ಬಿಜೆಪಿ ಲೀಡರ್ ಲೆಸ್ ಪಾರ್ಟಿ | ಬಿಜೆಪಿ ಮೈತ್ರಿಯಿಂದ ಜೆಡಿಎಸ್‌ಗೆ ಲಾಭ
ಬೆಂಗಳೂರು: ಬಿಜೆಪಿಯಿಂದ ಹಲವು ಪ್ರಭಾವಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ , ಕಾಂಗ್ರೆಸ್ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಲೋಕಸಭಾ ಚುನಾವಣೆ ಎದುರಿಸಲು ಜೆಡಿಎಸ್- ಬಿಜೆಪಿ ಮೈತ್ರಿಗೆ ಸಿದ್ಧತೆ ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ಸಹ ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಆಪರೇಷನ್ ಹಸ್ತ ನಡೆಸುತ್ತಿದೆ. ಈಗಾಗಲೇ ಕೆಲ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಪ್ರಭಾವಿ ನಾಯಕರುಗಳು ಕಾಂಗ್ರೆಸ್ ಸೇರಲಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಹಲವು ತಿಂಗಳಿನಿಂದ ಹಲವು ಮಾಜಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ನಿನ್ನೆ ರಾಮಣ್ಣ ಲಮಾಣಿ ಮತ್ತು ಎಂ.ಪಿ. ಕುಮಾರಸ್ವಾಮಿ ಮತ್ತೆ ಸಂಪರ್ಕ ಮಾಡಿದಾಗ ಡಿಕೆ ಶಿವಕುಮಾರ್ ಬಳಿ ಕರೆದೊಯ್ದಿದ್ದೆ. ಮುಂದಿನ ವಾರ ಅವರನ್ನು ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
”ಬಿಜೆಪಿಯಲ್ಲಿ ಬೇಜಾರಾದವರು ಬಹಳಷ್ಟು ಜನ ಇದ್ದಾರೆ. ಲೀಡರ್ ಲೆಸ್ ಪಾರ್ಟಿ ಹೇಗಿರುತ್ತದೆ ಎಂಬುದಕ್ಕೆ ಈಗ ಬಿಜೆಪಿ ಉದಾಹರಣೆ. ಮಾಜಿ ಶಾಸಕರು, ಜಿಲ್ಲಾ, ತಾಲೂಕು ಮುಖಂಡರು ಸಂಪರ್ಕ ಮಾಡುತ್ತಿದ್ದಾರೆ.
”ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ, ಶೂನ್ಯ ಪರಿಸ್ಥಿತಿ ಉಳಿದಿದೆ. ಬಿಜೆಪಿಯಲ್ಲಿ ನಾನು ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನಾಗಿ ಎಷ್ಟೋ ಜನರನ್ನು ಬೆಳೆಸಿದ್ದರಿಂದ ನೇರವಾಗಿ ಅವರು ನನ್ನ ಸಂಪರ್ಕಕ್ಕೆ ಬರುತ್ತಿದ್ದಾರೆ. ನನ್ನ ನಾಯಕತ್ವದಲ್ಲಿ ಇರುತ್ತೇವೆ ಎಂದು ಸ್ವ ಇಚ್ಛೆಯಿಂದ ಬರುತ್ತಿದ್ದಾರೆ. ಬಿಟ್ಟು ಬನ್ನಿ ಎಂದು ನಾನು ಯಾರಿಗೂ ಒತ್ತಾಯಿಸಲು ಹೋಗಿಲ್ಲ. ಅವರಾಗಿಯೇ. ಬರುತ್ತಿರುವವರನ್ನು ಮಾತ್ರ ಸೇರ್ಪಡೆ ಮಾಡಿಸುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಮಾತನಾಡಿದ ಶೆಟ್ಟರ್, ”ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಪ್ಲಸ್ ಮೈನಸ್ ಏನೂ ಇಲ್ಲ. ಮೈತ್ರಿಯಿಂದ ಜೆಡಿಎಸ್‌ಗೆ ಲಾಭವೇ ಹೊರತು ಬಿಜೆಪಿಗೆ ಲಾಭ ಸಾಧ್ಯವೇ ಇಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ದುರ್ಬಲವಾಗಿದೆ. ಮೈತ್ರಿಯಿಂದ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಡಾಮಿನೇಟ್ ಮಾಡುತ್ತದೆ. ಮೈತ್ರಿಯಿಂದ ಬಿಜೆಪಿ ಮತ್ತಷ್ಟು ದುರ್ಬಲ ಆಗುತ್ತದೆ. ರಾಜ್ಯ ಬಿಜೆಪಿ ನಾಯಕರನ್ನು ಎಷ್ಟು ಸೈಡ್ ಲೈನ್ ಮಾಡಿದ್ದಾರೆ ಎಂಬುದಕ್ಕೆ ಮೊನ್ನೆಯ ದೆಹಲಿಯ ಸಭೆಯೇ ಸಾಕ್ಷಿ ಎಂದರು.