ಇಂದು (೦೭ ಸೆಪ್ಟೆಂಬರ್, ರವಿವಾರ) “ಜೋಕುಮಾರಸ್ವಾಮಿ ಹುಣ್ಣಿಮೆ” ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
ಡಾ. ಎಂ.ಎಸ್.ಆಲಮೇಲ
ಯಡ್ರಾಮಿ
ಜಿಲ್ಲಾ: ಕಲಬುರ್ಗಿ
ಮೋ: 9740499814
ಉದಯರಶ್ಮಿ ದಿನಪತ್ರಿಕೆ
“ಅಡ್ಡಡ್ಡ ಮಳಿ ಬಂದು
ದೊಡ್ಡ ದೊಡ್ಡ ಹನಿಯಾಗಿ
ಗೊಡ್ಡು ಗೋಳೆಲ್ಲಾ ಹೈನಾಗಿ
ಜೋಕುಮಾರ..”
ಇದು ನಮ್ಮ ಉತ್ತರ ಕರ್ನಾಟಕದ ಸಹೋದರಿಯರು, ಜೋಕುಮಾರನ ಕುರಿತು ಹಾಡುವ ಹಾಡುಗಳಲ್ಲಿ ಒಂದು ಸುಂದರ ಗೀತೆ
ಪುರಾತನವಾದ ಜಾನಪದ ಸಂಸ್ಕೃತಿಯು ನಮ್ಮ ಆಡುಭಾಷೆಯ ಜೀವನಾಡಿ, ಹಲವು ವೈವಿಧ್ಯಮಯ
ನಂಬಿಕೆಯ( ಕೆಲವು ಮಹಾಬುದ್ಧಿ ಜೀವಿಗಳು ಮೂಡನಂಬಿಕೆ ಅನ್ನುವರು, ನಂಬುಗೆಯೇ ಸಾಂಬನರಮನೆ ಅನ್ನುವದು ಅವರುಗಳು ಅರಿತು ಕೊಂಡಿಲ್ಲ ) ಆಚರಣೆಗಳು, ಉತ್ಸವಗಳು, ಇಂದಿಗೂ ನಡೆದುಕೊಂಡು ಬರುತ್ತಿವೆ, ನಂಬಿಕೆಯಿಂದಲೇ ಈ ಜಗವು ಸಾಗುತ್ತಿರುವದು, ಒಬ್ಬ ತಾಯಿ ತನ್ನ ಮಗುವಿಗೆ ಒಬ್ಬ ಪುರುಷನ ತೋರಿಸಿ ( ತನ್ನ ಗಂಡನ ) ಇವರೇ ನಿನ್ನ ತಂದೆಯೆಂದು ಹೇಳಿದಾಗ ಆ ಮಗುವ ಕ್ಷಣಮಾತ್ರವು ಯೋಚಿಸದೆ ತನ್ನ ತಂದೆಯಂದು ಜೀವನವಿಡೀ ಒಪ್ಪಿಕೊಳ್ಳುತ್ತದೆ, ಪ್ರೀತಿಯಿಂದ ಅಪ್ಪಿಕೊಳ್ಳತ್ತದೆ, ತನ್ನ ಪ್ರೌಡಾವಸ್ಥೆಯಲ್ಲಿಯೂ ಅಪ್ಪನ ಕುರಿತು ಕಿಂಚಿತ್ತು ಸಂಶಯ ವ್ಯಕ್ತಪಡಿಸುವದಿಲ್ಲ, ಕಾರಣ ಹೆತ್ತ ತಾಯಿಯ ಮೇಲಿನ ಅಪಾರ ನಂಬಿಕೆ. ಇಂತಾ ಸದೃಢ ನಂಬಿಕೆಯಿಂದ ನಮ್ಮ ಭವ್ಯ ಭರತ ಭುವಿಯು ಆವಿಷ್ಕಾರಗೊಂಡಿರುವದು ಪರಂಪರಾಗತವಾಗಿ ಸುಸಂಸ್ಕೃತಿಯ ಅಮೃತಧಾರೆಯು ಇಂದಿಗೂ ಜಿನುಗುತ್ತರುವದು, ಎಲ್ಲಿ ಅಪನಂಬಿಕೆಯು ಇರುತ್ತದೆಯೋ ಅಲ್ಲಿ ಖಂಡಿತ ಮನಶಾಂತಿಯು ಇರುವದಿಲ್ಲವೆಂದು ಹೇಳುತ್ತಾ ಈಗ ಜೋಕುಮಾರನ ಕಡೆಗೆ ಆಗಮಿಸೋಣ,
ಜೋಕುಮಾರನ ಹುಟ್ಟು
ಪ್ರಖ್ಯಾತ ಲೇಖಕರು, ಇತಿಹಾಸ ತಜ್ಞ, ಸಂಶೋಧಕರಾದ ಡಾ. ಎಂ.ಚಿದಾನಂದಮೂರ್ತಿ ಅವರ ಅಭಿಪ್ರಾಯದ ಪ್ರಕಾರ, ಶಿವ – ಪಾರ್ವತಿಯರಿಗೆ ಗಣಪತಿಯು ಹೇಗೆ ಮಗನೋ ಹಾಗೆ ಜೋಕ ಮುನಿ ಹಾಗೂ ಎಳೆ ಗೌರಿಯರಿಗೆ ಜೋಕುಮಾರನೂ ಒಬ್ಬ ಮಗನು. ಅವನು ಜನತೆಯ ಆರಾಧ್ಯ ದೇವತೆಯೆಂತಲೂ ಅವರ ಹೆಸರಿನಿಂದ ಹಬ್ಬ, ಹುಣ್ಣಿಮೆಗಳು ಬಳಕೆಯಲ್ಲಿ ಬಂದಿರಬಹುದೆಂದೂ ಊಹಿಸುತ್ತಾರೆ. ಜೋಕುಮಾರನು ಹುಟ್ಟಿದ್ದು ಭಾದ್ರಪದ ಶುದ್ದ ಅಷ್ಡಮಿಯ ದಿನ ಎಂಬುದಕ್ಕೆ ಮೈಸೂರು ಪ್ರಾಚ್ಯಕೋಶಾಗಾರದ ಕೆ-೩೨೦ ಸಂಖ್ಯೆಯ ಹಸ್ತಪ್ರತಿ ಪತ್ರ ೫೨ ಆಧಾರವಾಗಿದೆ. ಇದರ ಪ್ರಕಾರ
“ಆದಿಮೂರುತಿ ಗುರುವೆ ಆವ ಜನ
ನಾದ ದಿನವನು ಪೇಲು ಯಂದೊಡೆ
ಭಾದ್ರಪದ ಶುದ್ಧದಲಿ ದೇವಿಯ ಅಷ್ಡಮಿಯ ಧಾರಾ |ಭೇದವಿಲ್ಲದೆ ಸರ್ವಲೋಕವು |
ಆದಲಿಸಿ ಕಟ್ಟೀರ ಬಳಿಕಲಿ |
ಆ ದಿವಸವೇ ಹುಟ್ಟಿ ನಡೆದನು ಭೂಪಕೇಳಂದಾ||
ಈ ಪ್ರಕಾರ ಅವನ ಹುಟ್ಟಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ಆಧಾರದಿಂದ ವ್ಯಕ್ತಪಡಿಸಿದ್ದಾರೆ.
