ಇಂದು (ಸೆಪ್ಟೆಂಬರ್ ೦೫, ಶುಕ್ರವಾರ) “ಶಿಕ್ಷಕರ ದಿನಾಚರಣೆ” ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಶೈಲಜಾ ಆಲಗೂರ
ಉಪನ್ಯಾಸಕರು
ಶಿವಣಗಿ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
“ಜ್ಞಾನದ ಜೊತೆಗೆ ಉತ್ತಮ ಮತ್ತು ನಿಷ್ಕಲ್ಮಶವಾದ ಮನಸುಳ್ಳವನು ಮಾತ್ರ ಒಬ್ಬ ಆದರ್ಶ ಶಿಕ್ಷಕನಾಗಲು ಸಾಧ್ಯ “ಎಂದು ಡಾ. ಸರ್ವಪಲ್ಲಿ ರಾಧಾಕೃಷ್ಣನವರು ಹೇಳಿದ ಮಾತಿನಂತೆ ಅವರು ಆದರ್ಶ ಶಿಕ್ಷಕರೆನಿಸಿಕೊಂಡರು. ಶಿಕ್ಷಕನಾದವನು ಮಕ್ಕಳಿಗೆ ಪುಸ್ತಕದಲ್ಲಿರುವುದನ್ನು ಯಥಾವತ್ತಾಗಿ ಹೇಳಿ ಪರೀಕ್ಷೆ, ಫಲಿತಾಂಶ, ಅಂಕ, ದರ್ಜೆ ಎಂದು ಹೇಳಿದರೆ ಅದು ಸಮಂಜಸವಾಗಲಾರದು. ಒಬ್ಬ ವ್ಯಕ್ತಿ ಪರಿಪೂರ್ಣ ಉತ್ತಮ ನಾಗರಿಕನೆನಿಸಿಕೊಳ್ಳಲು “ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ” ಎನ್ನುವ ಮಾತಿನಂತೆ ಮುಂದಿರುವ ಗುರಿಯನ್ನು ನೈತಿಕವಾಗಿ, ಸನ್ಮಾರ್ಗದಲ್ಲಿ ವ್ಯಕಕರೆದುಕೊಂಡು ಹೋಗಿ ಆ ವ್ಯಕ್ತಿಯನ್ನು ಆದರ್ಶ ವ್ಯಕ್ತಿಯನ್ನಾಗಿಸುವ ಮಾರ್ಗದರ್ಶಕನೇ ಗುರುವಾಗಿರುತ್ತಾನೆ. ವ್ಯಕ್ತಿಯನ್ನು ಅಥವಾ ವಿದ್ಯಾರ್ಥಿಯನ್ನು ಉತ್ತಮ ನಾಗರಿಕರನ್ನಾಗಿ ಅವರ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಡುವವರೇ ಶಿಕ್ಷಕರು. ವಿದ್ಯಾರ್ಥಿಗಳಾಗಿ ಬಂದವರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶದ ಪ್ರಗತಿಗೆ ಸಂಪತ್ತನ್ನಾಗಿ ಬದಲಾಸುವ ಮಹತ್ತರವಾದ ಕಾರ್ಯ ಸಾಧನೆ ಮಾಡುವ ಗುರುತರವಾದ ಜವಾಬ್ದಾರಿಯನ್ನು ಶಿಕ್ಷಕರಾದವರು ನಿರ್ವಹಿಸುತ್ತಾರೆ. ವಿದ್ಯಾರ್ಥಿಯ ಯಶಸ್ಸಿನ ನಿಜವಾದ ಆಧಾರಸ್ತಂಭಗಳೇ ಶಿಕ್ಷಕರು. ವಿದ್ಯಾರ್ಥಿಗಳಲ್ಲಿ ಜ್ಞಾನ ಜ್ಯೋತಿ ಬೆಳಗಿಸಿ, ಆತ್ಮವಿಶ್ವಾಸ ತುಂಬಿ, ಕೌಶಲ್ಯಗಳ ಬೆಳವಣಿಗೆಗೆ ಸರಿಯಾದ ಮಾರ್ಗವನ್ನು ತೋರಿಸುವವರೇ ಗುರುಗಳು.

