ಲೇಖನ
– ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ
ಯಡ್ರಾಮಿ
ಕಲಬುರ್ಗಿ ಜಿಲ್ಲೆ.
ಮೋ. 9740499814
ಉದಯರಶ್ಮಿ ದಿನಪತ್ರಿಕೆ
ಹಬ್ಬಗಳ ಪರ್ವಮಾಸ ಶ್ರಾವಣವು ಕಳೆದು ಭಾದ್ರಪದ ಮಾಸವು ಆಗಮಿಸುತ್ತಿದ್ದಂತೆ ವಿಶ್ವದೆಲ್ಲೆಡೆ ಇರುವ ಹಿಂದೂಗಳ ಮನೆ,ಮನದಿ ಸಡಗರ – ಸಂಭ್ರಮ ತುಂಬಿಕೊಳ್ಳುವದು,ಕಾರಣ,ಭಾದ್ರಪದ ಚತುರ್ಥಿ ( ಚೌತಿ ) ಗೆ ಪಾರ್ವತಿ ತನಯ, ಪರಮೇಶ್ವರ ಪ್ರೀತಿಯ ಕುವರ, ವಿಘ್ನ ನಿವಾರಕ,ಸರ್ವ ಗಣಗಳ ಅಧಿಪತಿ, ಮೂಷಿಕ ವಾಹನ, ಮೋದಕ ಹಸ್ತ, ಚಾಮರ ಕರ್ಣ, ಗಜಮುಖ ಶ್ರೀಗಣೇಶನು, ಮಾತೆ ಗೌರಿಯೊಂದಿಗೆ ಆಗಮಿಸುವನು
ಎಲ್ಲೆಡೇ ” ಗಣಪತಿ ಬಪ್ಪಾ ಮೊರಿಯಾ”, ಮಂಗಳ ಮೂರ್ತಿ ಮೊರಿಯಾ, ಜೈ ಗಣೇಶ ಎಂದು ಜೈಕಾರದ ಝೇಂಕಾರ ಮಾಸ ಪೂರ್ಣವು ಮಾರ್ದನಿಸುವದು.

ಗಣಪತಿಯ ಜನನ
ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಆತನು ಪಾರ್ವತಿ ದೇವಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ( ಮೈಮೇಲೆ ಕುಳಿತಿದ್ದಂತ ದೂಳಿನ ಕಣದಿಂದ ) ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ದ್ವಾರದಿ ಕಾವಲು ಕಾಯಲು ಹೇಳಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ.
ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ.
ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವ ಗಣಪ ಬಲು ತುಂಟ, ತರ್ಲೆ. ತನ್ನ ಹುಡುಗಾಟದಿಂದಲೇ, ಕುಬೇರನ ಗರ್ವಭಂಗ ಮಾಡಿದ, ಶಿವನ ಆತ್ಮಲಿಂಗವನು ತಗೆದುಕೊಂಡು ಅಹಂಕಾರದಿ ಹೊರಟಿದ್ದ ರಾವಣನ ಸೊಕ್ಕು ಮುರಿದ, ಮೊಂಡತನದಿಂದ ಶ್ರೀ ಹರಿ ಅವತಾರಿ ಪರಶುರಾಮನ ಜೊತೆ ಕಾದಾಡಿ ವಕ್ರತುಂಡ ಏಕದಂತನಾದ,ಹರಿಹರರಿಗೂ ಕಾಟ ಕೊಟ್ಟು ಪೂಜಿಸಿಕೊಂಡ, ಅಗಸ್ತ್ಯ ಋಷಿಯ ಕಮಂಡಲ ಕದ್ದು ಆಟವಾಡುತ್ತ ಅದರಲ್ಲಿಯ ನೀರನ್ನು ಚೆಲ್ಲಿ, ಕರುನಾಡ ಜೀವನದಿ,ಕಾವೇರಿ ನದಿಯ ಉಗಮಕ್ಕೆ ಕಾರಣೀಕರ್ತನಾದ, ಗಣೇಶ ಅದೇನೆ ಕೀಟಲೆ ಮಾಡಿದರು ಆದರಿಂದ ಬ್ರಹ್ಮಾಂಡಕ್ಕೆ ಮಾಡುತ್ತ, ತರ್ಲೆಯಾಗಿಯೇ ಬೆಳೆಯುತ್ತ ಸಾಗಿದ.
