ಲೇಖನ
– ಶ್ರೀದೇವಿ ಓಂಕಾರ್
“ನಮ್ಮ ಕಥಾ ಅರಮನೆ”
ಬರಹಗಾರರು
ಉದಯರಶ್ಮಿ ದಿನಪತ್ರಿಕೆ
ಈಗಿನ ಕಾಲದಲ್ಲಿ ನಾಗರೀಕತೆ ಅನ್ನೋ ಮಾತು ವಿರಳವಾಗಿ ಹೋಗುತ್ತಾ ಇದೆ. ಐವತ್ತು ಅರವತ್ತು ವರ್ಷಗಳ ಹಿಂದಿನ ಜನರಿಗೂ ಈಗಿನ ಕಾಲದ ಜನರಿಗೂ ತುಂಬಾ ವ್ಯತ್ಯಾಸ ಕಂಡು ಬರುತ್ತದೆ. ಆಧುಕತೆಯು ಹೆಚ್ಚಿದಂತೆ ಅನಾಗರಿಕತೆಯೂ ಹೆಚ್ಚುತ್ತಾ ಇದೆ ಎಂದರೆ ತಪ್ಪಾಗಲಾರದು. ಮನುಷ್ಯನಲ್ಲಿ ಭಯ ಭಕ್ತಿ ಕಡಿಮೆ ಆಗ್ತಾ ಇದೆ. ಯುವ ಪೀಳಿಗೆಗೆ ಯಾವುದೇ ರೀತಿಯ ಭಯವಿಲ್ಲ. ನಾವೆಲ್ಲರೂ ಹಿರಿಯರಿಗೆ ತಗ್ಗಿ ಬಗ್ಗಿ ನಡೆದುಕೊಂಡು ಹೋಗುತ್ತಿದ್ದೆವು. ದೊಡ್ಡವರ ಮಾತು ಚಾಚೂ ತಪ್ಪದೆ ಪಾಲಿಸಿಕೊಂಡು ಹೋಗುತ್ತಿದ್ದೆವು. ಆದರೆ ಮೋಬೈಲ್, ಲ್ಯಾಪ್ಟಾಪ್ ಇದೇ ಇಂದಿನವರ ಜೀವನ ವಾಗಿದೆ. ಹಾಗೆಯೇ ಹಣವು ಎಲ್ಲರನ್ನೂ ತಪ್ಪು ದಾರಿಗೆ ಕೊಂಡು ಹೋಗ್ತಾ ಇರುವುದು ನೋಡ್ತಾ ಇದ್ದೀವಿ. ಹಾಗೆಯೇ ಎಲ್ಲರಿಗೂ ಶೌಕಿ ಜೀವನ ಬೇಕು. ಮನೆ ಹಿರಿಯರು ಅವರಿಗೆ ಬೇಡಾ. ಅದೂ ಅಲ್ಲದೇ ಯಾರನ್ನೂ ಕೇಳಿದರೂ ಗಂಡ ಹೆಂಡತಿ ಹೊಂದಾಣಿಕೆ ಇಲ್ಲದೇ ವಿಚ್ಛೇದನ ಅತಿಯಾಗಿದೆ. ಪ್ರೀತಿ ಪ್ರೇಮ ಎಂಬ ಶಬ್ದಕ್ಕೆ ಬೆಲೆ ಇಲ್ಲದಂತಾಗಿದೆ. ಪ್ರತಿಯೊಬ್ಬರಿಗೂ ಸ್ವಚ್ಛಂದ ಜೀವನ ಬೇಕು. ಯಾವುದೇ ಬಂಧನ ಬೇಡಾ. ಇದು ನಾಗರೀಕತೆಯ ಲಕ್ಷಣ ಅಲ್ಲ. ಒಬ್ಬರಿಗೆ ಡೈವೋರ್ಸ್ ಕೊಟ್ಟು ಇನ್ನೊಬ್ಬರನ್ನು ಮದುವೆ ಮಾಡಿಕೊಂಡು ಹೋದರೂ ಅಲ್ಲಿಯೂ ಏನೋ ಒಂದು ತಕರಾರು ಇದ್ದೇ ಇರುತ್ತದೆ. ಇಂಥವರ ಮಕ್ಕಳು ಪ್ರೀತಿ ಪ್ರೇಮದಿಂದ ವಂಚಿತರಾಗಿ ಬರೀ ದ್ವೇಷ ಗುಣ ಹೊಂದಬಹುದು.

ಈಗಿನ ಕಾನೂನು ಅವಸ್ಥೆ ಕೂಡಾ ಸರಿ ಇಲ್ಲ. ಹಣ ಇದ್ದವರಿಗೆ ಜಯ ಕಟ್ಟಿಟ್ಟ ಬುತ್ತಿ ಆಗಿದೆ. ಆಗ ಸಭ್ಯ ಜನರಿಗೆ ಹಾಗೂ ಬಡಬಗ್ಗರಿಗೆ ನ್ಯಾಯ ಸಿಗದೇ ನೋವು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದೂ ಒಂದು ಅನಾಗರಿಕತೆಯೇ ಎಂದು ಹೇಳಬಹುದು. ಕೊಲೆ , ಸುಲಿಗೆ, ಕಳ್ಳತನ ಹೆಚ್ಚು ಆಗ್ತಾ ಇದೆ.ಯಾಕೆಂದರೆ ಅಂಥವರಿಗೆ ತಕ್ಕ ಶಿಕ್ಷೆಯನ್ನು ಕೊಡಲು ಕಾನೂನು ವಿಫಲವಾಗಿದೆ. ಎರಡು ದಿನ ಜೈಲಿನಲ್ಲಿ ಹಾಕಿ ನಂತರ ಬಿಟ್ಟು ಬಿಡುತ್ತಾರೆ. ಅದು ಕಳ್ಳರಿಗೂ ತಿಳಿದ ವಿಷಯವೇ ಆಗಿದೆ. ಹೀಗಾಗಿ ಮತ್ತೆ ಮತ್ತೆ ಅದೇ ತಪ್ಪು ಕೆಲಸವನ್ನು ಮಾಡಲು ಹೇಸುವುದಿಲ್ಲ.
ಸಮಾಜದ ಪ್ರತಿಯೊಬ್ಬ ನಾಗರಿಕರು ತಮ್ಮ ತಮ್ಮ ಕೆಲಸಗಳನ್ನು ನಿಷ್ಟೆಯಿಂದ ಮಾಡಿಕೊಂಡು ಹೋಗಬೇಕು. ಹಳ್ಳಿಗಳಲ್ಲಿ ಮೊದಲು ಯಾರಾದರೂ ಏನಾದರೂ ತಪ್ಪು ಮಾಡಿದರೆ ಅದು ಕಾನೂನು ಕಟ್ಟೆಗೆ ಹೋಗುತ್ತಾ ಇರಲಿಲ್ಲ. ಊರಿನ ಪಂಚಾಯತ್ ಅಥವಾ ಊರಿನ ಹಿರಿಯರು ತೀರ್ಮಾನ ತೆಗೆದುಕೊಂಡು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ಕೊಡುವುದು ವಾಡಿಕೆ ಇತ್ತು. ಅಲ್ಲಿ ದುಡ್ಡು ಯಾವುದಕ್ಕೂ ಪ್ರಯೋಜನಕ್ಕೆ ಬರ್ತಾ ಇರಲಿಲ್ಲ.
ಇನ್ನು ನಾಗರೀಕತೆಯ ಎತ್ತಲೋ ಸಾಗಲು ಯುವ ಪೀಳಿಗೆಯವರ ಕುಡಿತವೂ ಕಾರಣವಾಗಿದೆ. ಸಂತೋಷ ಕೂಟ ಎಂದರೆ ಬರೀ ಕುಡಿತವೇ ಮುಖ್ಯ ಎಂದು ತಿಳಿದಿದ್ದಾರೆ. ಲಂಗು ಲಗಾಮು ಇಲ್ಲದೇ ಹುಡುಗ ಹುಡುಗಿ ಎಂಬ ಭೇದವಿಲ್ಲದೆ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದು ನಿಜವಾಗಿಯೂ ಖೇದಕರ ಸಂಗತಿ. ಚಿಕ್ಕಂದಿನಿಂದಲೇ ತಂದೆ ತಾಯಿ ಒಳ್ಳೆಯ ಸಂಸ್ಕಾರ ಕೊಟ್ಟು ಯಾವುದು ತಪ್ಪು, ಯಾವುದು ಸರಿ ಎಂದು ಹೇಳಿ ಕೊಡಬೇಕು. ಇನ್ನೊಂದು “ಸಂಗತಿ ಸಂಗ ದೋಷ”ಎಂದು ಹಿರಿಯರು ಮಾಡಿದ ಗಾದೆ ಇದೆ. ಕೆಲವೊಂದು ಮನೆಗಳಲ್ಲಿ ತಂದೆ ತಾಯಿ ಎಷ್ಟೇ ಸಂಸ್ಕಾರವಂತರು ಇದ್ದರೂ ಮಕ್ಕಳು ಹೊರಗಡೆ ಕೆಟ್ಟ ಚಟಕ್ಕೆ ಬಲಿ ಆಗುತ್ತಿದ್ದಾರೆ. ಇದನ್ನು ಸ್ವತಃ ತಾವೇ ಅರಿತು ಕೊಳ್ಳಬೇಕು. ಹಾಗೂ ನಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡರೆ, ತಪ್ಪು ದಾರಿಯಲ್ಲಿ ಹೋಗುವುದನ್ನು ತಡೆಯಬಹುದು. ಸಮಾಜದ ಕೆಲವು ಆಗುಹೋಗುಗಳನ್ನು ನೋಡಿದರೆ ಭಯ ಆವರಿಸುತ್ತದೆ,’ಎತ್ತ ಸಾಗುತ್ತಿದೆ ನಾಗರೀಕತೆ’ ಎಂದು ಅನಿಸಿದರೆ ತಪ್ಪೇನಿಲ್ಲ.
