ಲೇಖನ – ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ರಾಕೆಟ್ ಮೇಲಕ್ಕೆ ಹಾರುವಾಗ ಒಂದೊಂದೇ ಭಾಗವನ್ನು ಕೆಳಕ್ಕೆ ಬೀಳಿಸುತ್ತದೆ. ಹಗುರವಾದ ಮೇಲೆ ತನ್ನ ಕಕ್ಷೆಯತ್ತ ಮುನ್ನುಗ್ಗುತ್ತದೆ. ಈ ಸಂಗತಿ ನಮಗೆಲ್ಲ ಗೊತ್ತೆ ಇದೆ. ಗಗನದೆತ್ತರಕ್ಕೆ ಹಾರಲು ಯಾರಿಗೆ ಇಷ್ಟವಿಲ್ಲ ಹೇಳಿ? ನಾವೆಲ್ಲ ಗಗನದೆತ್ತರಕ್ಕೆ ಹಾರಲು ಬಯಸುತ್ತೇವೆ. ಆದರೆ ರಾಕೆಟ್‌ನಂತೆ ಬೇಡವಾದ ವಿಷಯಗಳನ್ನು ಕೆಳಕ್ಕೆ ತಳ್ಳುವುದೇ ಇಲ್ಲ. ಬೇಡವಾದ ಸಂಗತಿಗಳನ್ನು ತಲೆಯಲ್ಲಿ ಇಟ್ಟುಕೊಂಡು ಓಡಾಡುತ್ತೇವೆ. ವಿಮಾನದಲ್ಲಿ ಹಾರಬೇಕೆಂದರೆ ಇಂತಿಷ್ಟೇ ಸಾಮಾನುಗಳನ್ನು ತೆಗೆದುಕೊಂಡು ಹೋಗಬೇಕೆಂಬ ನಿಯಮವಿದೆ. ಹಾಗೆಯೇ ಬದುಕಿನಲ್ಲಿ ಮೇಲೇರಲು ಹಗುರವಾಗಬೇಕು ಅಲ್ಲವೇ?

ತಡೆಯುವ ಸಂಗತಿ
ಹಗುರವಾಗಿರುವುದನ್ನು ತಡೆಯುವ ಸಂಗತಿಗಳಲ್ಲಿ ಬಹುಮುಖ್ಯವಾದವು ನಮ್ಮ ಆಲೋಚನೆಗಳೇ ಎಂದರೆ ನಂಬಲೇಬೇಕು. ನಾವು ಇಂದು ಏನಾಗಿದ್ದೇವೆಯೋ ಅದಕ್ಕೆಲ್ಲ ಕಾರಣ ನಮ್ಮ ಆಲೋಚನೆಗಳು. ಆಲೋಚನೆಯು ಎಲ್ಲಿಂದಲೋ ಬಂದಂತೆ ತೋರುತ್ತದೆ. ನಮ್ಮ ಮನಸ್ಸಿನಲ್ಲಿ ಮೂಡುವ ವಿಚಿತ್ರ ಗೊಂದಲಮಯ ಆಲೋಚನೆ ಅಥವಾ ತೊಂದರೆ ಕೊಡುವ ಚಿತ್ರ ಅದು ಹಿಂಸಾತ್ಮಕ ಅಥವಾ ಲೈಂಗಿಕವಾಗಿರಬಹುದು. ಅನುಚಿತ ಅಥವಾ ಮುಜುಗರ ತರುವಂತಹದ್ದು ಏನಾದರೂ ಆಗಿರಬಹುದು. ವಿಷಯ ಏನೇ ಇರಲಿ, ಅದು ಆಗಾಗ್ಗೆ ಆತಂಕಕಾರಿಯಾಗಿರುತ್ತದೆ ಮತ್ತು ಚಿಂತೆ ಅಥವಾ ಅವಮಾನದ ಭಾವನೆಗಳನ್ನು ಉಂಟುಮಾಡಬಹುದು. ನಾವು ಆ ಆಲೋಚನೆಯನ್ನು ಮನಸ್ಸಿನಿಂದ ತಳ್ಳಲು ಪ್ರಯತ್ನಿಸುತ್ತಿದ್ದಂತೆ ಅದು ಹೆಚ್ಚು ಮುಂದುವರೆಯುತ್ತದೆ.
