ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಇಂಗ್ಲೀಷ್‌ನಲ್ಲಿ ಒಂದು ಮಾತಿದೆ. ‘ಲೈಫ್ ಈಸ್ ಶಾರ್ಟ್ ಮೇಕ್ ಇಟ್ ಸ್ವೀಟ್.’ ಬದುಕು ಚಿಕ್ಕದು ಅದನ್ನು ಸವಿಸವಿಯಾಗಿ ಸಂತಸದಿಂದ ಕಳೆಯಬೇಕೆನ್ನುವುದು ಇದರರ್ಥ. ನಮ್ಮ ಹಿರಿಯರು ಬದುಕು ಮೂರು ದಿನದ ಸಂತೆ ಎಂದಿದ್ದಾರೆ. ಬದುಕಿನ ಕ್ಷಣ ಭಂಗುರತೆಯನ್ನು ಸಾರಿದ್ದಾರೆ. ಬದುಕು ನಮ್ಮ ಕೈಯಲಿಲ್ಲ ಅದು ಹೇಗೆ ಬರುತ್ತದೆಯೋ ಹಾಗೆಯೇ ಅದನ್ನು ಸ್ವೀಕರಿಸಬೇಕು ಎನ್ನುವ ಮಾತು ಕಿವಿಗೆ ಬೀಳುತ್ತಲೇ ಇರುತ್ತದೆ. ಏನೇ ಆಗಲಿ ನಾವೇನಾಗಿದ್ದಾವೇಯೋ ಅದೇ ನಮ್ಮ ಮಕ್ಕಳು ಆಗಿದ್ದಾರೆ. ಅಂದರೆ ಮಕ್ಕಳು ನಮ್ಮ ಪ್ರತಿಬಿಂಬಗಳು. ಮಕ್ಕಳ ನಡೆ ನುಡಿಗಳಲ್ಲಿ ಹಿತಮಿತವಾದ ಹಿಡಿತ, ಎಂದಿಗೂ ಬತ್ತದ ಉತ್ಸಾಹ, ಜೀವನೋತ್ಸಾಹದ ನೀರಬುಗ್ಗೆ ಮಕ್ಕಳಲ್ಲಿ ಟಿಸಿಲೊಡೆಯುವಂತೆ ಹೇಗೆ ಮಾಡುವುದು? ಭವಿಷ್ಯದ ನಾಗರಿಕರ ಬದುಕು ಆನಂದದತ್ತ ಪಯಣ ಮಾಡುವುದು ಹೇಗೆ ನೋಡೋಣ ಬನ್ನಿ.
ಬಾಲ್ಯ ಅಂದು-ಇಂದು
ಸಾಮಾನ್ಯವಾಗಿ ಬಾಲ್ಯದಲ್ಲಿ ಆಟಿಕೆ ಸಾಮಗ್ರಿ ಇಲ್ಲವೇ ಕಂಡ ಕಂಡ ವಸ್ತುಗಳ ಮೇಲೆ ವ್ಯಾಮೋಹ ಇರುತ್ತದೆ. ಎಷ್ಟೋ ಸಲ ಬಡತನದ ಬದುಕಿನಲ್ಲಿ ತಂದೆ ತಾಯಿಗಳು ಬೇಕಾದ ವಸ್ತುವನ್ನು ಕೊಡಿಸದೇ ಹೋಗಿರಬಹುದು. ಇನ್ನೊಬ್ಬರು ಅದನ್ನು ಅನುಭವಿಸುವುದನ್ನು ಕಂಡು ತುಂಬಾ ನೋವಾಗಿರಬಹುದು. ತಮ್ಮ ಬಾಲ್ಯವನ್ನು ನೆನಪಿಸಿಕೊಂಡ ಪಾಲಕರು, ನಾವು ಚಿಕ್ಕವರಿದ್ದಾಗ ಒಂದೊಂದು ವಸ್ತು ಪಡೆಯಲು ಅದೆಷ್ಟು ಕಷ್ಟ ಪಟ್ಟಿದ್ದೇವೆ. ಅಪ್ಪ ಅವ್ವನ ದುಂಬಾಲು ಬಿದ್ದು, ಅತ್ತು ಕರೆದು ಹಟ ಮಾಡಿದ ಮೇಲೆ ಬೇಕಾದ ವಸ್ತು ಕೈಗೆ ಸಿಗುತ್ತಿತ್ತು. ಹಲವು ಸಲ ನಾವು ಬಯಸಿದ್ದು ನಮಗೆ ಸಿಗಲಿಲ್ಲವೆಂಬ ಯಾತನೆ ಕಾಡುತ್ತಿತ್ತು. ಆ ಯಾತನೆ ಮನದಲ್ಲಿಯೇ ಮನೆ ಮಾಡಿ ಕೊರಗಿಸುತ್ತಿತ್ತು. ಅದನ್ನೆಲ್ಲ ನೆನಪಿಸಿಕೊಂಡು ನಮ್ಮ ಮಕ್ಕಳಿಗೆ ಹಾಗಾಗಬಾರದೆಂದು ಕೆಲವು ಪಾಲಕರು ಅವರಿಗೆ ಬೇಕೋ ಬೇಡವೋ ವಿಚಾರ ಮಾಡದೇ ಎಲ್ಲವನ್ನೂ ಬೇಕಾಬಿಟ್ಟಿ ತಂದು ಕೊಡುತ್ತಾರೆ. ಇನ್ನೂ ಕೆಲವು ಪಾಲಕರ ಕಥೆ ಬೇರೆಯಿದೆ. ಅವರು ಚಿಕ್ಕದೊಂದು ಚಾಕೊಲೇಟನ್ನು ಕೊಡಿಸಬೇಕಾದರೂ ತುಂಬಾ ಕಾಡಿಸುತ್ತಾರೆ. ಅದೇಕೆ ಇದೇಕೆ ಎಂದು ಪ್ರಶ್ನೆ ಕೇಳಿ ಮಕ್ಕಳ ಮೃದು ಮನಸ್ಸನ್ನು ಘಾಸಿಗೊಳಿಸುತ್ತಾರೆ. ಅಂಥ ಮಕ್ಕಳು ತಮಗೆ ಬೇಕಾದ್ದನ್ನು ಪಡೆಯಲು ಮನೆಯಲ್ಲಿ ಹಣ ಕಳ್ಳತನ ಮಾಡಬಹುದು ಇಲ್ಲವೇ ಬೇಕಾದ ವಸ್ತುಗಳನ್ನು ಪಾಲಕರಿಗೆ ಗೊತ್ತಿಲ್ಲದಂತೆ ಬೇರೆಯವರಿಂದ ಇಸಿದುಕೊಳ್ಳಬಹುದು. ಇದರಿಂದ ಮಕ್ಕಳು ಸ್ವಾಭಿಮಾನ ಬಿಟ್ಟು ಅವರಿವರ ಕಡೆ ಕೈ ಚಾಚುವ ಕೆಟ್ಟ ಚಟವನ್ನು ಬೆಳೆಸಿಕೊಳ್ಳುತ್ತಾರೆ. ಮುಂದುವರೆದು ಬಾಲಾಪರಾಧಿಗಳಾಗುವ ಸಾಧ್ಯತೆ ಇಲ್ಲದಿಲ್ಲ.
