ಲೇಖನ
ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಎಲ್ಲ ವಸ್ತುಗಳಲ್ಲಿಯೂ, ವಿಷಯಗಳಲ್ಲಿಯೂ ಶಾಶ್ವತತೆಯನ್ನು ಹುಡುಕುವ ನಾವುಗಳು ನಮ್ಮ ಬದುಕೇ ಆಶಾಶ್ವತತೆಯ ತೂಗುಯ್ಯಾಲೆಯಲ್ಲಿ ತೂಗುತ್ತದೆ ಎಂಬ ಸತ್ಯವನ್ನು ಮರೆತಿದ್ದೇವೆ. ಜೀವನವನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಶಕ್ತಿ ಈ ಆಶಾಶ್ವತತೆಯ ಪರಿಕಲ್ಪನೆಗಿದೆ. ಸಂತಸ, ದುಃಖ, ಸೋಲು, ಯಶಸ್ಸು, ಸಂಬಂಧಗಳು ಮತ್ತು ನಮ್ಮ ಇಡೀ ಬದುಕು ಆಶಾಶ್ವತ.
ನೂರು ಕಾಲ ನಾವು ಬಾಳುತ್ತೇವೋ ಇಲ್ಲವೇ ಮುಂದಿನ ಕ್ಷಣವೇ ಇಲ್ಲವಾಗುತ್ತೇವೋ ಎಂಬ ಅರಿವು ಕೂಡ ನಮಗೆ ಇರುವುದಿಲ್ಲ.. ಆದ್ದರಿಂದಲೇ ಭಗವಾನ್ ಶ್ರೀ ಕೃಷ್ಣನಿಗೆ ಅರ್ಜುನನು ಸುಖದಲ್ಲಿ ಮತ್ತು ದುಃಖದಲ್ಲಿ ನಮ್ಮನ್ನು ನಿರ್ಲಿಪ್ತರಾಗಿಸಲು, ಮತ್ತೆ ಜೀವನ್ಮುಖಿಯಾಗಿಸಲು ಒಂದು ವಾಕ್ಯವನ್ನು ಹೇಳು ಎಂದು ಹೇಳಿದಾಗ ಶ್ರೀ ಕೃಷ್ಣನು ‘ಈ ಕ್ಷಣ ಶಾಶ್ವತವಲ್ಲ, ಈ ಸಮಯ ಕಳೆದು ಹೋಗುತ್ತದೆ’ ಎಂಬ ಪರಮ ಸತ್ಯವನ್ನು ಅರುಹಿದ.
ಸಾಮಾಜಿಕವಾಗಿ ನೋಡುವುದಾದರೆ ಅತ್ಯಂತ ಕಡಿಮೆ ವರಮಾನವಿರುವ ವ್ಯಕ್ತಿ ನಾನು ಖರೀದಿಸುವ ವಸ್ತುಗಳು, ಬಟ್ಟೆಗಳು ಬಹಳ ದಿನಗಳ ಕಾಲ ತಾಳಿಕೆ ಬರಲಿ ಎಂದು ಅಪೇಕ್ಷೆ ಪಡುತ್ತಿದ್ದುದು ಸಹಜವಾಗಿತ್ತು. ನಮ್ಮ ತಾಯಂದಿರ ಚಿನ್ನದ ಒಡವೆಗಳು ಮತ್ತು ಸೀರೆಗಳಂತೂ ತಲೆತಲಾಂತರಗಳವರೆಗೆ ಸಾಗಿ ಹೋಗುತ್ತಿದ್ದವು. ಆದರೆ ಬದಲಾದ ಕಾಲಘಟ್ಟದಲ್ಲಿ ಪ್ರತಿಯೊಂದು ಹೊಸದೇ ಆಗಿರಬೇಕೆಂಬ ಬಯಕೆಯಲ್ಲಿ ಹಳೆಯ ಚಿನ್ನದ ಒಡವೆಗಳನ್ನು ಕರಗಿಸಿ ಇಲ್ಲವೇ ಮಾರಿ ಹೊಸದನ್ನು ಕೊಳ್ಳುವ ಪರಿಪಾಠ ಇದ್ದರೆ, ಸೀರೆಗಳು ಕಪಾಟಿನ ಮೂಲೆಯಲ್ಲಿ ನುಸಿ ಹಿಡಿದು ಯಾರ ಉಪಯೋಗಕ್ಕೂ ಬಾರದೆ ಕುಳಿತಿರುತ್ತವೆ.
