ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಕೊರಳಲ್ಲಿ ಇಷ್ಟಲಿಂಗವನ್ನು ಧರಿಸಿದ್ದ ಆ ಪುಟ್ಟ ಬಾಲಕ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಆಡುತ್ತಿರುವಾಗ ಸ್ನೇಹಿತರು ಆತನ ಕೊರಳ ಇಷ್ಟ ಲಿಂಗವನ್ನು ಕಸಿಯಲು ಪ್ರಯತ್ನಿಸಿದಾಗ ಆತ ತನ್ನ ಕೊರಳ ಇಷ್ಟ ಲಿಂಗವನ್ನು ಓಂ ನಮಃ ಶಿವಾಯ ಎಂದು ಹೇಳುತ್ತಾ ನುಂಗಿಬಿಟ್ಟ. ಹಾಗೆ ನುಂಗಿದ ಲಿಂಗವು ಆತನ ವಸಡು ಮತ್ತು ಗಂಟಲಿನ ಮಧ್ಯದಲ್ಲಿ ತಿಳಿದುಕೊಂಡು ಜೀವನದ ಕೊನೆಯವರೆಗೂ ಆತನ ದೇಹದ ಒಂದು ಭಾಗವಾಯಿತು. ಆದ್ದರಿಂದಲೇ ಆತನನ್ನು ಅಮಳೋಕ್ಯಲಿಂಗಧಾರಿ ಎಂದು ಕರೆದರು. ಕೊರಳ ಲಿಂಗವನ್ನು ಕಳೆದುಕೊಂಡ ಆತನನ್ನು ಆತನ ಪಾಲಕರು ಮನೆಯಿಂದ ಹೊರಹಾಕಿದರು. ಆತನ ತಂಗಿಯೂ ಕೂಡ ಅಣ್ಣನನ್ನು ಹಿಂಬಾಲಿಸಿದಳು.
ಅಡಕದಲ್ಲಿರುವ ಸೋದರ ಮಾವನ ಮನೆಗೆ ಬಂದ ಅಜಗಣ್ಣ ಮತ್ತು ಮುಕ್ತಾಯಕ್ಕರಿಗೆ ಆಶ್ರಯ ನೀಡಿದ ಸೋದರ ಮಾವ ತನ್ನ ಮಗಳನ್ನು ಅಜಗಣ್ಣನಿಗೆ ಕೊಟ್ಟು ಮದುವೆ ಮಾಡಿದರೆ, ಸೊಸೆ ಮುಕ್ತಾಯಕ್ಕನನ್ನು ಇಂದಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಸಳಿ ಕಲ್ಲು ಗ್ರಾಮದ ಯುವಕನಿಗೆ ಮದುವೆ ಮಾಡಿಕೊಟ್ಟರು. ತಂಗಿಯೊಂದಿಗೆ ಮಸಳಿಕಲ್ಲು ಗ್ರಾಮಕ್ಕೆ ಬಂದ ಅಜಗಣ್ಣ ಒಂದು ದಿನ ರಾತ್ರಿ ಹೊಲವನ್ನು ಕಾಯಲು ಹೋದಾಗ ಅಲ್ಲಿ ಘಟಸರ್ಪವೊಂದು ತನ್ನ ಗಂಟಲಲ್ಲಿ ಇಟ್ಟುಕೊಂಡ ರತ್ನವನ್ನು ತಲೆಯ ಮೇಲಿಟ್ಟುಕೊಂಡು ಆಹಾರವನ್ನು ಹುಡುಕಿ ಸೇವಿಸಿ ಮತ್ತೆ ಆ ರತ್ನವನ್ನು ಗಂಟಲಲ್ಲಿ ಇಟ್ಟುಕೊಂಡು ಹೋಗುತ್ತಿರುವುದನ್ನು ನೋಡಿ ಆಶ್ಚರ್ಯ ಚಕಿತರಾದರು. ತಾವು ಕೂಡ ಅಂತರಂಗದಲ್ಲಿ ಸ್ವಯಂಪ್ರಕಾಶಮಯವಾದ ಮಹಾಲಿಂಗವನ್ನು ಅಂತರಂಗದಲ್ಲಿ ಇರಿಸಿಕೊಂಡು ಪೂಜೆ ಮಾಡಿದರೆ ಹೇಗೆ ಎಂದು ಯೋಚಿಸಿ ಅದರಂತೆಯೇ ಬಹಿರಂಗದ ಅರ್ಚನೆ ಪೂಜೆಗಳನ್ನು ಬಿಟ್ಟು ಅಂತರ್ಮುಖಿಯಾಗಿ ಪರಿಪೂರ್ಣ ನಿಶಬ್ದ ನಿರುಪಾದ ಸ್ಥಿತಿಯಲ್ಲಿ ಲಿಂಗವನ್ನು ಪೂಜಿಸಲಾರಂಭಿಸಿದರು. ಅವರೇ ಇಷ್ಟಲಿಂಗವೇ ಪ್ರಾಣ ಲಿಂಗವಾಗಿ ಅಂತರಂಗದಲ್ಲಿ ಅರ್ಜಿಸಿ ಮನದಲ್ಲಿ ಮಂತ್ರವ ನೆನೆಯುತ್ತಿದ್ದರು ಎಂದು ಶಾಂತಲಿಂಗ ದೇಶಿಕರು ಬರೆದಿದ್ದಾರೆ.

ಅಜಗಣ್ಣ ಮತ್ತು ಮುಕ್ತಾಯಕ್ಕನ ಜೀವನ ಕಥೆಗಳು ಶೂನ್ಯ ಸಂಪಾದನೆಯ ಕೃತಿಗಳನ್ನು ಕಾಲಕಾಲಕ್ಕೆ ಮಾರ್ಪಾಡಾಗಿವೆ. ಅಂತರಂಗದ ಪೂಜೆ ಕೈಗೊಂಡು ಅರಿವಿನ ಜ್ಞಾನ ಪ್ರಕಾಶವನ್ನು ಕಂಡಿದ್ದರು ಅಜಗಣ್ಣ.
ಅಣ್ಣ ತಂಗಿಯರ ಬಾಂಧವ್ಯ ಹೇಗಿತ್ತು ಎಂದರೆ ಕಲಿಸದೆಯೇ ಅಣ್ಣ ಅಜಗಣ್ಣ ಗುರುವಾದರೆ ಕೇಳದೆಯೇ ತಂಗಿ ಶಿಷ್ಯರಾಗಿದ್ದರು. ತಮ್ಮ ಗುಪ್ತ ಭಕ್ತಿಯಿಂದ ಆಧ್ಯಾತ್ಮಿಕದ ಅಸಾಮಾನ್ಯ ಎತ್ತರಕ್ಕೆ ಏರಿದ ಶರಣ ಅಜಗಣ್ಣ. ಆತನಿಗೆ ತಕ್ಕ ತಂಗಿ ಮುಕ್ತಾಯಕ್ಕ..
ಮುಕ್ತಾಯಕ್ಕನದು ವೈಚಾರಿಕ ಮತ್ತು ದಿಟ್ಟ ನಿಲುವಿನ ಜ್ಞಾನಮಾರ್ಗ ಪ್ರತಿಪಾದಕರು. ಅಜಗಣ್ಣ ತಂದೆ ಎಂಬ ವಚನಾಂಕಿತ ದಿಂದ ಸುಮಾರು 37 ವಚನಗಳನ್ನು ಮುಕ್ತಾಯಕ್ಕನವರು ರಚಿಸಿದ್ದು ಅವರ ಅನುಭವದ ನೆಲೆ ಅತ್ಯಂತ ಮಹತ್ತರವಾದದ್ದು.
