ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ
ತಿಕೋಟಾ
ಉದಯರಶ್ಮಿ ದಿನಪತ್ರಿಕೆ
ಅಣ್ಣ-ತಂಗಿಯರ ಈ ಬಂಧ, ಜನುಮ ಜನುಮಗಳ ಅನುಬಂಧ, ಜೀವಕ್ಕೆ ಕೊರಳು ದೇಹಕ್ಕೆ ನೆರಳು ಅನಿಸುತ್ತಿದೆ, ಈ ರಕ್ಷಾ ಬಂಧನ… ಎಂಬ ಹಾಡು ಅಣ್ಣ-ತಂಗಿಯರ ನಡುವೆ ಭಾವಬಂಧವನ್ನು ಬೆಸೆಯುತ್ತದೆ. ಭವ್ಯ ಪರಂಪರೆ, ಇತಿಹಾಸ, ಸಂಪ್ರದಾಯ ಹಾಗೂ ಸಂಸ್ಕೃತಿ-ಆಚರಣೆಗಳಿಗೆ ವಿಶಿಷ್ಟತೆಯನ್ನು ಹೊಂದಿದ ನಾಡು ನಮ್ಮದು. ನಮ್ಮ ದೇಶದಲ್ಲಿ ಪ್ರತಿಯೊಂದು ಆಚರಣೆಗೂ, ಹಬ್ಬಕ್ಕೂ ಅದರದೇ ಆದ ವಿಶೇಷವಿದೆ. ಪ್ರತಿಯೊಂದು ಹಬ್ಬವು ಒಂದಿಲ್ಲ ಒಂದು ರೀತಿಯ ಸಂದೇಶದ ಸಾರವನ್ನು ಹೇಳುತ್ತದೆ. ಎಲ್ಲಾ ಹಬ್ಬಗಳಂತೆ ರಕ್ಷಾ ಬಂಧನವು ಸಹ ವಿಶೇಷ ಹಬ್ಬವಾಗಿದ್ದು, ಅದು ಸಹೋದರ-ಸಹೋದರಿಯರ ಸಂಬಂಧಗಳನ್ನು ಗಟ್ಟಿಗೊಳಿಸುವ ಭಾವಾನುಬಂಧವಾಗಿದೆ.
ಶ್ರಾವಣ ಮಾಸದಲ್ಲಿ ಆಚರಿಸಲ್ಪಡುವ ಈ ರಕ್ಷಾ ಬಂಧನವು ಅಣ್ಣ-ತಂಗಿಯರ ಅನುಬಂಧದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಅರ್ಥಗರ್ಭಿತವಾದ ಹಬ್ಬವಾಗಿದೆ. ರಕ್ಷಾ ಬಂಧನವೆಂದರೆ ಕೇವಲ ಕೇಸರಿ ದಾರ ಕಟ್ಟಿ ಉಡುಗೊರೆ ನೀಡುವದಷ್ಟೇ ಅಲ್ಲ, ಇದು ಭಾವಬಂಧ ಬೆಸೆಯುವ ಭ್ರಾತೃತ್ವದ ಬಾಂಧವ್ಯ, ಮಮತೆ ಮತ್ತು ಸುರಕ್ಷೆಯ ಸಂಕೇತವಾಗಿದೆ. ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟುವ ಮೂಲಕ ಅಣ್ಣಂದಿರ ಯಶಸ್ಸು, ಆರೋಗ್ಯ, ಶ್ರೇಯೋಭಿವೃದ್ಧಿ, ರಕ್ಷಣೆ ಹಾಗೂ ನೆಮ್ಮದಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ತಂಗಿಯು ಅಣ್ಣನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸಹೋದರನ ಆರ್ಶೀವಾದ ಬೇಡುತ್ತಾಳೆ. ಈ ಹಬ್ಬ ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಭಾತೃತ್ವದ ಭಾವ ಬೆಸೆಯುವ ಅನುಬಂಧವಾಗಿದೆ.
ರಕ್ಷಾ ಬಂಧನದ ಆಚರಣೆಯ ಹಿನ್ನೆಲೆ

ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ , ಗೌರವ ವ್ಯಕ್ತಪಡಿಸಲು ಮತ್ತು ಅನ್ಯೋನ್ಯತೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಅಣ್ಣ-ತಂಗಿಯ ಮತ್ತು ತಂಗಿ ಅಣ್ಣನ ರಕ್ಷಣೆಗಾಗಿ ಆಚರಿಸುವ ಹಬ್ಬವಾಗಿದೆ. ತಂಗಿಯಾದವಳು ಅಣ್ಣನಿಗೆ ಆರತಿ ಮಾಡಿ, ಕೈಗೆ ರಾಖಿ ಕಟ್ಟಿ ಅಣ್ಣ ಆಯುರ್-ಆರೋಗ್ಯ, ಸುಖ-ಶಾಂತಿ ಮತ್ತು ನೆಮ್ಮದಿಯಿಂದ ಬಾಳಿ-ಬದುಕಲೆಂದು ಹಾರೈಸುತ್ತಾಳೆ.
ಆಚರಣೆಯ ಮಹತ್ವ
ಪೌರಾಣಿಕ ಕಥೆಯಲ್ಲಿ ಬರುವಂತೆ ಒಮ್ಮೆ ರಾಕ್ಷಸರು ಮತ್ತು ದೇವತೆಗಳ ಮಧ್ಯೆ ಯುದ್ಧ ನಡೆದ ಸಂದರ್ಭದಲ್ಲಿ ದೇವತೆಗಳು ಸೋಲುವ ಹಂತವನ್ನು ತಲುಪಿರುತ್ತಾರೆ. ಸೋಲಿನ ಭೀತಿಯಲ್ಲಿದ್ದ ಇಂದ್ರದೇವನು ಬೃಹಸ್ಮತಿಯ ಮೊರೆ ಹೋಗುತ್ತಾನೆ. ಆಗ ಬೃಹಸ್ಮತಿ ದೇವನು ಇಂದ್ರನ ಪತ್ನಿ ಇಂದ್ರಾಣಿಗೆ ಒಂದು ಸಲಹೆ ನೀಡುತ್ತಾನೆ. ಬೃಹಸ್ಮತಿ ಸಲಹೆಯಂತೆ ಇಂದ್ರಾಣಿಯು ಇಂದ್ರದೇವನ ರಕ್ಷಣೆಗಾಗಿ ಹಾಗೂ ಯುದ್ಧದಲ್ಲಿ ಗೆದ್ದು ಬರಲೆಂದು ಜಯದ ಸಂಕೇತವಾಗಿ ರೇಷ್ಮೆಯ ದಾರವೊಂದನ್ನು ಇಂದ್ರನ ಕೈಗೆ ಕಟ್ಟುತ್ತಾಳೆ. ನಂತರ ಇಂದ್ರನು ಯುದ್ಧದಲ್ಲಿ ಜಯ ಸಾಧಿಸುತ್ತಾನೆ. ಈ ಹಿನ್ನೆಲೆಯಿಂದ ಪ್ರಾರಂಭವಾದ ರಕ್ಷಾ ಬಂಧನವು ಇಂದಿಗೂ ಭಾರತವು ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ಅನ್ಯೋನ್ಯತೆ, ಭ್ರಾತೃತ್ವ ಹಾಗೂ ಭಾವನಾತ್ಮಕ ಬಂಧವನ್ನು ಬೆಸೆಯುವ ಒಂದು ಹಿಂದೂ ಹಬ್ಬವಾಗಿ ಆಚರಿಸಲ್ಪಡುತ್ತಿದೆ.
ಆದ್ದರಿಂದ ಅಣ್ಣ-ತಂಗಿಯರ ನವಿರಾದ ಭಾವನೆಗಳನ್ನು ಗಟ್ಟಿಗೊಳಿಸುವ, ಬಾಂಧವ್ಯ ವೃದ್ಧಿಸುವ ಹಾಗೂ ಸಹೋದರತೆಯ ಸಂಕೇತವಾಗಿ ಆಚರಿಸಲಾಗುತ್ತಿರುವ ಈ ರಕ್ಷಾ ಬಂಧನ ದಿನದಂದು ಸಹೋದರರು ಸಹೋದರಿಯರಿಂದ ಕೇವಲ ರಾಖಿಯನ್ನು ಕಟ್ಟಿಸಿಕೊಂಡು ಉಡುಗೊರೆ ಕೊಟ್ಟ ಮಾತ್ರಕ್ಕೆ ಕರ್ತವ್ಯ ಮುಗಿಯುವುದಿಲ್ಲ. ಅದು ಅರ್ಥಪೂರ್ಣ ಹಾಗೂ ವಿಶಿಷ್ಟವಾದ ಆಚರಣೆಯಾಗಬೇಕಾದರೆ ರಾಖಿ ಕಟ್ಟಿಸಿಕೊಂಡ ಸಹೋದರರು ಸದಾಕಾಲ ತಮ್ಮ ಸಹೋದರಿಯರ ಬೆನ್ನಿಗೆ ನಿಂತು ಆಕೆಯ ರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿರುತ್ತದೆ.
ಕೊನೆಯ ನುಡಿ
ಈ ರಕ್ಷಾ ಬಂಧನದ ಮೂಲಕ ಅಣ್ಣ-ತಂಗಿಯ ರಕ್ಷಣೆ ಮಾಡಲು ಸಹೋದರ ರಕ್ತ ಹಂಚಿಕೊಂಡೇ ಹುಟ್ಟಬೇಕೆಂದೇನಿಲ್ಲ. ರಕ್ಷಣೆಯ ಭಾರ ಕೇವಲ ಅಣ್ಣನೊಬ್ಬನ ಹೇಗಲ ಮೇಲಿಲ್ಲ. ಪ್ರಾಮಾಣಿಕವಾಗಿ ತನ್ನವರೆಂಬ ಅತ್ಮೀಯ ಭಾವವನ್ನು ತೋರುವ ಮತ್ತು ಹೆಣ್ಣಿನ ಮಾನ-ಪ್ರಾಣ ಕಾಪಾಡುವ ಪ್ರತಿಯೊಬ್ಬರೂ ಅಣ್ಣ-ತಮ್ಮಂದಿರರೇ ಆಗಿರುತ್ತಾರೆ. ಕೇವಲ ಸಾಂಕೇತಿಕವಾಗಿ ರಕ್ಷಾ ಬಂಧನವನ್ನು ಸಂಭ್ರಮ, ಸಡಗರದಿಂದ ಆಚರಿಸಿದರೆ ಸಾಲದು. ಅದು ಅರ್ಥಪೂರ್ಣ ಆಚರಣೆಯಾಗಲು ನಾವು-ನೀವೆಲ್ಲರೂ ಅದರ ಮಹತ್ವವನ್ನು ಅರಿತು ನಮ್ಮ ಮಹಿಳೆಗೆ ನೀಡುವ ಗೌರವ, ಆದರ ಮತ್ತು ಸ್ಥಾನಮಾನ, ಜವಾಬ್ದಾರಿ, ಕರ್ತವ್ಯಗಳನ್ನು ನಿರ್ವಹಿಸಿದರೆ ರಕ್ಷಾ ಬಂಧನದ ಆಚರಣೆಯು ನಿಜಕ್ಕೂ ಸಾರ್ಥಕವಾಗುತ್ತದೆ. ರಾಖಿ ಎಂಬ ಈ ಪವಿತ್ರ ರಕ್ಷೆಯು ನಮ್ಮೆಲ್ಲರಲ್ಲಿ ಬಾಂಧವ್ಯವನ್ನು ಬಲಪಡಿಸಲಿ. ಇದು ಅಣ್ಣ-ತಂಗಿಯರ ನಡುವಿನ ಭಾವಬಂಧ ಮತ್ತು ಭಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವೇ ಹೊರತು ಆಡಂಬರದ ಹಬ್ಬವಲ್ಲ ಎಂಬುದನ್ನು ನಾವೆಲ್ಲರೂ ಅರಿತು ಯಾವುದೇ ವಿಜೃಂಭಣೆಯಿಲ್ಲದೇ ಆದಷ್ಟು ಸರಳವಾಗಿ ಆಚರಿಸಬೇಕೆನ್ನುವುದೇ ನನ್ನದೊಂದು ಆಶಯವಾಗಿದೆ.
