಕೆ ಪೂರೈಸಿ ಅಲ್ಲಿ ತಾನು ಅನುಭವಿಸುವ ಒತ್ತಡಗಳನ್ನು ಅಲ್ಲಿಯೇ ಬಿಟ್ಟು ಬಿಡಬೇಕು. ಮನೆಯಲ್ಲಿ ಯಾವತ್ತೂ ಕಚೇರಿಯ ಕುರಿತ, ಕೆಲಸಗಳ ಕುರಿತ ಒತ್ತಡಗಳ ಪರಿಣಾಮವಾದ ಸಿಟ್ಟು ಮತ್ತು ಅಸಹನೆಗಳನ್ನು ಮನೆಯಲ್ಲಿ ಮಕ್ಕಳ ಮೇಲೆ ಹೇರಬಾರದು. ಮಕ್ಕಳಲ್ಲಿ ಪಾಲಕರ ಕುರಿತು ಪ್ರೀತಿ ಗೌರವ ಇರಬೇಕೇ ಹೊರತು ಭಯ ಅಲ್ಲ.
ಮಕ್ಕಳು ಉತ್ತಮ ನಾಗರಿಕರಾಗಿ ಸಮಾಜಕ್ಕೆ ಕಾಣಿಕೆಯಾಗಬೇಕಾದರೆ ಮನೆಯಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ದೊರೆಯಬೇಕು. ಪಾಲಕರಲ್ಲಿ ತಾಳ್ಮೆ ಹೆಚ್ಚಿರಬೇಕು, ಓದುವ ಹವ್ಯಾಸ, ಅಭಿರುಚಿ ಇರಲೇಬೇಕು.
ಪುಸ್ತಕ ಓರ್ವ ಆತ್ಮಸಖ ಇದ್ದಂತೆ. ಒಳ್ಳೆಯ ಪುಸ್ತಕಗಳು ಕಲಿಸಿಕೊಡುವ ಪಾಠಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಪಾಲಕರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಕರೂ ಆಗಬಲ್ಲರು.
