ಲೇಖನ
– ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಪೋಸ್ಟ್ ಮತ್ತು ಗ್ರಾಮ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ.
ದೂ:೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಆಕೆ ಬಡ ಕುಟುಂಬದಿಂದ ಬಂದ ಹೆಣ್ಣು ಮಗಳು ಕುರಿ ಕಾಯುವಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದ ಕುಟುಂಬದಲ್ಲಿ ಹುಟ್ಟಿ ಶ್ರೀಮಂತಿಕೆಯೆಂದರೇನೆಂಬುದನ್ನೇ ಅರಿಯದೆ ಇಂದು ರಾಷ್ಟ್ರವೊಂದರ ಎರಡನೇ ಅತ್ಯುನ್ನತ ಸಚಿವೆಯ ಸ್ಥಾನವನ್ನು ಅಲಂಕರಿಸಿರುವ ನಜತ್ ಎಂಬ ಮಹಿಳೆಯ ಮಹಾನ್ ಸಾಹಸಗಾಥೆ. “ಬದುಕಲ್ಲಿ ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು” ಎಂಬ ಮಾತನ್ನು ಅಕ್ಷರಶಃ ನಿಜವಾಗಿಸಿದ ಧೀರ ಹೆಣ್ಣು ಮಗಳು ಈಕೆ. ೪ ಅಕ್ಟೋಬರ್ ೧೯೭೭ರಲ್ಲಿ ಉತ್ತರ ಆಫ್ರಿಕಾದ ಮೊರಕ್ಕೂದ ಬಿನಿ ಚೇಕರ್ ಎಂಬ ಹಳ್ಳಿಯ ಬಡ ಕುರಿಗಾಹಿ ಕುಟುಂಬದಲ್ಲಿ ಜನಿಸಿ ಇಂದು ಪ್ರಪಂಚದ ಸೂಪರ್ ಪವರ್ ದೇಶಗಳಲ್ಲಿ ಒಂದಾದ ಫ್ರಾನ್ಸ್ ದೇಶದ ಎರಡನೇಯ ಅತ್ಯುನ್ನತ ಹುದ್ದೆಯಾದ ಶಿಕ್ಷಣ ಸಚಿವೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಜತ್ ವಲ್ಲೌಡ್ ಬೆಕ್ಸೆಮ್ ಎಂಬ ಮಹಿಳೆಯೇ ಈ ಸಾಧಕಿ.

ಇಂದು ೩೮ ವರ್ಷ ವಯಸ್ಸಿನ ಫ್ರಾನ್ಸ್ ದೇಶದ ಅತ್ಯಂತ ಕ್ರಿಯಾಶೀಲ ಮತ್ತು ಯುವ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ನಜತ್‌ಳದ್ದು ೨೫ ವರ್ಷಗಳ ಹಿಂದಿನ ಬದುಕು ಅತ್ಯಂತ ಶೋಚನೀಯವಾಗಿತ್ತು. ತೀರಾ ಬಡ ಮುಸ್ಲಿಂ ಕುರಿಗಾಹಿ ಕುಟುಂಬದಲ್ಲಿ ಜನಿಸಿ ಒಪ್ಪೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಕುಟುಂಬದಲ್ಲಿ ನಜತ್‌ಳ ಜನನ. ಮನೆಯ ಒಟ್ಟು ಏಳು ಮಂದಿ ಮಕ್ಕಳಲ್ಲಿ ನಜತ್ ಎರಡನೆಯವಳಾಗಿದ್ದು, ಕುಟುಂಬವು ತನ್ನ ಸಂಸಾರ ನಿರ್ವಹಣೆಗಾಗಿ ತಾತನ ಕಾಲದಿಂದಲೂ ಮೊರಕ್ಕೂದ ಶ್ರೀಮಂತ ಕುಟುಂಬವೊಂದರ ಫಾರಂ ಹೌಸ್‌ನಲ್ಲಿದ್ದುಕೊಂಡು ಕುರಿಕಾಯುವ ಕೆಲಸವನ್ನು ಮಾಡಿಕೊಂಡು ಬಂದಿತ್ತು. ಈಕೆಯ ಬಾಲ್ಯದ ಹೆಚ್ಚಿನ ಅವಧಿಯನ್ನು ಉತ್ತರ ಮೊರಕ್ಕೋದ ರಿಫಿ ಪರ್ವತ ಪ್ರದೇಶಗಳಲ್ಲೇ ಕುರಿ ಕಾಯುತ್ತ ಕಳೆದು ಹೋಗುತ್ತದೆ. ಕುಟುಂಬದ ನಿರ್ವಹಣೆ ತೀರಾ ದುಸ್ಥರವಾಗತೊಡಗಿದಾಗ ನಜತ್‌ಳಿಗೆ ಎಂಟು ವರ್ಷದ ಅವಧಿಯಲ್ಲಿ ಈಕೆಯ ತಂದೆ ಮೊರಕ್ಕೋ ತೊರೆದು ಫ್ರಾನ್ಸ್ ಪ್ರಸಿದ್ದ ಕಾರು ತಯಾರಿಕಾ ಸಂಸ್ಥೆಯಾದ ರೆನಾಲ್ಟ್ ಸಂಸ್ಥೆಯಲ್ಲಿ ಕೂಲಿ ಕೆಲಸಕ್ಕಾಗಿ ಫ್ರಾನ್ಸ್ಗೆ ವಲಸೆ ಹೋಗುತ್ತಾರೆ. ನಂತರದಲ್ಲಿ ತಾಯಿ ಹಾಗೂ ಮುಂದಕ್ಕೆ ತನ್ನ ಕುಟುಂಬದೊಂದಿಗೆ ನಜತ್‌ಳೂ ಫ್ರಾನ್ಸ್ನ ನಿರಾಶ್ರಿತರ ಶಿಬಿರಕ್ಕೆ ಸೇರಿಕೊಳ್ಳುತ್ತಾರೆ.
ಬಡತನದ ವಿವಿಧ ಮಗ್ಗುಲುಗಳನ್ನಷ್ಟೇ ಕಂಡಿದ್ದ ನಜತ್‌ಳಿಗೆ ಫ್ರಾನ್ಸ್ನ ಐಷಾರಾಮಿ ಬದುಕು ಕಣ್ಣಿಗೆ ಕಂಡಿದ್ದು ಇದೇ ಫ್ರಾನ್ಸ್ನಲ್ಲಿ. ಇಲ್ಲಿನ ವಿಶಿಷ್ಟವಾದ ರಸ್ತೆಗಳು ಮತ್ತು ವಿಭಿನ್ನ ಸಾರಿಗೆ ವ್ಯವಸ್ಥೆಗಳು, ಕಾರ್‌ಗಳು ಮತ್ತು ಬಹುಮಹಡಿ ಕಟ್ಟಡಗಳನ್ನು ನೋಡಿದಾಗ ಎದೆಯಲ್ಲಿ ನಡುಕ ಹುಟ್ಟುವಷ್ಟು ಈಕೆ ಮುಗ್ದೆಯಾಗಿದ್ದಳು. ಫ್ರಾನ್ಸ್ ಪ್ರಮುಖ ಭಾಷೆಯಾದ ಫ್ರೆಂಚ್‌ನ ಗಂಧ ಗಾಳಿಯೇ ಗೊತ್ತಿಲ್ಲದ ಈಕೆ ಸ್ಥಳೀಯ ಶಾಲೆಗೆ ಸೇರಿ ಕೇವಲ ಒಂದೇ ವರ್ಷದಲ್ಲಿ ಫ್ರೆಂಚ್ ಭಾಷೆಯಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸುತ್ತಾಳೆ. ಮುಸ್ಲಿಂ ಕುಟುಂಬವಾದ್ದರಿಂದ ಈಕೆಯನ್ನು ತನ್ನ ೧೮ ನೇಯ ವಯಸ್ಸಿನವರೆಗೂ ಯಾವ ಹುಡುಗರ ಗೆಳೆತನವನ್ನೂ ಮಾಡಿಕೊಳ್ಳದಷ್ಟು ಕಟ್ಟುನಿಟ್ಟಾಗಿ ಹೆತ್ತವರು ಬೆಳೆಸಿದ್ದು ನಿತ್ಯ ಕನಿಷ್ಠ ೭-೮ ಗಂಟೆಯ ಅಧ್ಯಯನ ಕಡ್ಡಾಯವಾಗಿತ್ತು. ಅದಾಗಲೇ ಈಕೆಗೆ ಫ್ರಾನ್ಸ್ ದೇಶದ ಪೌರತ್ವವೂ ಲಭಿಸಿ ಕಾನೂನು ಪದವಿಯನ್ನು ಪಡೆಯುತ್ತಾಳೆ. ಓದಿನಲ್ಲಿ ಅತ್ಯಂತ ಮುಂದಿದ್ದ ಈಕೆ ಆಡಳಿತಾತ್ಮಕ ಸೇವೆಯಲ್ಲಿ ಪದವಿಯನ್ನು ಪಡೆಯುವ ಅಭಿಲಾಷೆಯಿಂದ ವಿದ್ಯಾಭ್ಯಾಸಕ್ಕೆ ಪ್ರಯತ್ನಿಸುತ್ತಾಳೆ. ಆದರೆ ಈ ವಿದ್ಯಾಭ್ಯಾಸ ಫ್ರಾನ್ಸ್ ದೇಶದಲ್ಲಿ ಅತ್ಯಂತ ದುಬಾರಿಯಗಿದ್ದ ಕಾರಣಕ್ಕೆ ಆ ಕ್ಷಣದಲ್ಲಿ ಆಡಳಿತಾತ್ಮಕ ಸೇವಾ ಪದವಿಯನ್ನು ಪಡೆಯುವ ಆಸೆಯನ್ನು ಮುಂದೂಡುತ್ತಾಳೆ. ತನ್ನ ಉನ್ನತ ವ್ಯಾಸಾಂಗಕ್ಕೆ ಅವಶ್ಯಕವಾಗಿದ್ದ ದೊಡ್ಡ ಮೊತ್ತದ ಹಣವನ್ನು ಹೊಂದಿಸುವ ಕಾರಣದಿಂದ ಅಲ್ಲೇ ಅರೆಕಾಲಿಕ ಉದ್ಯೋಗವನ್ನು ಮಾಡುವ ಮೂಲಕ ತನ್ನ ಕನಸಾದ ಆಡಳಿತಾತ್ಮಕ ಸೇವಾ ಪರೀಕ್ಷೆಗೆ ಬೇಕದ ಹಣವನ್ನು ಹೊಂದಿಸಿಕೊಳ್ಳುತ್ತಾಳೆ. ಪರಿಕ್ಷೆಯನ್ನು ಬರೆಯಲು ಪ್ರಯತ್ನಿಸಿ ಹಲವು ಪ್ರಯತ್ನಗಳ ತರುವಾಯವೂ ತನ್ನ ಕನಸು ನನಸಾಗುವುದಿಲ್ಲ. ಅಲ್ಲಿನ ಕಠಿಣ ಪರಿಕ್ಷಾ ಪದ್ದತಿಗಳ ಕಾರಣದಿಂದಾಗಿ ಸೀಟ್ ಪಡೆಯುವುದೇ ದುಸ್ಥರವಾದಾಗ ಆಕೆ ಆಯ್ದುಕೊಂಡಿದ್ದು ಸಾಮಾನ್ಯ ಪ್ರವೇಶ ಸಂಬಂಧಿತ ಸ್ಪರ್ಧಾತ್ಮಕ ಪರೀಕ್ಷೆ. ಈ ಪರೀಕ್ಷೆಯನ್ನು ಪ್ರಥಮ ರ‍್ಯಾಂಕ್‌ನೊಂದಿಗೆ ಬರೆದು (ಪ್ಯಾರಿಸ್ ಯೂನಿವರ್ಸಿಸಿಟಿ ೨೦೦೨ರಲ್ಲಿ) ನಂತರದಲ್ಲಿ ಆಡಳಿತಾತ್ಮಕ ಸೇವಾ ಪರೀಕೆಯನ್ನೂ ಬರೆದು ಉತ್ತಮ ದರ್ಜೆಯೊಂದಿಗೆ ತೇರ್ಗಡೆಯಾಗಿ ಫ್ರಾನ್ಸ್ ಸರ್ಕಾರದ ಆಡಳಿತ ಸಲಹೆಗಾರ್ತಿಯಾಗಿ ಕೆಲಸಕ್ಕೆ ನೇಮಕಗೊಳ್ಳುತ್ತಾಳೆ.

