ಇಂದು (ಸೆಪ್ಟಂಬರ್ ೧೦, ಬುಧವಾರ) “ವಿಶ್ವ ಆತ್ಮಹತ್ಯೆ ತಡೆ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಖ್ಯಾತ್ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರೀಡ್ ಅವರು, “ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ದಾರಿ ಒಂದೇ ಅದುವೇ ಆತ್ಮವಿಶ್ವಾಸ” ಎಂದು ಹೇಳಿದ್ದಾರೆ. ಇಂದಿನ ದಿನಗಳಲ್ಲಿ ಯುವಕರು ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿವೆ ಅಥವಾ ಫೇಲ್ ಆದಾಗ ಮತ್ತು ಸಾಮಾನ್ಯ ಜನರು ಸಂಸಾರದಲ್ಲಿರುವ ಎದುರಾಗುವ ಸಂಕಷ್ಟ, ರೈತರು ಸಾಲ ಬಾಧೆಯಿಂದ ಮತ್ತು ಕೌಟುಂಬಿಕ ಕಲಹದಂತಹ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿರುವ ದೃಶ್ಯಗಳು ನಮ್ಮ ಕಣ್ಮುಂದೆ ಕಾಣ ಸಿಗುತ್ತವೆ. ಆತ್ಮಹತ್ಯೆಗೆ ಕಾರಣಗಳು ಹಲವು ಇರಬಹುದು. ಶೈಕ್ಷಣಿಕ ಒತ್ತಡ, ಆತ್ಮವಿಶ್ವಾಸದ ಕೊರತೆ, ಮಾನಸಿಕ ಆಘಾತ, ಆರ್ಥಿಕ ಪರಿಸ್ಥಿತಿ, ಬಡತನ, ಸೋಲು, ಪ್ರೇಮ ವೈಫಲ್ಯ, ಮೋಬೈಲ್ ಮೇಲೆ ಅತಿಯಾದ ವ್ಯಾಮೋಹ, ಪರೀಕ್ಷೆಯಲ್ಲಿ ಅನುತ್ತೀರ್ಣ ಮತ್ತು ದೈಹಿಕ-ಲೈಂಗಿಕ ದೌರ್ಜನ್ಯ ಇತ್ಯಾದಿ ಇವೆಲ್ಲವೂ ಆತ್ಮಹತ್ಯೆಗೆ ಕಾರಣಗಳಾಗಿವೆ. ಭಾರತದಲ್ಲಿ ಶೈಕ್ಷಣಿಕ ಸಾಧನೆಗಾಗಿ ಪೋಷಕರ ನಿರೀಕ್ಷೆ ಮತ್ತು ಮಕ್ಕಳ ಮೇಲೆ ಅತೀ ಹೆಚ್ಚಿನ ಮಾನಸಿಕ ಒತ್ತಡವೇ ಪ್ರಮುಖ ಕಾರಣವೆಂದು ಹೇಳಬಹುದು.
ದೇಶದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಹೆಚ್ಚಾಗಿದ್ದು, ಮಾನಸಿಕ ಸ್ಥಿತಿಯ ಬಗ್ಗೆ ಚಿಂತೆಗೀಡಾಗಿಸಿದೆ. ಅದರಲ್ಲೂ ಭಾರತದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ದಿನದಿಂದ ದಿನಕ್ಕೆ ಆತ್ಮಹತ್ಯೆಯಂತಹ ಪ್ರಕರಣಗಳು ದಾಖಲಾಗುತ್ತಿರುವುದು ಕಳವಳಕಾರಿ ಸಂಗತಿ. ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸಿ, ಜೀವನ-ಬದುಕಿನ ಬಗ್ಗೆ ಭರವಸೆಯನ್ನು ಮೂಡಿಸುವ ಕಾರ್ಯ ನಡೆಯಬೇಕಾಗಿದೆ. ಯಾವುದೋ ಕಾರಣಕ್ಕಾಗಿ ಅಮೂಲ್ಯವಾದ ಜೀವ ಬಲಿಯಾಗದಿರಲೆಂಬ ಕಾರಣಕ್ಕಾಗಿ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ಉದ್ಧೇಶದಿಂದ ಪ್ರತಿವರ್ಷ ಸಪ್ಟಂಬರ ೧೦ ರಂದು “ವಿಶ್ವ ಆತ್ಮಹತ್ಯೆ ತಡೆ ದಿನ”ವನ್ನು ಆಚರಿಸಲಾಗುತ್ತಿದೆ.
