ಇಂದು (ಸೆಪ್ಟೆಂಬರ್ ೦೫, ಶುಕ್ರವಾರ) “ಶಿಕ್ಷಕರ ದಿನಾಚರಣೆ” ನಿಮಿತ್ತ ಈ ವಿಶೇಷ ಲೇಖನ
ಲೇಖನ
– ಬಸವರಾಜ ಪೂಜಾರ
ಭೂಮಾಪಕರು
ಯ ಬೂದಿಹಾಳ
ಮೊ: 9535854360
ಉದಯರಶ್ಮಿ ದಿನಪತ್ರಿಕೆ
ನಾನಾಗ ಆಗ ತಾನೆ ಆರನೇ ತರಗತಿಯಿಂದ ಏಳನೇ ತರಗತಿಗೆ ಸೇರಿದ ಪ್ರಾರಂಭದ ದಿನಗಳು. ಏನು ತಿಳಿಯದ ಮುಗ್ಧ ಮನಸ್ಸಿನ ಆಟೋಪಾಠಗಳ ಗಮನ ಹರಿಸುವ ಎಳೆ ವಯಸ್ಸು. ಹೊಸ ತರಗತಿಗೆ ಯಾವ ಕೋಣೆಯಲ್ಲಿ ಕೂಡಬೇಕೆಂಬ ಗೊಂದಲದ ನಡುವೆಯೂ ಶಾಲೆಗೆ ಹಾಜರಾದೇವು. ಕಡಿಮೆ ಕೋಣೆಗಳನ್ನೊಳಗೊಂಡ ಒಂದು ಪುಟ್ಟ ಹಳ್ಳಿಯ ಸರ್ಕಾರಿ ಶಾಲೆ. ಮೈದಾನದ ಬೆಂಗಾಳಿ ಮರ, ಬೇವಿನ ಮರದ ಕೆಳಗಡೆ ತರಗತಿಯನ್ನು ನಡೆಸುವ ಎಸಿ ಕ್ಲಾಸ್ ರೂಮಿನ ಕಾಲವದು. ಅಂತಹದರಲ್ಲಿ ನಮ್ಮ ಏಳನೇ ತರಗತಿಗೂ ಮುಖ್ಯೋಪಾಧ್ಯಾಯರ ಕೋಣೆಯ ನಡುವೆ ಟಿಜೂರಿಗಳಷ್ಟೇ (ಕಪಾಟಗಳು) ಅಡ್ಡಲಾಗಿ ನಿಂತಿದವು. ಹೀಗಾಗಿ ಈ ತರಗತಿಗೆ Z+ ಸೆಕ್ಯೂರಿಟಿ ತರ ಮುಖ್ಯೋಪಾಧ್ಯಾಯರ ಮತ್ತು ತರಗತಿ ಶಿಕ್ಷಕರ ಕಣ್ಣು ಸದಾ ನಮ್ಮ ಮೇಲೆಯೇ, ಬಾಯಿ ಬಿಡುವಂತಿಲ್ಲ, ಮಾತನಾಡುವಂತಿಲ್ಲ, ತಿರಗಾಡುವಂತಿಲ್ಲ, ಸುಮ್ಮನೆ ಶಿಕ್ಷಕರೇಳುವ ಪಿನ್ ಡ್ರಾಪ್ ಸೈಲೆಂಟ್ ಖಾಯಂವಾಗಿಬಿಡ್ತು. ಮಕ್ಕಳಾದ ನಮಗೆ ಒಂದಿಷ್ಟು ಇಕಟ್ಟು ಆದರು ಅಲ್ಲಿ ಕಲಿತ ಪಾಠಗಳು ವಿದ್ಯಾರ್ಜನೆಗೆ ಪೌಷ್ಟಿಕಾಂಶಗಳಾದವು. ಮುಖ್ಯೋಪಾಧ್ಯಾಯರ ತರಗತಿಯಲ್ಲಿ ಆಗಾಗ ನಡೆಯುವ ಎಸ್ ಡಿ ಎಂ ಸಿ ಸಭೆ,ಪಾಲಕರ ಸಭೆ,ಶಿಕ್ಷಕರ ಚರ್ಚೆ- ಮಾತುಕತೆಗಳು ಸ್ಪಷ್ಟವಾಗಿಯೇ ಕೇಳುತ್ತಿದ್ದೇವು. ಆದರೆ ಅಷ್ಟೊಂದು ಆ ಮಾತುಗಳು ನಮಗೆ ಅರ್ಥವೇ ಆಗುತ್ತಿರಲಿಲ್ಲ, ಅವುಗಳು ಅನವಶ್ಯಕವು ಎಂಬಂತೆ ತೋರುತ್ತಿದ್ದವು ಶಿಕ್ಷಕರು ಅತ ಕಡೆ ಗಮನ ಹರಸಿಬೇಡಿ ಎಂದಿದ್ದು ಉಂಟು. ಆದರೆ ಒಂದು ದಿನ ಅಲ್ಲಿ ನಡೆದ ಸಭೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.ಅಲ್ಲಿನ ಶಿಕ್ಷಕರಿಗೆ ತರಗತಿಗಳನ್ನು ಹಂಚುವ ಸಮಯವದು, ಮುಖ್ಯೋಪಾಧ್ಯಾಯರು ಎಲ್ಲಾ ಶಿಕ್ಷಕರನ್ನು ಕರೆದು ಸಭೆ ಮಾಡುತ್ತಿದ್ದರು.

ಶಿಕ್ಷಕರು ತಮ್ಮ ತಮ್ಮಲ್ಲಿಯೇ ನನಗೆ ಆ ತರಗತಿ ಬೇಕು ಈ ತರಗತಿ ಬೇಕೆಂದು ತಮ್ಮ ತಮ್ಮಲ್ಲಿಯೇ ಗುಸುಗುಸು ಮಾತನಾಡುತ್ತಾ ಒಂದು ರೀತಿಯ ಗದ್ದಲದ ಗೂಡಾಯಿತ್ತು. ಆಗ ಮುಖ್ಯೋಪಾಧ್ಯಾಯರಿಗೆ ಎಲ್ಲಿಲ್ಲದ ಕೋಪವೋ ಗೊತ್ತಿಲ್ಲ ಎದ್ದು ನಿಂತ ಬಿಟ್ಟರು. ಆಗ ಉಳಿದ ಶಿಕ್ಷಕರು ಅನಿವಾರ್ಯವಾಗಿ ಎದ್ದು ನಿಲ್ಲಬೇಕಾಯಿತು. ಪಟ್ಟಣದಲ್ಲಿ ನಮ್ಮ ಶಾಲೆಯ ಮಕ್ಕಳನ್ನು ಹೈಸ್ಕೂಲ್ ಗೆ ಅಡ್ಮಿಷನ್ ಮಾಡಿಕೊಳ್ಳಕ್ಕೆ ಹಿಂಜರಿಯುತ್ತಿದ್ದಾರೆ. ಈ ಶಾಲೆಯ ಮಕ್ಕಳು ದಡ್ಡರು, ಉಡಾಳರು ಎಂದೆಲ್ಲ ಬೈಯುತ್ತಾರೆ, ಈ ರೀತಿ ನಿರ್ಮಿಸಿದವರು ಯಾರು? ಎಂಬೆಲ್ಲಾ ಅನೇಕ ಪ್ರಶ್ನೆಗಳನ್ನು ನಿಂದಿರಿಸಿಕೊಂಡಯೇ ಕಟುವಾಗಿ ಕೇಳಿದರು. ಮೂಲಾಕ್ಷರಗಳು, ಸ್ವರಗಳು, ಬಳ್ಳಿಗಳು, ಪಕ್ಷಗಳು, ಮಾಸಗಳು, ಮಗ್ಗಿಗಳು ಹೀಗೆ ಹಲವಾರು ವಿಷಯಗಳ ಪ್ರಶ್ನೆಗಳನ್ನು ಕೇಳಿ ಶಿಕ್ಷರಿಗೆ ಪಾಠಮಾಡಿದರು, ನಾಳೆಯಿಂದ ಎಲ್ಲರೂ ಅಂಕಲಿಪಿ ತೆಗೆದುಕೊಂಡು ಕಲಿಕೊಳ್ಳಬೇಕೆಂಬ ಕಟ್ಟಾಪಣೆಯು ಆಯಿತ್ತು. ಆಗ ಶಿಸ್ತು ಬದ್ದ ಸಮರ್ಥ ಶಿಕ್ಷಕರ ತಂಡ ಸಿದ್ದವಾಯಿತು. ಪಾಠಗಳು , ಪಾಠದ ಜೊತೆಗೆ ಆಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಸಪ್ರಶ್ನೆ, ಆಶು ಭಾಷಣ ಸ್ಪರ್ಧೆ, ವಿಜ್ಞಾನ ಮಾಹೆ ಎಂಬೆಲ್ಲಾ ಅನೇಕ ಕಾರ್ಯಕ್ರಮಗಳು ಹಮ್ಮಿಕೊಂಡು ಸುಂದರವಾದ ಶಾಲಾ ವಾತಾವರಣ ನಿರ್ಮಿಸಿದರು. ಅಲ್ಲಿಂದ ನಮ್ಮ ಶಾಲೆ ಪ್ರತಿಭಾ ಕಾರಂಜಿ, ಪಂದ್ಯಾಟಗಳಲ್ಲಿ, ಓದಿನಲ್ಲಿ ಒಂದು ರೀತಿ ಸೈ ಎನಿಸಿಕೊಳ್ಳತೊಡಗಿತ್ತು. ಈ ಶಾಲೆಯ ಮಕ್ಕಳು ಒಳ್ಳೆಯ ಮೌಲ್ಯಾಧಾರಿತ ಮಕ್ಕಳು, ಓದುತ್ತಾರೆ ಎಂಬೆಲ್ಲಾ ಮಾತುಗಳು ಪಟ್ಟಣದ ಪ್ರೌಢಶಾಲೆಯಲ್ಲಿ ಹರಿದಾಡತೊಡಗಿತ್ತು. ಅಲ್ಲಿಂದಾಚೆಗೆ ಬಂದ ಪ್ರತಿ ಬ್ಯಾಚನಲ್ಲಿಯೂ ಕನಿಷ್ಠ ನಾಲ್ಕೈದು ಜನ ಸರಕಾರಿ ನೌಕರರಾಗಿ ಸರಕಾರದ ಸೇವೆ ಸಲ್ಲಿಸುತ್ತಿದ್ದಾರೆ, ಇಂಜಿನಿಯರ್, ಉನ್ನತ ವ್ಯಾಸಂಗ ಪೂರೈಸಿ ಒಳ್ಳೆಯ ಜೀವನ ರೂಪಿಸಿಕೊಂಡಿದ್ದಾರೆ. ಒಂದಿಷ್ಟು ನೆಮ್ಮದಿಯ ಜೀವನದ ಹಿಂದೆ ಆ ಮುಖ್ಯೋಪಾಧ್ಯಾಯರ ಆಡಳಿತ ವೈಖರಿ ಇಷ್ಟು ಉತ್ತುಂಗವಾಗುವಂತೆ ಮಾಡಿತ್ತು. ಅವರು ಒಬ್ಬ ಕೇವಲ ಉತ್ತಮ ಆಡಳಿತಗಾರರಷ್ಟೇ ಅಲ್ಲ ಉತ್ತಮ ಶಿಕ್ಷಕರು ಆಗಿದರು. ಪಾಠ ಮಾಡಲು ಆರಂಭಿಸಿದರು ತುಂಬಾ ಆಳಕ್ಕೆ ಹೋಗಿ ಬಿಡುತ್ತಿದ್ದರು. ಆ ಭೋದನಾ ಅಂಶಗಳು ಚಿತ್ರ ಕಣ್ಣ ಮುಂದೆಯೇ ಬಂದಂತೆ ಆ ಪಾಠದಲ್ಲಿ ಮಗ್ನರಾಗುವಂತೆ ಮಾಡುತ್ತಿದ್ದರು. ಆಡಳಿತ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೆ ಮುನ್ನಡೆಸುವ ನಾಯಕತ್ವದ ಪಾಠಗಳನ್ನು ಗಮನಿಸುತ್ತಾ ಕಲಿತಿದ್ದೆ ಹೆಚ್ಚು. ಶಿಕ್ಷಕರು ಉತ್ತಮ ಸಮಾಜ ನಿರ್ಮಾಣಿಸುವಲ್ಲಿ ಬಹು ದೊಡ್ಡ ಪಾತ್ರದಾರಿಗಳು. ಅವರ ಕೊಡುಗೆ ಅಪಾರವಾದದ್ದು. ಅಂದು ಬಿತ್ತಿದ ಬೀಜ ಇಂದು ಫಲ ನೀಡುತ್ತಿದೆ. ನನ್ನೆಲ್ಲಾ ಅಕ್ಷರ ಬಿತ್ತಿದ ಅಕ್ಕರೆಯ ಶಿಕ್ಷಕರ ತಂಡಕ್ಕೊಂದು ಸಲಾಂ..