ಪ್ರತಿಯೊಬ್ಬ ವ್ಯಕ್ತಿಯೂ ಸಪ್ಟೆಂಬರ್ 5 ರಂದು ತಮ್ಮ ಗುರುಗಳನ್ನು, ಮಾರ್ಗದರ್ಶಕರನ್ನು ನೆನೆದು ಅವರಿಗೆ ಧನ್ಯತಾ ಭಾವವನ್ನು ಅರ್ಪಿಸುತ್ತಾರೆ. ದೇಶ ಕಂಡ ಅತ್ತ್ಯುತ್ತಮ ಶಿಕ್ಷಕರೆನಿಸಿಕೊಂಡವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಪೂಜಿಸುವುದು, ಆರಾಧಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಡಾ. ರಾಧಾಕೃಷ್ಣನ್ ಅವರು 1888 ರ ಸಪ್ಟೆಂಬರ್ 5 ರಂದು ತಮಿಳುನಾಡಿನ ತಿರುಮಾಣಿ ಎಂಬಲ್ಲಿ ಜನಿಸಿದರು. ತಂದೆ – ವೀರಸ್ವಾಮಿ, ತಾಯಿ – ಸೀತಮ್ಮ. ಸರ್ವಪಲ್ಲಿ ಇವರ ಮನೆತನದ ಹೆಸರಾಗಿತ್ತು. ಓದಿನಲ್ಲಿ ಚುರುಕಾಗಿದ್ದ ರಾಧಾಕೃಷ್ಣನ್ ಅವರು ಮದ್ರಾಸ್ ಕಾಲೇಜಿನಲ್ಲಿ ತತ್ವಶಾಸ್ತ್ರದಲ್ಲಿ B.ಆ ಮತ್ತು M.A ಪದವಿಗಳನ್ನು ಪಡೆದರು. ಅವರು ಮಂಡಿಸಿದ ಪ್ರಬಂಧ “ದಿ ಎಥಿಕ್ಸ್ ಆಫ್ ವೇದಾಂತ್ “. ಇದನ್ನು ಮದ್ರಾಸ್ ಕಾಲೇಜಿನ ಶಿಕ್ಷಕರೆಲ್ಲರೂ ಶ್ಲಾಘಿಸಿದರು. ರಾಧಾಕೃಷ್ಣನ್ ಅವರು 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ವಶಾಸ್ತ್ರ ವಿಭಾಗದ ಉಪನ್ಯಾಸಕರಾದರು. ಸ್ವಾಮಿ ವಿವೇಕಾನಂದರನ್ನು ಆದರ್ಶವನ್ನಾಗಿಸಿಕೊಂಡು ಬೆಳೆದ ಇವರು ಚಿಕ್ಕಂದಿನಿಂದಲೇ ಓದುವ ಹವ್ಯಾಸ ರೂಢಿಸಿಕೊಂಡಿದ್ದರು. ಅನೇಕ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ, ಕುಲಪತಿಗಳಾಗಿ ಸೇವೆ ಸಲ್ಲಿಸುವುದರ ಜೊತೆಗೆ ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿ ದೇಶಕ್ಕೆ ತಮ್ಮ ಅಪಾರವಾದ ಸೇವೆ ಸಲ್ಲಿಸಿದ್ದಾರೆ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೈಸೂರಿನ ಮಹಾರಾಜಾ ಕಾಲೇಜಿನಿಂದ ವರ್ಗಾವಣೆಗೊಂಡು ಮದ್ರಾಸ್ ಕಾಲೇಜಿಗೆ ಹೋಗುವ ಸಂದರ್ಭ ಬಂದಾಗ ಮಹಾರಾಜ ಕಾಲೇಜಿನಿಂದ ಅವರನ್ನು ಕಳುಹಿಸಿಕೊಡಲು ಯಾರಿಗೂ ಮನಸ್ಸಿರಲಿಲ್ಲ, ಅನಿವಾರ್ಯವಾಗಿ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾರವಾದ ಮನಸ್ಸಿನಿಂದ ಒಪ್ಪಿಕೊಳ್ಳಬೇಕಾಯಿತು. ಆದರೆ ಅವರನ್ನು ಅಲ್ಲಿಂದ ಬೀಳ್ಕೊಡುವಾಗ ಯಾರೂ ಕಂಡರಿಯದಂತಹ ಅದ್ಬುತವನ್ನು ಮಹಾರಾಜ ಕಾಲೇಜಿನ ವಿದ್ಯರ್ಥಿಗಳು ಮಾಡಿದ್ದರು. ಅದೇನೆಂದರೆ – ಹೂವಿನಿಂದ ಅಲಂಕರಿಸಿದ ಸಾರೋಟಿನಲ್ಲಿ ಡಾ. ರಾಧಾಕೃಷ್ಣನ್ ಅವರನ್ನು ಕೂರಿಸಿ, ಆ ಸಾರೋಟವನ್ನು ರೈಲ್ವೆ ನಿಲ್ದಾಣದವರೆಗೆ ವಿದ್ಯಾರ್ಥಿಗಳೇ ಎಳೆದುಕೊಂಡು ಹೋದರು. ಹೀಗೆ ಸಾರೋಟದಲ್ಲಿ ಅವರನ್ನು ಕೂರಿಸಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗುವಾಗ ಮೈಸೂರಿನ ಜನತೆ ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಂತು ನಮಸ್ಕರಿಸುತಿದ್ದರು. ಅವರ ಈ ವೈಭವದ ಮೆರವಣಿಗೆ ಯಾವ ರಾಜನಿಗೂ ಸಂದಿಲ್ಲವೆಂದು ಅಲ್ಲಿನ ಜನ ಮಾತನಾಡಿಕೊಳ್ಳುತ್ತಿದ್ದರು. ವಿದ್ಯಾರ್ಥಿಗಳು ಸರೋಟವನ್ನು ರೈಲ್ವೆ ಪ್ಲಾಟ್ ಫಾರ್ಮ್ ವರೆಗೆ ತಲುಪಿಸಿದ ನಂತರ ದುಃಖ ತಡೆಯಲಾರದೇ ಗಳಾಗಳನೆ ಅಳತೊಡಗಿದರು. ವಿದ್ಯಾರ್ಥಿಗಳ ಈ ಪ್ರೀತಿ ವಿಶ್ವಾಸ ಕಂಡು ಸ್ವತಃ ರಾಧಾಕೃಷ್ಣನ್ ಅವರೇ ಧನ್ಯತಾ ಭಾವದಿಂದ ಅವರೊಂದಿಗೆ ದುಃಖಿಸಿದರು. ಅವರ ಜೇವನದುದ್ದಕ್ಕೂ ಈ ಕ್ಷಣವನ್ನು ನೆನಪಿಸಿಕೊಳ್ಳುತ್ತಲೇ ಇದ್ದರು.
