ಲೇಖನ
– ಮಲ್ಲಪ್ಪ ಸಿದ್ರಾಮ ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಪ್ರಾಣಿಪ್ರೀಯ ತಜ್ಞ ಜಾನ್ ಬಿಲ್ಲಿಂಗ್ಸ್ ಅವರ ಪ್ರಕಾರ, “ಈ ಜಗತ್ತಿನಲ್ಲಿ ತನ್ನ ಮಾಲಿಕನ ಮೇಲೆ ವಿಶ್ವಾಸ, ಪ್ರೀತಿ, ನಂಬಿಕೆಯುಳ್ಳ ಮತ್ತು ತನ್ನ ಜೀವದ ಹಂಗು ತೊರೆದು ಮನೆಯ ಒಡೆಯನನ್ನು ರಕ್ಷಿಸುವ ಏಕೈಕ ಪ್ರಾಣಿ ಎಂದರೆ ಅದುವೇ ಶ್ವಾನ” ಎಂದು ಹೇಳಿದ್ದಾರೆ. ಅನಾದಿ ಕಾಲದಿಂದಲೂ ಮಾನವನ ಸಾಕು ಪ್ರಾಣಿಗಳಲ್ಲಿ ಅತ್ಯಂತ ನಂಬಿಕಸ್ಥ ಸಾಕು ಪ್ರಾಣಿ ಎಂದರೆ ನಾಯಿ. ತನ್ನ ಮಾಲಿಕ ಮತ್ತು ಆತನ ಮನೆಯನ್ನು ಕಾಯುತ್ತಾ ಪ್ರೀತಿಯ ಹಾಗೂ ನಂಬುಗೆಯ ಪ್ರಾಣಿಯಾಗಿದೆ. ಎಲ್ಲ ಪ್ರಾಣಿಗಳಲ್ಲಿ ಅತ್ಯಂತ ಚುರುಕು ಬುದ್ದಿಯಾದ ನಾಯಿ ಮನೆಗಳಲ್ಲಷ್ಟೇ ಅಲ್ಲದೇ ಪೋಲೀಸ್ ಹಾಗೂ gಕ್ಷಣಾ ಪಡೆಯಲ್ಲಿಯೂ ವಿಶಿಷ್ಟ ಸ್ಥಾನವನ್ನು ಪಡದಿರುವುದು ಇನ್ನೊಂದು ವಿಶೇಷ. ಬೇಟೆ, ಕಾವಲು ಕಾಯಲು ಹಾಗೂ ಸ್ಫೋಟಕಗಳನ್ನು ಪತ್ತೆ ಹಚ್ಚುವಲ್ಲಿ ಶ್ವಾನದ್ದು ಎತ್ತಿದ ಕೈ. ಈ ನಾಯಿಯು ವಿಶ್ವಾಸಕ್ಕೆ ಹೆಸರುವಾಸಿಯಾಗಿರುವದರಿಂದ ಸಿಂಡಿಕೇಟ್ ಬ್ಯಾಂಕ್ ಸಹಿತ ತನ್ನ ಬ್ಯಾಂಕಿನ ಚಿನ್ಹೆಯನ್ನಾಗಿ ‘ನಾಯಿ’ ಎಂಬ ನಂಬುಗೆಯ ಪ್ರಾಣಿಯನ್ನೇ ಬಳಸಿರುವುದು ಅದರ ವಿಶೇಷತೆಗೆ ಹಿಡಿತ ಕೈಗನ್ನಡಿಯಾಗಿದೆ. ಹಿಂದಿ ಚಲನಚಿತ್ರದಲ್ಲಿ ನಟ ಜಾಕಿಶ್ರಾಪ್ ಜೊತೆ ‘ತೇರಿ ಮೇರಿ ಬಾನಿಯಾ’ ದಲ್ಲಿ ನಾಯಿಯು ಹೀರೋ ಆಗಿ ನಟಿಸಿದ ವಿಶೇಷ ಇಡೀ ಜಗತ್ತಿನಲ್ಲಿಯೇ ಅವೀಸ್ಮರಣೀಯವಾದುದು. ಅದರಲ್ಲೂ ನಮ್ಮ ಮುಧೋಳದ ನಾಯಿಯು ಗೌರವಾನ್ವಿತ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಭದ್ರತಾ ಪಡೆಯಲ್ಲಿ ಸ್ಥಾನ ಪಡೆದಿರುವುದು ಇನ್ನೊಂದು ವಿಶೇಷವೆಂದೇ ಹೇಳಬಹುದು.