ಅಣ್ಣ ತಂಗಿಯರ ಅನ್ನೋನ್ಯ ಬಾಂಧವ್ಯ ಹಲವಾರು ಕೃತಿಗಳಲ್ಲಿ ದಾಖಲಾಗಿದ್ದು ಅಜಗಣ್ಣನ ಅವಸಾನವಾದರೆ ಆಕೆಗೆ ಹೇಗೆ ಗೊತ್ತಾಗಬೇಕು ಎಂದು
ಆಕೆ ಕೇಳಿದಾಗ ಆತನ ಬಾಯಿಂದಲೇ ಮನೆಯ ಹಿತ್ತಲಲ್ಲಿ ಮಲ್ಲಿಗೆ ಗಿಡದ ಹೂಗಳು ಒಣಗಿ ಹೋಗುವ, ಆಕೆ ಉಟ್ಟ ಸೀರೆಯ ನೆರಿಗೆಗಳು ತಂತಾನೆ ಕಳಚಿ ಬಿದ್ದಾಗ ನನ್ನ’ ಅವಸಾನವಾಗಿದೆ ಎಂದು ತಿಳಿಯಬೇಕು ಎಂದು ಹೇಳುವ ಮತ್ತು ಅಂತೆಯೇ ನಡೆದ ಸಮಯದಲ್ಲಿ ಗಾಬರಿಗೊಂಡು ತವರಿಗೆ ನಡೆದು ಅಣ್ಣನ ಪಾರ್ಥಿವ ಶರೀರವನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಅಲ್ಲಮಪ್ರಭುಗಳ ಜೊತೆಗೆ ಮುಕ್ತಾಯಕ್ಕ ಸಂವಾದದಲ್ಲಿ ತೊಡಗಿದ ಪ್ರಸಂಗವನ್ನು ನಾವು ಹಲವಾರು ಕೃತಿಗಳಲ್ಲಿ ಕಾಣಬಹುದು.
ಅದೆಲ್ಲವನ್ನು ಬದಿಗಿರಿಸಿ ಕೇವಲ ಮುಕ್ತಾಯಕನ ವಚನಗಳ ಕುರಿತು ಹೇಳಿದರೆ
ಅಂಧಕನ ಕೈಯ | ಅಂಧಕ ಹಿಡಿದಂತಿರಬೇಕು ||
ಮೂಗನ ಕೈಯಲ್ಲಿ | ಕಾವ್ಯವ ಕೇಳಿದಂತಿರಬೇಕು ||
ದರ್ಪಣದೊಳಗೆ ಪ್ರತಿಬಿಂಬದಂತೆ | ಹಿಡಿವರಿಗಳವಲ್ಲದಿರಬೇಕು ||
ಅಣ್ಣಾ ಕೂರ್ಮನ | ಶಿಶುವಿನ ಸ್ನೇಹದಂತೆ ||
ಇರಲೊಲ್ಲದೆ | ಆರೂಢಗೆಟ್ಟೆಯೊ ಅಜಗಣ್ಣಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-899 / ವಚನ ಸಂಖ್ಯೆ-1095)
ಅಜಗಣ್ಣ ಎಂದಿಗೂ ಮುಕ್ತಾಯಕ್ಕನವರಿಗೆ ಮುಂದೆ ಕುಳಿತು ಹೇಳಿಕೊಡಲಿಲ್ಲ. ಕಿವಿಗಳಿಂದ ಅಣ್ಣನ ಮಾತು ಕೇಳಿಸಿಕೊಂಡು ಕಲಿಯಲಿಲ್ಲ. ಎಲ್ಲಿ ಹೋಗಬೇಕು, ಹೇಗೆ ಹೋಗಬೇಕು ಅನ್ನೋದು ಗೊತ್ತಿಲ್ಲದೇ ಇರುವ ಒಬ್ಬ ಕುರುಡ ಇನ್ನೊಬ್ಬ ಕುರುಡನ ಕೈ ಹಿಡಿದು ಮುನ್ನಡೆಸುವಂತೆ ಮಾರ್ಗದರ್ಶನ ನೀಡಿದ. ಆ ಉಪದೇಶ ಮೂಗನ ಕಾವ್ಯದಂತಿತ್ತು. ಕನ್ನಡಿಯೊಳಗೆ ಮೂಡಿದ ಪ್ರತಿಬಿಂಬವು ಕನ್ನಡಿಯೊಳಗೆ ಸಮಾವಿಷ್ಠವಾಗುವಂತಿತ್ತು. ಆಮೆಯು ತನ್ನ ಮರಿಗೆ ದೃಷ್ಟಿಮಾತ್ರದಿಂದ ಹಸಿವನ್ನು ನೀಗಿಸುವಂತೆ ತನ್ನ ಆಧ್ಯಾತ್ಮಿಕ ತಿಳುವಳಿಕೆಯ ಹಸಿವನ್ನು ನೋಟ ಮಾತ್ರದಿಂದಲೇ ನೀಗಿಸಿದನು. ಹೀಗೆ ಮುಂದುವರೆಸದೆ ಹೋಗಿಬಿಟ್ಟೆಯಲ್ಲಾ ಅಜಗಣ್ಣ ತಂದೆ ಎಂದು ಕಳವಳಿಸುತ್ತಾರೆ.
