ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ

26 ನೆಯ ಶರಣ ಮಾಸದ ಅನುಭಾವ ಮಾಲಿಕೆಯಲ್ಲಿ ಶರಣೆ ಜಯಶ್ರೀ ಆಲೂರ ಅವರು ಢಕ್ಕೆಯ ಬೊಮ್ಮಣ್ಣ ಅವರ ಬಗೆಗೆ ಹೇಳುವುದರ ಜೊತೆಗೆ ಅವರ ವಚನಗಳ ಅರ್ಥವನ್ನು ವಿಶ್ಲೇಷಣೆ ಮಾಡುವುದರ ಮೂಲಕ ಅತ್ಯಂತ ಪ್ರಬುದ್ಧವಾಗಿ ತಮ್ಮ ಅನುಭಾವವನ್ನು ಪ್ರಸ್ತುತ ಪಡಿಸಿದರು.
ವಚನಕಾರರ ಆಂದೋಲನದ ಈ ಕಾಲವು ಕನ್ನಡ ಸಾಹಿತ್ಯಕ್ಕೆ ಸಮಾಜಕ್ಕೆ ಒಂದು ಹೊಸ ತಿರುವು ಕೊಟ್ಟಿತು. ಆ ಸಮಯವು ವರ್ಗ ರಹಿತ, ವರ್ಣರಹಿತ, ಲಿಂಗರಹಿತವಾಗಿತ್ತು ಎಂಬುದನ್ನು ಅನೇಕ ವಚನಗಳಲ್ಲಿ ನಾವು ನೋಡಬಹುದಾಗಿದೆ. 12ನೇ ಶತಮಾನದಲ್ಲಿ ಬರುವ ಹೆಚ್ಚು ವಚನಕಾರ ಶರಣರು ಕೆಳವರ್ಗಕ್ಕೆ ಸೇರಿದವರೇ ಆಗಿದ್ದರು. ಸಾಮಾಜಿಕ ನೆಲೆಯ ಬೇರೆ ಬೇರೆ ಸ್ಥರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಬಸವಾದಿ ಶರಣರ ಸಂಪರ್ಕಕ್ಕೆ ಬರುವ ಮುನ್ನ ಡೊಳ್ಳು ಬಾರಿಸುತ್ತಾ ಗುಡಿಯಲ್ಲಿ ತಡಿಯಲ್ಲಿ ಬೇವಿನ ಸೊಪ್ಪನ್ನು ಕಟ್ಟಿಕೊಂಡು ಮಾರಿಯನ್ನು ಮೊರದಲ್ಲಿ ಹಾಕಿಕೊಂಡು ಭಕ್ತರ ಮನೆ ಮನೆ ಮುಂದೆ ನಿಂತು ಬೇಡುವುದು ಇವರ ಕಾಯಕವಾಗಿದ್ದಿರಬಹುದು. ತನುವೆಂಬ ಮೂರದಲ್ಲಿ ಮಾಯಾ ಗುಣವೆಂಬ ಮಾರಿಯ ಹಿಡಿದು.
ಎಂಬ ವಚನದಲ್ಲಿ ಅವರ ವೇಷಭೂಷಣಗಳ ಚಿತ್ರ ಹಾಗೂ ಕಾಯಕದ ಚಿತ್ರ ಸೊಗಸಾಗಿ ಮೂಡಿ ಬಂದಿದೆ.
ಕೈ ಕೈ ಹಿಡಿದು ಕಾದುವಾಗ.
ಕೈದೊ ಕೈಯೊ ಮನವೊ?
ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ,
ಈ ಮೂರಂಗನವರಿದಲ್ಲಿ ಕಾಲಂತ ಭೀಮೇಶ್ವರ ಲಿಂಗವನರಿದುದು. (ವಚನ 921)
ಪ್ರಸ್ತುತ ವಚನದಲ್ಲಿ ಡಕ್ಕೆ ಬೊಮ್ಮಣ್ಣನವರು ಲಿಂಗವನ್ನು ಅರಿಯುವ ಬಗೆಯನ್ನು ವಿವರಿಸಿದ್ದಾರೆ.