ಮುಂದೆ ಡಾ. ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು 2ನೇ ರಾಷ್ಟ್ರಪತಿಯಾದಾಗ ಅವರನ್ನು ಅಭಿನಂದಿಸಲು ಬಂದ ಪತ್ರಕರ್ತರು, ವಿದ್ಯಾರ್ಥಿಗಳ ಸಮೂಹ ಅವರ ಹುಟ್ಟು ಹಬ್ಬವನ್ನು (ಜಯಂತಿ ) ಆಚರಿಸಲು ಕೇಳಿಕೊಂಡಾಗ ಡಾ. ರಾಧಾಕೃಷ್ಣನ್ ಅವರು ಹುಟ್ಟುಹಬ್ಬವನ್ನು ‘ಭಾರತದ ಶಿಕ್ಷಕರ ದಿನಾಚರಣೆ’ಯನ್ನಾಗಿ ಆಚರಿಸಿದರೆ ನನಗೆ ಹೆಮ್ಮೆ ಎನಿಸುತ್ತದೆ ಏಕೆಂದರೆ “ನಾನು ಯಾವುದೇ ಹುದ್ದೆ ಏರಿದರೂ ಕೂಡ ಶಿಕ್ಷಕ ಹುದ್ದೆ ನನ್ನನ್ನು ತೃಪ್ತನನ್ನಾಗಿಸುತ್ತದೆ ” ಎಂದು ಹೇಳಿದರು. ಅಂದಿನಿಂದ 1962ರಲ್ಲಿ ಸಪ್ಟೆಂಬರ್ 5ರಂದು “‘ರಾಷ್ಟ್ರೀಯ ಶಿಕ್ಷಕರ ದಿನಾಚರಣೆ” ಯಾಗಿ ಆಚರಿಸಲಾಗುವುದು. ಭಾರತವನ್ನೊಳಗೊಂಡಂತೆ ಜಗತ್ತಿನ 22 ದೇಶಗಳು ಸಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತವೆ. ಶಿಕ್ಷಕರಿಗೆ ಯಾವಾಗಲೂ ಗೌರವ ಮತ್ತು ಪ್ರೀತಿಯನ್ನು ನೀಡುವುದೇ ಇದರ ಮುಖ್ಯ ಉದ್ದೇಶ. ಶಿಕ್ಷಕರಾದವರು ಮಕ್ಕಳನ್ನು ಯಶಸ್ವಿನ ಹಾದಿಯಲ್ಲಿ ಸಾಗಲು ಸತತವಾಗಿ ಪ್ರಯತ್ನಿಸುತ್ತಾರೆ. ಈ ದಿನ ವಿದ್ಯಾರ್ಥಿಗಳು ಗುರುಗಳನ್ನು ವಿವಿಧ ರೀತಿಯಲ್ಲಿ ಗೌರವಿಸಿದರೆ, ಶಿಕ್ಷಕರಾದವರು ಗುರು ಶಿಷ್ಯ ಸಂಪ್ರದಾಯ ಎತ್ತಿಹಿಡಿಯುವ ಪ್ರಯತ್ನ ಮತ್ತು ಪ್ರತಿಜ್ಞೆ ಕೈಗೊಳ್ಳುತ್ತಾರೆ. ವಿದ್ಯಾರ್ಥಿಯನ್ನು ಆದರ್ಶ ನಾಗರಿಕನನ್ನಾಗಿ ಮಾಡಲು ಶಿಕ್ಷಕರ ಪಾತ್ರ ಬಹಳ ಶ್ರೇಷ್ಠ ಮತ್ತು ದೊಡ್ಡದಾಗಿರುತ್ತದೆ. ಶಿಕ್ಷಕರಿಲ್ಲದೆ ಶಿಕ್ಷಣ ಪಡೆಯುವುದು ಅಸಾಧ್ಯವೆನಿಸುವುದು. “ದೇಶದ ಭವಿಷ್ಯವೂ ಆ ದೇಶದ ಮಕ್ಕಳ ಕೈಯಲ್ಲಿದೆ “ಎಂದು ಹೇಳುವುದು ಎಷ್ಟು ಸತ್ಯವೋ, ಆ ಮಕ್ಕಳು ದೇಶದ ಸಂಪತ್ತು ಆಗುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ ಎಂಬುದು ಅಷ್ಟೇ ಸತ್ಯ.
