ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿ ಸೇರಿದಂತೆ ವಿವಿಧ ಶರಣರ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ಪ್ರತ್ಯೇಕ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಮುಂಬರುವ ದಿನಗಳಲ್ಲಿ ಪ್ರಾಧಿಕಾರದ ಕಚೇರಿ ಆರಂಭಿಸುವ ಮೂಲಕ ಪ್ರಾಧಿಕಾರದ ಕಾರ್ಯಗಳು ಆರಂಭವಾಗಲಿವೆ ಎಂದು ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಗುರು, ಸಾಂಸ್ಕ್ರತಿಕ ನಾಯಕ ಬಸವೇಶ್ವರರ ವಿಚಾರಧಾರೆ-ತತ್ವಗಳು ಜಗತ್ತಿಗೆ ಮುಟ್ಟಿಸುವ ಕಾರ್ಯದಲ್ಲಿ , ಪ್ರಚಾರಗೈಯಲು ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಈ ವರ್ಷ ಬಸವೇಶ್ವರರ ಐಕ್ಯಸ್ಥಳ ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಅದ್ದೂರಿ ಕಾರ್ಯಕ್ರಮ ಎರಡು ದಿನಗಳ ಕಾಲ ಹಮ್ಮಿಕೊಂಡಿದೆ. ಮುಂಬರುವ ದಿನಗಳಲ್ಲಿಯೂ ಬಸವೇಶ್ವರರು ಜನಿಸಿದ ಈ ನೆಲದಲ್ಲಿಯೂ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತರುವುದಾಗಿ ಹೇಳಿದ ಅವರು,ಈಗಾಗಲೇ ನಾನು ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕನಾದ ನಂತರ ಮೂರು ಅವಧಿಯಲ್ಲಿ ಬಸವೇಶ್ವರ ಜನಿಸಿದ ಈ ನೆಲ ಸೇರಿದಂತೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸರ್ಕಾರವು ಬಸವೇಶ್ವರರ ಕರ್ಮಸ್ಥಾನ ಬಸವಕಲ್ಯಾಣ, ಐಕ್ಯಸ್ಥಳ ಕೂಡಲಸಂಗಮದ ಅಭಿವೃದ್ಧಿಗೆ ಆದ್ಯತೆ ನೀಡಿದಂತೆ ಅವರ ಜನಿಸಿದ ಈ ನೆಲದ ಅಭಿವೃದ್ಧಿಗೂ ಆದ್ಯತೆ ನೀಡಲಿದೆ. ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಲಾಗುವುದು. ಇದಕ್ಕೆ ಬೇಕಾದ ಅನುದಾನ ತರುವುದಾಗಿ ಹೇಳಿದರು.
ಬಸವನಬಾಗೇವಾಡಿಯಲ್ಲಿರುವ ಬಸವೇಶ್ವರ ಯಾತ್ರಿ ನಿವಾಸವನ್ನು ಮೇಲ್ದರ್ಜೆಗೆ ಏರಿಸಲು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ರೂ. ೭೫ ಲಕ್ಷ ಅನುದಾನ ಬಿಡುಗಡೆಯಾಗಿದೆ. ಇಲ್ಲಿ ಇನ್ನಷ್ಟು ಕೋಣೆಗಳನ್ನು ಬರುವ ಯಾತ್ರಿಗಳಿಗೆ ನಿರ್ಮಿಸಲಾಗುವುದು. ರಸ್ತೆಗೆ ರೂ.೨೫ ಲಕ್ಷ ಬಿಡುಗಡೆಯಾಗಿದೆ. ತಾಲೂಕಿನ ಮುತ್ತಗಿ ಗ್ರಾಮದಲ್ಲಿಯೂ ಯಾತ್ರಿ ನಿವಾಸಿ ನಿರ್ಮಾಣಕ್ಕೆ ರೂ. ೭೫ ಲಕ್ಷ ಬಿಡುಗಡೆಯಾಗಿದೆ. ಬಸವನಬಾಗೇವಾಡಿಯಲ್ಲಿ ದಾಸೋಹ ಭವನ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದರು.
ಬಸವನಬಾಗೇವಾಡಿ ಹೃದಯ ಭಾಗದಲ್ಲಿ ಜಿಲ್ಲೆಯಲ್ಲಿಯೇ ಸುಸಜ್ಜಿತವಾದ ಮೆಗಾಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಮಾಡಲಾಗಿದ್ದ ೧೩ ಕೋಟಿ ಸಾಲದಲ್ಲಿ ೮ ಕೋಟಿ ಸಾಲ ಮರುಪಾವತಿ ಮಾಡಲಾಗಿದೆ. ಉಳಿದ ೫ ಕೋಟಿಯನ್ನು ಶೀಘ್ರದಲ್ಲಿಯೇ ಸಾಲ ತೀರಿಸಲಾಗುವುದು. ಈ ಮೆಗಾಮಾರುಕಟ್ಟೆ ರೂ.೫೦ ಕೋಟಿ ಮೌಲ್ಯದ ಆಸ್ತಿಯಾಗಿದೆ ಎಂದರು.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಅವರು ಎಸ್ಪಿಗೆ ಕೈ ಮಾಡಿದ್ದು ಸರಿನಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಿಡುವದು ಸರಿನಾ ನೀವೇ ಹೇಳಿ. ಇದು ನೈತಿಕತೆ ಅಲ್ಲ ಎಂದರು.