ಇನ್ನು ಜೋಕುಮಾರನ ಜಾನಪದ ಹಾಡುಗಳಲ್ಲಿ ಏಳು ದಿನದ ಅವನ ಜೀವನದಲ್ಲಿ , ಜನನ ಬಾಲ್ಯ ಕೌಮಾರ್ಯ, ಯೌವ್ವನ. ನಾವು ಎಲ್ಲವನ್ನು ಸೇರಿಸಿ, ಆಡಿಸಿ, ಏಳು ದಿನ ಮೆರೆಸುವ, ಇಂದಿಗೂ ಜೀವಂತವಿರುವ ಜೋಕುಮಾರ ಮಳೆಯ ದೇವರು. ಜನಪದರಲ್ಲಿ ಇವನು ಗಣಪತಿಯ ಸಹೋದರನು. ತಾಯಿ ಪಾರ್ವತಿ ಗಣಪತಿಯ ಕಥೆಯಂತೆ ಇವನ ಕಥೆಯನ್ನು ಸಹ ಕಲ್ಪಿಸಿದ್ದಾರೆ. ಅಂದರೆ ಪಾರ್ವತಿ ಇವನನ್ನು ಮಣ್ಣಿನ ಗೊಂಬೆ ಮಾಡಿ ಜೀವ ತುಂಬಿ ಸ್ನಾನ ಮಾಡುವಾಗ ಬಾಗಿಲಿಗೆ ಕಾಯಲು ನಿಲ್ಲಿಸುವಳು. ಶಿವನು ಬಂದಾಗ ಅವನು ಹೆದರಿ ಓಡಿ ಹೋಗಿ ಜಳಕದ ಮನೆಯಲ್ಲಿದ್ದ ತಾಯಿಯನ್ನೇ ಅಪ್ಪಿಕೊಂಡನು. ಆಗ ಅವಳು ಅವನ ಅಲ್ಪತ್ವಕ್ಕೆ ಸಿಟ್ಟಾಗಿ ಏಳು ದಿನಗಳ ಅಲ್ಪ ಜೀವನವನ್ನು ನೀಡಿದಳು. ಅವಳ ಕೋಪದ ಉಗ್ರತೆಗೆ ಜೋಕುಮಾರನು ಬೀದಿ ಪಾಲಾಗಿ ಕುದುರೆ ಏರಿ ಭೂಲೋಕದಿ ಸಂಚರಿಸುವಾಗ ಹೊಲ ಗದ್ದೆಗಳ ದುಃಸ್ಥಿತಿಯನು ಕಂಡು, ನೊಂದು ಕೋಪದಿ ತಾನು ಹೊದ್ದುಕೊಂಡಿದ್ದ ಶ್ವೇತ ವಸ್ತ್ರವನ್ನು ಆಗಸದೆಡೆಗೆ ರಭಸವಾಗಿ ಬೀಸಿದಾಗ ಅದು ಮೋಡಗಳಿಗೆ ತಾಗಿ ಘರ್ಷಣೆಯಾಗಿ ಧಾರಾಕಾರ ಮಳೆ ಸುರಿಯುವುದು ಇದರ ಫಲವಾಗಿ ರೈತರ ದೈವವಾಗುವನು, ಹಾಗೆ ಮಾರನೇ ದಿನ ಹಳ್ಳದ ದಂಡೆಯಲ್ಲಿ ಸಾಗಿ ಬರುತ್ತಿರುವಾಗ ಮಡಿವಾಳರ (ಅಗಸರ ) ತರುಣಿಯ ನೋಡಿ ಮನ ಸೋಲುವನು ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುವನು ಆದ್ರೆ, ಆ ಹುಡುಗಿ ಇವನ ಪ್ರೇಮ ನಿವೇದನೆಗೆ ಸಮ್ಮತಿಸುವದಿಲ್ಲ, ಅದರ ಪರಿಣಾಮವೇ ಜೋಕುಮಾರ ಕಾಮಾಂಧನಾಗಿ, ಅವಳನ್ನು ತನ್ನವಳಾಗಿಸಿಕೊಳ್ಳುವ ಸಂಘರ್ಷದಿ ಕೊಲೆಯಾಗಿ ಬೆಸ್ತರಿಗೆ ದೊರೆಕಿದನು. ಅವರು. ಅವನನ್ನು ಮಳೆ ತರಿಸಿದ ದೇವರೆಂದು ಜೋಕುಮಾರನ ಭಕ್ತರಾದರು. ಸಂಬಂಧಿಗಳಾದರು,
ಗಂಗಾಮತದವರಾದರು.