ಆಚರಣೆಯ ಇತಿಹಾಸ

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇಂಟರನ್ಯಾ಼ಷನಲ್ ಅಸೋಸಿಯೇಷನ್ ಇವುಗಳ ಜಂಟಿ ಸಹಯೋಗದಲ್ಲಿ ೨೦೦೩ ರಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಸಪ್ಟಂಬರ ೧೦, ೨೦೦೩ ರಲ್ಲಿ ಆರಂಭಿಸಲಾಯಿತು. ವಿಶ್ವ ಆತ್ಮಹತ್ಯಾ ತಡೆ ದಿನವನ್ನು ಪ್ರತಿ ಶಾಲೆ-ಕಾಲೇಜು, ಸರ್ಕಾರ, ಸಂಸ್ಥೆಗಳು ಮತ್ತು ಸಾರ್ವಜನಿಕವಾಗಿ ಜಾಗೃತಿ ಮೂಡಿಸುವದರ ಮೂಲಕ ಯುವಕರು, ಸಮುದಾಯ, ಸಾರ್ವಜನಿಕರು ಮತ್ತು ಸಮಾಜದಲ್ಲಿ ಅರಿವು ಮೂಡಿಸಬೇಕು. ತೀವ್ರ ವೇದನೆ, ಖಿನ್ನತೆ, ಮಾನಸಿಕ ಹಿಂಸೆ, ವೈಫಲ್ಯ ಮತ್ತು ಯಾವುದೇ ಸಮಸ್ಯೆಯಿಂದ ಬಳಲುತ್ತಿರುವ ಜನರಲ್ಲಿ ಆತ್ಮಹತ್ಯಾ ಮನೋಭಾವ ಹೆಚ್ಚಾಗಿರುತ್ತದೆ. ಅದರಲ್ಲೂ ಹೆಚ್ಚಾಗಿ ಯುವಕರಲ್ಲಿ ಇದು ಅತೀ ಗಂಭೀರ ಸ್ವರೂಪದ ಮಾನಸಿಕ ಸಮಸ್ಯೆಯಾಗಿ ಕಂಡುಬರುತ್ತಿದೆ. ಆದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿರುವ ಯುವಕರಿಗೆ ಆಪ್ತಸಮಾಲೋಚನೆ ನಡೆಸಿ, ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ ಎಂಬ ಆತ್ಮವಿಶ್ವಾಸ ಮತ್ತು ಅರಿವಿನ ಬೆಳಕನ್ನು ಮೂಡುವಂತೆ ಮಾಡುವುದು ಇಂದಿನ ಅಗತ್ಯತೆಯಾಗಿದೆ.
ಈ ದಿನದ ಆಚರಣೆಯ ಮಹತ್ವ
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸೋಲು-ಹತಾಶೆ, ನಿರಾಶೆ-ವೈಫಲ್ಯಗಳಂತಹ ಸನ್ನಿವೇಶ ಅಥವಾ ಸಂದರ್ಭಗಳು ಎದುರಾಗಬಹುದು. ಅದಕ್ಕಾಗಿ ಈಸಬೇಕು ಇದ್ದು ಜಯಿಸಬೇಕು ಎಂಬ ಹಿರಿಯರ ಮಾತಿನಂತೆ, ಜೀವಂತವಾಗಿರಲು ಮತ್ತು ಜೀವನ ನಡೆಸಲು ಪ್ರಾಣಿ, ಪಶು-ಪಕ್ಷಿಗಳು ಇಡೀ ಜೀವನಪೂರ್ತಿ ಹೋರಾಡುತ್ತವೆ. ಇವೆಲ್ಲವುಗಳಿಗಿಂತ ಬುದ್ದಿವಂತನಾದ ಮನುಷ್ಯ ಸಮಸ್ಯೆಯನ್ನು ಎದುರಿಸಲು ಆಗದೇ ಆತ್ಮಹತ್ಯೆಗೆ ಶರಣಾಗಿ ಬದುಕು ಕೊನೆಗಾಣಿಸುತ್ರಿರುವುದು ತೀರ ಆತಂಕಕಾರಿಯಾಗಿದೆ. ೨೦೧೨ ರಲ್ಲಿ ಶೇ.