ಮನುಷ್ಯನು ಶಸ್ತ್ರಾಸ್ತ್ರ ಹಿಡಿದು ಕದನದಲ್ಲಿ ಕಾದಾಡಿ ಗೆದ್ದರೆ ಆ ಗೆಲುವು ಯಾರದು? ಯುದ್ಧವ ಮಾಡಿದ ಕೈಯದೋ?ಆಯುಧದ್ಯೋ? ಅಥವಾ ಮನಸ್ಸಿನದೋ? ಎಂದು ಪ್ರಶ್ನೆ ಮೂಡಿದಾಗ ಸತ್ಯವೆಂದರೆ ಆ ಗೆಲುವು ಕೇವಲ ಯಾವುದೇ ಒಂದಕ್ಕೆ ಸಲ್ಲದೆ ಕೈ ಆಯುಧ ಮತ್ತು ಮನಸ್ಸಿಗೆ ಸಮಾನವಾಗಿ ಸಲ್ಲುತ್ತದೆ. ಏಕೆಂದರೆ ಕೈ ಆಯುಧಗಳೆರಡು ಇದ್ದು ಯುದ್ಧ ಮಾಡುವ ಮನವಿಲ್ಲದಿದ್ದರೆ? ಅಥವಾ ಯುದ್ಧ ಮಾಡುವ ಮನಸ್ಸು ಆಯುಧ ಎರಡೂ ಎದ್ದು ಕೈಗಳೇ ಇಲ್ಲದಿದ್ದರೆ? ಅದಕ್ಕಾಗಿಯೇ ಹೇಳುವುದು. ಆ ಗೆಲುವಿನಲ್ಲಿ ಮೂರರ ಪಾಲು ಸಮನಾಗಿದೆ. ಹಾಗೆಯೇ ಅಂಗ ಮತ್ತು ಲಿಂಗ ಇವೆರಡು ಸಂಧಿಸುವಾಗ ಅಂಗ ಮುಖ್ಯವೋ, ಲಿಂಗ ಮುಕ್ತವೋ ಅಥವಾ ಅಂಗವು ಜೀವಂತವಾಗಿರಲು ಕಾರಣವಾದ ಆತ್ಮ ಮುಖ್ಯವೋ? ಎಂದು ಕೇಳಿದರೆ ಅಂಗವ ಬಿಟ್ಟು ಆತ್ಮವಿಲ್ಲ. ಆತ್ಮವ ಬಿಟ್ಟು ಲಿಂಗವಿಲ್ಲ ಅದಕ್ಕಾಗಿಯೇ ವಚನಕಾರರು, ‘ಆತ್ಮವೇ ಪರಮಾತ್ಮ ಎಂದಿದ್ದಾರೆ. ಆದ್ದರಿಂದ ಈ ಮೂರನ್ನೂ ಅರಿತುಕೊಂಡವನೇ ನಿಜವಾದ ಕಾಲಂತಕ ಭೀಮೇಶ್ವರ ಲಿಂಗವನ್ನು ಅರಿತವನ್ನು ಎನ್ನುತ್ತಾರೆ ಬೊಮ್ಮಣ್ಣನವರು
ಅವರ ಇನ್ನೊಂದು ವಚನದಲ್ಲಿ 12ನೇ ಶತಮಾನ ಕಾಲಮಾನವು ವರ್ಗರಹಿತ, ವರ್ಣರಹಿತ ಮತ್ತು ಲಿಂಗರಹಿತ ಆಗಿತ್ತು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಹಾಗೆಯೇ ತಮ್ಮ ಸಮಕಾಲಿನ ಎಲ್ಲಾ ವಚನಕಾರರನ್ನು ಹೆಸರಿಸುತ್ತ
“ಎನ್ನ ಹರುಷವೇ ಏಳನೂರೆಪ್ಪತ್ತು ಅಮರಗಣಂಗಳು
ಇಂತಿವರ ಕರುಣದಿಂದಲಾನು ಬದುಕಿದೆನಯ್ಯ” ಎನ್ನುವ ಮಾತನ್ನು ಹೇಳುತ್ತಾ ಅಲ್ಲಿ ಅಂದರೆ ಅನುಭವ ಮಂಟಪದಲ್ಲಿ ತಮ್ಮ ಸಮಕಾಲೀನ 770 ವಚನಕಾರರು ಇದ್ದರು ಎಂಬ ವಿವರಣೆಯನ್ನು ಕೂಡ ನೀಡಿದ್ದಾರೆ.