ಗಣೇಶನ ಜ್ಞಾನೋದಯ ಮತ್ತು ವಿವಾಹ
ಗಣೇಶನು ಒಮ್ಮೆ ಆಟವಾಡುತ್ತಿದ್ದಾಗ ತಮಾಷೆಗಾಗಿ ಒಂದು ಬೆಕ್ಕನ್ನು ಗಾಯಗೊಳಿಸಿದ. ಅವನು ಮನೆಗೆ ಹಿಂದಿರುಗಿದಾಗ, ಅವನ ತಾಯಿಯ ಶರೀರದ ಮೇಲೆ ಒಂದು ಗಾಯವನ್ನು ಕಂಡ. ಅವಳು ಹೇಗೆ ಗಾಯಗೊಂಡಳೆಂದು ಕೇಳಿದ. ತಾಯಿ ಪಾರ್ವತಿ ಇದಕ್ಕೆ ಕಾರಣ ಬೇರಾರೂ ಅಲ್ಲ,ಸ್ವಯಂ ಗಣೇಶನೇ! ಎಂದು ತಿಳಿಸಿದಳು. ಆಶ್ಚರ್ಯಗೊಂಡ ಗಣೇಶ ತಾನು ಯಾವಾಗ ಗಾಯಗೊಳಿಸಿದೆನೆಂದು ತಿಳಿಯಲಿಚ್ಛಿಸಿದ.
ಆಗ ಪಾರ್ವತಿ ತಾನೇ ದೇವಿ, ದೈವಿಕಶಕ್ತಿ, ಎಲ್ಲ ಜೀವರಾಶಿಗಳಲ್ಲಿ ಅಂತರ್ಗತವಾಗಿ ಇರುವೆಂದು ಹೇಳಿದಳು. ಆಗ ಗಣೇಶನಿಗೆ ಸ್ತ್ರೀಯರೆಲ್ಲಾ ಅವನ ತಾಯಿಯ ಯಥಾರ್ಥವಾದ ಪ್ರಕಟರೂಪ(ಪ್ರತಿರೂಪ)ವೆಂದು ಜ್ಞಾನೋದಯವಾಯಿತು. ಅವನು ಮದುವೆಯಾಗುವುದಿಲ್ಲವೆಂದು ನಿಶ್ಚಯಿಸಿದ.
ಹೀಗೆ ಗಣಪತಿಯು ಆಜನ್ಮ ಬ್ರಹ್ಮಚಾರಿಯಾಗಿ, ಬ್ರಹ್ಮಚರ್ಯದ ಕಟ್ಟುನಿಟ್ಟಿನ ನಿಯಮಗಳ ಪಾಲಕನಾಗಿ ಉಳಿದು,ಮಹಾತಪಸ್ಸು ಮಾಡುತ್ತಿದ್ದ ಸಮಯದಿ ತುಳುಸಿ ಅವನನ್ನು ನೋಡಿ ಆಕರ್ಷಿತಳಾಗಿ, ಗಣೇಶನಿಗೆ ತನ್ನ ಮದುವೆಯಾಗು ಅಂತ ಕೇಳಿಕೊಳ್ಳುತ್ತಾಳೆ, ಗಣಪತಿ ನಿರಾಕರಿಸುತ್ತಾನೆ, ಆಗ ತುಳುಸಿ,ನನ್ನ ತಿರಸ್ಕಾರ ಮಾಡಿದ ಪರಿಣಾಮ ನೀನು ಇಬ್ಬರನ್ನು ಮದುವೆಯಾಗೆಂದು ಶಾಪ ನೀಡುತ್ತಾಳೆ, ಗಣೇಶನು ಕೂಡ ನೀನು ಗಿಡವಾಗೆಂದು ತುಳುಸಿಗೆ ಶಾಪ ನೀಡುವನು. ಅದಕ್ಕಾಗಿಯೇ ಗಣಪತಿ ಪೂಜೆಗೆ ತುಳುಸಿ ನಿಷಿದ್ಧ. ತುಳುಸಿನೇನೋ ನಿರಾಕರಿಸಿದ ಆದರೆ ಕಾಲಾಂತರದಲ್ಲಿ ಹೃದಯದಲ್ಲಿ ಭಾವನೆಗಳು ಗರಿಗೆದರಲು ಶುರುಮಾಡಿದವು ಮನವು ಪ್ರೇಮಗಾನ ಹಾಡಿತು,ತನಗೂ ಸಂಗಾತಿ ಬೇಕೆಂದು ಬಯಸಿದ, ಆದ್ರೆ ಗಣೇಶನಿಗೆ ಆನೆಯ ತಲೆ ಇದ್ದುದರಿಂದ ಯಾವ ಹುಡುಗಿಯೂ ಅವನನ್ನು ಮದುವೆಯಾಗಲು ಸಿದ್ಧರಿರಲಿಲ್ಲ. ಇತರ ಎಲ್ಲಾ ದೇವರುಗಳಿಗೆ ಸಂಗಾತಿ ಇರುವದು, ಗಣೇಶನನ್ನು ಮತ್ತಷ್ಟು ಕೋಪಗೊಳಿಸಿತು. ಅವನು ದೇವತೆಗಳ (ದೇವತೆಗಳ) ವಿವಾಹಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಾರಂಭಿಸಿದನು. ಯಾವುದೇ ದೇವರ ವಿವಾಹ ಮೆರವಣಿಗೆ ವಧುವಿನ ಮನೆಗೆ ಹೋಗುವ ಹಾದಿಯಲ್ಲಿ ಗುಂಡಿಗಳನ್ನು ಅಗೆಯಲು ಅವನು ಇಲಿಗಳನ್ನು ಕೇಳಿದನು. ದೇವತೆಗಳು ತಮ್ಮ ಮದುವೆಗಳಲ್ಲಿ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ಎದುರಿಸಿದರು. ಗಣೇಶನ ಚಟುವಟಿಕೆಗಳಿಂದ ಬೇಸತ್ತ ದೇವತೆಗಳು ಬ್ರಹ್ಮನಿಗೆ ದೂರು ನೀಡಿದರು, ಬ್ರಹ್ಮನು ಸಮಸ್ಯೆಯನ್ನು ಪರಿಹರಿಸಲು ಒಪ್ಪಿದನು.
ಗಣೇಶನನ್ನು ಮೆಚ್ಚಿಸಲು, ಬ್ರಹ್ಮನು ರಿದ್ಧಿ (ಸಂಪತ್ತು ಮತ್ತು ಸಮೃದ್ಧಿ) ಮತ್ತು ಸಿದ್ಧಿ (ಬೌದ್ಧಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳು) ಎಂಬ ಇಬ್ಬರು ಸುಂದರಿಯರನ್ನು ಸೃಷ್ಟಿಸಿದನು. ಬ್ರಹ್ಮನು ಅವರನ್ನು ಗಣೇಶನಿಗೆ ಮದುವೆ ಮಾಡಿಕೊಟ್ಟನು.
ಆ ದಿನದಿಂದ ಗಣೇಶನನ್ನು ಮೆಚ್ಚಿಸುವವರಿಗೆ ಸಿದ್ಧಿ ಮತ್ತು ರಿದ್ಧಿಯ ಆಶೀರ್ವಾದವೂ ಸಿಗುತ್ತದೆ.
ಗಣೇಶನಿಗೆ ರಿದ್ಧಿ ಮತ್ತು ಸಿದ್ಧಿಯಲ್ಲಿ ಇಬ್ಬರು ಗಂಡು ಮಕ್ಕಳಿದ್ದರು – ಶುಭ (ಶುಭ) ಮತ್ತು ಲಾಭ (ಲಾಭ).
ಗಣೇಶನ ಮಗಳು ಸಂತೋಷಿ ಮಾತಾ (ತೃಪ್ತಿಯ ದೇವತೆ).
ಬಯಲಿಗೆ ಬಂದ ಗಣಪ
ಅದು 1857 ರ ವರ್ಷ ಭಾರತೀಯ ದಂಗೆಗೆ ಪ್ರಸಿದ್ಧವಾಗಿದೆ, ಇದನ್ನು ಸಿಪಾಯಿ ದಂಗೆ, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ, 1857 ರ ದಂಗೆ ಎಂದು ಕೂಡ ಕರೆಯಲಾಗುತ್ತದೆ. ಇದು ಬ್ರಿಟಿಷರ ಆಳ್ವಿಕೆಗೆ ಗಂಭೀರ ಬೆದರಿಕೆಯನ್ನು ಒಡ್ಡಿದ ದಂಗೆಯಾಗಿತ್ತು. ಬಾಲಗಂಗಾಧರ ತಿಲಕ್ ಅವರು ಮಹಾ ದಂಗೆಯ ಪ್ರಮುಖ ನಾಯಕರಲ್ಲಿ ಒಬ್ಬರು. ಭಾರತೀಯರನ್ನು ಹೆಚ್ಚು ಒಗ್ಗೂಡಿಸುವ ಅಗತ್ಯವನ್ನು ನಾಯಕ ಕಂಡರು, ಮತ್ತು ಎಲ್ಲರೂ ಸಮಾನವಾಗಿ ಪೂಜಿಸುವ ಸಾಮಾನ್ಯ ಗಣೇಶನ ವಿಗ್ರಹಕ್ಕಿಂತ ಹೆಚ್ಚಾಗಿ ಜನರನ್ನು ಸೆಳೆಯಲು ಬೇರಾರಿಂದಲೂ ಸಾಧ್ಯವಿಲ್ಲ ಎಂದು ಅರಿತುಕೊಂಡರು.
ಗಣೇಶನನ್ನು “ಎಲ್ಲರಿಗೂ ದೇವರು” ಎಂದು ಪರಿಗಣಿಸಲಾಗಿರುವದನ್ನು ತಿಲಕರು ಗಮನಿಸಿದರು, ಗಣೇಶನನ್ನು ಮೇಲ್ಜಾತಿ ಮತ್ತು ಕೆಳಜಾತಿಗಳ ಸದಸ್ಯರು, ನಾಯಕರು ಮತ್ತು ಅನುಯಾಯಿಗಳು ಸಮಾನವಾಗಿ ಪೂಜಿಸುತ್ತಾರೆಂದು, ಅರಿತು ‘ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ಕಡಿಮೆ ಮಾಡಲು’ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಲು ಅವರು ಗಣೇಶ ಚತುರ್ಥಿಯನ್ನು ರಾಷ್ಟ್ರೀಯ ಹಬ್ಬವಾಗಿ ಜನಪ್ರಿಯಗೊಳಿಸಿದರು.
1893 ರಲ್ಲಿ, ತಿಲಕರು ಗಣೇಶ ಉತ್ಸವವನ್ನು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮವಾಗಿ ಆಯೋಜಿಸಿದರು. ಮಂಟಪಗಳಲ್ಲಿ ಗಣೇಶನ ಚಿತ್ರಗಳಿರುವ ದೊಡ್ಡ ಫಲಕಗಳನ್ನು ಹಾಕಿದರು ಮತ್ತು ಹಬ್ಬದ ಹತ್ತನೇ ದಿನದಂದು ಬೃಹತ್ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂಪ್ರದಾಯದ ಹಿಂದಿನ ವ್ಯಕ್ತಿ ಅವರೇ ಆದರೂ. ಸಾರ್ವಜನಿಕ ಸಾಮಾಜಿಕ, ರಾಜಕೀಯ ಸಭೆಗಳನ್ನು ಬ್ರಿಟಿಷರು ನಿಷೇಧಿಸಿದ್ದ ಸಮಯದಲ್ಲಿ, ಈ ಉತ್ಸವವು ಎಲ್ಲಾ ಜಾತಿ ಮತ್ತು ಸಮುದಾಯಗಳ ಸಾಮಾನ್ಯ ಜನರಿಗೆ ಸಭೆ ಸೇರುವ ಸ್ಥಳವಾಗಿಸಿದರು, “ಸ್ವರಾಜ್ಯವೇ ನನ್ನ ಜನ್ಮ ಸಿದ್ದ ಹಕ್ಕು ಎಂದು ಗುಡುಗಿದರು. ಭರತ ಭುವಿಯ ಸಕಲರಲ್ಲೂ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದರು, ಅದಕ್ಕೆ ಗಣೇಶನ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡರು. ಹೀಗೆ ಸ್ವಾತಂತ್ರೋತ್ಸವಕ್ಕಾಗಿ ಬಯಲಿಗೆ ಬಂದ ಗಣಪತಿ, ಅಂದು, ಸುಮ್ಮನೆ ಮನೆಯ ಮಾಡಿನಲ್ಲಿದ್ದ ನಾನು ಯಾಕಾದ್ರೂ ಬಯಲಿಗೆ ಬಂದೆ ಅಂತ ಮರಗುತ್ತಿದ್ದಾನೆ, ಈ ಭಾದ್ರಪದ ಮಾಸವಾದ್ರೂ ಯಾಕೆ ಬರುತ್ತೆ ಚಿಂತಿಸುತ್ತಿದ್ದಾನೆ ಕಾರಣ ಗಣಪತಿ ಹೆಸರಿಂದ ಮಾನವರು ಮಾಡುತ್ತಿರುವ ನಾನಾ ಅವಾಂತರಗಳು, ಹರಿಹರ ಬ್ರಹ್ಮಾದಿಗಳಿಂದ ಹಿಡಿದು ಸುರಾಸುರರು, ಯಕ್ಷಗಂಧರ್ವ, ಕಿಂಪುರುಷರು, ಆದಿಯಾಗಿ ಇಡಿ ಬ್ರಹ್ಮಾಂಡದ ಸಕಲ ಜೀವರಾಶಿಗಳು ಪೂಜಿಸುವ ದಿವ್ಯಶಕ್ತಿ ಶ್ರೀ ಗಣಪತಿ ಸನ್ನಿದಿಯಲ್ಲಿ ( ಮಂಟಪದಿ ) ವೇದ,ಶಾಸ್ತ್ರ, ಮಂತ್ರ ಘೋಷ, ಮೊಳಗಬೇಕು, ಪುರಾಣ ಪ್ರವಚನ ಸಂಕೀರ್ತನ ನುಡಿಯಬೇಕು, ಆದ್ರಲ್ಲಿ ಅವಾಚ್ಯಾ ಪದ ಪುಂಜಗಳ ಗೀತೆಯೊಂದಿಗೆ, ನಂಗಾನಾಚ್ ನಡೆದು, ಕಾಮದ ಕಿಚ್ಚು ಹೊತ್ತಿಸುತ್ತಿದೆ, ದೂಪದ ಪರಿಮಳ ಪಸರಿಸಬೇಕಾದ ಸ್ಥಳದಿ, ಮದ್ಯಪಾನ, ಬೀಡಿ, ಸಿಗರೇಟ್ ಘಾಟು ದುರ್ಗಂಧ ಬೀರುತ್ತಿದೆ.