ನಮ್ಮ ಮನಸ್ಸಿನಲ್ಲಿ ಅಪೇಕ್ಷೆಯಿಲ್ಲದೇ ಬರುವ ಗೊಂದಲದ ಆಲೋಚನೆಗಳ ನಮಗೆ ಆತಂಕವನ್ನುಂಟು ಮಾಡಬಹುದು. ಆದರೆ, ಅವು ಸಾಮಾನ್ಯ ಮತ್ತು ಅನಗತ್ಯ ಆಲೋಚನೆಗಳೆಂದರೆ ಏನು ಮತ್ತು ನಿರ್ವಹಿಸಲು ಬಳಸಬಹುದಾದ ಕೆಲ ತಂತ್ರಗಳ ಬಗ್ಗೆ ತಿಳಿಯೋಣ ಬನ್ನಿ.
ಹಾನಿಕಾರಕವಲ್ಲ
ಅಮೇರಿಕದ ಆತಂಕ ಮತ್ತು ಖಿನ್ನತೆಯ ಸಂಘದ ಪ್ರಕಾರ ಒಳನುಗ್ಗುವ ಆಲೋಚನೆಗಳು ಸುಮಾರು ಆರು ಮಿಲಿಯನ್ ಅಮೇರಿಕನ್ನರ ಮೇಲೆ ಪರಿಣಾಮ ಬೀರುತ್ತವೆ ಎಂದು ಭಾವಿಸಲಾಗಿದೆ. ಕೆಲವೊಮ್ಮೆ ಒಳನುಗ್ಗುವ ಆಲೋಚನೆಗಳು ಮಾನಸಿಕ ಆರೋಗ್ಯ ಅಸ್ವಸ್ಥತೆಯೊಂದಿಗೆ ಸಂಬಂಧ ಹೊಂದಿವೆ. ಅವು ಪುನರಾವರ್ತಿತ ನಡುವಳಿಕೆಗಳನ್ನು ತಡೆಯಲು ಪ್ರಯತ್ನಿಸುವ ಕಡ್ಡಾಯಗಳನ್ನು ಪ್ರೇರೇಪಿಸುತ್ತವೆ. ಅಪಘಾತ ಅಥವಾ ಹಿಂಸಾತ್ಮಕ ದಾಳಿಯಂತಹ ಜೀವಕ್ಕೆ ಅಪಾಯಕಾರಿ ಅಥವಾ ಒತ್ತಡದ ಘಟನೆಯಿಂದ ಪ್ರಚೋದಿಸಬಹುದು. ಆದರೆ ಆಲೋಚನೆಗಳನ್ನು ಅನುಭವಿಸುವ ಅನೇಕ ಜನರು ಮಾನಸಿಕ ಅನಾರೋಗ್ಯ ಹೊಂದಿರುವುದಿಲ್ಲ. ತೊಂದರೆ ಉಂಟುಮಾಡಬಹುದು. ಆದರೆ ಅವು ಹಾನಿಕಾರಕವಲ್ಲ.
ಗುರುತಿಸುವುದು ಹೇಗೆ?
ಹೀಗೆ ಅನಗತ್ಯವೆನಿಸುವ ಒಳನುಗ್ಗುವ ಆಲೋಚನೆಗಳನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಉಂಟಾಗುತ್ತದೆ. ಸಾಮಾನ್ಯವಾಗಿ ಆ ಆಲೋಚನೆಗಳು ಇತರೆ ಆಲೋಚನೆಗಳಿಗಿಂತ ಬಹಳ ಭಿನ್ನವಾಗಿರುತ್ತವೆ. ಅವು ವಿಶಿಷ್ಟ ಅಲ್ಲ ಎನಿಸುತ್ತಿದ್ದರೂ ಹಿಂಸಾತ್ಮಕವಾಗಿರಬಹುದು. ಒಂದು ಯೋಚನೆ ತೊಂದರೆ ಕೊಡುತ್ತಿದ್ದರೆ ಮತ್ತು ನೀವು ಅದನ್ನು ಮನಸ್ಸಿನಿಂದ ಹೊರಹಾಕಲು ಬಯಸಿದರೆ ಅದು ಅನಗತ್ಯ ಯೋಚನೆಯಾಗಿರಬಹುದು. ನೀವು ಹೆಚ್ಚು ಯೋಚಿಸಿದಷ್ಟೂ ಅವು ನಿಮ್ಮನ್ನು ಹೆಚ್ಚು ಆತಂಕಕ್ಕೆ ದೂಡಬಹುದು. ನಿಮ್ಮೊಳಗೆ ಯೋಚಿಸಿ ಅದು ಕೇವಲ ಒಳನುಗ್ಗುವಂತಹ ಆಲೋಚನೆ ಅದು ನಾನು ಹೇಗೆ ಯೋಚಿಸುತ್ತೇನೆ ಎಂಬುದಲ್ಲ. ನಾನು ನಂಬುವಂಥದ್ದಲ್ಲ ಮತ್ತು ನಾನು ಏನು ಮಾಡಲು ಬಯಸುತ್ತೇನೋ ಅದು ಅಲ್ಲ ಎನಿಸಿದರೆ ಅವು ಬೇಡವಾದ ಆಲೋಚನೆಗಳೆಂದು ಗುರುತಿಸಬೇಕು.
ಆಗಮನ ಸಹಜ
ಬೇಡದ ಆಲೋಚನೆಗಳು ಬಂದಾಗ ಅದನ್ನು ಒಪ್ಪಿಕೊಳ್ಳಿ ಅದನ್ನು ದೂರ ಮಾಡಲು ಪ್ರಯತ್ನಿಸಬೇಡಿ. ವಿಚಿತ್ರ ಅಥವಾ ಗೊಂದಲದ ಆಲೋಚನೆ ಇರುವುದು ನಿಮ್ಮಲ್ಲಿ ಏನೋ ತಪ್ಪಾಗಿದೆ ಎಂಬುದನ್ನು ಸೂಚಿಸುವುದಿಲ್ಲ ಎಂಬುದನ್ನು ಮರೆಯಬಾರದು. ಬೇಡವಾದ ಆಲೋಚನೆ ಮನಸ್ಸಿಗೆ ನುಗ್ಗಿದಾಗ ಎದೆಯ ಗುಂಡಿಗೆಯಲ್ಲಿ ಆತಂಕ ಆವರಿಸುತ್ತದೆ. ಎದೆಯ ಗುಂಡಿಗೆಯ ಸದ್ದು ಹೆಚ್ಚುತ್ತದೆ. ಇದೇಕೆ ಹೀಗೆ ನನಗೆ ಬೇಡವಾದ ಆಲೋಚನೆಗಳೇ ಬೆನ್ನು ಹತ್ತಿವೆ ಎಂಬ ಪ್ರಶ್ನೆ ಕಣ್ಮುಂದೆ ನಿಂತು ಬಿಡುತ್ತದೆ. ಸುಂದರ ಆಲೋಚನೆಗಳನ್ನು ಹೊಂದಿರುವ ನನಗೆ ಈ ಅನಗತ್ಯ ಯೋಚನೆಗಳು ದಾಪುಗಾಲು ಹಾಕಿ ಏಕೆ ಒಳಕ್ಕೆ ನುಗ್ಗುತ್ತಿವೆ. ಮನಸ್ಸನ್ನು ಕಬ್ಬಿಣದಂತೆ ಬಲಿಷ್ಟಪಡಿಸಿದರೂ ಕಿಟಕಿಯ ಸಣ್ಣ ಕಿಂಡಿಯಿಂದ ಸೂರ್ಯನ ಕಿರಣ ತೂರಿ ಬರುವಂತೆ ಇವು ಬಂದೇ ಬಿಡುತ್ತವೆ. ತೀಕ್ಷ್ಣ ದೃಷ್ಟಿಯಿಂದ ಆಲೋಚನೆಗಳನ್ನು ಗಮನಿಸುತ್ತಿದ್ದರೂ ಆಶ್ಚರ್ಯವೆಂಬಂತೆ ಇವುಗಳ ಆಗಮನ ಆಗಿಯೇ ಬಿಡುತ್ತದೆ. ಇವುಗಳ ಆಗಮನ ಸಹಜ ಎಂಬುದನ್ನು ತಿಳಿಯುವುದು ಮುಖ್ಯ.
