ಲೇಖನ
-ಮಲ್ಲಪ್ಪ ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
“ಸಂಸ್ಕೃತ ಶ್ಲೋಕದಂತೆ, ವಿದ್ಯಾ ದದಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಂ” ಎನ್ನುವುದು ನಿಜವಾದ ಜ್ಞಾನವು ಮನುಷ್ಯನಲ್ಲಿ ಶಿಸ್ತನ್ನು ಕಲಿಸುತ್ತದೆ. ಆ ಶಿಸ್ತಿನಿಂದ ಯೋಗ್ಯತೆ ಬರುತ್ತದೆ ಎಂಬುದು ಸತ್ಯವಾದ ಮಾತು. ಸಾಕ್ಷರತೆ ಎಂದರೆ ಯಾವುದೇ ವಿಷಯ ಅಥವಾ ಮಾಹಿತಿಯನ್ನು ಓದುವ, ಬರೆಯುವ ಮತ್ತು ಗ್ರಹಿಸುವ ಸಾಮರ್ಥ್ಯ ಬಗ್ಗೆ ಸೂಚಿಸುತ್ತದೆ. ಮಾನವನಲ್ಲಿ ಸ್ವಂತ ಬುದ್ದಿವಂತಿಕೆ, ಜ್ಞಾನ ಮತ್ತು ಸ್ವ-ಅರಿವು ಹೆಚ್ಚಿಸುವ ಶಕ್ತಿಯುತ ಸಾಧನವೆಂದರೆ ಅದುವೇ ಸಾಕ್ಷರತೆ ಮತ್ತು ಇದು ಶಿಕ್ಷಣದ ಭಾಗವೂ ಹೌದು. ಇದು ವ್ಯಕ್ತಿಗಳಿಗೆ ಶಿಕ್ಷಣ, ಜ್ಞಾನ, ಮಾಹಿತಿ ಮತ್ತು ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಸಬಲಗೊಳಿಸುತ್ತದೆ. ಹೆಚ್ಚಿನ ಸಾಕ್ಷರತಾ ದರಗಳು ಆ ರಾಷ್ಟ್ರದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆ, ಕಾರ್ಯಕ್ಷಮತೆ, ಕಡಿಮೆ ಅಸಮಾನತೆ ಮತ್ತು ಸಾಮಾಜಿಕ ಸಮಗ್ರತೆಯನ್ನು ಪ್ರತಿಬಿಂಬಿಸುತ್ತದೆ. ಜನರು ಸಾಕ್ಷರರಾಗುತ್ತಾ ತಮ್ಮ ವ್ಯಕ್ತಿಗತವಾದ ಸುಧಾರಣೆಯೊಂದಿಗೆ ಸಮುದಾಯಗಳ ಅಭ್ಯುದಯಕ್ಕಾಗಿ ಭಾಗವಹಿಸುವುದು, ಕೊಡುಗೆ ಸಲ್ಲಿಸುವುದು ಮತ್ತು ಬಡತನದಿಂದ ಪಾರಾಗಲು ಸಹಕಾರಿಯಾಗಿದೆ. ೨೦೧೧ ರ ಜನಗಣತಿಯ ಪ್ರಕಾರ, ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಓದಲು ಬರೆಯುವುದನ್ನು ಕಲಿತ ವ್ಯಕ್ತಿಯನ್ನು ಸಾಕ್ಷರವೆಂದು ಪರಿಗಣಿಸಲಾಗುತ್ತದೆ.
ಆಚರಣೆಯ ಹಿನ್ನೆಲೆ
ಪ್ರಪಂಚದಿಂದ ಅನಕ್ಷರತೆ ಎಂಬ ಸಾಮಾಜಿಕ ಸಮಸ್ಯೆಯನ್ನು ಹೊಡೆದೋಡಿಸಲು ಮತ್ತು ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಮಹತ್ವ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ ೨೬, ೧೯೬೬ ರಂದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ತನ್ನ ೧೪ ನೇಯ ಸಾಮಾನ್ಯ ಸಮ್ಮೇಳನದಲ್ಲಿ ಸಪ್ಟಂಬರ ೮ ರಂದು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲು ತೀರ್ಮಾನಿಸಿತು. ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲು ಯುನೆಸ್ಕೊ ಮೊಟ್ಟಮೊದಲು ಸಪ್ಟಂಬರ ೮, ೧೯೬೭ ರಲ್ಲಿ ಕರೆಕೊಟ್ಟಿತು. ಪ್ರತಿಯೊಬ್ಬ ವ್ಯಕ್ತಿಯ ಮತ್ತು ಇಡೀ ಸಮಾಜದ ಘನತೆ ಮತ್ತು ಮಾನವ ಹಕ್ಕುಗಳ ವಿಷಯಕ್ಕೆ ಸಂಬಂಧಿಸಿದಂತೆ ಸಾಕ್ಷರತೆ ಮತ್ತು ಶಿಕ್ಷಣದ ಮಹತ್ವವನ್ನು ಎತ್ತಿ ತೋರಿಸಲು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿತ್ತು. ಜಾಗತಿಕವಾಗಿ ಜನರ ಜೀವನವನ್ನು ಸುಧಾರಿಸುವಲ್ಲಿ ಮತ್ತು ಸಮ ಸಮಾಜಗಳನ್ನು ರಚಿಸುವಲ್ಲಿ ಈ ದಿನದ ಆಚರಣೆಯು ಮಹತ್ವ ಪಡೆದುಕೊಂಡಿದೆ.