೪.೯೧ ರಷ್ಟಿದ್ದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವು ೨೦೨೨ ರ ಹೊತ್ತಿಗೆ ಶೇ.೭.೬೩ ಕ್ಕೆ ಹೆಚ್ಚಾಗಿದೆ. ಪ್ರಸ್ತುತ ಇಂದು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪಿ.ಯು.ಸಿ ಪರೀಕ್ಷೆಗಳು, ನೀಟ್, ಐ.ಐ.ಟಿ ಉನ್ನತ ವ್ಯಾಸಂಗ ಮಾಡಬಯಸುವ ಆಕಾಂಕ್ಷಿಗಳ ಬದುಕು ಸಾವಿನಲ್ಲಿ ಅಂತ್ಯಗೊಳ್ಳುತ್ತಿದೆ ಎಂದು ಇತ್ತೀಚಿನ ವರದಿಗಳಲ್ಲಿ ಕಂಡುಬಂದಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ, ವಿದ್ಯಾರ್ಥಿಗಳ ಆತ್ಮಹತ್ಯೆ ಏಷ್ಯಾದಲ್ಲಿಯೇ ಹೆಚ್ಚಾಗಿದೆ. ಎಂತಹ ಸಮಸ್ಯೆ ಬಂದರೂ ಬದುಕಿ-ಸಾಧಿಸುತ್ತೇನೆಂಬ ಭರವಸೆ, ಜೀವನೋತ್ಸಾಹ ಮತ್ತು ಛಲಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಜೀವ ಇದ್ದರೆ ಜೀವನ ಎಂಬುದನ್ನು ಅರಿತುಕೊಳ್ಳಬೇಕು. ಆತ್ಮಹತ್ಯೆ ನಿಯಂತ್ರಣ ಅಸಾಧ್ಯವಾದ ಕಾರ್ಯವೇನಲ್ಲ. ಆದರೆ ಮಾನಸಿಕ ಖಿನ್ನತೆಗೊಳಗಾದ ಜನರನ್ನು ಗುರಿತಿಸಿ ಅವರನ್ನು ಪ್ರೀತಿಯಿಂದ ಕಂಡು, ಅನು-ತನು ಹಂಚಿಕೊಂಡು ಅವರದೇ ಆದ ರೀತಿಯಲ್ಲಿ ತಿಳುವಳಿಕೆ ಹೇಳುವ ಪ್ರಯತ್ನ ಮಾಡಬೇಕು. ಶಾಲೆ-ಕಾಲೇಜು, ವಿಶ್ವವಿದ್ಯಾಲಯ, ಉನ್ನತ ವಿದ್ಯಾಭ್ಯಾಸ ಕೇಂದ್ರ, ಕೆಲಸದ ಸ್ಥಳಗಳಲ್ಲಿ ಮತ್ತು ರೈತಾಪಿ ಜನಗಳಲ್ಲಿ ಆಪ್ತಸಮಾಲೋಚನೆ ಕೈಗೊಂಡು ನಿಮ್ಮ ಒಂದು ಕ್ಷಣದ ನಿರ್ಧಾರದಿಂದ ಹಿಂದೆ ಸರಿದರೆ ಬದುಕು ಪವಾಡವನ್ನೇ ಸೃಷ್ಟಿಸಬಹುದೆಂಬ ಅಂಶವನ್ನು ಮನವರಿಕೆ ಮಾಡಿಕೊಟ್ಟು ಜೀವನದಲ್ಲಿ ಆಶಾವಾದ ಮೂಡಿಸುವಂತಾಗಬೇಕು.
