ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಂದಿನಲ್ಲಿ ತನ್ನ ಮಗುವಿಗೆ.. ಅಯ್ಯೋ ಸಣ್ಣ ಮಕ್ಕಳು ಅವರಿಗೇನು ಗೊತ್ತಾಗುತ್ತೆ ಎಂದು ಹೇಳಿ ಮಗುವಿನ ಎಲ್ಲ ಕೆಲಸ ಕಾರ್ಯಗಳನ್ನು ತಾನೇ ಮಾಡುತ್ತಿದ್ದ ತಾಯಿ ಇದೀಗ ಮಗ ಮದುವೆಯ ವಯಸ್ಸಿಗೆ ಬಂದಿದ್ದರೂ ಕೂಡ ಆತನ ಕೆಲಸಗಳನ್ನು ತಾನೇ ಮಾಡುತ್ತಿದ್ದಾರೆ.
ಇನ್ನೊಂದೆಡೆ ಪ್ರಚಲಿತದಲ್ಲಿರುವ ಜೋಕು ಹೀಗಿದೆ.. ದೈಹಿಕವಾಗಿ ಬೆಳೆದಿರುವ ತನ್ನ ಮಗನನ್ನು ನಿರ್ವಹಿಸಲು ಸಾಧ್ಯವಿಲ್ಲದೆ ಆತನಿಗೆ ತಾಯಿ ಮದುವೆ ಮಾಡಿ ಮತ್ತೊಂದು ಹೆಣ್ಣುಮಗಳ ಕೈಗೆ ಇಡುತ್ತಾರೆ ಎಂದು.
ನಮ್ಮ ಸ್ವಂತ ಮಕ್ಕಳನ್ನು ನಾವು ಸಂಭಾಳಿಸಬಹುದು.. ಆದರೆ ನಮ್ಮ ಅತ್ತೆಯ ಮಗನನ್ನು ಅಲ್ಲ ಎಂಬ ಜೋಕು ಸೊಸೆಯಂದಿರಲ್ಲಿ ಕೇಳಬಹುದು.
ಮೇಲಿನ ಘಟನೆಗಳು ನೋಡಲು ಕೇಳಲು ಹೇಳಲು ತಮಾಷೆ ಎಂದೆನಿಸಿದರೂ ಕೂಡ ನಮ್ಮ ಮಕ್ಕಳನ್ನು ನಾವು ಯಾವ ರೀತಿ ಬೆಳೆಸಬಾರದು ಎಂಬುದಕ್ಕೆ ಸೂಕ್ತ ಉದಾಹರಣೆಗಳಾಗುತ್ತವೆ. ಕೆಲವೊಮ್ಮೆ ಅತಿಯಾದಾಗ ಸಂಬಂಧಪಟ್ಟವರ ಬೇಸರಕ್ಕೂ ಕಾರಣವಾಗುತ್ತದೆ.
ಇಂದಿನ ಮಕ್ಕಳೇ ಮುಂದಿನ ನಾಗರಿಕರು.. ತಮ್ಮ ವೈಯುಕ್ತಿಕ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಾಧ್ಯವಾಗದವರು ಬೇರೇನು ಮಾಡಲು ಸಾಧ್ಯ ಎಂಬ ಮಾತನ್ನು ನಾವು ಹಲವೆಡೆ ಕೇಳುತ್ತೇವೆ.. ಚಿಕ್ಕಂದಿನಲ್ಲಿ ಮಕ್ಕಳಿಗೆ ಅವಶ್ಯಕವಾದ ತರಬೇತಿಯನ್ನು ನೀಡುವುದರಲ್ಲಿ ಪಾಲಕರು ಹಿಂದೇಟು ಹಾಕುವುದು, ಅಸಡ್ಡೆ ತೋರುವುದು ಒಂದು ಕಾರಣವಾದರೆ, ಅಯ್ಯೋ ಚಿಕ್ಕ ಮಕ್ಕಳು ಎಂಬುದು ಮತ್ತೊಂದು ಕಾರಣ.
