ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ

32 ನೆಯ ದಿನದ ಶರಣ ಮಾಲಿಕೆಯಲ್ಲಿ ಶರಣೆ ಹನುಮಾಕ್ಷಿ ಗೋಗಿ ಅವರು ಶರಣ ಏಕಾಂತದ ರಾಮಯ್ಯ ಅವರ ಬಗೆಗೆ ಹಲವಾರು ಶಾಸನಗಳನ್ನು ಉಲ್ಲೇಖಿ ಸುವುದರ ಮೂಲಕ ತಮ್ಮ ಅನುಭಾವವನ್ನು ಹಂಚಿಕೊಂಡರು.
ತಮ್ಮ ಬರವಣಿಗೆಗೆ, ಸಂಶೋಧನೆಗೆ ಬೆನ್ನ ಹಿಂದಿನ ಬೆಳಕಾಗಿರುವ ಎಂ.ಎಂ. ಕಲ್ಬುರ್ಗಿ ಅವರನ್ನು ನೆನಪಿಸುತ್ತ
ಶಾಸನ, ವಚನ, ಶರಣ ಸಾಹಿತ್ಯ ಅವರ ಪ್ರೀತಿಯ ವಿಷಯವಾಗಿತ್ತೆನ್ನುವುದು, ತಾವು ಅವರಿಂದ ಕಲಿತದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ನಯ-ವಿನಯದಿಂದ ನುಡಿದರು.
ಉಗ್ರ ಮಾಹೇಶ್ವರ ಪಂಥದ ಏಕಾಂತದ ರಾಮಯ್ಯನವರು ಶೈವ ಬ್ರಾಹ್ಮಣರು. ಇವರ ಮೂಲ ಊರು ಅಲಂದೆ ಸಾಸಿರದಲ್ಲಿಯ ಅಲಂದೆ (ಆಳಂದ). ಅಲ್ಲಿ ಸೋಮನಾಥನ ದೇವಾಲಯವಿದ್ದು, ರಾಮಯ್ಯನವರ ತಂದೆ ಪುರುಷೋತ್ತಮ ಭಟ್ಟರು ಮತ್ತು ತಾಯಿ ಸೀತಾದೇವಿ ಸೋಮನಾಥನ ಆರಾಧಕರಾಗಿದ್ದರು. ಭಕ್ತಿಯಿಂದ ಶಿವನನ್ನು ಏಕಾಗ್ರ ಚಿತ್ತದಿಂದ ಏಕಾಂತದಲ್ಲಿ ಆರಾಧಿಸಿದ್ದಕ್ಕೆ ಏಕಾನ್ತದ ರಾಮಯ್ಯ ಎನ್ನುವ ಹೆಸರು ಇವರಿಗೆ ಬಂತು. ಹರಿಹರನ ರಗಳೆ, ಭೀಮಕವಿಯ ಬಸವ ಪುರಾಣ, ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, ಪಾಲ್ಕುರಿಕೆ ಸೋಮನಾಥನ ಸಿದ್ದೇಶ್ವರ ಪುರಾಣ, ಗುಬ್ಬಿ ಮಲ್ಲಣಾರ್ಯರ ವೀರಶೈವಾಮೃತ ಪುರಾಣ- ಹೀಗೆ ಹಲವಾರು ಗ್ರಂಥಗಳಲ್ಲಿ ಏಕಾಂತ ರಾಮಯ್ಯ ಅವರ ಉಲ್ಲೇಖದ ಪದ್ಯಗಳಿವೆಯೆನ್ನುವುದು, ಅಬಲೂರು ಶಾಸನ, ತಾಳಿಕೋಟೆ ಶಾಸನ, ಕುಡತಿನಿ ಶಾಸನ, ಮರಡಿಪುರ ಶಾಸನ,ಬಂದಳಿಕೆ ಶಾಸನ, ಕೆಂಪನಪುರ ಶಾಸನ, ಹೀಗೆ ಹಲವಾರು ಶಾಸನಗಳ ವಿವರಗಳನ್ನೂ ಸಹ ನೀಡಿದರು.
