ಇಂದು (ಸೆಪ್ಟಂಬರ್ ೦೫, ಶುಕ್ರವಾರ) “ಶಿಕ್ಷಕರ ದಿನಾಚರಣೆ” ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಖ್ಯಾತ ತತ್ವಜ್ಞಾನಿ ಡಾರ್ವಿನ್ ಮಾರ್ಟಿನ್ ಅವರು, “ಒಳ್ಳೆಯ ಶಿಕ್ಷಕದು ಮೇಣಬತ್ತಿಯಂತೆ, ತಮ್ಮ ಜೀವವನ್ನು ಶ್ರವಿಸಿ ಇತರರಿಗೆ ಬೆಳಕು ನೀಡುವ ದೀಪವಿದ್ದಂತೆ” ಎಂದು ಹೇಳಿದ್ದಾರೆ. ಅಜ್ಞಾನದ ಕಳೆಯ ಕಿತ್ತಿ, ಸುಜ್ಞಾನದ ಬೀಜವ ಬಿತ್ತಿ, ಸದ್ಗುಣಗಳ ಗೊಬ್ಬರ ಹಾಕಿ, ಮನದಲ್ಲಿ ನವಚೈತನ್ಯದ ಫಲವ ತುಂಬಿ, ದೇಶಕ್ಕಾಗಿ ಸತ್ಪçಜೆಗಳನ್ನು ರೂಪಿಸುವವರೇ ಶಿಕ್ಷಕರು ಆಗಿದ್ದಾರೆ. ಶಿಕ್ಷಕರನ್ನು ಪೂಜ್ಯನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಗುರು ಅಮೂಲ್ಯ ಪಾತ್ರ ವಹಿಸುತ್ತಾನೆ. ಜನಿಸಿದಾಗ ತಾಯಿಯು ಮೊದಲ ಗುರುವಾದರೆ, ಮುಂದಿನ ಬದುಕಿನ ವಿವಿಧ ಘಟ್ಟಗಳಲ್ಲಿ, ಸಾಧನೆಯ ಪಥದಲ್ಲಿ ಗುರು ಎಂಬ ಎರಡಕ್ಷರದ ಶಕ್ತಿಯು ಒಂದು ಹೊಸತನದ ಬೆಳಕೇ ಆಗಿರುತ್ತದೆ. ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಬಾಳಗೆ ಬೆಳಕಾಗಿ ಸಾಧನೆಯ ಶಿಖರವನ್ನು ಮುಟ್ಟಲು ದಾರಿದೀಪವಾಗುತ್ತಾನೆ. ನಾವು ಬದುಕಿನಲ್ಲಿ ಎನನ್ನಾದರೂ ಸಾಧನೆ ಮಾಡುತ್ತೇವೆ ಎಂದರೆ ಅದೆಲ್ಲಕ್ಕೂ ಗುರುವೇ ಸ್ಪೂರ್ತಿ ಅಥವಾ ಯಶಸ್ಸು ಪಡೆಯುತ್ತೇವೆಯೋ ಅದೆಲ್ಲಕ್ಕೂ ಗುರುವಿನ ಮಾರ್ಗದರ್ಶನ ಮತ್ತು ಅನುಗ್ರಹವೇ ಮುಖ್ಯ. ನನ್ನ ಕನಸಿನ ಹಿಂದಿನ ಕಾಣದ ಶಕ್ತಿ ನನ್ನ ಆ ಗುರುಗಳು. ಒಂದು ಕಲ್ಲು ಶಿಲ್ಪಿಯ ಕೈಯಲ್ಲಿ ಉಳಿ ಪೆಟ್ಟು ತಿಂದು ಒಂದು ಸುಂದರ ಶಿಲೆಯಾಗಿ ರೂಪುಗೊಳ್ಳಲು ಶಿಲ್ಪಕಾರನಂತೆ ಅಕ್ಷರದ ಅರಿವು ಮೂಡಿಸಿ, ಉತ್ತಮ ವ್ಯಕ್ತಿತ್ವವುಳ್ಳ, ವಿದ್ಯಾವಂತ ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕನ ಪಾತ್ರ ಅನನ್ಯವಾದುದು. ಶಿಕ್ಷಕ-ಕೇವಲ ಮೂರಕ್ಷರದ ಪದವಲ್ಲ. ಅದು ಇಡೀ ಜಗತ್ತನ್ನೇ ಬೆಳಗುವ ದೀಪ ಎಂದರೆ ತಪ್ಪಾಗಲಿಕ್ಕಿಲ್ಲ.