ಮನಸ್ಥಿತಿ
ಬಾಲ್ಯದಲ್ಲಿ ನಾವು ಕಳೆದುಕೊಂಡ ಕ್ಷಣಗಳನ್ನು ಮಕ್ಕಳು ಕಳೆದುಕೊಳ್ಳಬಾರದು. ನಾವು ಪಟ್ಟ ನೋವನ್ನು ಮಕ್ಕಳು ಪಡಬಾರದೆಂಬ ಮನಸ್ಥಿತಿಯಿರುವ ಪಾಲಕರು ಮಕ್ಕಳ ಬಾಯಲ್ಲಿ ಬರುವುದೇ ತಡ ಅದು ಅವರ ಕೈಯಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ ಅವರಿಗೆ ಆ ವಸ್ತುಗಳ ಬೆಲೆ ಗೊತ್ತಾಗುವುದೇ ಇಲ್ಲ. ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸುವುದು ಒಳ್ಳೆಯದಲ್ಲ. ಹಾಗಂತ ಮಕ್ಕಳು ಕೇಳಿದ್ದನ್ನು ಕೊಡಿಸಲೇಬೇಕೆಂಬ ಇರಾದೆಯೂ ಅಲ್ಲ. ಏನನ್ನೇ ಕೊಡಿಸುವಾಗಲೂ ಅದು ಅವರಿಗೆ ಅವಶ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಕೇಳಿದ ತಕ್ಷಣ ಕೊಡಿಸುವುದಕ್ಕಿಂತ ಕಾಯಿಸುವ ಕಾಯಕ ಮಾಡಬೇಕು. ಸಣ್ಣ ಪುಟ್ಟ ಆಸೆಗಳನ್ನು ತಡೆಯದೇ ಈಡೇರಿಸಿದರೆ ಮಕ್ಕಳು ಖುಷಿ ಖುಷಿಯಾಗಿ ಇರುತ್ತಾರೆಂದು ಅವಸರಿಸಬಾರದು. ಪೆನ್ಸಿಲ್, ರಬ್ಬರ್, ಪೆನ್‌ನಂತಹ ಸಣ್ಣ ವಸ್ತುಗಳನ್ನು ಕೊಡಿಸುವಾಗಲೂ ಅವುಗಳನ್ನು ಚೆನ್ನಾಗಿಟ್ಟುಕೊಂಡು ಬಳಸುವ ವ್ಯವಧಾನವನ್ನು ಹೇಳಿಕೊಡಬೇಕು. ಏನೇ ಹೇಳಿ ಯಾವಾಗಲೂ ಕಾಯಿಸಿ ಕಾಡಿಸಿ ಕೊಡಿಸಿದ ವಸ್ತುವಿಗೆ ಬೆಲೆ ಜಾಸ್ತಿ. ಕಾಯಿಸಿ ಶರತ್ತು ಹಾಕಿ ಕೊಡಿಸಿದ ವಸ್ತು ಜೀವನಪೂರ್ತಿ ನೆನಪಿನಲ್ಲಿರುತ್ತದೆ.

ಒತ್ತಡಗಳು
ಕುಟುಂಬದಲ್ಲಿ ಅನೇಕ ಒತ್ತಡಗಳಿರುತ್ತವೆ. ಹಣಕಾಸಿನ ತೊಂದರೆಯೂ ಇರುತ್ತದೆ. ಅಂಥದ್ದರಲ್ಲಿ ಮಕ್ಕಳು ತಮ್ಮ ಗೆಳಯ/ತಿಯ ಹೆತ್ತವರು ಅವರಿಗೆ ಇಷ್ಟವಾದ ಬಟ್ಟೆಗಳನ್ನು ಕೊಡಿಸಿದ್ದಾರೆ. ಅದೂ ಅಲ್ಲದೇ ಆಗಾಗ ಅವರಿಗೆ ಸಿನಿಮಾ ತೋರಿಸುತ್ತಾರೆ. ಓಡಾಡಲು ಸೈಕಲ್ ಕೊಡಿಸಿದ್ದಾರೆ. ಬೈಕ್ ತಂದುಕೊಟ್ಟಿದ್ದಾರೆ ಎಂದು ಹೋಲಿಸಿ ಹೇಳುತ್ತಾರೆ. ಮಕ್ಕಳಿಗೆ ಮನೆಯ ಪರಿಸ್ಥಿತಿ ಅರಿವು ಇರುವುದಿಲ್ಲ ಹೀಗಾಗಿ ಅದೆಲ್ಲ ಕೇಳುತ್ತಿರುತ್ತಾರೆ. ಪಾಲಕರು ಹಣಕಾಸಿನ ಸ್ಥಿತಿಯನ್ನು ತಿಳಿಹೇಳಿದರೆ ಮತ್ತೊಬ್ಬರೊಂದಿಗೆ ನಾವು ಹೋಲಿಸಿಕೊಳ್ಳಬಾರದೆಂಬುದು ಅರ್ಥವಾಗುತ್ತದೆ. ಬೆವರು ಸುರಿಸಿದರೆ ಅದೆಲ್ಲವೂ ದೊರೆಯುತ್ತದೆಂಬುದು ಗೊತ್ತಾಗುತ್ತದೆ. ಊಟೋಪಚಾರಗಳಲ್ಲಿ ಸಿರಿವಂತರ ಮಕ್ಕಳನ್ನು ಅನುಸರಿಸುತ್ತಿದ್ದ ಮಗು ಊಟ ತಿನಿಸುಗಳನ್ನು ವೇಸ್ಟ್ ಮಾಡದಂತೆ ತಿನ್ನುವುದನ್ನು ಕಲಿಯುತ್ತದೆ. ಅನ್ನವನ್ನು ದೇವರೆಂದು ತಿಳಿಯುತ್ತದೆ. ಖುಷಿ ಖುಷಿಯಾಗಿ ಆಹಾರವನ್ನು ಸೇವಿಸುತ್ತದೆ. ಕೇಳಿದ್ದನ್ನೆಲ್ಲ ಕೇಳಿದ ಸಮಯದಲ್ಲಿ ಕೊಡಿಸುವ ಪಾಲಕರು ನಾವಾದರೆ ಮಕ್ಕಳು ಪರಾವಲಂಬಿಗಳಾಗುತ್ತಾರೆ. ದುಡಿಮೆಯ ಮಹಿಮೆಯನ್ನು ಅರ್ಥ ಮಾಡಿಕೊಳ್ಳದೇ ಹೋಗುತ್ತಾರೆ. ಜವಾಬ್ದಾರಿಯ ಗಂಧ ಗಾಳಿಯೂ ಅವರಿಗೆ ಸೋಕುವುದಿಲ್ಲ.
ವೃದ್ಧಾಪ್ಯ
ವೃದ್ದಾಪ್ಯದಲ್ಲೂ ದುಡಿಯುವ ಅನಿವಾರ್ಯತೆ ನಿರ್ಮಾಣವಾಗುತ್ತದೆ. ಬದುಕಿನುದ್ದಕ್ಕೂ ಮಕ್ಕಳ ಲಾಲನೆ, ಪಾಲನೆ, ಶಿಕ್ಷಣ, ತಮ್ಮ, ತಂಗಿಯರ ಮದುವೆ ಹೀಗೆ ಆ ಈ ಜವಾಬ್ದಾರಿ ಹೊತ್ತು ಬೇಸತ್ತಿರುವ ಜೀವಿಗಳಿಗೆ ಮತ್ತೆ ಬದುಕಿನ ಬಂಡಿ ಎಳೆಯುವುದು ತುಂಬಾ ಕಷ್ಟವಾಗಿ ಬಿಡುತ್ತದೆ. ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಆಸೆಗಳನ್ನು ಈಡೇರಿಸುತ್ತಾರೆಂದು ಆಸೆ ಹೊತ್ತು ತಿರುಗಿದ ಜೀವಗಳಿಗೆ ದೊಡ್ಡ ನಿರಾಸೆ ಕಾದಿರುತ್ತದೆ. ಮಕ್ಕಳು ಇಳಿವಯಸ್ಸಿನಲ್ಲಿ ಮಕ್ಕಳು ಕೈಗೆ ಬರುತ್ತಾರೆ ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಆರೈಕೆ ಮಾಡುತ್ತಾರೆಂಬುದು ಕಾಳಜಿವಹಿಸುತ್ತಾರೆಂಬುದು ಹುಸಿಯಾಗುತ್ತದೆ. ಮಕ್ಕಳು ಹಸೆಮಣೆ ಏರಿದ ಮೇಲೆ ‘ತಾವಾಯಿತು ತಮ್ಮ ಕುಟುಂಬವಾಯಿತು.’ ಎಂದು ಇದ್ದು ಬಿಡುತ್ತಾರೆ. ಯಾಂತ್ರೀಕೃತ ಬದುಕಿನಲ್ಲಿ ಮುಳುಗಿಬಿಡುತ್ತಾರೆ. ಜೀವನದುದ್ದಕ್ಕೂ ಮಕ್ಕಳಿಗೆಂದೇ ಮೈಮುರಿದು ದುಡಿದ ಜೀವಗಳು ವಯೋಸಹಜ ಕಾಯಿಲೆಗೆ ತುತ್ತಾಗಿ ಔಷಧಿ ಚಿಕಿತ್ಸೆ ಸಿಗದೇ ಕಣ್ಣಿನ ಮರೆಯಲಿ ಕಣ್ಣೊರೆಸಿಕೊಳ್ಳುತ್ತವೆ.
ಅನುಕರಣೆ
ಪಾಶ್ಚಾತ್ಯ ಅನುಕರಣೆಯ, ಆಧುನಿಕ ಶೈಲಿಯ, ಗಡಿಬಿಡಿಯ, ಧಾವಂತದ ಬದುಕು ನಮಗೆ ಗೊತ್ತಿಲ್ಲದಂತೆ ನಮ್ಮ ಭದ್ರ ಕುಟುಂಬ ವ್ಯವಸ್ಥೆಗೆ ಕೊಡಲಿ ಪೆಟ್ಟು ಹಾಕುತ್ತಿದೆ. ಬಾಂಧವ್ಯಗಳ ಮಹತ್ವವನ್ನೇ ಮರೆಸುತ್ತಿದೆ. ದುಡ್ಡಿದ್ದರೆ ಏನೆಲ್ಲವನ್ನು ಕೊಳ್ಳಬಹುದು ಎನ್ನುವ ಅಂಧಕಾರದಲ್ಲಿ ಕುರುಡುರಂತೆ ಸಾಗಿಸುತ್ತಿದೆ. ಇದರಿಂದಾಗಿ. ನೋವು ಮರೆಸುವ ನಗುವನ್ನು ಮರೆಯುತ್ತಿದ್ದೇವೆ. ಓದಿಸುವ ನೌಕರಿ ಕೊಡಿಸುವ ಭರದಲ್ಲಿ ನಮ್ಮ ಜೀವನ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸದೇ ಇರುವ ಫಲವೇ ಇದು. ಇಂದು ಮಕ್ಕಳಿಗೆ ತಂದೆ ತಾಯಿ ಬಂಧುಗಳೊಂದಿಗೆ ಕೂಡಿ ಬದುಕುವ ಕಲೆಯನ್ನು ಕಲಿಸಬೇಕಿದೆ. ಆಸೆಗಳ ಭಾವನೆಗಳ ನಿಯಂತ್ರಣವನ್ನು ಹೇಳಿಕೊಡಬೇಕಿದೆ. ಹಿರಿಯರನ್ನು ಗೌರವಿಸುವ ಅವರ ಸಣ್ಣ ಪುಟ್ಟ ಆಸೆಗಳನ್ನು ಪೂರೈಸುವುದನ್ನು ಕಲಿಸಬೇಕಿದೆ. ಪರಸ್ಪರ ಅಕ್ಕರೆಯನ್ನು ತೋರುವ, ನಿಸ್ವಾರ್ಥ ಸಹಾಯ ಮಾಡುವ ಗುಣ ಬೆಳೆಸಬೇಕಿದೆ. ತಪ್ಪು ಒಪ್ಪುಗಳ ಒಪ್ಪುವುದನ್ನು ಅಪ್ಪುವುದನ್ನು ರೂಢಿಸಬೇಕಿದೆ. ಹಾಗಾದಾಗ ಮಾತ್ರ ಭವಿಷ್ಯದ ನಾಗರಿಕರ ಬದುಕು ಆನಂದದ ಪಯಣವಾಗುವುದು.