ಪ್ರತಿವರ್ಷ ಸಪ್ಟಂಬರ ೮ ರಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತಿದೆ.
ಇತ್ತೀಚೆಗೆ ಭಾರತದ ‘ಎಜ್ಯುಕೇಟ್ ಗರ್ಲ್ಸ್’ ಎಂಬ ಲಾಭ ರಹಿತ ಸೇವಾ ಸಂಸ್ಥೆಯು ದೇಶದಲ್ಲಿರುವ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳನ್ನು ಸಾಕ್ಷರನ್ನಾಗಿಸುವಲ್ಲಿ ಅಮೋಘ ಸಾಧನೆಗೈದು ವಿಶ್ವದ ಪ್ರತಿಷ್ಠಿತ ‘ರಾಮನ್ ಮೆಗಾಸೆಸ್ಸೆ ಪ್ರಶಸ್ತಿ ಪಡೆದಿರುವುದು ಭಾರತೀಯರ ಹೆಮ್ಮೆ ಇಮ್ಮಡಿಗೊಳಿಸಿದೆ. ಇಂದಿನ ಡಿಜಿಟಲೀಕರಣದ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ, ಜ್ಞಾನ, ಡಿಜಿಟಲ್ ಸಾಕ್ಷರತೆ ಮತ್ತು ಆಧುನಿಕ ಸಮಾಜದಲ್ಲಿ ಅವಶ್ಯಕವಾದ ಕೌಶಲ್ಯಗಳನ್ನು ಪಡೆಯುವುದು ಅತಿ ಅವಶ್ಯಕವಾಗಿದೆ.
ಸಾಕ್ಷರತೆಯ ಮಹತ್ವ
- ವಿಶ್ವದೆಲ್ಲೆಡೆ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಮತ್ತು ಸಾಮಾಜಿಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜನರು ಸಾಕ್ಷರರನ್ನಾಗುವಂತೆ ಪ್ರೇರೇಪಿಸುವುದು. ಸಾಕ್ಷರತೆ ಹೊಂದಿದ ವ್ಯಕ್ತಿಯು ಸಮಾಜದಲ್ಲಿ ಘನತೆಯಿಂದ ಬದುಕಲು ಮತ್ತು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಸ್ವಾವಲಂಬಿಯಾಗಿ ಜೀವನ ನಡೆಸಲು ಸಹಕರಿಸುತ್ತದೆ. ಶಿಕ್ಷಣ ಪಡೆದ ವ್ಯಕ್ತಿಗೆ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಟ್ಟು, ನಿರುದ್ಯೋಗ ಮತ್ತು ಬಡತನದ ಬೇಗೆಯಿಂದ ಹೊರಬರಲು ಪ್ರಯೋಜನಕಾರಿಯಾಗಿದೆ. ಸಾಕ್ಷರತೆಯು ಬಡತನ ರೇಖೆಗಿಂತ ಕೆಳಗಿರುವ ಜನರ ಪ್ರಮಾಣವನ್ನು ಕುಗ್ಗಿಸುವುದು, ಜನಸಂಖ್ಯೆಯನ್ನು ನಿಯಂತ್ರಿಸುವುದು, ಲಿಂಗ ತಾರತಮ್ಯ್ಯ ಮತ್ತು ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
- ೨೦೨೫ ನೇಯ ವರ್ಷದ ಘೋಷವಾಕ್ಯ: ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷಣದ ಜತೆಗೆ ಹೊಂದಿರಬೇಕಾದ ಅಮೂಲ್ಯವಾದ ಕೌಶಲ್ಯಗಳನ್ನು ಒಡಮೂಡಿಸಿಕೊಳ್ಳುವಂತೆ ಒತ್ತಿ ಹೇಳುತ್ತದೆ. “ಡಿಜಿಟಲ್ ಯುಗದಲ್ಲಿ ಸಾಕ್ಷರತೆಯನ್ನು ಉತ್ತೇಜಿಸುವುದು” ಇದು ೨೦೨೫ ನೇಯ ವರ್ಷದ ಘೋಷವಾಕ್ಯವಾಗಿದೆ. ವಿನೂತನವಾದ ಡಿಜಿಟಲ್ ತಂತ್ರಜ್ಞಾನಗಳು, ಜನರ ಸಂವಹನ, ಕಲಿಕೆ ಮತ್ತು ಇನ್ನಿತರ ಆನಲೈನ್ ಅಥವಾ ದೂರಶಿಕ್ಷಣದ ಮೂಲಕ ಎಲ್ಲರೂ ಸುಲಭವಾಗಿ ಶಿಕ್ಷಣ ಪಡೆಯುವಂತಾಗಬೇಕೆನ್ನುವುದು ಈ ವರ್ಷದ ಪ್ರಮುಖ ಧ್ಯೇಯೋದ್ಧೇಶವಾಗಿದೆ.