ಈ ರೀತಿಯಾಗಿ ಡಕ್ಕೆಯ ಬೊಮ್ಮಣ್ಣನವರು ತಮ್ಮ ವಚನಗಳುದ್ದಕ್ಕೂ ಬಹಳಷ್ಟು ಉಪಮೇಯಗಳನ್ನು ಬಳಸಿದ್ದಾರೆ ಎಂಬುದು ನಮಗೆ ತಿಳಿದು ಬರುತ್ತದೆ ತಾವು ಬರೆದ 90 ವಚನಗಳಲ್ಲಿ ಎಲ್ಲಿಯೂ ಸಂಸ್ಕೃತದ ಬಳಕೆಯನ್ನು ಕೂಡ ಮಾಡಿಲ್ಲ. ದೇಶಿಯ ಸಂಸ್ಕೃತಿಯನ್ನು ವಚನ ಚಳುವಳಿಯಲ್ಲಿ ಬಳಸಿ, ಬೆಳೆಸಿರುವುದು ನಮಗೆ ತಿಳಿದು ಬರುತ್ತದೆ ಎನ್ನುವುದನ್ನು ಹಂಚಿಕೊಂಡರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಇಂದಿನ ಉಪನ್ಯಾಸಕರನ್ನು ಶ್ಲಾಘನೆ ಮಾಡುತ್ತಾ, ದತ್ತಿ ದಾಸೋಹಿ ಗಳಾದ ಸುಧಾ ಪಾಟೀಲ ಅವರ
ಮನೆತನದ ಬಗೆಗೆ ಅಭಿಮಾನದಿಂದ ಮಾತನಾಡಿ, ಢಕ್ಕೆಯ ಬೊಮ್ಮಣ್ಣ ಅವರ ಬಗೆಗೆ ಇನ್ನಷ್ಟು ಮಾಹಿತಿ ಯನ್ನು ಹಂಚಿಕೊಂಡರು.
ಶ್ರೀಯುತ ಎಸ್. ಎನ್. ಕಾತರಕಿ ಅವರು ಸುಧಾ ಪಾಟೀಲ ಅವರ ತಂದೆ ಲಿಂ. ಬಿ. ಎಂ. ಪಾಟೀಲ ಅವರ ಸೇವಾ ನಿಷ್ಠತೆ, ಕಾರ್ಯತತ್ಪರತೆ,ಶಿಸ್ತು, ಸಂಯಮ, ತಮ್ಮಿಬ್ಬರ ಸ್ನೇಹಪರತೆಯನ್ನು ಎಳೆ ಎಳೆ ಯಾಗಿ ಶರಣರ ವಚನ, ಕವಿಗಳ ವಾಣಿಗಳ ಮುಖಾಂತರ ಅತ್ಯಂತ ಆತ್ಮೀಯವಾಗಿ ಮಾತನಾಡಿದರು.
ಶರಣೆ ಲಲಿತಾ ಅಂಗಡಿ ಅವರ ವಚನ ಪ್ರಾರ್ಥನೆ, ಡಾ. ಸರೋಜಾ ಜಾಧವ ಅವರ ಸ್ವಾಗತ, ಶರಣೆ ಶಾಂತಾ ಧುಳoಗೆ ಅವರ ಶರಣು ಸಮರ್ಪಣೆ, ಶರಣೆ ಅನ್ನಪೂರ್ಣ ಅಗಡಿ ಅವರ ವಚನ ಮಂಗಳ ಮತ್ತು ಶರಣೆ ವಿಜಯಲಕ್ಷ್ಮಿ ಕಲ್ಬುರ್ಗಿ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಸುಂದರವಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – 323
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶ್ರೀ ಬಿ.ಎಂ.ಪಾಟೀಲ ಮತ್ತು ತಾಯಿಯವರಾದ ಲಿಂ.ಶ್ರೀಮತಿ ಅಕ್ಕಮಹಾದೇವಿ ಪಾಟೀಲ – ಗದಗ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 323
