ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಗೆಲುವನ್ನು ಬಯಸುವವರೆ ಇಲ್ಲಿ ಎಲ್ಲ ಅಂದರೆ ತಪ್ಪೇನಿಲ್ಲ. ಎಲ್ಲರೂ ಜೀವನದಲ್ಲಿ ಗೆಲುವನ್ನು ಬಯಸದವರು ಯಾರೂ ಇಲ್ಲ. ಮೇಲಿನ ಹೇಳಿಕೆಗಳೇನೋ ಸರಿಯಾಗಿಯೇ ಇವೆ. ಆದರೆ ಈ ಹೇಳಿಕೆಗಳಂತೆ ಎಲ್ಲರೂ ಗೆಲುವನ್ನು ಸಾಧಿಸುವುದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೇ? ಹೌದು ನಿಮಗೆ ಅನಿಸಿದ್ದು ಸರಿ. ಆದರೆ ಗೆಲುವು ಬಯಸುವವರಲ್ಲಿ ಅನೇಕರು ಅಸೂಯೆ ಪಡುವ ಜನರ ಮಾತುಗಳನ್ನು, ನಕಾರಾತ್ಮಕ ಟೀಕೆಗಳನ್ನು ಕೇಳಿ ಸೋಲುಗಳಿಗೆ ಹೆದರಿ ವಿಫಲರಾಗುತ್ತಾರೆ. ಅವರಿಗೆ ತಮ್ಮ ಗೆಲುವಿಗಿಂತ ಜನರ ಮಾತುಗಳೇ ಹೆಚ್ಚು ಪ್ರಭಾವ ಬೀರುತ್ತವೆ! ಗುರಿಯ ಹಾದಿಯಲ್ಲಿ ಬರುವ ಅವಮಾನಗಳೆಲ್ಲವೂ ಒಂದೊಂದು ಉಳಿಪೆಟ್ಟಿದ್ದಂತೆ. ಅವಮಾನಗಳು ಎರಡು ರೀತಿ ಇರುತ್ತವೆ. ಒಂದು ನಿಮ್ಮನ್ನು ನೋಯಿಸಿದರೆ ಇನ್ನೊಂದು ನಿಮ್ಮನ್ನು ಬದಲಾಯಿಸುತ್ತದೆ. ಆದ್ದರಿಂದ ಜನರ ಟೀಕೆಗಳೆಂಬ ಕಲ್ಲುಗಳನ್ನು ಉಪಯೋಗಿಸಿಕೊಂಡು ಗೆಲುವಿನ ಕೋಟೆ ಕಟ್ಟುವುದನ್ನು ರೂಢಿಸಿಕೊಳ್ಳಬೇಕು.
ಕೇಂದ್ರೀಕರಿಸಿ

ನೀವು ಬಲಹೀನರು. ನಿಮ್ಮ ಕೈಯಲ್ಲಿ ಏನೂ ಆಗಲ್ಲ ಎಂದವರನ್ನು ಮರೆಯದಿರಿ. ಅವರೇ ನಿಮಗೆ ಸ್ಪೂರ್ತಿ. ಗೆಲ್ಲುವವರು ಎಂದೂ ನಿರಪಯುಕ್ತ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನೀವು ಒಂದು ವೇಳೆ ಅಂಥ ಮಾತುಗಳಿಗೆ ಗಮನ ಕೊಡದಿದ್ದರೆ ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಸಾಕಷ್ಟು ಧೈರ್ಯವನ್ನು ಹೊಂದಿ ನಿಮಗೆ ವಿಜಯಲಕ್ಷ್ಮಿ ಒಲಿದರೆ, ನಂತರ ಅದೇ ಜನರು ‘ನಾವು ನಿಮಗೆ ಒಂದು ದಿನ ನೀವು ಗೆದ್ದೇ ಗೆಲ್ಲುವಿರಿ. ಜೀವನದಲ್ಲಿ ದೊಡ್ಡದನ್ನು ಸಾಧಿಸುವಿರಿ.’ ಎಂದು ಹೇಳಿದೇವು ಅಲ್ಲವೇ? ಎಂದು ಪ್ರಶ್ನಿಸುತ್ತಾರೆ. ಜನರು ನಿಮ್ಮ ಬಗ್ಗೆ ಅಸೂಯೆಯನ್ನು ವ್ಯಕ್ತಪಡಿಸುತ್ತಿದ್ದಾರೆಂದರೆ ನೀವು ಸರಿಯಾದ ಮಾರ್ಗದಲ್ಲಿದ್ದೀರಿ ಎಂಬುದರ ಸೂಚನೆಯಾಗಿದೆ. ನೀವು ಅವರಿಗಿಂತ ಮುಂದೆ ಹೋಗುತ್ತಿದ್ದೀರೆಂದು ಅವರಿಗೆ ಹೊಟ್ಟೆಕಿಚ್ಚು. ಹೀಗಾಗಿ ಅವರು ಬೀಸುವ ನಕಾರಾತ್ಮಕ ಟೀಕೆಗಳ ಬಲೆಗೆ ಬಲಿಯಾಗದಿರಿ. ಆದ್ದರಿಂದ ನಿಮ್ಮ ಸ್ವಾಭಿಮಾನ ಅಥವಾ ಸಾಮರ್ಥ್ಯವನ್ನು ಅನುಮಾನಿಸಬೇಡಿ. ಜನರು ನಿಮ್ಮ ಬಗ್ಗೆ ಹೊಂದಿದ ನಕಾರಾತ್ಮಕ ಅಂಶಗಳನ್ನು ನಂಬಿ ನೀವು ನಿಷ್ಪ್ರಯೋಜಕರೆಂದು ಭಾವಿಸಿ ಕಡಿಮೆ ಸ್ವಾಭಿಮಾನಕ್ಕೆ ಒಳಗಾಗಬೇಡಿ. ಬದಲಾಗಿ ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸಿ.
ಸ್ವೀಕರಿಸಿ
ಗುರಿಯ ದಾರಿಯಲ್ಲಿ ಬರುವ ಅಡೆತಡೆಯಂತಹ ನಕಾರಾತ್ಮಕ ಜನರನ್ನು ಮಾತ್ರ ದೂರವಿಡಬೇಕು. ದೂರ ಸರಿಸಿದ್ದು ನಮ್ಮೊಂದಿಗೆ ಇರುವುದಿಲ್ಲ. ಆದರೆ ಸ್ವೀಕರಿಸಿದ್ದು ಮಾತ್ರ ನಮಗೆ ಪ್ರತಿಫಲ ನೀಡುತ್ತದೆ. ನಿಮ್ಮ ಗುರಿಗಳನ್ನು ಸಾಧಿಸುವ ವಿಷಯದಲ್ಲಿ ನಿಮ್ಮನ್ನು ಪ್ರೇರೇಪಿಸುವ ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಜನರ ಮೇಲೆ ಗಮನಹರಿಸಿ. ಸೂಕ್ತ ಟೀಕೆಗಳಿಗೆ ಸಲಹೆಗಳಿಗೆ ಮುಕ್ತರಾಗಿರುವುದು ಗೆಲುವಿಗೆ ಅತ್ಯಂತ ಮುಖ್ಯವಾದ ವಿಷಯ. ವಯಸ್ಸಾದ ವ್ಯಕ್ತಿಗಳಿರಬಹುದು, ನಿಮ್ಮ ಮನೆಯ ಹಿರಿಯರಿರಬಹುದು, ಇಲ್ಲವೇ ನಿಮಗಿಂತ ಕಿರಿಯರಿರಬಹುದು ಅವರು ನೀಡಿದ ಸಲಹೆಗಳು ಸೂಕ್ತವೆನಿಸಿದರೆ ಮತ್ತು ಪ್ರಸ್ತುತವೆನಿಸಿದರೆ ಖಂಡಿತ ಸ್ವೀಕರಿಸಿ. ಅದರಂತೆ ನಡೆದುಕೊಳ್ಳಲು ಪ್ರಯತ್ನಿಸಿ. ಅವರಿಗೇನು ತಿಳಿದಿಲ್ಲ ತಿಳಿಯುವುದಿಲ್ಲ ಎಂಬ ಉದಾಸೀನ ಭಾವದಿಂದ ಅವರ ಸಲಹೆ ಸೂಚನೆಗಳನ್ನು ನಿರ್ಲಕ್ಷಿಸಬೇಡಿ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದಾಗ ಉತ್ತಮವಾದುದನ್ನು ಸ್ವೀಕರಿಸುವುದು ಬಹಳ ಮುಖ್ಯ.