೨೦೧೧ ರಲ್ಲಿ ದೇವಸ್ಥಾನದಲ್ಲಿ ಏಕಾಂಗಿಯಾದ ಕಂಡ ನಾಯಿ ಮರಿಯನ್ನು ಎತ್ತಿಕೊಂಡು ನಮ್ಮ ಮನೆಯಲ್ಲಿ ಸಾಕಬೇಕೆಂದುಕೊಂಡು ಎತ್ತಿಕೊಂಡೆ. ನಮ್ಮ ಮನೆಯ ನಾಯಿಯನ್ನು ನಾವೆಲ್ಲ ಪ್ರೀತಿಯಿಂದ ಪಿಂಟ್ಯಾ ಎಂದು ಕರೆಯುತ್ತಿದ್ದೇವು. ನನ್ನನ್ನು ಕಂಡರೆ ತನ್ನ ಬಾಲವನ್ನು ಅಲ್ಲಾಡಿಸುತ್ತಾ ತನ್ನ ಅಚಲ ನಂಬಿಕೆಯನ್ನು ಮತ್ತು ಅದೇನೋ ವಿಶೇಷವಾದ ಪ್ರೀತಿ ಅದಕ್ಕೆ. ಸುಮಾರು ೧೧ ವರ್ಷಗಳ ಹಿಂದೆ ತಂದು ಸಾಕಿದ ಈ ಪಿಂಟ್ಯಾ ಮನೆಯವರೆಲ್ಲರೂ ಪ್ರೀತಿಗೆ ಪಾತ್ರರಾಗಿ ಮನೆಯ ಸದಸ್ಯರಲ್ಲೊಬ್ಬನಂತೆ ಅಚ್ಚುಮೆಚ್ಚಿನ ಪ್ರಾಣಿಯಾಗಿದೆ. ನಾನು ತೋಟಕ್ಕೆಂದು ಹೋದಾಗ ತುಂಬಾ ಅಕ್ಕರೆಯಿಂದ ಓಡಿ ಬಂದು ಪ್ರೀತಿ ತೋರಿಸುವ ನನ್ನ ಮುದ್ದಿನ ಅ ಪಿಂಟ್ಯಾ. ಪರ‍್ಲೆ ಗೋಲ್ಟ್ ಬಿಸ್ಕಿಟ್ ಅಂದರೆ ತುಂಬಾನೇ ಇಷ್ಟ. ಒಂದು ದಿನ ರಾತ್ರಿ ಅದೇನೋ ಕೆಟ್ಟ ಗಳಿಗೆ ಮೋಟರ್ ಬೈಕ್ ಬಡಿದು ನನ್ನ ಸಾಕು ನಾಯಿ ಪಿಂಟ್ಯಾ ಮೇಲೇಳದೇ ಅಲ್ಲೇ ಒದ್ದಾಡುತ್ತಿದ್ದನ್ನು ಕಂಡು ನನ್ನ ಮನವು ಮರಗಿತು. ನಂತರ ವಾಸಿಯಾದ ನಂತರ ಮತ್ತೆ ನಡೆಸಿದ ಓಡಾಟ ಕಂಡು ನನಗೆ ಸಂತಸದ ತಂದಿತು. ಏನಪ್ಪ ಇವರು ಯಾವುದರ ಬಗ್ಗೆ ಹೇಳಕ್ಕೆ ಹೋರಟಿದ್ದಾರೆ ಎಂದು ಆಶ್ಚರ್ಯಪಡೆಬೇಡಿ.

ಇಡೀ ಜಗತ್ತಿನಲ್ಲಿಯೇ ಅಗಷ್ಟ ೨೬ ರಂದು ಇಡೀ ಪ್ರಾಣಿ ಸಂಕುಲದಲ್ಲಿಯೇ ವಿಶ್ವಾಸ, ನಂಬಿಕೆ ಮತ್ತು ಪ್ರೀತಿಗೆ ಹೆಸರುವಾಸಿಯಾದ ಶ್ವಾನ “ವಿಶ್ವ ಶ್ವಾನ ದಿನ” ವನ್ನಾಗಿ ಆಚರಿಸಲಾಗುತ್ತಿದೆ. ತಮ್ಮ ಜೀವದ ಹಂಗು ತೊರೆದು ತನ್ನ ಮಾಲಿಕನ ಮನೆ, ಆತ್ಮರಕ್ಷಣೆಗೆ ಸದಾ ಸನ್ನದ್ಧರಾಗಿ ನಿಲ್ಲುವ ನಾಯಿಯನ್ನು ಸಂರಕ್ಷಿಸುವ, ಪಾಲನೆ-ಪೋಷಣೆ ಮಾಡುವ ಮತ್ತು ಯಾರ ಆಶ್ರಯವಿಲ್ಲದೇ ಅನ್ನಕ್ಕಾಗಿ ಹಾತೊರೆತ್ತಿರುವ ಬೀದಿ ನಾಯಿಗಳ ರಕ್ಷಣೆಗಾಗಿ ಪ್ರತಿವರ್ಷ ಅಗಷ್ಟ ೨೬ ರಂದು ವಿಶ್ವ ನಾಯಿ ದಿನವನ್ನು ಆಚರಿಸಲಾಗುತ್ತಿದೆ.
ಸಾಕು ಪ್ರಾಣಿತಜ್ಷರೆಂದೇ ಜಗತ್ಪçಸಿದ್ದರಾದ ಕಾಲೀನ್ ಪೇಜ್ ಅವರು ೨೦೦೪ ರಲ್ಲಿ ತನ್ನ ಸಾಕಿದ ಮಾಲಿಕನ ಮನೆ, ಜೀವ ರಕ್ಷಿಸಿ, ಆತನಿಗೆ ಸದಾ ಋಣಿಯಾಗುವ ಮತ್ತು ಎಲ್ಲ ಪ್ರಾಣಿಗಳಲ್ಲಿಯೇ ನಂಬಿಕೆಯ ಪ್ರಾಣಿ ಎನಿಸಿದ ನಾಯಿಗಳ ರಕ್ಷಣೆಗಾಗಿ ಈ ದಿನವನ್ನು ಆಚರಿಸಲು ಕರೆ ಕೊಟ್ಟರು. ಅದಕ್ಕಾಗಿ ಆಹಾರವಿಲ್ಲದೇ ಅನಾಥವಾಗಿರುವ ಬೀದಿ ನಾಯಿಗಳಿಗೆ ಸೂಕ್ತ ಆಶ್ರಯ ನೀಡಿ ಅವುಗಳ ರಕ್ಷಿಸಬೇಕು, ಪ್ರಾಣಿ ಸಂಕುಲವನ್ನು ಕಾಪಾಡಬೇಕು, ಮನೆಯಲ್ಲಿ ಸಾಕಬೇಕು ಮತ್ತು ರಸ್ತೆ ಬದಿಯಲ್ಲಿ ಅದೇಷ್ಟೋ ನಾಯಿಗಳು ಸಾವು-ಬದುಕಿನ ನಡುವೆ ಹೋರಾಡುವ ನಾಯಿಗಳಿಗೆ ಆಸರಯ ಕಲ್ಪಿಸಬೇಕೆಂಬ ಮಹೋನ್ನತವಾದ ಉದ್ಧೇಶದಿಂದ ಸಾರ್ವಜನಿಕರಲ್ಲಿ ಮತ್ತು ಪ್ರಾಣಿಪ್ರೀಯರಲ್ಲಿ ಜಾಗೃತಿ-ಅರಿವು ಮೂಡಿಸುವುದೇ ಈ ದಿನವು ಮಹತ್ವದ್ದಾಗಿದೆ.
ಮೂಕ ಪ್ರಾಣಿಯಾದ ನಾಯಿಯ ಮೇಲೆ ಪ್ರೀತಿ ತೋರಿಸಿ ಮಾನವನ ಅತ್ಯಂತ ನಂಬುಗೆಯ ಪ್ರಾಣಿ ನಾಯಿಯ ರಕ್ಷಣೆಗೆ ಮುಂದಾಗಿ ಎಂಬ ಸಂದೇಶ ಈ ದಿನದ ಆಚರಣೆಯಲ್ಲಿದೆ.