ಅನಂತನ / ಜೋಕುಮಾರನ ಹುಣ್ಣಿಮೆ
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜೋಕುಮಾರನ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟತೆ ಇದೆ. ಜೋಕುಮಾರ ಹಬ್ಬವು ಜನಪದೀಯ ಸಂಸ್ಕೃತಿಯ ವಿಶಿಷ್ಟ ಆಚರಣೆಯ ಹಬ್ಬವಾಗಿದೆ.
ಗಣೇಶನ ಹಬ್ಬದ ಬಳಿಕ ಅನಂತನ / ಜೋಕುಮಾರ ಹುಣ್ಣಿಮೆ ಸನಿಹ ಬರುವ ಜೋಕುಮಾರನ ಆರಾಧನೆಯನ್ನ ಕೆಲವು ಕುಟುಂಬಗಳು ಎಲ್ಲರ ಏಳಿಗೆಯನ್ನ ಬಯಸುತ್ತಾ, ಪ್ರಾರ್ಥನೆಯ ಮೂಲಕ ಬೇಡಿಕೊಳ್ತಾರೆ.
ಅಲ್ಲದೇ ಹಬ್ಬವನ್ನು ಮಾಡುವುದರ ಜೊತೆಗೆ ಜೋಕುಮಾರನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ, ಮಳೆ, ಬೆಳೆ, ಸಮೃದ್ದಿಯಾಗಿ ಆಗುತ್ತದೆ ಎಂಬ ನಂಬಿಕೆ ಇದೆ.
ಗಣೇಶ ಶಿಷ್ಟ ಸಂಸ್ಕೃತಿಯ ವಾರಸುದಾರನಾದರೆ, ಜೋಕುಮಾರಸ್ವಾಮಿ ಜಾನಪದ ಸಂಸ್ಕೃತಿಯ ಪ್ರತೀಕ. ಒಂದು ವಾರಗಳ ಕಾಲ, ಕಾಯಿ ಕಡುಬಿನ ಸಿಹಿ ಸವಿದ ಗಣೇಶ, ಭೂಲೋಕದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ತನ್ನ ತಂದೆ-ತಾಯಿ ವರದಿ ಒಪ್ಪಿಸಿದರೆ, ಜೋಕುಮಾರ ಸ್ವಾಮಿ ಭೂಲೋಕದಲ್ಲಿನ ಮಳೆ, ರೈತರ ಕಷ್ಟದ ಬಗ್ಗೆ ವರದಿ ಒಪ್ಪಿಸುತ್ತಾನೆ ಎಂಬ ನಂಬಿಕೆ ಇದೆ.
ಈ ಜೋಕುಮಾರ ಸ್ವಾಮಿ ಊರಿನ ಕುಂಬಾರನ ಮನೆಯಲ್ಲಿ ಹುಟ್ಟುತ್ತಾನೆ. ಅಂದರೆ ಮಣ್ಣಿನಿಂದ ಮೂರ್ತಿಯನ್ನು ತಯಾರಿಸುತ್ತಾರೆ. ಬಳಿಕ ಗ್ರಾಮದ ಅಂಬಿಗರ ಮನೆಯಲ್ಲಿ ಬೆಳೆಯುತ್ತಾನೆ. ಅಂಬಿಗರು ಬೇವಿನ ಎಲೆ ಉಡುಗೆಯೊಂದಿಗೆ ಅಲಂಕಾರ ಮಾಡುತ್ತಾರೆ.