ಫ್ರಾನ್ಸ್ ದೇಶದಲ್ಲಿ ಶ್ರೀಮಂತರು ಮತ್ತು ಬಿಳಿಯರಿಗಷ್ಟೇ ರಾಜಕಾರಣ ಎಂಬ ಮಾತಿದೆ, ಅದರಲ್ಲೂ ಪುರುಷರಿಗೇ ರಾಜಕೀಯದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇರುವ ದೇಶದಲ್ಲಿ ಈಕೆಯ ಸಾಧನೆಯನ್ನು ಗಮನಿಸಬೇಕಾದುದ್ದೇ. ಉದ್ಯೋಗವನ್ನು ಪಡೆದ ನಜತ್ ತನ್ನ ಸ್ವಂತ ದುಡ್ಡಿನಲ್ಲೇ ಪ್ರಾನ್ಸ್ನ ನಗರಿಕ ಸೇವಾ ಆಯೋಗದ ಅಧಿಕಾರಿ ಬೋರಿಸ್ ವಲ್ಲೌಡ್ ಬ್ಲೆಕ್ಸೆಮ್‌ರನ್ನು ವಿವಾಹವಾಗಿ ಗಂಡು ಮತ್ತು ಹೆಣ್ಣು ಅವಳಿ ಮಕ್ಕಳನ್ನು ಪಡೆಯುತ್ತ್ತಾಳೆ. ನಂತರದಲ್ಲಿ ಫ್ರಾನ್ಸ್ನ ಪ್ರಮುಖ ಪಕ್ಷವಾದ ಸೋಶಿಯಲಿಸ್ಟಿಕ್ ಪಕ್ಷವೇ ಈಕೆಯ ಕಾರ್ಯವೈಖರಿಯನ್ನು ಗಮನಿಸಿ ತನ್ನ ಸದಸ್ಯಳಾಗಿ ಸ್ವೀಕರಿಸುತ್ತದೆ. ದೇಶದ ಮಾನವ ಹಕ್ಕುಗಳ ಹೋರಾಟ ಮತ್ತು ವಸತಿ ಸಮಸ್ಯೆಗಳ ಹೋರಾಟದಲ್ಲಿ ಮುಂಚೂಣಿಯಾಗಿ ನಿಲ್ಲುತ್ತಾಳೆ. ಸರಕಾರದ ಸಲಹೆಗಾರ್ತಿಯಾಗಿ ರಾಜಕೀಯ ಜೀವನ ಆರಂಭಿಸಿದ ಕೆಲವೇ ಸಮಯದಲ್ಲಿ ಆಕೆ ಸೋಶಿಯಲಿಸ್ಟಿಕ್ ಪಕ್ಷದ ಮುಂಚೂಣಿಯ ಯುವ ರಾಜಕಾರಿಣಿಯಾಗಿ ರೂಪುಗೊಳ್ಳುತ್ತಾಳೆ. ನಂತರದಲ್ಲಿ ಆ್ಯರೋನ್ ಅಲ್ಫೀನ್ಸ್ನಲ್ಲಿ ಮಹಿಳಾ ಸದಸ್ಯೆಯಾಗಿ ಆಯ್ಕೆಗೊಂಡು ೨೦೦೮ ರವರೆಗೂ ಅಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಾಳೆ. ಈ ಅವದಿಯಲ್ಲಿ ಮುಸ್ಲಿಂ ಸಂಪ್ರದಾಯದ ‘ಬುರ್ಖಿನಿ’ ಯನ್ನು ಅವರವರ ಆಸಕ್ತಿಗೆ ಬಿಟ್ಟ ವಿಚಾರ ಹಾಗು ಇದು ಕಡ್ಡಾಯವಲ್ಲ ಎಂಬ ಕಾನೂನನ್ನು ಜಾರಿಗೆ ತರುವಲ್ಲಿ ಈಕೆಯು ಮಹತ್ತರವಾದ ಪಾತ್ರವನ್ನು