ಏಕಾಂತದ ರಾಮಯ್ಯನ ಕನಸಿನಲ್ಲಿ ವೇದ್ಯವಾದಂತೆ ಇಡೀ ನಾಡಿನಾದ್ಯಂತ ಶಿವಪೂಜೆ ನಡೆಯಬೇಕು, ಶಿವ ಪಾರಮ್ಯ ಪಸರಿಸಬೇಕು ಎನ್ನುವ ಉದ್ದೇಶದಿಂದ ಶರಣ ಪುಲಿಗೆರೆಯ ಸೋಮನಾಥ ದೇವಸ್ಥಾನಕ್ಕೆ ಬಂದು ಶಿವಭಕ್ತಿ ಸಾರುವರು. ನಂತರ ಅಗ್ಘವಣಿ ಹೊನ್ನಯ್ಯನವರ ಜೊತೆ ಅಬಲೂರಿಗೆ ಬಂದರು. ಅಲ್ಲಿಯ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ನಡೆದ ಪವಾಡ ಸದೃಶ ಘಟನೆಯನ್ನು ನಮ್ಮೊಂದಿಗೆ ಹಂಚಿಕೊಂಡರು. ಈ ಘಟನೆಯಿಂದ ಏಕಾಂತ ರಾಮಯ್ಯನವರ ಭಕ್ತಿಯ ಪರಾಕಾಷ್ಟೆ, ಅವರಲ್ಲಿರುವ ಆಧ್ಯಾತ್ಮದ ಆಳದ ಹರವಿನ ಶಕ್ತಿ ಎಲ್ಲರಿಗೂ ಗೊತ್ತಾಗುವ ಹಾಗೆ ಆಯ್ತು.
ಅಬಲೂರಿನ ಶಾಸನದಲ್ಲಿ 105 ಸಾಲುಗಳಿವೆ. ಇದರಲ್ಲಿ ಶಿರಸ್ಸು ಪವಾಡದ ಘಟನೆ, ಬ್ರಹ್ಮೇಶ್ವರ ದೇವಸ್ಥಾನ ನಿರ್ಮಾಣ, ನಾಲ್ಕು ಬಾರಿ ಬೇರೆ ಬೇರೆ ರಾಜರು ಗ್ರಾಮ ದತ್ತಿ ಕೊಟ್ಟದ್ದರ ವಿವರಗಳಿವೆ. ದೇವಾಲಯದಲ್ಲಿ ಶಿಲ್ಪದ ಜೊತೆಗೆ ಚಿತ್ರ ಶಾಸನ ಬರೆದಿದ್ದು, ಏಕಾಂತದ ರಾಮಯ್ಯನ ಕುರಿತು ಕಾವ್ಯಗಳ ಪ್ರಮಾಣ, ಶಾಸನಗಳ ಪ್ರಮಾಣ, ಶಿಲ್ಪಗಳ ಪ್ರಮಾಣಗಳೆಲ್ಲವೂ ದೊರೆಯುತ್ತವೆ. ಇದರಿಂದ ಏಕಾಂತದ ರಾಮಯ್ಯನವರು 1195 ರವರೆಗೆ ಬದುಕಿದ್ದರೆನ್ನುವುದನ್ನು ತಿಳಿಸಿದರು.
ಏಕಾoತದ ರಾಮಯ್ಯನವರು ಅಷ್ಟಾಂಗಯೋಗದಲ್ಲಿ ಪರಿಣತಿ ಹೊಂದಿದ್ದು, ಅಷ್ಟಸಿದ್ಧಿಗಳನ್ನು ಹೊಂದಿದ್ದರೆನ್ನುವುದು ತಿಳಿಯುತ್ತದೆ. ಏಕಾಂತದ ರಾಮಯ್ಯನವರ ವಂಶಜ ‘ವೀರಶೈವ ಮತಸ್ಥಾಪನಾಚಾರ್ಯ ‘ ಎನ್ನುವ ವಿಶೇಷಣವುಳ್ಳ ಏಕಾಂತ ಬಸವೇಶ್ವರನಿದ್ದ ಎನ್ನುವ ಕೆಂಪನಪುರದ ಶಾಸನ, ರಾಮಯ್ಯನವರ ಹೆಸರಿನಲ್ಲಿ ಮುಳಬಾಗಿಲಿನ ಆವನಿ ಬೆಟ್ಟದಲ್ಲಿ ದೇವಾಲಯ ಇದೆ ಎನ್ನುವುದನ್ನು ಹೇಳುತ್ತಾ, ಏಕಾಂತದ ರಾಮಯ್ಯನವರ ಏಳು ವಚನಗಳು ಸಿಕ್ಕಿವೆ, ಎನ್ನಯ್ಯ ಚೆನ್ನ ರಾಮಿ ತಂದೆ ಮತ್ತು ಎನ್ನಯ್ಯ ಚೆನ್ನರಾಮೇಶ್ವರ ಲಿಂಗ ಅವರ ವಚನಾಂಕಿತವಾಗಿತ್ತು ಎಂದು ಹೇಳುತ್ತಾ, ಅವರ ವಚನಗಳನ್ನು ವಿಶ್ಲೇಷಣೆ ಮಾಡುತ್ತಾ ಲಿಂಗಾಯತ ತತ್ವ ಮತ್ತು ಆಚರಣೆಯ ನಿರೂಪಣೆಗಳನ್ನು ಸರಳವಾಗಿ ತಿಳಿಸಿದ್ದಾರೆ ಎಂದರು. ಕೊನೆಯಲ್ಲಿ ಅಬ್ಬಲೂರಿನ ಸೋಮೇಶ್ವರ ದೇವಾಲಯದಲ್ಲಿ ಇರುವ ಏಕಾಂತದ ರಾಮಯ್ಯನ ಪವಾಡ, ಶರಣರು ಹಾಗೂ ದೇವಾಲಯದ ಬಹಳಷ್ಟು ಚಿತ್ರಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ರಾಮಯ್ಯ, ಕಳಚುರ್ಯ ಬಿಜ್ಜಳ, ಬಸವಣ್ಣ, ಕಲ್ಯಾಣ ಚಾಲುಕ್ಯ ನಾಲ್ಕನೆಯ ವೀರ ಸೋಮೇಶ್ವರ, ಹಾನುಗಲ್ಲಿನ ಕದಂಬ ಮಹಾಮಂಡಳೇಶ್ವರ ಕಾಮರಸರು ಸಮಕಾಲೀನರಾಗಿದ್ದರು. ಆದರೆ ಏಕಾಂತದ ರಾಮಯ್ಯನವರು ಕಲ್ಯಾಣಕ್ಕೆ ಹೋದ, ಬಸವಣ್ಣನವರನ್ನು ಭೆಟ್ಟಿಯಾದ ಕುರಿತು ಖಚಿತ ದಾಖಲೆಗಳಿಲ್ಲ ಎಂದರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಬಹಳಷ್ಟು ಜನ ಶರಣರು ಕಲ್ಯಾಣಕ್ಕೆ ಹೋಗಿಲ್ಲದೆ ಇರಬಹುದು, ತಾವು ಇದ್ದಲ್ಲಿಯೇ ವಚನ ರಚಿಸಿರಬಹುದು ಎಂದು ಹೇಳುತ್ತಾ, ಹನುಮಾಕ್ಷಿ ಗೋಗಿಯವರು ಮಾತನಾಡಿದ್ದು ಓದುಗರಿಗೆ ಮತ್ತು ಅಧ್ಯಯನಶೀಲತೆಗೆ ಬಿಟ್ಟ ವಿಷಯವೆಂದು ಹೇಳಿದರು.
ಇಂದಿನ ದತ್ತಿ ದಾಸೋಹಿಗಳಾದ ಹನುಮಾಕ್ಷಿ ಗೋಗಿ ಅವರು ತಮ್ಮ ತಾಯಿಯವರ ಬಗ್ಗೆ ಅಭಿಮಾನ ಪೂರ್ವಕವಾಗಿ ಮಾತನಾಡಿ, ಅವರ ಜೀವನ ಚಿತ್ರವನ್ನು ಹಂಚಿಕೊಂಡರು.
ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಶರಣೆ ವಿಜಯಲಕ್ಷ್ಮಿ ಹಂಗರಗಿ ಅವರ ಸ್ವಾಗತ, ಶರಣೆ ವಿಜಯಾ ಗೌಡ ಅವರ ವಚನ ಮಂಗಳ ಮತ್ತು ಶರಣೆ ದೀಪಾ ಜಿಗಬಡ್ಡಿ ಅವರ ನಿರೂಪಣೆ ಮತ್ತು ಶರಣು ಸಮರ್ಪಣೆಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.
ವಿಶೇಷ ದತ್ತಿ ಉಪನ್ಯಾಸ – 329
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶಾಸನ ತಜ್ಞೆ ಹಿರಿಯ ಸಂಶೋಧಕಿ ಶ್ರೀಮತಿ ಹನುಮಾಕ್ಷಿ ಗೋಗಿ ಅವರ ತಾಯಿಯವರಾದ ಲಕ್ಷ್ಮಿಬಾಯಿ ಚಂದಪ್ಪ ಗೋಗಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 329