- ಕೊನೆಯ ನುಡಿ: ಎ.ಪಿ.ಜೆ ಅಬ್ದುಲ್ ಕಲಾಂ ಅವರು, “ಶಿಕ್ಷಣವು ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಶಕಿಶಾಲಿಯಾದ ಅಸ್ತçವಾಗಿದೆ. ನಿರಂತರ ಕಲಿಕೆಯು ಸೃಜನಶೀಲತೆಯನ್ನು ನೀಡುತ್ತದೆ. ಅದರಿಂದ ಚಿಂತನಾಶಕ್ತಿ ಬೆಳೆಯುತ್ತದೆ. ಆಲೋಚನೆಯು ಜ್ಞಾನವನ್ನು ನೀಡುತ್ತದೆ. ಹೀಗೆ ಪಡೆದ ಜ್ಞಾನವೇ ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತದೆ” ಎಂದು ಹೇಳಿದ್ದಾರೆ. ಪ್ರಸ್ತುತ ಕಡ್ಡಾಯ ಶಿಕ್ಷಣ ಕಾಯಿದೆ ಪ್ರಕಾರ, ಸರ್ವರಿಗೂ ಶಿಕ್ಷಣ ಮತ್ತು ಸರ್ವ ಶಿಕ್ಷಣ ಅಭಿಯಾನಗಳ ಮೂಲಕ ಜನತೆಯಲ್ಲಿ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುತ್ತಾ, ವಿಶ್ವದೆಲ್ಲೆಡೆ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಬೆಂಬಲಿಸಲು ಸಾಕ್ಷರತಾ ದರಗಳನ್ನು ಹೆಚ್ಚಿಸುವತ್ತ ಗಮನ ಹರಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಈ ದಿನದಂದು ಶಾಲೆ-ಕಾಲೇಜು, ಸರ್ಕಾರ-ಸರ್ಕಾರೇತರ ಸಂಸ್ಥೆಗಳಲ್ಲಿ ಸಾಕ್ಷರತೆ ಮತ್ತು ಶಿಕ್ಷಣ ಪಡೆಯುವದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ದಿನದ ಆಚರಣೆಯ ಮೂಲಕ ನಾವೆಲ್ಲರೂ ಶಿಕ್ಷಣವಂತರಾಗಿ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಬೇಕು.
ಸಾಕ್ಷರತೆಯ ಮಹತ್ವವನ್ನು ಪ್ರತಿ ಮನೆಗೆ ತಲುಪಿಸುವ ಕಾರ್ಯ ನಡೆಯಬೇಕು ಮತ್ತು ಸಾಮಾಜಿಕ ಜಾಗೃತಿ ಮೂಡಿಸುವ ಅಭಿಯಾನಗಳನ್ನು ಹಮ್ಮಿಕೊಳ್ಳುವಂತಾಗಬೇಕು. ನಾವು ಪ್ರಪಂಚಾದ್ಯಂತ ಎಲ್ಲರಿಗೂ ಶಿಕ್ಷಣ ಮತ್ತು ಸಾಕ್ಷರತೆಯ ಬೆಳಕನ್ನು ಎಲ್ಲೆಡೆ ಪಸರಿಸುವಂತೆ ಮತ್ತು ಪ್ರತಿಯೊಬ್ಬ ವ್ಯಕ್ತಿ ತನ್ನ ಘನತೆ, ಗೌರವ ಕಾಪಾಡಿಕೊಂಡು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದೊಂದಿಗೆ ಬದುಕಲು ಅವಕಾಶ ನೀಡುವಲ್ಲಿ ನಾವೆಲ್ಲರೂ ಕಂಕಣಬದ್ಧರಾಗಿ ನಿಲ್ಲಬೇಕಾಗಿದೆ. ಅಂದಾಗ ಮಾತ್ರ ಈ ದಿನದ ಆಚರಣೆಯು ಅರ್ಥಪೂರ್ಣವಾಗಲು ಸಾಧ್ಯ ಎಂಬುದು ನನ್ನ ಅಂಬೋಣ.