ಇಚ್ಛಾಶಕ್ತಿ
ಗುರಿ ತಲುಪಲು ಗುಂಡಿಗೆ ಇದ್ದರೆ ಸಾಲದು. ಇಚ್ಛಾಶಕ್ತಿ ಬೇಕು. ಇಚ್ಛಾಶಕ್ತಿ ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಬೇಕಾಗಿರುವುದು ಬಲವಾದ ಇಚ್ಛಾಶಕ್ತಿ. ಅವರಿವರ ಮಾತಿಗೆ ಬಾರದ ಮಾತುಗಳು ಇಚ್ಛಾಶಕ್ತಿಯನ್ನು ಕುಗ್ಗಿಸುತ್ತವೆ. ಇಚ್ಛಾಶಕ್ತಿ ಎಂದರೆ ನಿಮ್ಮ ಗುರಿಗಳನ್ನು ಸಾಧಿಸುವಾಗ ಪ್ರಲೋಭನೆಗಳನ್ನು ವಿರೋಧಿಸುವ ನಿಮ್ಮ ಸಾಮರ್ಥ್ಯ. ನಿಮ್ಮ ಜೀವನದ ಯಶಸ್ಸಿನಲ್ಲಿ ಇದು ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಕೆಲವು ತಜ್ಞರು ನಂಬುವಂತೆ ಪ್ರತಿಯೊಬ್ಬರಿಗೂ ಇಚ್ಛಾಶಕ್ತಿಯ ಪೂರೈಕೆ ಇರುತ್ತದೆ. ನಿಮ್ಮ ಗುರಿಗಳನ್ನು ತಲುಪುವಲ್ಲಿ ಇಚ್ಛಾಶಕ್ತಿಯು ಪ್ರಬಲ ಸಾಧನವಾಗಬಹುದು. ಜೀವನದಲ್ಲಿ ಸಾಧನೆಯೆಂಬ ಶಿಲೆಯನ್ನು ಕೆತ್ತಲು ಇಚ್ಛಾಶಕ್ತಿ ಬೇಕೇಬೇಕು. ಪ್ರತಿದಿನವೂ ನಿನಗೆ ಯಾರೂ ಬಂದು ಬೆನ್ನು ತಟ್ಟುವುದಿಲ್ಲ. ನಿಮ್ಮ ಇಚ್ಛಾಶಕ್ತಿಯೇ ನಿಮಗೆ ಗುರು ಮುನ್ನುಗ್ಗಿ.
ಮನೋಭಾವ
ಜೀವನವನ್ನು ಗಂಭೀರವಾಗಿ ಪರಿಗಣಿಸದ ಜನರು ಕಟ್ಟೆಯ ಮೇಲೆ ಕುಳಿತು ಆಡುವ ಚಾಡಿ ಮಾತುಗಳು ನೂರಕ್ಕೆ ನೂರರಷ್ಟು ಉಪಯೋಗಕ್ಕೆ ಬಾರದ ಮಾತುಗಳು. ಅಂಥವರು ತಾವೂ ಸಾಧಿಸುವುದಿಲ್ಲ. ಸಾಧಿಸುವವರನ್ನು ಕಾಲೆಳೆಯುತ್ತಾರೆ. ಅವರ ಕಾಲೆಳೆಯುವ ಬುದ್ಧಿಗೆ ಬಲಿಪಶು ಆಗಬಾರದು. ಗುರಿಯಿರದ ವ್ಯಕ್ತಿಗಳು ಹೇಳಿದಂತೆ ನನಗೆ ಯಶಸ್ಸು ಸಿಗುತ್ತಿಲ್ಲ ಎಂದು ಚಿಂತಿಸಬಾರದು. ಯಶಸ್ಸು ರಾತ್ರೋರಾತ್ರಿ ಸಂಭವಿಸುವ ಪ್ರಕ್ರಿಯೆಯಲ್ಲ ಎಂಬುದನ್ನು ಒಪ್ಪಿಕೊಳ್ಳುವುದು. ಯಾರ ಯಶಸ್ಸನ್ನು ಎಂದಿಗೂ ಪ್ರಶ್ನಿಸಬಾರದು. ಏಕೆಂದರೆ ಯಶಸ್ಸು ಎಂದರೆ ನಿಮಗಾಗಿ ಸ್ಪಷ್ಟ ಗುರಿಯನ್ನು ಹೊಂದಿರುವುದು. ಮತ್ತು ನಿಮ್ಮ ಗಮ್ಯಸ್ಥಾನವನ್ನು ತಲುಪಲು ಪ್ರಯತ್ನಿಸುವುದು, ನಿರಂತರ ಶ್ರಮಿಸುವುದು. ಗೆಲುವೆಂಬುದು ಚಿತ್ರವೊಂದರ ರೇಖೆಗಳಿದ್ದಂತೆ ಚಿತ್ರಕಾರನ ಬಳಿ ತಪ್ಪಾದಾಗಲೆಲ್ಲ ಅಳಿಸಲು ರಬ್ಬರ್ ಇರುತ್ತದೆ. ಆದರೆ ಗೆಲುವಿನ ಬಳಿ ಸೋಲೆಂಬ ವಕ್ರರೇಖೆಗಳನ್ನು ಅಳಿಸಲು ರಬ್ಬರ್ ಇರುವುದಿಲ್ಲ. ಆದ್ದರಿಂದ ಸೋಲುಗಳಿಂದ ಪಾಠ ಕಲಿಯುತ್ತಲೇ ಮುನ್ನಡೆಯಬೇಕು. ತಪ್ಪುಗಳಿಂದ ಕಲಿಯುವುದು. ಅಂತಿಮವಾಗಿ ನಾವು ಸಾಧಿಸಿದ್ದರಲ್ಲಿ ಹೆಮ್ಮೆ ಮತ್ತು ಸಾಧನೆಯ ಭಾವನೆಯನ್ನು ಅನುಭವಿಸುವುದು. ಸೋಲುಗಳಿಂದ ಪಾಠ ಕಲಿಯುವ ಮನೋಭಾವ ಹೊಂದಿದ್ದರೆ, ಪೂರ್ಣ ಜಗತ್ತನ್ನೇ ಗೆಲ್ಲಬಹುದು. ಸೋಲಿಗೆ ತೆರೆದುಕೊಳ್ಳಬೇಕು ಅದು ಗೆಲುವಿಗೆ ದಾರಿ ಮಾಡಿಕೊಡುತ್ತದೆ.
ಮನಸ್ಥಿತಿ
ಜನರು ಆಡುವ ಮಾತಿಗೆ ಕಿವಿಗೊಡಬೇಡಿ. ಅವರಿಗೆ ಸಾಬೀತು ಪಡಿಸುವ ಅವಶ್ಯಕತೆಯೂ ನಿಮಗಿಲ್ಲ. ‘ಫೋಕಸ್ ಆನ್ ಇಂಪ್ರೂವಿಂಗ್ ಯುವರ್‌ಸೆಲ್ಫ್ ನಾಟ್ ಪ್ರೂವಿಂಗ್ ಯುವರ್‌ಸೆಲ್ಫ್’ ಸ್ಥಿರವಾದ ಕಠಿಣ ಪರಿಶ್ರಮ, ಹೊಂದಿಕೊಳ್ಳುವ ಮನಸ್ಸು, ಆತ್ಮವಿಶ್ವಾಸ, ಬಲವಾದ ವ್ಯಕ್ತಿತ್ವ, ಸವಾಲುಗಳನ್ನು ಸ್ವೀಕರಿಸುವ ಇಚ್ಛಾಶಕ್ತಿ, ಅಡೆತಡೆಗಳ ಸಮಯದಲ್ಲಿ ಎಂದಿಗೂ ಬಿಟ್ಟುಕೊಡದ ಮನಸ್ಥಿತಿ. ಗೆಲುವಿಗೆ ಪ್ರಮುಖ ಅಂಶಗಳು ಎಂಬುದು ಈಗಾಗಲೇ ಯಶಸ್ಸನ್ನು ಹೊಂದಿರುವ ವ್ಯಕ್ತಿಗಳ ಜೀವನ ಚರಿತ್ರೆಯಿಂದ ತಿಳಿದು ಬರುತ್ತದೆ. ‘ಡೋಂಟ್ ಗೆಟ್ ಅಪ್‌ಸೆಟ್ ವಿಥ್ ಪೀಪಲ್ ಆ್ಯಂಡ್ ಸಿಚ್ಯುವೇಶನ್ಸ್ ಬಿಕಾಸ್ ಬೋತ್ ಆರ್ ಪಾವರ್‌ಲೆಸ್ ವಿದೌಟ್ ಯುವರ್ ರಿಯಾಕ್ಷನ್.’ ಶ್ರಮವು ನಿನ್ನದೇ. ಸಮಯವು ನಿನ್ನದೇ. ಸಾಧಿಸುವ ಛಲವಿದ್ದರೆ ಗೆಲುವು ನಿನ್ನದೇ.