ಅವ್ಯವಸ್ಥೆಗಳ ಆಗರವಾಗಿರುವ ಓರ್ವ ಯುವಕ ಇಲ್ಲವೇ ಓರ್ವ ಯುವತಿ ಮನೆಯಲ್ಲಿ ಇದ್ದಾರೆ ಎಂದರೆ ಅದರ ಅರ್ಥ ಅವರ ಬಾಲ್ಯದ ವಯಸ್ಸಿನಲ್ಲಿ ನೀವು ಅವರು ಕೇಳುವ ಎಲ್ಲವನ್ನೂ ಸಾರಾಸಾರ ವಿವೇಚನೆ ಇಲ್ಲದೆ ಪೂರೈಸಿದ್ದೀರಿ ಎಂದೇ ಅರ್ಥ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆಯ ಮಾತಿನಂತೆ ಇಂದು ನಾವು ಮಕ್ಕಳನ್ನು ಸರಿಯಾದ ಶಿಸ್ತುಕ್ರಮಕ್ಕೆ ಒಳಪಡಿಸದೆ ಬೆಳೆಸಿದರೆ ಅದರ ಪರಿಣಾಮವನ್ನು ಮುಂದಿನ ದಿನಮಾನಗಳಲ್ಲಿ ಕಾಣುತ್ತೇವೆ.. ಇಂದು ನಾವು ಮಕ್ಕಳನ್ನು ಸರಿಯಾಗಿ ಬೆಳೆಸದಿದ್ದರೆ ಮುಂದೆ ಅವರನ್ನು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಬೇಕಾಗಬಹುದು.

ಇಂದು ನಾವು ನಮ್ಮ ಮಕ್ಕಳನ್ನು ಒಳ್ಳೆಯ ತಿಳುವಳಿಕೆ ನೀಡಿ ಅವರವರ ವೈಯುಕ್ತಿಕ ಕೆಲಸ ಕಾರ್ಯಗಳನ್ನು ಅವರವರೇ ನಿರ್ವಹಿಸುವಂತೆ ನಮ್ಮ ಮನೆಗಳಲ್ಲಿ ಪಾಠ ಕಲಿಸದೆ ಹೋದರೆ ಮುಂದೆ ಇನ್ನಾರೋ ಹೊರಗಿನ ಜನರು ಅವರಿಗೆ ಪಾಠವನ್ನು ಕಲಿಸಬೇಕಾಗಬಹುದು.. ಅಥವಾ ಅಂತರ್ಜಾಲದ ನೆರವಿನಿಂದ ಕಲಿಯುವ ಮಕ್ಕಳು ಕಲಿಯಬಾರದ ವಿಷಯಗಳನ್ನು ಕಲಿಯುವ ಸಾಧ್ಯತೆಗಳೂ ಉಂಟು. ನೀವು ಕೈಯಲ್ಲಿ ದೊಣ್ಣೆಯನ್ನು ಹಿಡಿಯದೆ ಹೋದರೆ ಬೇರೆಯವರು ಅದನ್ನು ಹಿಡಿಯಬಹುದು.
ಕೈಯಲ್ಲಿ ದೊಣ್ಣೆ ಎಂದರೆ ಅದು ವಸ್ತುಶಃ ಅಲ್ಲ.. ಶಿಸ್ತು ಎಂಬ ಅಸ್ತ್ರವನ್ನು ದೊಣ್ಣೆ ಎಂದು ಹೇಳುವುದಾದರೆ ಪ್ರತಿಯೊಬ್ಬ ಶಿಕ್ಷಕರು ಮತ್ತು ಪಾಲಕರ ಬಳಿ ಇಂತಹ ಒಂದು ಅಗೋಚರ ದೊಣ್ಣೆ ಇರಲೇಬೇಕು. ಹಾಗೊಂದು ವೇಳೆ ಅಂತಹ ಶಿಸ್ತಿನ ದೊಣ್ಣೆ ನಿಮ್ಮ ಬಳಿ ಇರದಿದ್ದರೆ ನಿಮ್ಮ ಮಕ್ಕಳ ಯೌವ್ವನದ ದಿನಗಳ ತಪ್ಪುಗಳಿಗೆ ಮೂಲ ಕಾರಣ ನೀವೇ ಆಗುತ್ತೀರಿ.
ಅತ್ಯಂತ ಕಟು ವಾಸ್ತವದ ಈ ಜಗತ್ತಿನಲ್ಲಿ ಎಲ್ಲವೂ ದಿಢೀರನೆ ಸಿಗಬೇಕು ಎಂಬ ತ್ವರಿತತೆ, ಅತೃಪ್ತಿ, ಭೋಗದ ಲಾಲಸೆಗಳನ್ನು ಹೊಂದಿರುವ ಇಂದಿನ ಮಕ್ಕಳಿಗೆ ನಾವು ಕಾಲಾತೀತವಾದ ಮೌಲ್ಯಗಳನ್ನು ಕಲಿಸುವ ಮೂಲಕ ಒಂದು ಆರೋಗ್ಯಕರ ಸಮಾಜಕ್ಕೆ ಗಟ್ಟಿಯಾದ ಬುನಾದಿಯನ್ನು ಹಾಕಲೇಬೇಕು.