ನೀರಬೊಂಬೆಗೆ | ನಿರಾಳದ ಗೆಜ್ಜೆಯ ಕಟ್ಟಿ ||
ಬಯಲಬೊಂಬೆಯ ಕೈಯಲ್ಲಿ | ಕೊಟ್ಟು ಮುದ್ದಾಡಿಸುತ್ತಿರ್ದನಯ್ಯ ||
ಕರ್ಪೂರದ ಪುತ್ಥಳಿಗೆ | ಅಗ್ನಿಯ ಸಿಂಹಾಸನವನಿಕ್ಕಿ ||
ಅಗ್ನಿ ಕರಗಿ ಕರ್ಪೂರ | ಉಳಿದುದಕ್ಕೆ ||
ಬೆರಗಾದೆನಯ್ಯಾ ಎನ್ನ | ಅಜಗಣ್ಣನ ಯೋಗಕ್ಕೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-902 / ವಚನ ಸಂಖ್ಯೆ-1119)
ಹರಿಯುವ ಗುಣದ ನೀರು ಒಂದು ಕಡೆ ನಿಲ್ಲಲಾರದು. ತನ್ನತನ ಬಿಡದಿದ್ದರೂ ಯಾವಾಗಲೂ ಸ್ಥಾನ ಬದಲಿಸುತ್ತಿರುತ್ತದೆ. ಅಂಥ ನೀರ ಗೊಂಬೆ ನಾನು. ಬಯಲು ರೂಪ ಅಂದರೆ ಎಲ್ಲವನ್ನೂ ಒಳಗೊಂಡದ್ದು. ನನಗೆ ಎಲ್ಲ ತತ್ವ ವಿಚಾರಧಾರೆಗಳನ್ನೂ ಎರೆದು ಒಂದು ಮುದ್ದಾದ ಗೊಂಬೆ ಮಾಡಿದ್ದಾನೆ. ಸಾಮಾನ್ಯವಾಗಿ ಅಗ್ನಿಯ ಸ್ಪರ್ಶದಿಂದ ಕರ್ಪೂರ ಆವಿಯಾಗುತ್ತದೆ. ಇಲ್ಲಿ ಅಗ್ನಿಯ ಸಿಂಹಾಸನದಲ್ಲಿ ಕುಳಿತ ಕರ್ಪೂರದ ಗೊಂಬೆಗೆ ಏನೂ ಆಗಿಲ್ಲ. ಆದರೆ ಅಗ್ನಿಯ ಸಿಂಹಾಸನ ಕರಗಿ ಕರ್ಪೂರ ಉಳಿದಿದೆ! ಜ್ಞಾನಾಗ್ನಿಯಾದ ಅಜಗಣ್ಣ ಹೊರಟು ಹೋಗಿದ್ದಾನೆ. ಕರ್ಪೂರದ ಪುತ್ಥಳಿಯಾದ ನಾನು ಉಳಿದುಕೊಂಡಿದ್ದೇನೆ. ಇದು ಅಜಗಣ್ಣನ ಯೋಗದ ಪ್ರತಿಫಲ ಎನ್ನುತ್ತಾರೆ.
ನಂತರ ಮುಕ್ತಾಯಕ್ಕನನ್ನು ಪರಿಪರಿಯಾಗಿ ಸಮಾಧಾನಿಸಿದ ಅಲ್ಲಮ ಪ್ರಭುಗಳು ಹಾಗೂ ಮುಕ್ತಾಯಕ್ಕನವರ ಸಂವಾದವನ್ನು ನಾವು ಶೂನ್ಯ ಸಂಪಾದನೆ ಕೃತಿಯಲ್ಲಿ ಕಾಣಬಹುದು.

ನಮ್ಮದೇ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಶರಣೆ ( ಮೋಕ್ಷವನ್ನು ಅನ್ವೇಷಿಸುವ ಸ್ಥಿತಿಯಲ್ಲಿರುವ )ಮುಮುಕ್ಶುವಾದ ಮುಕ್ತಾಯಕ್ಕ ಸ್ತ್ರೀ ಕುಲಕ್ಕೆ ಆದರ್ಶಪ್ರಾಯಳು. ಆಕೆಯ ಸೋದರ ಪ್ರೇಮ ಅದ್ವಿತೀಯ. ಆಕೆಯ ದಿಟ್ಟ ವೈಚಾರಿಕ ನಿಲುವು ಶರಣ ಧರ್ಮಕ್ಕೆ ಕಳಶಪ್ರಾಯವಾಗಿದೆ. ಮುಕ್ತಾಯಕ್ಕನವರ 37 ವಚನಗಳು ನಮಗೆ ದೊರಕಿವೆ.ಮುಕ್ತಾಯಕ್ಕನ ವಚನಗಳು ವೈಚಾರಿಕ ಮತ್ತು ತಾರ್ಕಿಕತೆಯಿಂದ ಕೂಡಿದ ಗಹನವಾದ ಜ್ಞಾನವನ್ನು ಸಾರುತ್ತವೆ. ಈಕೆ “ಅಜಗಣ್ಣ”, “ಅಜಗಣ್ಣ ತಂದೆ” ಎಂಬ ಅಂಕಿತನಾಮದಲ್ಲಿ ವಚನಗಳನ್ನು ರಚಿಸಿದ್ದು, ತನ್ನ ಅಣ್ಣನ ಆದರ್ಶವನ್ನು ಅನುಸರಿಸಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬೆಳೆದು ನಿಂತ ಆಕೆಯ ವಚನಗಳು ನಿಷ್ಠುರತೆ, ಸತ್ಯ ಮತ್ತು ಸ್ವತಂತ್ರ ಚಿಂತನೆಯನ್ನು ತೋರಿಸುತ್ತವೆ.ಮುಕ್ತಾಯಕ್ಕನ ವಚನಗಳು ಸಾಹಿತ್ಯಕ್ಕಾಗಿ ಸಾಹಿತ್ಯವಲ್ಲ, ಬದುಕಿಗಾಗಿ ಬರೆದ ಸಾಹಿತ್ಯ ಎಂಬ ಧೋರಣೆಯನ್ನು ಹೊಂದಿದ್ದು ಅವರ ವಚನಗಳಲ್ಲಿ ಆಧ್ಯಾತ್ಮಿಕ ಸತ್ಯವನ್ನು ನೇರ ಮತ್ತು ನಿಷ್ಠುರವಾದ ರೀತಿಯಲ್ಲಿ ಹೇಳುತ್ತವೆ.
ಮುಕ್ತಾಯಕ್ಕನಿಗೆ ನಮ್ಮ ಶರಣು ಶರಣಾರ್ಥಿ.
ಆಧಾರ
ಹಲಗೆ ಆರ್ಯರ ಕೃತಿ
