ಲೇಖನ
– ಸುಮನ್ ಪಾಟೀಲ ಜರ್ನಲಿಸಂ ವಿದ್ಯಾರ್ಥಿನಿ
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಇಂದು ನಾವೆಲ್ಲ 79 ನೇ ಸ್ವಾತಂತ್ಯ ದಿನದ ಸಡಗರ, ಸಂಭ್ರಮದಲ್ಲಿದ್ದೇವೆ.
ಭಾರತ ಬಾಹ್ಯಾಕಾಶ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪ್ರಗತಿ ಸಾಧಿಸಿದೆ.
ಎಲ್ಲಕ್ಕಿಂತ ಮಿಗಿಲಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದರೂ ಕೂಡ ಭಾರತ ದೇಶದಲ್ಲಿ ಮಹಿಳೆ ಎಷ್ಟು ಸುರಕ್ಷಿತವಾಗಿದ್ದಾಳೆ ಎಂಬ ಪ್ರಶ್ನೆ ಎದುರಾದಾಗ ನಾವೆಲ್ಲಾ ತಲೆ ತಗ್ಗಿಸಬೇಕಾದ ಸಂದರ್ಭ ಬರುತ್ತದೆ.
ಆ ದಿನ ನಾನು ಒಂದು ಸಾಹಿತ್ಯಿಕ ಕಾರ್ಯಕ್ರಮ ಮುಗಿಸಿ ಬಾಗಲಕೋಟೆಯಿಂದ ವಿಜಯಪುರಕ್ಕೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ಸು ಸಿಗದೇ ಸಂಜೆ 7 ರ ಬಸ್ಸಿಗೆ ಕೂತೆ.ಬಸ್ಸಿನ ಕಿಟಕಿಗೆ ಒರಗಿ ಹಾಗೆ ಒಂದತ್ತು ನಿಮಿಷ ಬ್ಯಾಗನ್ನು ಎದೆಗವಚಿ ನಿದ್ದೆ ಹೋಗಿದ್ದೆ. ಸ್ವಲ್ಪೊತ್ತಾದ ಮೇಲೆ ಏನೋ ಎದೆ ಭಾರವಾದಂತೆನಿಸಿ ಎಚ್ಚೆತ್ತು ನೋಡಿದಾಗ ಯಾರೋ ಒಬ್ಬ ವಯಸ್ಸಾದ ವ್ಯಕ್ತಿ ನನ್ನೆದೆ ಮೇಲೆ ಕೈ ಇಟ್ಟಿದ್ದ , ಕೂಡಲೇ ಕೂತ ಜಾಗದಿಂದ ಎದ್ದು ಅವನ ಕೈಯನ್ನು ಕಿತ್ತೆಸೆದು ಒಂದೇ ಸಮನೆ ಭಯದಲ್ಲಿ ಬಾಯಿಗೆ ಬಂದದ್ದು ಬೈಯತೊಡಗಿದೆ. ಆತ ಏದ್ದೇನೋ ಬಿದ್ದೆನೋ ಎಂಬಂತೆ ಹಿಂದಿನ ಸಿಟಿಗೆ ಹೊಗಿ ಕೂತ.

ಕಂಡಕ್ಟರ್ ಒಬ್ಬ ಬಂದು ಏನಾಯಿತು ಎಂದು ಕೇಳಿದ್ದು ಬಿಟ್ಟರೆ ಹೊರತು ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದವರೆಲ್ಲ ತಮ್ಮ ಪಾಡಿಗೆ ತಾವು ನಿದ್ರಿಸುತ್ತಿದ್ದರು.
ಈ ಘಟನೆಯನ್ನು ನನ್ನ ಕೆಲವು ಸ್ನೇಹಿತರ ಬಳಿ ಹಂಚಿಕೊಂಡಾಗ ಅವರೆಲ್ಲ ಅಷ್ಟು ಹೊತ್ತಿನಲ್ಲಿ ನೀನು ಪ್ರಯಾಣ ಮಾಡುವುದು ಸರಿಯಾದ ಸಮಯವಲ್ಲ , ಹೆಣ್ಣು ಮಕ್ಕಳು ಸಂಜೆ ಏಳು ಗಂಟೆಯ ಒಳಗೆ ಮನೆಯೊಳಗಿರಬೇಕು, ಹೊರಗಡೆ ಹೋದಾಗ ನಾಜೂಕಾಗಿರಬೇಕು ಎಂದರು ಹೀಗಿರಬೇಕು, ಹಾಗಿರಬೇಕು ಎಂಬ ಇತ್ಯಾದಿ ನಿಯಮಗಳು ಅವಳಿಗೆ ಅವಳಿಗೆ ಮಾತ್ರ ಏಕೆ??
ಅವಳ ಎದೆ ಅಂಗಾಂಗಗಳು ಗಂಡಸರ ಆಸ್ತಿಯೇ? ಅದ್ಹೇಗೆ ಒಬ್ಬ ಅಪರಿಚಿತ ಹೆಣ್ಣನ್ನು ಅದು ಆ ರೀತಿ ಮುಟ್ಟುತ್ತಾರೆ? ಒಂದು ಹೆಣ್ಣಿಗೆ ಹೇಗೆ ಸಂಬಂಧ ಕಟ್ಟುಪಾಡುಗಳು , ನಿಯಮಗಳು ಹಾಕಿದ್ದಾರೋ ಅಷ್ಟೇ ನೈತಿಕತೆ , ಹೆಣ್ಣನ್ನು ಗೌರವಿಸುವುದು ಗಂಡಸರಿಗೆ ಮೊದಲೇ ಕಲಿಸಿದ್ದರೆ ಇಂದು ನಾವೆಲ್ಲಾ ಧರ್ಮಸ್ಥಳದ ಸೌಜನ್ಯ, ಕೋಲ್ಕತಾ ವೈದ್ಯೆಯ ಮೇಲಿನ ಅತ್ಯಾಚಾರ ಹೀಗೆ ಸಮಾಜದ ಒಂದಿಲ್ಲೊಂದು ಮೂಲೆಯಲ್ಲಿ ನಡೆಯುವ ಅತ್ಯಾಚಾರಕ್ಕೆ ನಾವು ಮರುಗುತ್ತಿರಲಿಲ್ಲ.
ಅತ್ಯಾಚಾರ ಎಸಗಿದವರೆಲ್ಲ ಹೆಣ್ಣನ್ನು ಕೇವಲ ಒಂದು ಭೋಗದ ವಸ್ತುವಾಗಿ ಮಾಡಿದ್ದಾರೆ. ಅವರೆಲ್ಲ ನಿಜವಾಗಿಯೂ ಹೆಣ್ಣನ್ನು ಗೌರವಿಸುವ ಜಾತಿಯವರಾಗಿದ್ದರೆ ಅಷ್ಟು ಕ್ರೂರವಾಗಿರುತ್ತಿರಲಿಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ, ಬೇರೆ ಯಾವುದೇ ಸ್ಥಳದಲ್ಲಾಗಲಿ ಹೆಣ್ಣು ತಾನು ಸುರಕ್ಷಿತಳೇ ಎಂಬ ಪ್ರಶ್ನೆ ಎದುರಿಸುತ್ತಾಳೆ. ಇದಕ್ಕೆಲ್ಲ ಕಾರಣ ಅವಳನ್ನೂ ಕೆಟ್ಟ ದೃಷ್ಟಿಯಿಂದ ನೋಡುವುದೂ, ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರು, ಗಂಡಸರಿಂದ ಅವಳ ದೇಹದ ಬಗ್ಗೆ ಮಾಡುವ ಟೀಕೆಗಳು, ಇವೆಲ್ಲವನ್ನು ನೋಡಿದಾಗ ನಮ್ಮ ಸಮಾಜ ಮೇಲೆ ಒಂದು ರೀತಿಯ ಅಸಹ್ಯ ಭಾವನೆ ಮೂಡುತ್ತದೆ.
ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳನ್ನೂ ಕೆಟ್ಟ ದೃಷ್ಟಿಯಿಂದ ನೋಡುವ ಅವರಿಗೆ ತಮ್ಮ ಮನೆಯ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಅದೆಲ್ಲಿಯ ಕಾಳಜಿ ವಹಿಸುತ್ತಾರೆ.
ಯಾಕೆ ತಮ್ಮ ಮನೆಯ ಹೆಣ್ಣು ಮಕ್ಕಳು ಮಾತ್ರ ಹೆಣ್ಣು ಮಕ್ಕಳು ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳು ಭೋಗದ ವಸ್ತುವಾ? ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಹಲವಾರು ಘಟನೆಗಳನ್ನು ಕೆಲಸಕ್ಕೆ ಹೋಗುವ ಮಹಿಳೆಯರಿಂದ ಹಿಡಿದು ಕಾಲೇಜು ಯುವತಿಯರು ಇಂದಿಗೂ ಎದುರಿಸುತ್ತಲೇ ಇರುತ್ತಾರೆ .
ಕೆಲವೊಬ್ಬರು ಸಮಾಜದ ಮುಂದೆ ಬಂದು ಹೇಳಿಕೊಂಡರೆ, ಇನ್ನುಳಿದವರು ಯಾರಲ್ಲೂ ಹೇಳದೆ ಹಿಂಸೆ ಅನುಭವಿಸಿದವರು ಇದ್ದಾರೆ.
ಈ ರೀತಿಯ ಭಯದಲ್ಲಿಇಂದು ನಮ್ಮ ತಾಯಂದಿರು, ಸಹೋದರಿಯರು ಬದುಕುತ್ತಿದ್ದಾರೆ. ಇದು ನಿಜವಾದ ಸ್ವಾತ್ರಂತ್ರ್ಯವೆ ?
ಸ್ವಾತಂತ್ರ್ಯ ದಿನವೆಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ ಅದು ನಮ್ಮ ದೇಶದ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಮತ್ತು ಸ್ವಾತಂತ್ಯ. ಅವಳಿಗೆ ಸುರಕ್ಷಿತ ಭಾವನೆ ನೀಡಿ ಗೌರವಿಸೋಣ.