ಕಾಲೀನ್ ಪೇಜ್ ೧೦ ವರ್ಷದ ಮಗುವಾಗಿದ್ದಾಗಲೇ ಉತ್ಕಟವಾದ ಬಯಕೆಯಿಂದ ರಸ್ತೆ ಬದಿಯಲ್ಲಿ ಆಹಾರವಿಲ್ಲದೇ ಅನಾಥವಾಗಿ ಬಿದ್ದಿದ್ದ ನಾಯಿಯನ್ನು ತಂದು ಸಾಕಿದ. ಒಂದು ದಿನ ಕಾಲೀನ್ ಪೇಜ್ ಅವರು ಜೀವನ್ಮರಣದ ಹೋರಾಟದಲ್ಲಿದ್ದಾಗ ಆ ಸಾಕು ನಾಯಿ ‘ಶೆಲ್ಟಿ’ ತನ್ನ ಜೀವದ ಹಂಗು ತೊರೆದು ತನ್ನ ಮಾಲಿಕನ ಜೀವ ರಕ್ಷಣೆಗಾಗಿ ವೈದ್ಯರನ್ನು ಕರೆ ತಂದದ್ದು ಮತ್ತು ಪ್ರತಿ ಹಂತದಲ್ಲೂ ಅವರ ಸಂಗಾತಿಯಾಗಿ ನಿಸ್ವಾರ್ಥವಾದ ಮತ್ತು ಅಮೂಲ್ಯವಾದ ಸೇವೆ ನೀಡಿ ಹೆಸರುವಾಸಿಯಾಗಿತ್ತು. ಆ ನಾಯಿಯ ನೆನಪು ಸದಾ ಉಳಿಯಲಿ ಹಾಗೂ ಇಡೀ ವಿಶ್ವದೆಲ್ಲೆಡೆ ಪ್ರಾಣಿ ಸಂಕುಲದಲ್ಲಿಯೇ ವಿಶ್ವಾಸಕ್ಕೆ ಪಾತ್ರವಾದ ಶ್ವಾನಗಳ ಸಂರಕ್ಷಣೆ ಕಾರ್ಯ ನಡೆಯಲೆಂಬ ಸದುದ್ಧೇಶದಿಂದ ಕಾಲೀನ್‌ರ ಪ್ರಾಣಿ ಪ್ರೀಯರಲ್ಲಿ ಕಳಕಳಿಯ ಮನವಿ ಅವರದ್ದಾಗಿದೆ.
ಅದಕ್ಕಾಗಿ ಮಾನವನ ನಂಬುಗೆಯ ಪ್ರಾಣಿ ನಾಯಿ ಸಂಕುಲವು ಸಂರಕ್ಷಣೆಯಾಗಲಿ ಮತ್ತು ದಾರಿಯಲ್ಲಿ ಆಹಾರವಿಲ್ಲದೇ ಪರಿತಪಿಸುತ್ತಿರುವ ಬೀದಿ ನಾಯಿಗಳಿಗೆ ಕೊಂಚ ಆಹಾರ ನೀಡಿ ಬದುಕಿಗೆ ಆಶ್ರಯವಾಗಬೇಕು ಮತ್ತು ಪ್ರಾಣಿಗಳ ಮೇಲೆ ದಯೆ ತೋರಬೇಕು. ಅಂದಾಗ ಮಾತ್ರ ಈ ವಿಶ್ವ ಶ್ವಾನ ದಿನದ ಆಚರಣೆ ನಿಜಕ್ಕೂ ಅರ್ಥಪೂರ್ಣವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ವಿಶ್ವಾಸ-ನಂಬಿಕೆಗೆ ಹೆಸರುವಾಸಿಯಾದ ಶ್ವಾನವನ್ನು ಸಾಕಿ-ಪೋಷಿಸಿ, ಸಂರಕ್ಷಿಸಿ ಪ್ರಾಣಿ ಸಂಕುಲವನ್ನು ಉಳಿಸಿ-ಬೆಳೆಸಬೇಕೆಂಬುದೇ ನನ್ನ ಆಶಯವಾಗಿದೆ.