ಈ ಹಿಂದೆ ರೈತನ ಜೊತೆಗಾರರಾಗಿದ್ದ ಎತ್ತು ಚಕ್ಕಡಿಗಳು
ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮೂಲೆಗುಂಪಾಗಿವೆ. ರೈತನ ಬದುಕು ಮೂರಾಬಟ್ಟೆ ಆಗಿರುವಾಗ ಕೃಷಿಗೆ ಸಂಬಂಧಿಸಿದ ಗುಡಿ ಕೈಗಾರಿಕೆಗಳು ಕೂಡ ನೆಲ ಕಚ್ಚಿದೆ. ಬದಲಾವಣೆಯ ಬಹುದೊಡ್ಡ ಗಾಳಿಯೇ ಬೀಸಿದ್ದು ಎಲ್ಲರೂ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಈ ನಗರಗಳು ಬಕಾಸುರನ ಹೊಟ್ಟೆಯಿದ್ದಂತೆ.. ಎಲ್ಲರನ್ನೂ ತಮ್ಮ ಮಡಿಲಿಗೆ ಹಾಕಿಕೊಳ್ಳುವ ನಗರ ಜೀವನವು ಮರೀಚಿಕೆಯ ಜೀವನವನ್ನು ದಯಪಾಲಿಸಿದೆ. ಅತ್ತ ಹಳ್ಳಿಯ ಗ್ರಾಮೀಣ ಜೀವನಕ್ಕೆ ಹೊಂದಿಕೊಳ್ಳದೆ ಇತ್ತ ಪಟ್ಟಣದ ರಂಗುರಂಗಿನ ಬೆಳಕಿನಲ್ಲಿ ಬದುಕಿನ ಬಂಡಿಯನ್ನು ಎಳೆಯಲಾಗದೆ ಒದ್ದಾಡುವ ಜನರು ಅಲ್ಲಿಯೂ ಇಲ್ಲಿಯೂ ಸಲ್ಲದವರಾಗಿ ನಿಟ್ಟುಸಿರು ಬಿಡುತ್ತಾರೆ.
ಈ ಹಿಂದೆ ಹೇಳುತ್ತಿದ್ದ ‘ಹಂಗಿನರಮನೆಗಿಂತ ಗಂಜಿ ಊಟವೇ ಲೇಸು’ ಎಂಬ ಮಾತು ಜನರ ಬಾಯಿಂದ ಮರೆಯಾಗಿದೆ.