ಶಿಸ್ತು ಕ್ರಮ ನಮ್ಮ ಭೂತಕಾಲವನ್ನು ಸುಧಾರಿಸುವುದಿಲ್ಲ ನಿಜ, ಆದರೆ ನಮ್ಮ ಭವಿಷ್ಯಕ್ಕೆ ಅತ್ಯವಶ್ಯಕವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತದೆ. ಶಿಸ್ತುಕ್ರಮ ಎಂಬ ಚೌಕಟ್ಟಿನಲ್ಲಿ ಮಕ್ಕಳು ಗೌರವ, ಜವಾಬ್ದಾರಿ ಮತ್ತು ತಾಳ್ಮೆಯ ಪಾಠಗಳನ್ನು ಕಲಿಯುತ್ತಾರೆ. ಮುಂದಿನ ಭವಿಷ್ಯಕ್ಕೆ ಅತ್ಯವಶ್ಯಕವಾದ ಜವಾಬ್ದಾರಿಯುತ ನಾಗರಿಕರನ್ನು ನಾವು ಬೆಳೆಸದೆ ಹೋದರೆ ಒಂದು ಅಸ್ವಸ್ಥ ಸಮಾಜದ ನಿರ್ಮಾಣಕ್ಕೆ ನಾವೇ ಕಾರಣೀಭೂತರಾಗುತ್ತೇವೆ.. ಇದು ಖಂಡಿತಾ ಬೇಡ.

ಅದೆಷ್ಟೇ ಹೊರಾಂಗಣ ಕ್ರೀಡೆಯಾದರೂ ಅದಕ್ಕೊಂದು ಗಡಿ ರೇಖೆ ಇರುತ್ತದೆ.. ಹಾಗೆಯೇ ನಮ್ಮ ಬದುಕಿಗೆ ಕೂಡ ಒಂದು ಅಗೋಚರ ಗಡಿ ರೇಖೆ ಇದ್ದೇ ಇರುತ್ತದೆ. ಇಂತಹ ಗಡಿರೇಖೆಯ ಅರಿವನ್ನು ಹೊಂದಿರದ ಮಕ್ಕಳು ತಮ್ಮ ಬದುಕಿನಲ್ಲಿ ತಾವು ಕಾಣುವ ಪ್ರತಿಯೊಂದು ಆಸೆಯೂ ಪೂರೈಸಬೇಕು ಎಂಬ ಆಶಯವನ್ನು ಹೊಂದುತ್ತಾರೆ. ತನ್ನ ಬದುಕಿನ ಕುರಿತಾದ ಹೊಣೆಗಾರಿಕೆಯ ಪ್ರಜ್ಞೆ ಇಲ್ಲದ ಮಕ್ಕಳು ವಿಕೃತಿಗಳಿಗೆ ಈಡಾಗುತ್ತಾರೆ. ಪ್ರತಿಯೊಂದು ಆಸೆಯನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ತಪ್ಪು ಸರಿಗಳ ವಿವೇಚನೆ ಅವರಲ್ಲಿ ಕಳೆದು ಹೋಗುತ್ತದೆ. ತಾವು ಕಾಣುವ ಪ್ರತಿಯೊಂದು ಕನಸು ಕೈಬಿಡಬೇಕು ತಮ್ಮ ಆಸೆ ಪೂರೈಸಲೇಬೇಕು ಎಂಬ ನಿಟ್ಟಿನಲ್ಲಿ ಅವರು ಖಂಡಿತವಾಗಿಯೂ ಮೌಲ್ಯಗಳನ್ನು ಕೈ ಬಿಡುತ್ತಾರೆ. ಇಂತಹ ಮಕ್ಕಳು ಮುಂದೆ ದೊಡ್ಡವರಾದಾಗ ಕಟು ವಾಸ್ತವಗಳನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಾರೆ. ಈ ಜಗತ್ತು ತಾನು ಕೊಡುವುದಕ್ಕಿಂತ ಹೆಚ್ಚಾಗಿ ನಮ್ಮಿಂದ ಅಪೇಕ್ಷಿಸುತ್ತದೆ ಎಂಬ ಸತ್ಯವನ್ನು ಮರೆತುಬಿಡುತ್ತಾರೆ.