ವಹಿಸುತ್ತಾಳೆ. ೨೦೦೮ ರಲ್ಲಿ ಮಹಿಳಾ ಕೌನ್ಸಿಲರ್ ಆಗಿ ಆಯ್ಕೆಯಾಗಿ ರಾಜಕೀಯ ಕ್ಷೇತ್ರದಲ್ಲಿ ಈಕೆಯ ಆಕರ್ಷಕ ಮಾತುಗಾರಿಕೆ ಮತ್ತು ವಿಭಿನ್ನವಾದ ಚಿಂತನೆಗಳ ಮೂಲಕ ಮಹಿಳಾ ರಾಜಕೀಯ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನು ಬರೆಯುತ್ತಾಳೆ. ಸೋಶಿಯಲಿಸ್ಟಿಕ್ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿ ಫ್ರಾನ್ಸ್ನಲ್ಲಿ ಅಧಿಕಾರವೆಂಬುವುದು ಕೇವಲ ಬಿಳಿಯರ ಮತ್ತು ದುಡ್ಡಿರುವವರ ಸ್ವತ್ತಲ್ಲ ಎಂಬುದನ್ನು ಸಾಬೀತುಪಡಿಸುತ್ತಾಳೆ.
೨೦೧೨ ರಲ್ಲಿ ಈಕೆ ಫ್ರಾನ್ಸ್ನ ಅಧ್ಯಕ್ಷ ಫ್ರಾನ್ಸಿಸ್ ಹೊಲಾಂಡೆಯವರ ಸರಕಾರದಲ್ಲಿ ಮಹಿಳಾ ಮಕ್ಕಳ ಹಕ್ಕುಗಳ ಸಚಿವೆಯಾಗಿ ಆಯ್ಕೆಯಾಗಿ ಪಾರ್ಲಿಮೆಂಟ್‌ನ್ನೂ ಪ್ರವೇಶಿಸುತ್ತಾಳೆ. ಈ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗಳು ಮತ್ತು ನಿಯಮಾವಳಿಗಳನ್ನು ಜಾರಿಗೆ ತರುವ ಮೂಲಕ ದೇಶದ ಅತ್ಯಂತ ಪ್ರಭಾವೀ ಮಹಿಳೆಯಾಗಿ ರೂಪುಗುಳ್ಳುತ್ತಾಳೆ. ಈ ಸಂದರ್ಭದಲ್ಲೇ ಈಕೆಯ ದಕ್ಷ ಆಡಳಿತದ ಕಾರಣದಿಂದ ಇಬ್ಬರು ಸಚಿವರು ರಾಜೀನಾಮೆಯನ್ನು ಕೊಡಬೇಕಾಗಿ ಬಂದಿದ್ದೂ ಈಕೆಗೆ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಅವಕಾಶವನ್ನು ನೀಡಿತು ಎನ್ನಬಹುದು. ನಂತರದಲ್ಲಿ ಯುವಜನ ಕ್ರೀಡಾ ಸಚಿವೆಯಾಗಿಯೂ ಕೆಲಸ ನಿರ್ವಹಿಸಿಕೊಳ್ಳುವ ಮೂಲಕ ರಾಜಕೀಯದ ಎಲ್ಲಾ ಕ್ಷೇತ್ರಕ್ಕೂ ಸೈ ಎನಿಸಿಕೊಂಡು ಬಿಡುತ್ತಾಳೆ. ಇದೇ ವೇಳೆಗೆ ಫ್ರಾನ್ಸ್ನ ಪ್ರಸಿದ್ಧ ಪತ್ರಿಕೆಯೊಂದು ದೇಶದ ಪ್ರಭಾವೀ ರಾಜಕಾರಣಿ ಯಾರೆಂಬ ಸಮೀಕ್ಷೆಯನ್ನು ಜನಸಾಮಾನ್ಯರ ಮುಂದೆ ನೀಡಿದಾಗ ಪ್ರಥಮ ಪ್ರಭಾವಿ ರಾಜಕಾರಿಣಿಯಾಗಿ ಅಧ್ಯಕ್ಷ ಹೊಲಾಂಡೆ, ಎರಡನೇ ಪ್ರಭಾವಿಯಾಗಿ ನಜತ್‌ರನ್ನು ದೇಶಕ್ಕೆ ದೇಶವೇ ಗುರುತಿಸುತ್ತದೆ. ಇದಾದ ನಂತರ ೨೫ ಅಗಸ್ಟ್ ೨೦೧೪ ರಲ್ಲಿ ಈಕೆಯ ರಾಜಕೀಯ ವರ್ಚಸ್ಸು ಮತ್ತು ಪ್ರಭಾವವನ್ನು ಗಮನಿಸಿದ ಫ್ರಾನ್ಸ್ ನ ಅಧ್ಯಕ್ಷರಾದ ಫ್ರಾನ್ಸಿಸ್ ಹೊಲಾಂಡೆಯವರು ಈಕೆಯನ್ನು ಎರಡನೇ ಅತ್ಯುನ್ನತ ಹುದ್ದೆಯಾದ ಶಿಕ್ಷಣ ಹಗೂ ಉನ್ನತ ಶಿಕ್ಷಣ ಸಚಿವೆಯನ್ನಾಗಿ ಆಯ್ಕೆ ಮಾಡುತ್ತಾರೆ.
ನೀನು ಕನಸು ಕಾಣದಿದ್ದರೆ ನೀನು ಬದುಕನ್ನು ಗೆಲ್ಲಲಾರೆ; ಕನಸನ್ನು ಕಂಡರೆ ನಿನು ಜಗತ್ತನ್ನೇ ಗೆಲ್ಲಬಲ್ಲೆ ಎಂಬ ಮಾತಿನಂತೆ ನಜತ್ ವಲ್ಲೌಡ್ ಬ್ಲೆಕ್ಸೆಮ್‌ರವರು ಪ್ರಾನ್ಸ್ ದೇಶದ ಎರಡನೇ ಉನ್ನತ ಹುದ್ದೆಯಾದ ಶಿಕ್ಷಣ ಸಚಿವೆಯ ಸ್ಥಾನವನ್ನು ಪಡೆದವರು. ಇವರೇ ಫ್ರಾನ್ಸ್ನ ರಾಜಕೀಯ ಇತಿಹಾಸ ಕಂಡ ಪ್ರಪ್ರಥಮ ಮಹಿಳಾ ಶಿಕ್ಷಣ ಸಚಿವೆಯೂ ಹೌದು. ಒಟ್ಟಿನಲ್ಲಿ ಬದುಕಿನಲ್ಲಿ ಸ್ಪಷ್ಟ ಗುರಿ ಮತ್ತು ಸಾಧಿಸುವ ಛಲವೊಂದಿದ್ದರೆ ಗಂಡು ಹೆಣ್ಣೆಂಬ ಬೇಧಭಾವವಿಲ್ಲದೇ ಎಂತಹ ಸಾಧನೆಯನ್ನಾದರೂ ಸಾಧಿಸಿ ತೋರಿಸಬಹುದೆಂದುದಕ್ಕೆ ತೀರಾ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿ ದೇಶದ ಅತ್ಯುನ್ನತ ಹುದ್ದೆಯಾದ ಶಿಕ್ಷಣ ಸಚಿವೆಯ ಸ್ಥಾನವನ್ನು ಅಲಂಕರಿಸಿದ ನಜತ್ ವಲ್ಲೌಡ್ ಬ್ಲ್ಲೆಕ್ಸೆಮ್‌ರವರು ಉತ್ತಮ ಉದಾಹಣೆಯಾಗಿದ್ದಾರೆ.