ಒದ್ದಾಡುವ ಸ್ಥಿತಿ
ಇಂದಿನ ದಾವಂತದ ಬದುಕಿನಲ್ಲಿ ಜೀವನ ಶೈಲಿಯು ಒತ್ತಡದ ಮತ್ತು ತೋರಿಕೆಯ ಬೆನ್ನ ಹತ್ತಿದೆ. ವ್ಯಾಯಾಮ ಅನಿಯಮಿತ ನಿದ್ರೆ, ಕೆಲಸದ ಒತ್ತಡ ಎಲ್ಲವೂ ಯೋಚನೆಗಳನ್ನು ನಿಭಾಯಿಸುವ ಕ್ಷಮತೆಯನ್ನು ಕಳೆದುಕೊಂಡು ಒದ್ದಾಡುವ ಸ್ಥಿತಿ ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇವು ಜೀವವನ್ನು ಅಪಾಯಕ್ಕೆ ಸಿಲುಕಿಸದೇ ಇದ್ದರೂ ಜೀವನವನ್ನು ಭ್ರಮೆಯಿಂದ ತುಂಬಿಸುತ್ತವೆ. ಹೊರಬರಲಾಗದ ಸ್ಥಿತಿಯಲ್ಲಿ ತಂದು ನಿಲ್ಲಿಸುತ್ತವೆ. ಇಂಥ ಸಮಯದಲ್ಲಿ ಹಗುರವಾಗಿರಬೇಕು.
ಹಗುರವಾಗಿರುವುದೆಂದರೆ..?
ಹಗುರವಾಗಿರುವುದು ಎಂದರೆ ಆಶಾವಾದಿಯಾಗಿರುವುದು. ಬೇಡವಾದ ಆಲೋಚನೆಗಳು ಪ್ರತಿದಿನ ಬರುತ್ತವೆ. ಹಗುರವಾಗಲು ನೀವು ಸಮರ್ಪಿತವಾದಾಗ ಖಂಡಿತ ಅದು ಬದುಕಿನ ಒಂದು ಭಾಗವಾಗುತ್ತದೆ. ಆಶಾವಾದಿಯಾಗಿರುವುದು ಅನಗತ್ಯವಾದುದನ್ನು ಮೀರಿಸಲು ನೆರವಾಗುವುದು. ದಿನವನ್ನು ಪ್ರತಿ ರಾತ್ರಿ ತಿರುವಿ ಹಾಕಿದರೆ ಭಾರವಾಗಿಸುವುದನ್ನು ತೆಗೆದು ಹಾಕಬಹುದು. ಅಷ್ಟೇ ಅಲ್ಲ ಹಗುರಾಗುವುದನ್ನು ಕಲಿಯಬಹುದು.
ಕೊನೆ ಹನಿ
ಅನಗತ್ಯ ಆಲೋಚನಗೆಳಲ್ಲಿ ಮುಳುಗಿ ನಮ್ಮಲ್ಲಿ ಹುದುಗಿರುವ ದೈತ್ಯ ಶಕ್ತಿಯನ್ನು ಕಳೆದುಕೊಳ್ಳಬಾರದು. ಅಗತ್ಯವಿಲ್ಲದ ವಿಚಾರಗಳಲ್ಲಿ ಮುಳುಗಿದರೆ ಜೀವನ ಚೂರು ಚೂರಾಗುವುದು ಖಂಡಿತ. ಒಮ್ಮೊಮ್ಮೆ ನಮ್ಮ ಸ್ವಲ್ಪ ನಿರ್ಲಕ್ಷ್ಯತೆಯು ನಮ್ಮನ್ನು ದೊಡ್ಡ ಅಪಾಯಕ್ಕೆ ತಂದು ನಿಲ್ಲಿಸಬಹುದು. ಹಗುರಾಗುವುದೆಂದರೆ ಪ್ರತಿನಿತ್ಯ ಒಂದಿಷ್ಟು ಶಕ್ತಿಯನ್ನು ಮೀಸಲಿಟ್ಟಂತೆ. ನಾವು ನಮ್ಮದೆಲ್ಲವನ್ನು ನೀಡಬೇಕು. ಅತ್ಯುತ್ತಮವಾದುದನ್ನು ಮಾಡಬೇಕು. ಆಗ ಬದುಕು ಅದ್ಭುತವಾಗಿರುತ್ತದೆ. ಸಾಮಾನ್ಯವಾಗಿ ಬೇಡವಾದ ಆಲೋಚನೆಗಳನ್ನು ಬಿಡುವುದರಲ್ಲಿಯೇ ಮಹಾನತೆಯ ಅವಕಾಶ ಬಂದೊದಗುತ್ತದೆ. ಕವಿವಾಣಿಯಂತೆ “ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ,”
