ವಿಜಯಪುರ: ೨೦೨೫-೨೬ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.
ಕರ್ನಾಟಕ ರಾಜ್ಯದಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಸಹಿತ ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯ ತರಗತಿಗಳು ನಡೆಯುತ್ತಿಲ್ಲ, ರಾಜ್ಯದ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದ ಅವಲಂಬಿತವಾಗಿರುವ ಕಾರಣ ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ತೊಂದರೆಯಾಗುತ್ತಿದೆ, ಬಡ, ಕೂಲಿ ಕಾರ್ಮಿಕರ ಮಕ್ಕಳು ಸರಕಾರಿ ಕ್ಯಾಂಪಸ್‌ಗಳಲ್ಲಿ ಅಧ್ಯಯನ ಮಾಡುವ ಉದ್ದೇಶದಿಂದ ದಾಖಲಾತಿ ಮಾಡಿರುತ್ತಾರೆ, ಆದರೆ ಪ್ರತಿ ವರ್ಷ ಈ ರೀತಿಯ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಹಿಂದುಳಿಯುತ್ತಿದ್ದಾರೆ, ಖಾಸಗಿ ಕಾಲೇಜುಗಳಲ್ಲಿ ಸರಿಯಾಗಿ ತರಗತಿಗಳು ನಡೆದು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಆದರೆ ಶೇಕಡ ೫೦ರಷ್ಟು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿರುವ ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಅನ್ಯಾಯ ಮಾಡಿದಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಹುಡುಕಿಕೊಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರು ಆಗ್ರಹಿಸಿದರು.
ಇದರೊಂದಿಗೆ ತಮ್ಮ ಬೇಡಿಕೆಗಳಾದ ಪ್ರತಿ ವರ್ಷ ನೇಮಕಾತಿ ಸಂದರ್ಭದಲ್ಲಿ ಈ ರೀತಿ ಗೊಂದಲವಾಗುತ್ತಿದ್ದು ಸರ್ಕಾರ ಶಾಶ್ವತ ಪರಿಹಾರ ಹುಡುಕಬೇಕು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಲಿ ಇರುವ ಎಲ್ಲಾ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಮಾಡಬೇಕು. ಸರ್ಕಾರಿ ಕಾಲೇಜುಗಳ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಪ್ರಯೋಗಾಲಯ ಸಲಕರಣೆಗಳು, ಕಂಪ್ಯೂಟರ್, ಇನ್ನಿತರ ಸಲಕರಣೆಗಳನ್ನು ಒದಗಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಸಹ ಕಾರ್ಯದರ್ಶಿಗಳಾದ ಸುಜ್ಞಾತಾ ಕುಲಕರ್ಣಿ, ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಗಿ, ನಗರ ಸಂಘಟನಾ ಕಾರ್ಯದರ್ಶಿ ಶಶಿಕಾಂತ ರ‍್ಯಾಕಲೆ, ಚೇತನ ಕೋರವಾರ, ರಾಜ್ಯ ಕಾನೂನು ವಿಶ್ವವಿದ್ಯಾಲಯಗ ಪ್ರಮುಖರಾದ ಮಂಜುನಾಥ ಹಳ್ಳಿ, ರಾಜ್ಯ ಕಾರ‍್ಯಕಾರಿಣಿ ಸದಸ್ಯರಾದ ಪ್ರವೀಣ ಬಿರಾದಾರ, ಐಶ್ವರ್ಯ ಆಸಂಗಿ, ದಾನಮ್ಮ ಹೊಸಮನಿ, ಸುರೇಶ ಲೋಣಾರ, ಸೋಮಶೇಖರ ರೆಡ್ಡಿ, ಬಾಲಾಜಿ ಬಿರಾದಾರ, ಗೌರೀಶ, ಪ್ರಕೃತಿ ಬಿರಾದಾರ, ಸಹನಾ ಕುಮಟಳ್ಳಿ, ನೂರಾರು ವಿದ್ಯಾರ್ಥಿ/ನಿಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment