ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ
18 ನೆಯ ಶರಣ ಮಾಸದ ಮಾಲಿಕೆಯಲ್ಲಿ ಶರಣ ಶಶಿಧರ ಕರವೀರಶೆಟ್ಟರ ಅವರು ಸಕೀಲಗಳ ಬಗೆಗೆ ಅತ್ಯಂತ ವಿದ್ವತ್ ಪೂರ್ಣವಾದ ಮತ್ತು ಆಳವಾದ ಜ್ಞಾನ ಭಂಡಾರ ವನ್ನು ನಮ್ಮೊಂದಿಗೆ ಹಂಚಿಕೊಂಡರು.
ಸಕೀಲಗಳು ಎಂದರೆ ತಾತ್ವಿಕ ರಹಸ್ಯಗಳು, ಅತ್ಯಂತ ಆಳವಾದ ತತ್ವಜ್ಞಾನದ ಅರಿವು ಮೂಡಿಸುವ, ಅಂಗವೇ ಲಿಂಗ ವಾಗುವ ಪರಿ. ಪರಸ್ಪರ ಒಂದರೊಳೊoದಿಗೆ ಸಮರಸವಾದ ಸಂಬಂಧವಿರುವ, ಬಿಟ್ಟು ಬೇರಾಗಿಸದಂತೆ, ಪೂರ್ಣವಾಗಿ ಒಂದೇ ಆಗುವಂತೆ ಮಾಡುವುದನ್ನು ತಿಳಿಸುವುದೇ ಲಿಂಗ ಸಕೀಲಗಳು. ಅವಿರಳ ಜ್ಞಾನಿ ಚೆನ್ನಬಸವಣ್ಣನವರ ಮಿಶ್ರಾರ್ಪಣ ಗ್ರಂಥವು ಇದಕ್ಕೆ ಮೂಲ ಆಗರವಾಗಿದೆ.
ಲಿಂಗದೊಳಗೆ ಅಂಗ ಕರಗಿ ಪೂರ್ವಾಶ್ರಮ ಭಾವ ಇಂಗಿ ಪರಸ್ಪರ ಸಾಮರಸ್ಯ ಹೊಂದಿ ಪರಿಪೂರ್ಣವಾಗಿ ಪರಿಶುದ್ಧವಾಗಿ ಲಿಂಗದಿಂದ ಹೊರಹೊಮ್ಮುವ ಪ್ರಕ್ರಿಯೆ.
ಸಕೀಲಗಳಲ್ಲಿ ಮೂರು ವಿಧ, ಆರು ವಿಧ, ಎಂಟು ವಿಧ, 36 ವಿಧ,96 ವಿಧ,108 ವಿಧ ಮತ್ತು 216 ವಿಧಗಳನ್ನು ಅತ್ಯಂತ ಸರಳ ರೀತಿಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದರು.
ಲಿಂಗತತ್ವಗಳಾದ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗವನ್ನು ಸ್ಥೂಲ ಶರೀರ, ಸೂಕ್ಷ್ಮ ಶರೀರ,ಕಾರಣ ಶರೀರಗಳ ಸಂಬಂಧದ ತ್ರಿವಿಧ ಸಕೀಲಗಳು, ನೇತ್ರ, ಶ್ರೋತ್ರ, ನಾಸಿಕ, ಜಿಹ್ವೆ, ಚರ್ಮ, ಹೃದಯಗಳ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದ ಲಿಂಗ ಮಹಾಲಿಂಗವೆಂಬ ಷಟ್ ವಿಧದ ಆರು ಸಕೀಲಗಳನ್ನು
, ಷಣ್ಮುಖ ಶಿವಯೋಗಿಗಳ ವಚನದ ಉದಾಹರಣೆಯೊಂದಿಗೆ ಅರ್ಥೈಸಿದರು.
ಅಂಗ, ಲಿಂಗ, ಶಕ್ತಿ, ಭಕ್ತಿ, ಹಸ್ತ, ಮುಖ, ಪಧಾರ್ಥ, ಪ್ರಸಾದಗಳೆoಬ ಅಷ್ಟವಿಧ ಸಕೀಲಗಳನ್ನು ಹೇಳುತ್ತಾ, ಬ್ರಹ್ಮಾಂಡ ರೂಪುಗೊಂಡ ಬಗೆ
ಪದಾರ್ಥ ಪ್ರಸಾದವಾದ ಬಗೆ, ಶ್ರದ್ಧಾಭಕ್ತಿ, ನಿಷ್ಠಾಭಕ್ತಿ, ಅವಧಾನಭಕ್ತಿ, ಅನುಭಾವ ಭಕ್ತಿ, ಆನಂದಭಕ್ತಿ, ಸಮರಸಭಕ್ತಿಯ ವಿವರಣೆ, ಸು ಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸದ್ಭಾವ, ಸುಜ್ಞಾನದ ತಿಳುವಳಿಕೆ, ಆತ್ಮ, ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿಯ
ಅರಿವನ್ನು ಮೂಡಿಸಿದರು.