‘ಅಂಧಕಾರ ನಿರೋತ್ವಾತ ಗುರುಃ ಇತ್ಯ ಭೀಯತೆ’ ಎಂಬ ಸಂಸ್ಕೃತ ಶ್ಲೋಕದಂತೆ, ನಮ್ಮ ಮನದ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವ ಶಕ್ತಿಯೇ ಗುರು. ಗುರುವೆಂದರೆ ಸ್ವಯಂ ತಾನೇ ಉರಿದು, ಬೇರೆಯವರ ಜೀವನ ಬೆಳಗುವ ಮೇಣದ ಬತ್ತಿಯಂತೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಸರ್ಕಾರದಿಂದ ತಾವು ಪಡೆದ ಇಡೀ ಸಂಬಳವನ್ನು ಸದಾ ಬಡ ಮಕ್ಕಳ-ವಿದ್ಯಾರ್ಥಿಗಳ ಶುಲ್ಕ ಭರಿಸಿ, ಊಟ-ಉಪಚಾರ ಮತ್ತು ಭವಿಷ್ಯ ರೂಪಿಸುವದಕ್ಕಾಗಿ ಸದ್ಭಳಕೆ ಮಾಡಿದ ನಾ ಕಂಡ ಶ್ರೇಷ್ಠ ಶಿಕ್ಷಕ ಮತ್ತು ಮಾತೃ ಹೃದಯದ ನನ್ನ ಗುರುಗಳೆಂದರೆ ಅವರೇ ಶ್ರೀ ಜಿ.ಕೆ. ಸರ್. ನಮ್ಮಂತಹ ಅದೇಷ್ಟೋ ಬಡ-ಹಿಂದುಳಿದ ವಿದ್ಯಾರ್ಥಿಗಳ ಬಾಳಿಗೊಂದು ಆಶಾಕಿರಣವಾಗಿದ್ದರು. ಅಜ್ಞಾನವೆಂಬ ಅಂಧಕಾರವನ್ನು ತೊಲಗಿಸಿ, ಜ್ಞಾನದ ದೀವಿಗೆಯನ್ನು ಹಚ್ಚುತ್ತಾ, ನುಡಿದಂತೆ ನಡೆದ ಅಪ್ರತಿಮ ಮತ್ತು ನಾಡು ಕಂಡ ಶ್ರೇಷ್ಠ ಶಿಕ್ಷಣ ತಜ್ಞರಾಗಿದವರು ನನ್ನ ಗುರುಗಳು. ಅದರಲ್ಲಿ ವಿಶೇಷವಾಗಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಜಿ.ಕೆ. ಸರ್ ಅವರು ನಡೆದಾಡುವ ಗ್ರಂಥಾಲಯದಂತಿದ್ದು, ನೆಪೋಲಿನ್, ಪ್ಲೇಟೋ, ಸಾರ್ಕೆಟಿಸ್ ಮತ್ತು ಶ್ರೇಷ್ಠ ತತ್ವಜ್ಞಾನಿಗಳ ನಿದರ್ಶನದೊಂದಿಗೆ ಮಾಡುತ್ತಿರುವ ಪಾಠ-ಪ್ರವಚನ ಬದುಕಿನ ದಾರಿಯನ್ನೇ ಬದಲಿಸಿತು. ಜ್ಞಾನ ಭಂಡಾರವೇ ಆಗಿರುವ ನನ್ನ ಗುರುಗಳು ಸದಾ ಮಕ್ಕಳನ್ನು ಪ್ರೀತಿ- ಮಮತೆಯಿಂದ ಕಾಣುವ ಹೃದಯವಂತಿಕೆಗೆ ಹೆಸರುವಾಸಿಯಾದವರು. ನನಗೆ ಇಂಗ್ಲೀಷ್ ವಿಷಯ ಮತ್ತು ಆ ಗುರುಗಳೆಂದರೆ ಅದೇನೋ ಭಕ್ತಿ-ಗೌರವ.
ಎಲ್ಲರ ಬದುಕಿನಲ್ಲಿ ಗುರು ಎಂದರೆ ಅದೊಂದು ಬದುಕಿನ ಅಡಿಪಾಯವೇ ಸರಿ. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮ ವಹಿಸುತ್ತಾ, ನಿನ್ನ ಗುರಿ ಮುಟ್ಟುವ ತನಕ ಮುನ್ನಡೆ ಎಂಬ ಆತ್ಮಸ್ಥೈರ್ಯ ತುಂಬಿದವರು ನನ್ನ ಆ ಗುರುದೇವರು. ಗುರುವಿನ ಮಾರ್ಗದರ್ಶನದಂತೆ ಸ್ನಾತಕೋತ್ತರ ಪದವಿ ಶಿಕ್ಷಣ ವನ್ನು ಉನ್ನತ ಶ್ರೇಣಿಯಲ್ಲಿ ಪೂರೈಸಿದಾಗ ಭವಿಷ್ಯಕ್ಕೊಂದು ದಿಶೆ ತೋರಿದರು. ನನ್ನೂರು ಮತ್ತು ನಾ ಕಲಿತ ಕಾಲೇಜಿನಲ್ಲಿಯೇ ಉಪನ್ಯಾಸಕನಾಗಿ ಉಪನ್ಯಾಸಕ ವೃತ್ತಿಗೆ ಪಾದಾರ್ಪಣೆ ಮಾಡುವಲ್ಲಿ ಅವಕಾಶ ಕಲ್ಪಿಸಿ ಬದುಕಿಗೊಂದು ದಾರಿ ತೋರಿದವರು. ಸರಳ ಜೀವಿ, ವಿನಯ, ಶಿಸ್ತು, ಕ್ಷಮಾಗುಣ, ಕರುಣಾಮೂರ್ತಿಗಳಾಗಿರುವ ಇಂತಹ ಶಿಕ್ಷಕರು ಸಿಗುವುದು ಅಪರೂಪ. ಇವರೇ ನನ್ನ ಬದುಕಿನ ಅತ್ಯುತ್ತಮ ಶಿಲ್ಪಿಗಳಾಗಿ ಅವರ ಆದರ್ಶ ಮತ್ತು ತೋರಿದ ದಾರಿಯಲ್ಲಿ ಸಾಗುತ್ತಾ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ೨೦೦೯ ರಲ್ಲಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿರುವದಕ್ಕೆ ನಿದರ್ಶನ. ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಬಾಳಲ್ಲಿ ಶಿಕ್ಷಣವೆಂಬ ಜ್ಞಾನಧಾರೆಯೆರದು ಬದುಕು ರೂಪುಗೊಳ್ಳಲು ನನ್ನ ಗುರುಗಳ ಪಾತ್ರ ಅನನ್ಯವಾದದು.
೨೦೨೫ ನೇಯ ವರ್ಷದ ಶಿಕ್ಷಕರ ದಿನದ ಘೋಷವಾಕ್ಯವು “ಮುಂದಿನ ಪೀಳಿಗೆಯ ಕಲಿಕೆದಾರರಿಗೆ ಸ್ಪೂರ್ತಿ ನೀಡುವುದು” ಎಂಬುದಾಗಿದೆ. ಇದು ಶೈಕ್ಷಣಿಕ ಕಲಿಕೆಗೆ ಮಾತ್ರವಲ್ಲದೆ ಕಲಿಯುವವರು ತಮ್ಮ ಆಸಕ್ತಿಗಳನ್ನು ಅನುಸರಿಸಲು, ಸೃಜನಶೀಲರಾಗಿರಲು, ಆತ್ಮವಿಶ್ವಾಸದಿಂದಿರಲು ಪ್ರೇರೇಪಿಸುವಲ್ಲಿ ಶಿಕ್ಷಕರ ಅಮೂಲ್ಯ ಪಾತ್ರದ ಬಗ್ಗೆ ತಿಳಿಸಿಕೊಡುತ್ತದೆ.
ಅದಕ್ಕಂತಲೇ ಪುರಂದರ ದಾಸರು “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ವಾಣಿಯು ಗುರುವಿನ ಮಹತ್ವದ ಸಂದೇಶವನ್ನು ಸಾರಿ ಹೇಳುತ್ತದೆ. ಬದುಕಿನಲ್ಲಿ ಅಕ್ಷರದ ಜ್ಞಾನ, ಜೀವಿಸುವ ಕಲೆ-ಕೌಶಲ್ಯ, ಬದುಕಿನ ಮೌಲ್ಯವನ್ನು ತಿಳಿಸಿ, ಮಕ್ಕಳ ಭಾವೀ ಭವಿಷ್ಯಕ್ಕಾಗಿಯೇ ತಮ್ಮ ಜೀವನದ ಮುಕ್ಕಾಲು ಭಾಗವನ್ನು ಮುಡಿಪಾಗಿಡುವ ಶಿಕ್ಷಕರಿಗೆ, ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನುಗ್ಗಲು ಮಾರ್ಗದರ್ಶನ ಮಾಡುವ ಗುರುಗಳ ಸ್ಮರಣೆಗೆ ಶಿಕ್ಷಕ ದಿನಾಚರಣೆಯೊಂದೇ ಬೇಕೆಂದಿಲ್ಲ. ಶಿಕ್ಷಕ-ಗುರುಗಳನ್ನು ಪೂಜಿಸುವ, ಗೌರವಿಸುವ ಕಾರ್ಯವು ದೈನಂದಿನವಾಗಿ ನಡೆಯಬೇಕು. ಶಿಕ್ಷಕ ಸಮುದಾಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವದರ ಜತೆಗೆ ಅವರಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕ, ಸಮಾಜ, ಪಾಲಕರು-ಪೋಷಕರು ಮತ್ತು ಸಮುದಾಯವು ಕ್ರಮ ಕೈಗೊಳ್ಳಬೇಕಾಗಿದೆ. ನಮ್ಮ ಬದುಕು-ಭವಿಷ್ಯ ರೂಪಿಸಿ ನಮ್ಮನ್ನು ಸನ್ಮಾರ್ಗದತ್ತ ಮುನ್ನಡೆಸುವ ಮತ್ತು ದಾರಿ ತೋರುವ ಗುರುವಿನ ಸ್ಮರಣೆ ಸದಾಕಾಲ ಮಾಡುವಂತಾಗಲಿ. ಶಿಕ್ಷಕರ ದಿನವು ಇತರ ಎಲ್ಲ ದಿನಾಚರಣೆಗಳಂತೆ ಕಾಟಾಚಾರಕ್ಕಾಗಿ ಆಗದಿರಲೆಂಬುದೇ ನನ್ನ ಆಶಯವಾಗಿದೆ.