ಶಿಕ್ಷಕರ ದಿನಾಚರಣೆ ಆಚರಿಸುವ ಮೂಲಕ ನಾವು ಡಾ. ರಾಧಾಕೃಷ್ಣನ್ ಅವರ ಉದಾತ್ತ ಚಿಂತನೆಗಳನ್ನು ಮತ್ತೆ ಮತ್ತೇ ಮೆಲಕು ಹಾಕಬಹುದು. ಅಲ್ಲದೇ ಪ್ರಸ್ತುತವಾಗಿ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಣ ಸಂಬಂಧವನ್ನು ಆಚರಿಸಿ ಆನಂದಿಸುವ ಸಂದರ್ಭವಾಗಿದೆ. ಪ್ರಪಂಚದಲ್ಲಿ ಶಿಕ್ಷಕರೇ ಜ್ಞಾನಜ್ಯೋತಿಯ ಮೂಲ ಎಂಬುದನ್ನು ಶಿಕ್ಷಕರ ದಿನಾಚರಣೆಯ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದಂತಾಗುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ, ಉತ್ತಮ ನಾಗರಿಕರನ್ನು ಸೃಷ್ಟಿ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸುವ ಶಿಕ್ಷಕರಿಗೆ ಕೃತಜ್ಞತೆ ಅರ್ಪಿಸಲು ಇದೊಂದು ಸುಸಂದರ್ಭವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರಿಗೆ ಧನ್ಯತಾ ಭಾವ ತಿಳಿಸುವುದಕ್ಕೆ ಸುವರ್ಣ ಅವಕಾಶ ಎನಿಸಿದೆ ಈ ದಿನ. ಜೊತೆಗೆ ಶಿಕ್ಷಕರಾದವರು ವಿದ್ಯಾರ್ಥಿಗಳನ್ನು ಭವಿಷ್ಯದ ಆದರ್ಶ ವ್ಯಕ್ತಿಯನ್ನಾಗಿಸಲು ಮಾಡುವ ಪ್ರತಿಜ್ಞೆಯೂ ಕೂಡ ಎನಿಸುವುದು.
ದೇಶ ಕಂಡ ಅತ್ತ್ಯುತ್ತಮ ಶಿಕ್ಷಕರೆನಿಸಿರುವ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಗೌರವಪೂರ್ಣವಾಗಿ ಮನದಲ್ಲಿ ನಮಿಸುವನು.” ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು ” ಎಂಬಂತೆ ನನ್ನ ತಂದೆ ತಾಯಿ ಯನ್ನು ನಮಿಸುವೆನು. ಅಕ್ಷರವನ್ನು ತಿದ್ದಿಸಿ, ಅಕ್ಷರಾಭ್ಯಾಸ ನೀಡಿ ಉತ್ತಮ ಮಾರ್ಗದರ್ಶನದೊಂದಿಗೆ ಸಮಾಜದಲ್ಲಿ ಗೌರವಯುತವಾದ ಈ ಶಿಕ್ಷಕ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಶಿಕ್ಷಣದ ಜ್ಞಾನ ನೀಡಿದ ನನ್ನೆಲ್ಲಾ ಶಿಕ್ಷಕರಿಗೂ ಗೌರವಪೂರ್ಣವಾಗಿ ನಮಿಸುವೆನು. ಸಮಾಜದ ಉನ್ನತಿಗಾಗಿ ಸತತವಾಗಿ ಶ್ರಮಿಸುವ ಎಲ್ಲ ಶಿಕ್ಷಕವರ್ಗದವರಿಗೂ ಶುಭ ಹಾರೈಸುವೆ. ಗುರುವಿಲ್ಲದೆ ಗುರಿ ಮುಟ್ಟುವುದು ಕಷ್ಟ, ಭರವಸೆ ಹೆಚ್ಚಿಸಿ ಕನಸನ್ನು ನನಸುಗೊಳಿಸುವಲ್ಲಿ ಆಸಕ್ತಿ ಮತ್ತು ಅಭಿರುಚಿ ಮೂಡಿಸಿ ಪ್ರೋತ್ಸಾಹ ತುಂಬುವ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