ಶಿಸ್ತುಕ್ರಮ ಎಂಬುದು ಕ್ರೌರ್ಯ ಇಲ್ಲವೇ ಮಾರಕತೆ ಅಲ್ಲವೇ ಅಲ್ಲ.. ಸಹಾನುಭೂತಿಯಿಂದ ನಮ್ಮನ್ನು ನಾವು ತಿದ್ದಿಕೊಳ್ಳುವ, ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮತ್ತು ರಾಜಿ ಮಾಡಿಕೊಳ್ಳುವ ನಮ್ಮಂತೆಯೇ ಇತರರು ಎಂಬುದನ್ನು ಅರ್ಥ ಮಾಡಿಕೊಳ್ಳುವ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಎಲ್ಲಾ ಆಸೆ ಆಕಾಂಕ್ಷೆಗಳು ಪೂರೈಸಲ್ಪಡುವುದಿಲ್ಲ… ನಮ್ಮ ಭಾಗ್ಯದಲ್ಲಿ ಇರುವಷ್ಟನ್ನೇ ನಾವು ಪಡೆದುಕೊಳ್ಳಲು ಸಾಧ್ಯ ಎಂಬ ನಿರ್ಲಿಪ್ತತೆಯ ಪಾಠಗಳನ್ನು ನಮಗೆ ಕಲಿಸುತ್ತದೆ ನಮ್ಮ ಕ್ರಿಯೆಗಳ ಪರಿಣಾಮಗಳನ್ನು ನಾವು ಅನುಭವಿಸಲೇಬೇಕು ಎಂಬ ಸತ್ಯವನ್ನು ನಮಗೆ ಮುಖಕ್ಕೆ ರಾಚಿದಂತೆ ತೋರುತ್ತವೆ.
ನಮ್ಮ ಕಠಿಣ ಪರಿಶ್ರಮಗಳು ನಮಗೆ ಘನತೆ ಗೌರವವನ್ನು ತಂದುಕೊಟ್ಟರೆ ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಇಂದಿನ ಮಕ್ಕಳನ್ನು ಮುಂದಿನ ಜವಾಬ್ದಾರಿಯುತ, ಸಶಕ್ತ ನಾಗರಿಕರನ್ನಾಗಿಸುವ ಜವಾಬ್ದಾರಿ ಪಾಲಕರ ಮೇಲಿದೆ.
ಎಲ್ಲದಕ್ಕೂ ತಂತ್ರಜ್ಞಾನವನ್ನೇ ಅವಲಂಬಿಸಿರುವ ಇಂದಿನ ದಿನಮಾನಗಳಲ್ಲಿ ನಾವು ಮಕ್ಕಳಿಗೆ ದೈವದ ತಿಳುವಳಿಕೆಯನ್ನು ನೀಡಬೇಕೆ ಹೊರತು ದೆವ್ವಗಳ ಕುರಿತಲ್ಲ. ಮಾನವೀಯ ಸಂಬಂಧಗಳ ಮೌಲ್ಯಗಳ ಅರಿವನ್ನು ನೀಡಬೇಕೆ ಹೊರತು ತಂತ್ರಜ್ಞಾನದ ಆವಿಷ್ಕಾರಗಳನ್ನಲ್ಲ.
ನಿಮ್ಮ ಮಕ್ಕಳ ಕೈಯಲ್ಲಿ ನೀವು ಕೊಡುವ ಮೊಬೈಲ್ ನಂತಹ ಗ್ಯಾಜೆಟ್ ಗಳು ಅವರಿಗೆ ಹೊಸ ಹೊಸ ವಿಷಯಗಳನ್ನು, ಮನರಂಜನೆಗಳನ್ನು ನೀಡಬಹುದೇ ಹೊರತು ಮೌಲ್ಯಗಳನ್ನು ಅಳವಡಿಸುವುದಿಲ್ಲ
ನಿಮ್ಮ ಮಕ್ಕಳು ಕೈಯಲ್ಲಿ ಹಿಡಿದಿರುವ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಅವರನ್ನು ಶಿಕ್ಷಿತರನ್ನಾಗಿಸಬಹುದೇ ಹೊರತು ಸಹಾನುಭೂತಿಯನ್ನು ಕಲಿಸುವುದಿಲ್ಲ. ಕಂಪ್ಯೂಟರ್ನಲ್ಲಿ ಅಳವಡಿಸಲ್ಪಟ್ಟಿರುವ ಅಂತರ್ಜಾಲವು ಅವರಿಗೆ ಜಗತ್ತಿನೊಂದಿಗೆ ಸಂಪರ್ಕವನ್ನು ಕಲ್ಪಿಸಿ ಕೊಡಬಹುದು ಆದರೆ ಅವರ ನಿರ್ಮಾತೃವನ್ನಲ್ಲ.