ರಂಗು ರಂಗಿನ ರಂಗೋಲಿಯ ಬದಲು, ಗುಟುಕಾ, ತಂಬಾಕು, ಯಾರು ಬಿಡಿಸಲಾಗದ, ವಿಧ ವಿಧವಾದ ಚಿತ್ತಾರವ ಬಿಡಿಸಿದೆ, ಘಂಟೆಯ ಸುನಾದಕ್ಕಿಂತ ಅತಿಯಾಗಿ, ಇಸ್ಪೇಟ್ ಚಪಾಯಿಸುವ ಶಬ್ದ ಕೇಳಿಬರುತ್ತಿದೆ ಅಂದ್ರೆ ಎಲ್ಲಿಗೆ ಬಂತು ನಮ್ಮ ಸಂಸ್ಕೃತಿ? ಇದೇನಾ ನಮ್ಮಯ ಭವ್ಯ ಸಂಸ್ಕೃತಿ, ಹಾಗಂತ ಎಲ್ಲರು ಹೀಗೆ ಮಾಡುತ್ತಾರೆ ಅಂತ ನಾನು ಹೇಳುತ್ತಿಲ್ಲ, ಹೀಗೆಲ್ಲ ಮಾಡುವವರು, ಮಾಡುತ್ತಿರುವವರು ಮಾಡಬೇಡಿರೆಂದು ವಿನಂತಿಸುತ್ತಿದ್ದೇನೆ. ಏಕೆಂದ್ರೆ ನಮ್ಮ ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲಿ, ಒಂದು ಉನ್ನತವಾದ ಶ್ರೇಷ್ಠ ಗೌರವ, ಸ್ಥಾನಮಾನವಿದೆ ದಯವಿಟ್ಟು ಹಾಳು ಮಾಡದೆ, ಉಳಿಸಿರಿ, ಬೆಳಸಿರಿ.
ಕೊನೆಯ ಮಾತು
ಗಣೇಶನ ಹೆಸರನಲ್ಲಿ, ಹಾದಿಬೀದಿಯಲ್ಲಿ ಹೋಗುವವರಿಗೆ ಅಡ್ಡಗಟ್ಟಿ, ಮತ್ತು ವ್ಯಾಪರಸ್ತರಿಗೆ ದೇಣಿಗೆ, ಕಾಣಿಕೆ ಅಂತ ತೊಂದರೆ ಕೊಡಬೇಡಿ, ಕೇಳಿ ಅವರು ಸಂತೋಷದಿ ಕೊಟ್ಟರೆ ತಗೊಳ್ಳಿ ಅದು ತಪ್ಪಲ್ಲ, ಆದ್ರೆ ಇಷ್ಟು ಕೊಡಲೆಬೇಕೆಂದು ಅವಾಜ್, ಬೆದರಿಕೆ ಹಾಕಬೇಡಿ ಇದು ಗಣೇಶನ ಪೂಜೆಗೆ ಯೋಗ್ಯವು ಅಲ್ಲ,ಗಣೇಶ ಯಾರಿಂದಲೋ ಕಿತ್ತುಕೊಂಡು ಬಂದು ಆಡಂಬರದ ಪೂಜೆ ಮಾಡಿರೆಂದು ಎಲ್ಲೂ ಹೇಳಿಲ್ಲ, ತಾವು ಹೀಗೆ ಮಾಡಿದರೆ ಗಣಪತಿಗೆ ಅಪಮಾನ ಮಾಡಿದಂತೆಯೇ ಸರಿ, ನಿರ್ಮಲ, ಪರಿಶುದ್ಧವಾದ ಭಕ್ತಿಯಿಂದ ಗರಿಕೆ ( ಹುಲ್ಲು )ಸಮರ್ಪಿಸಿದರೆ ಸಾಕು ಸಂತೃಪ್ತನಾಗಿ ಪ್ರಸನ್ನನಾಗುವ ಕರುಣಾಮಯಿ ನಮ್ಮ ಗಣೇಶ ಅಲ್ಲವೇ,? ಜೈ ಗಣೇಶ..
