ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ವಿಷಾದ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ಸ್ತ್ರೀಯರನ್ನು ದೇವಿಯೆಂದು ಪೂಜಿಸುವ ನಾಡಿನಲ್ಲಿ ಮಹಿಳೆಯರ ಮೇಲೆ ಪ್ರತಿದಿನವೂ ದೌರ್ಜನ್ಯ ನಡೆಯುತ್ತಿರುವುದು ದುರಂತ ಮತ್ತು ವಿಪರ್ಯಾಸ. ಕಾನೂನು ದೌರ್ಜನ್ಯವನ್ನು ಅಪರಾಧವೆಂದು ಘೋಷಿಸಿದರೂ, ಸಮಾಜದಲ್ಲಿ ಮಹಿಳೆಯ ಸುರಕ್ಷತೆ ಇನ್ನೂ ದೊಡ್ಡ ಪ್ರಶ್ನೆಯಾಗಿದೆ” ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ವಿಷಾದ ವ್ಯಕ್ತಪಡಿಸಿದರು.
ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಮಹಿಳೆಯರ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯವನ್ನು ಖಂಡಿಸಿ ವಿಶ್ವವಿದ್ಯಾಲಯ ಆವರಣದಲ್ಲಿ ಭವ್ಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿಗಳು, ವಿದ್ಯಾರ್ಥಿನಿಯರು ತಮ್ಮ ರಕ್ಷಣೆಗೆ ರಕ್ಷಣಾ ಸಾಮಗ್ರಿಗಳನ್ನು ಹೊಂದಿರಬೇಕು, ಸ್ವರಕ್ಷಣಾ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು ಹಾಗೂ ಯಾವುದೇ ಸಂದರ್ಭದಲ್ಲಿಯೂ ಎದೆಗುಂದದೆ ಪ್ರತಿರೋಧಿಸಬೇಕು ಎಂದು ಸಲಹೆ ನೀಡಿದರು.
“ಯಾವುದೇ ಮಹಿಳೆಯ ಮೇಲಿನ ದೌರ್ಜನ್ಯವನ್ನು ಮಹಿಳಾ ವಿಶ್ವವಿದ್ಯಾಲಯ ಖಂಡಿಸುತ್ತದೆ” ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಯನ ವಿಭಾಗ ಮತ್ತು ಕೇಂದ್ರದ ನಿರ್ದೇಶಕಿ ಪ್ರೊ. ಲಕ್ಷ್ಮಿದೇವಿ ವೈ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಬಸವರಾಜ ಲಕ್ಕಣ್ಣವರ, ಪ್ರಾಧ್ಯಾಪಕರಾದ ಪ್ರೊ.ಪಿ.ಜಿ.ತಡಸದ, ಪ್ರೊ.ಸಕ್ಪಾಲ್ ಹೂವಣ್ಣ, ಡಾ.ರೋಹಿಣಿ ಭೂಸನೂರಮಠ, ಡಾ.ಅಕ್ಷಯ ಯಾರ್ಡಿ, ಡಾ.ಪ್ರಜಾಪತಿ, ಡಾ.ಭಾಗ್ಯಶ್ರೀ ದೊಡಮನಿ, ಡಾ.ಸರೋಜಾ ಸಂತಿ, ಡಾ.ಶಶಿಕಲಾ ರಾಠೋಡ, ಡಾ. ರಜಿಯಾ ನದಾಫ, ಡಾ. ಜಕ್ಕವ್ವಾ ವಠಾರ ಮತ್ತಿತರರು ಉಪಸ್ಥಿತರಿದ್ದರು.
ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳ 1500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಹಿಳೆಯರ ಸುರಕ್ಷತೆಗಾಗಿ ಘೋಷಣೆ ಕೂಗಿದರು.