ನಮ್ಮ ಮಕ್ಕಳಿಗೆ ನಾವು ಎಲ್ಲಾ ಸಮಯಕ್ಕೂ ಸಲ್ಲುವ ನಂಬುಗೆ, ವಿಶ್ವಾಸ, ಪ್ರೀತಿ, ಮಮತೆ ಮತ್ತು ದಯಾಳು ಗುಣಗಳನ್ನು ಕಲಿಸಬೇಕು. ನಮ್ಮ ಬೆಳೆಯುವ ಮಕ್ಕಳಲ್ಲಿ ನಾವು ಬದುಕಿನ ನಿಷ್ಟುರ ಸತ್ಯಗಳ ಕುರಿತ ಅರಿವನ್ನು ಮತ್ತು ಅದಕ್ಕೆ ಅಗತ್ಯವಾಗಿ ಬೇಕಾದ ಶಿಸ್ತು ಕ್ರಮವನ್ನು ಮೂಡಿಸಲೇಬೇಕು.
ನಮ್ಮ ಮಕ್ಕಳನ್ನು ನಾವು ಪ್ರೀತಿಯಿಂದ ಸರಿಯಾದ ದಾರಿಯಲ್ಲಿ ನಡೆಯಲು ಪ್ರೋತ್ಸಾಹಿಸಬೇಕು, ಬದುಕಿನಲ್ಲಿ ದಾಟಲೇಬಾರದ ನಿಖರವಾದ ಮಿತಿಗಳನ್ನು ಗೊತ್ತುಪಡಿಸಿಕೊಡಬೇಕು. ಕಠಿಣ ಪರಿಶ್ರಮ ಮತ್ತು ಬದ್ಧತೆಯ ಅರಿವನ್ನು ಮೂಡಿಸಬೇಕು. ಗೌರವ ಮತ್ತು ನಂಬುಗೆಯ ಶಕ್ತಿಯ ಕುರಿತು ಅವರಿಗೆ ತಿಳಿ ಹೇಳಬೇಕು.
ಏಕೆಂದರೆ ನಮ್ಮ ಮಕ್ಕಳು ಕೇವಲ ನಮ್ಮವರಲ್ಲ.. ಅವರು ನಮ್ಮ ದೇಶವನ್ನು ಮುನ್ನಡೆಸುವ ಭವಿಷ್ಯದ ನಾಗರಿಕರು. ನಮ್ಮ ದೇಶದ ಭದ್ರ ಭವಿಷ್ಯಕ್ಕೆ ಅಡಿಪಾಯ ಹಾಕುವ ಮುಂದಿನ ಪ್ರಜೆಗಳು.
ನಮ್ಮ ಮಕ್ಕಳನ್ನು ನಾವು ನಮ್ಮ ಸುಖ ಸಂತೋಷಗಳಿಗಾಗಿ ಹೆತ್ತಿದ್ದರೂ ನಮ್ಮ ಮುಂದುವರಿಕೆಯ ಕುರುಹುಗಳಾಗಿ ಪರಿಗಣಿಸಿದ್ದರೂ ಕೂಡ ಅವರು ನಮ್ಮ ರಾಷ್ಟ್ರದ ಮುಂದಿನ ಭವಿಷ್ಯದ ಹರಿಕಾರರು. ಆದ್ದರಿಂದಲೇ ನಮ್ಮ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವ ನಿಟ್ಟಿನಲ್ಲಿ ನಾವು ನಮ್ಮೆಲ್ಲ
ಪ್ರಯತ್ನಗಳನ್ನು ಹಾಕಲೇಬೇಕು.
ಹೌದಲ್ವೇ ಸ್ನೇಹಿತರೆ?