೨೦೨೪ ರಿಂದ ೨೦೨೬ ನೇಯ ವರ್ಷಗಳ ತ್ರೈವಾರ್ಷಿಕ ಘೋಷವಾಕ್ಯ
ಜಾಗತಿಕ ಮಟ್ಟದಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳನ್ನು ತಡೆಗಟ್ಟಲು, ಕಳಂಕವನ್ನು ಕಡಿಮೆ ಮಾಡಲು ಮತ್ತು ಮುಕ್ತ ಸಂಭಾಷಣೆಯನ್ನು ಪ್ರೋತ್ಸಾಹಿಸುವದು ಮತ್ತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. “೨೦೨೪ ರಿಂದ ೨೦೨೬ (ಮೂರು ವರ್ಷಗಳ ತ್ರೈವಾರ್ಷಿಕ) ಅವಧಿಗಾಗಿ “ಆತ್ಮಹತ್ಯೆಯ ಕುರಿತಾದ ನಿರೂಪಣೆಯನ್ನು ಬದಲಾಯಿಸುವುದು” ಘೋಷವಾಕ್ಯವಾಗಿದೆ. ಈ ಘೋಷವಾಕ್ಯವು ಸಂಕೀರ್ಣ ಸಮಸ್ಯೆಯನ್ನು ಹೇಗೆ ಎದುರಿಸಬೇಕು, ಸಮಸ್ಯೆಯನ್ನು ಸವಾಲಾಗಿ ಪರಿವರ್ತಿಸುವ, ನಕಾರಾತ್ಮಕ ಮನೋಭಾವವನ್ನು ಸಕಾರಾತ್ಮಕ ಚಿಂತನೆಯತ್ತ ಬದಲಿಸುವುದೇ ಆಗಿದೆ.
ಕೊನೆಯ ನುಡಿ
ಕುವೆಂಪು ಅವರು, “ನೂರು ಸಾರಿ ಸೋತಿದ್ದರೇನಂತೆ? ನೂರೊಂದು ಸಾರಿ ಬಿದ್ದಿದ್ದರೇನಂತೆ? ನೋಲು ಗೆಲುವಿಗೆ ಮೆಟ್ಟಿಲು. ಬಿದ್ದರಲ್ಲವೇ ಮರಳಿ ಏಳುವುದು, ಬೀಳದಿದ್ದವನಯ ಎಣದೂ ಮೇಲೆದ್ದವನಲ್ಲ” ಎಂದು ಹೇಳಿದ್ದಾರೆ. ನಾವು ಯಾವುದೇ ಕೆಲಸ-ಕಾರ್ಯವನ್ನು ಮಾಡುವಾಗ ವೈಫಲ್ಯಗಳು ಎದುರಾಗಬಹುದು. ಅದರರ್ಥ ನೀವು ಯಶಸ್ಸು ಪಡೆಯುವುದಿಲ್ಲವೆಂದಲ್ಲ. ಆ ಪ್ರತಿಯೊಂದು ಸೋಲು-ವೈಫಲ್ಯಗಳೇ ನಮ್ಮನ್ನು ಯಶಸ್ಸಿನ ಮೆಟ್ಟಲಾಗುತ್ತವೆ. ಅದಕ್ಕಾಗಿ ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಅದನ್ನು ದೃಢಸಂಕಲ್ಪದೊಂದಿಗೆ ಎದುರಿಸುತ್ತೇನೆಂಬ ಆತ್ಮವಿಶ್ವಾಸವೇ ಆ ಸಮಸ್ಯೆಗೊಂದು ಪರಿಹಾರ ದೊರಕಿಸುತ್ತದೆ. ಒಂದು ದಿನದ ಸಾವಿಗೆ ಜೀವನ ಪೂರ್ತಿ ಬದುಕಬೇಕು ನಿಜ. ಒಲಿದು ಬಂದ ಬದುಕನ್ನು ಆನಂದದಿಂದ ಬದುಕಿ. ಏಕೆಂದರೆ ಈ ಇನ್ನೊಂದು ಮನುಷ್ಯ ಜನ್ಮಕ್ಕೆ ಎಷ್ಟು ಜನ್ಮ ಕಾಯಬೇಕೋ ಗೊತ್ತಿಲ್ಲ. ಮನಃಶಾಸ್ತçಜ್ಞರು ಮತ್ತು ಮಾನಸಿಕ ತಜ್ಞರ ಪ್ರಕಾರ, ಆತ್ಮಹತ್ಯೆಗೆ ಪ್ರಯತ್ನಿಸುವವರನ್ನು ಖಾಸಗಿಯಾಗಿ ಮಾತನಾಡಿಸುವುದು, ಸಮಸ್ಯೆಯನ್ನು ಆಲಿಸುವುದು, ಆಪ್ತಸಮಾಲೋಚನೆ ಮಾಡುತ್ತಾ, ಆತ್ಮಸ್ಥೈರ್ಯ ತುಂಬುವುದರ ಮೂಲಕ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ಸಾಧ್ಯವೆಂದು ಹೇಳಬಹುದು.