ತಾನೇ ಸಮಚಿತ್ತನಾಗಿ ಅನುಭಾವಕ್ಕೆ ಒಳಗೊಂಡು ಷಟ್ ಸ್ಥಲದ ಅನುಭವ, ಐಕ್ಯತೆಯ ಪರಿಪೂರ್ಣತೆಯನ್ನು ಪಡೆಯುವ 36 ಸಕೀಲಗಳು, ನಿನ್ನೊಳಗೇ ದೇವನಿದ್ದಾನೆ,ನೀನೇ ದೇವರು ಎನ್ನುವ ತತ್ವವನ್ನು ಮನನ ಮಾಡಿಕೊಳ್ಳುವ 96 ಸಕೀಲಗಳು, ಮನದ ವಿವೇಚನೆಯನ್ನು ಗಟ್ಟಿಗೊಳಿಸುವ 108 ಸಕೀಲಗಳು, ಪರಿಪೂರ್ಣವಾಗಿ ಅಂಗವೇ ಲಿಂಗವಾಗುವ 216 ಸಕೀಲಗಳನ್ನು ಎಳೆ ಎಳೆಯಾಗಿ ಎಲ್ಲರೂ ಮಂತ್ರ ಮುಗ್ಧರಾಗುವಂತೆ ಪ್ರಸ್ತುತ ಪಡಿಸಿದರು.
ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ವಿಷಯಾ ದಿಗಳಿಗೆ ಒದ್ದಾಡುವುದನ್ನು ಬಿಟ್ಟು ಜ್ಞಾನಿಯಾಗಿ ಪರಿವರ್ತನೆಗೊಳ್ಳುವುದನ್ನು ಹೇಳುತ್ತಾ, ಅರಿವೇ ಗುರು ಆಚಾರವೇ ಲಿಂಗವೆನ್ನುವುದನ್ನು ಮನನ ಮಾಡುತ್ತಾ, ಸಕೀಲಗಳನ್ನು ಕಬ್ಬಿಣದ ಕಡಲೆ ಎಂದು ತಿಳಿದು ಕೊಳ್ಳದೆ, ಪ್ರತಿಯೊಬ್ಬ ಸಾಮಾನ್ಯರೂ ಸಹ ಅದನ್ನು ಅರ್ಥೈಸಿಕೊಳ್ಳಬಹುದು ಮತ್ತು ಉದಾತ್ತೀಕರಣದ ಅನುಭಾವವನ್ನು ಶರಣರು ನಮಗೆಲ್ಲ ಕೊಟ್ಟಿದ್ದಾರೆ ಎನ್ನುವುದನ್ನು ಒತ್ತಿ ಹೇಳಿದರು.
ದತ್ತಿ ದಾಸೋಹಿಗಳಾದ ಶ್ರೀ ಶಿವಾನಂದ ಕಲಕೇರಿ ಅವರು ಉಪನ್ಯಾಸಕರ ಅಗಾಧ ತೆಯನ್ನು ಶ್ಲಾಘನೆಮಾಡುತ್ತಾ ಹರುಷ ವ್ಯಕ್ತಪಡಿಸಿದರು.
ಡಾ. ಮೃತ್ಯುಂಜಯ ಶೆಟ್ಟರ ಅವರ ವಚನ ಪ್ರಾರ್ಥನೆ, ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಮಂಗಳ, ಮತ್ತು ಡಾ. ಶಶಿಕಾಂತ ಪಟ್ಟಣ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ವಿಶೇಷ ದತ್ತಿ ಉಪನ್ಯಾಸ – ೨೯೨
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶ್ರೀ ಶಿವಾನಂದ ಕಲಕೇರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಲಿಂ. ಹಣಮಂತರಾಯ ಕಲಕೇರಿ ಮತ್ತು ಲಿಂ.ಗಿರಿಜಾದೇವಿ ಕಲಕೇರಿ ಅವರ ಸ್ಮರಣಾರ್ಥ ವಿಶೇಷ ದತ್ತಿ ಉಪನ್ಯಾಸ – ೨೯೨