ದೊಡ್ಡ ಬುಟ್ಟಿಯಲ್ಲಿ ಜೋಕುಮಾರ ಸ್ವಾಮಿಯ ಮೂರ್ತಿಯನ್ನ ಪ್ರತಿಷ್ಠಾಪಿಸಿ, ಊರಿನ ಎಲ್ಲಾ ಮನೆಗೂ ಹೋಗ್ತಾರೆ. ಜನಪದ ಹಾಡು ಹಾಡುತ್ತಾ ಮಹಿಳೆಯರು ಸಾಗುತ್ತಾರೆ. 7 ದಿನಗಳ ಕಾಲ 7 ಊರುಗಳನ್ನು ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕೆಂಬುವುದು ಆರಾಧಕರು ಮಾತು.
ಜೋಕುಮಾರ ಸ್ವಾಮಿಗೆ ಭಕ್ತರು ಮರದಲ್ಲಿ ದವಸ, ಧಾನ್ಯ, ಹಣವನ್ನು ಕೊಡುತ್ತಾರೆ. ಭಕ್ತರಿಗೆ ಪ್ರತಿಯಾಗಿ ಕರಿಮಸಿ ಬೆರೆತ ಬೇವಿನ ಸೊಪ್ಪು, ಜೋಳ, ನುಚ್ಚು, ಮೆಣಸಿನಕಾಯಿ, ಇತ್ಯಾದಿಗಳನ್ನು ಕೊಡುತ್ತಾರೆ. ಅದನ್ನು ಹೊಲದ ತುಂಬೆಲ್ಲಾ ಚೆಲ್ಲಿದರೆ ಉತ್ತಮ ಬೆಳೆ ಬರುವುದಾಗಿ ನಂಬಿಕೆ ಇರುವ ರೈತರು ತಗಣಿ, ಚಿಕ್ಕಾಡು ಆದರೆ ಮೆಣಸಿನಕಾಯಿ ಉಪ್ಪು ಕೊಟ್ಟು, ಅವು ನಾಶವಾಗುವಂತೆ ಬೇಡಿಕೊಳ್ಳುವರು. ಆನಂತರ ಅದರಂತೆ ಅವು ಹೋಗುತ್ತವೆ ಎಂಬ ನಂಬಿಕೆಯು ಇದೆ. ನುಚ್ಚು, ಅಂಬಲಿ ಚರಗಾ ಚಲ್ಲಿದಾಗ ಹೊಲದಲ್ಲಿ ಲಕ್ಷ್ಮಿಯು ಮಗನನ್ನು ಹುಡುಕಲು ಅಡ್ಡಾಡಲು ಹೋಗುವಳು. ಅದರಿಂದ ಬೆಳೆ ಹುಲುಸಾಗಿ ಬರುಬಹುದು ಎಂಬ ಜಾನಪದ ನಂಬಿಕೆ ಇರುತ್ತದೆ. ಅಳ್ಳಂಬಲಿ ಆ ಗಡಿಗೆಗೆ ‘ಬೆಚ್ಚು’ ಅನ್ನುವರು, ಗಣಪತಿ- ಜೋಕುಮಾರನ ಬಗ್ಗೆ ಸಾಮ್ಯ, ವೈಷಮ್ಯಗಳ ಬಗ್ಗೆ ವಿಚಾರ ಮಾಡಿದರೆ ಗಣಪತಿಯು ಭಾದ್ರಪದ ಚೌತಿಯ ದಿನ ಬಂದು ನವಮಿಗೆ ಹೋಗುವನು. ಆದರೆ ಭಾದ್ರಪದ ಅಷ್ಟಮಿಗೆ ಜೋಕುಮಾರನು ಬಂದು ಪೌರ್ಣಮಿಗೆ ಅಂದರೆ ಆರು ದಿನಕ್ಕೆ ಹೋಗುವನು. ಕೇವಲ ಒಂದು ದಿನ ಮಾತ್ರ ಇವರಿಬ್ಬರ ಭೇಟಿ ಆಗುವದು. ಜೋಕುಮಾರನು ಬಂದರೆ ಗಣಪತಿಯನ್ನು ಒಂದು ಅರಿವೆಯಿಂದ ಮುಚ್ಚಿಬಿಡುವರು. ಅದರ ಬಗ್ಗೆ ಹೇಳುವುದಾದರೆ ಒಂದು ವೇಳೆ ಗಣಪತಿಯು ಜೋಕುಮಾರನನ್ನು ನೋಡಿದರೆ ಅವನ ಹೊಟ್ಟೆಯು ಒಡೆಯುವುದು. ‘ಸೊಂಡ್ಯಾ’ ಅಂದರೆ ಗಣಪತಿ, ಗಂಡ್ಯಾ ಅಂದರೆ ಜೋಕುಮಾರ. ಲೊಂಡ್ಯಾ ಅಂದರೆ ಅಲಾವಿ( ಅಲಾಯ್,) ( ಯಾರು ಅನ್ಯತಾ ಭಾವಿಸಬೇಡಿ ಜನಪದದಿ ತಲ ತಲಾಂತರದಿಂದ ಆಡು ನುಡಿಗಳಾಗಿ ಬಂದಿರುವ ವಾಕ್ಯಗಳು ಇವು ) ದೇವರು ಇವು ಒಂದೇ ಸಮಯಕ್ಕೆ ಕೂಡುವುದು ಅಪಶಕುನ ಎಂದು ಜಾನಪದರಲ್ಲಿ ಬಲವಾದ ನಂಬಿಕೆ ಇದೆ.
ನಂಬಿಕೆ ಅಪನಂಬಿಕೆಗಳೇನಿದ್ದರೂ ಜನಪದರ ಆಚರಣೆಗಳು ವಿಶಿಷ್ಟ ವೈಶಿಷ್ಟದಿಂದ ಕೂಡಿವೆ, ಅದನ್ನು ಉಳಿಸಿ ಬೆಳಸಿ ಮುಂದಿನ ತಲೆಮಾರಿಗೆ ಕೊಡುಗೆ ನೀಡಬೇಕಾದ್ದು, ನಮ್ಮ ನಿಮ್ಮಲ್ಲರ ಆದ್ಯ ಕರ್ತವ್ಯವಾಗಿದೆ.
ಒಂದು ಕೊನೆಯ ಸಕಾರಾತ್ಮಕ ಚಿಂತನೆ
ಜೋಕುಮಾರನು, ಒಂದು ಮೂಲದ ಪ್ರಕಾರ
ಶ್ರೇಷ್ಠ, ಜೋಕಋಷಿಯ ಮಗನಾಗಿದ್ದು
ಇನ್ನೊಂದು ಕಥೆಯಲ್ಲಿ ಬರುವಂತೆ ಮಾತೆ ಗೌರಿಯ ಮಗನಾಗಿದ್ದರು ಕೂಡ
ಉಡಾಳನು, ಪುಂಡನು, ಕಾಮಾಂಧನು, ಅಲ್ಪಾಯು ಯಾಕೆ ಆದನು? ಬ್ರಹ್ಮಾಂಡದೊಡೆಯನ ಲೀಲಾ ವಿನೋದ ಕಾರ್ಯಗತಗೊಳಿಸಲು ಜಗಕೆ ಸುಪಥವ ತೋರಲು.
ಸುರ, ಅಸುರ, ನರಮಾನವ, ಯಾರೆ ಆಗಿರಲಿ, ಧರ್ಮ ಮಾರ್ಗವ ತೊರೆದು, ಅಧರ್ಮದಿ ಅಬ್ಬರಿಸಿ ಅಂಕುಶವಿಲ್ಲದೆ ಬೊಬ್ಬಿರಿದರೆ ದುರ್ಮರಣ ನಿಶ್ಚಿತವೆಂದು ಲೋಕಕ್ಕೆ ತಿಳಿಸಲು ಅಲ್ಲವೇ?
ತಾವು ಒಮ್ಮೆ ಯೋಚಿಸಿ..