ಅಭಿವೃದ್ಧಿ ಎಂಬುದು ಒಂದು ಪರಿಕಲ್ಪನೆ.. ಬದುಕಿನಲ್ಲಿ ಈಗಿರುವುದಕ್ಕಿಂತ ಹೆಚ್ಚಿನದನ್ನು ಸಾಧಿಸುವುದು ಮತ್ತು ಆ ನಿಟ್ಟಿನಲ್ಲಿ ಪ್ರಯತ್ನ ಪಡುವುದು ತಪ್ಪಲ್ಲ. ಆದರೆ ನಮ್ಮೆಲ್ಲ ನಿದ್ದೆ ನೆಮ್ಮದಿಗಳನ್ನು ಕಸಿಯುವ ಮೂಲಕ ಅಭಿವೃದ್ಧಿ ಹೊಂದಿದ್ದೇವೆ ಎಂದು ಭಾವಿಸಿದರೆ ಅದು ಶುದ್ಧ ಮೂರ್ಖತನ. ಹಳ್ಳಿಯಲ್ಲಿರಲಿ ಇಲ್ಲವೇ ದಿಲ್ಲಿಯಲ್ಲಿರಲಿ ಬದುಕು ಸಾಗಿಸಲು ಬೇಕಾಗುವುದು ಒಂದು ಉದ್ಯೋಗ, ಉತ್ತಮ ಮೂಲಭೂತ ಸೌಲಭ್ಯಗಳು, ಒಳ್ಳೆಯ ಆರೋಗ್ಯ, ಕುಟುಂಬದಲ್ಲಿ ಸಾಮರಸ್ಯ, ಉತ್ತಮ ಜೀವನ ಶೈಲಿ ಮತ್ತು ಒಳ್ಳೆಯ ನೆರೆಹೊರೆ ಇವಿಷ್ಟು ಇದ್ದರೆ ಸಾಕು.
ಸಂತಸ ಮತ್ತು ದುಃಖಗಳು ಬದುಕೆಂಬ ಸಾಗರದಲ್ಲಿ
ಬರುವ ಹಿರಿದಾದ ಅಲೆಗಳು.. ಜೀವನದ ಅತಿ ದೊಡ್ಡ ಪಾಠಗಳು. ಕಣ್ಣು ಪಿಳುಕಿಸುವುದರಲ್ಲಿ ನಮಗೆ ಹಿರಿದಾದ ಪಾಠವನ್ನು ಕಲಿಸಿ ಕೊಡುವ ಈ ಬದುಕಿನಲ್ಲಿ ನಾವು ಹೋಲಿಕೆ ಮಾಡಿಕೊಳ್ಳದಷ್ಟು ವ್ಯತ್ಯಾಸಗಳಿವೆ. ಅಂತೆಯೇ ಯಾರ ಮೇಲಾದರೂ ಸಿಟ್ಟು, ದ್ವೇಷ, ಅಸೂಯೆಗಳನ್ನು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಅಹಮ್ಮಿನ ಕೋಟೆಯೊಳಗೆ ನಾವು ಬಂಧಿಯಾಗಬೇಕಿಲ್ಲ.
ನಾವೇನು ಇಲ್ಲಿಯೇ ಗೂಟ ಹೊಡೆದುಕೊಂಡು ನೂರಾರು ವರ್ಷ ಬದುಕುವುದಿಲ್ಲ. ಹುಟ್ಟಿನಿಂದ ತಾರುಣ್ಯದವರೆಗೂ ಜೊತೆಯಾಗಿ ಬೆಳೆದ ಅಣ್ಣ-ತಮ್ಮಂದಿರು ಮುಂದೆ ದಾಯಾದಿಗಳಾಗಿ ಜೀವನಪೂರ್ತಿ ಒಬ್ಬರಿನ್ನೊಬ್ಬರನ್ನು ದ್ವೇಷಿಸುತ್ತಾ ಅದರಲ್ಲೂ ಒಬ್ಬ ಮರಣ ಹೊಂದಿದಾಗ ಅಯ್ಯೋ ನಮ್ಮಣ್ಣನನ್ನು ನಾನು ಮಾತಾಡಿಸಲಿಲ್ಲ ಎಂದು ಹಲುಬುವ ಬದಲು ಒಂದು ಬಾರಿ ಜಗಳವಾದರೂ ಪರವಾಗಿಲ್ಲ.. ಕಾರ್ಮೋಡ ಮಳೆಯನ್ನು ಸುರಿಸಿ ಹಗುರವಾಗುವಂತೆ ಎಲ್ಲವನ್ನು ಒದರಿ ಮತ್ತೆ ಮೊದಲಿನಂತೆ ಇರಲು ಪ್ರಯತ್ನಿಸಿ.. ನೀವು ಕೂಡ ನಿಮಗೆ ಉತ್ತಮ ಪ್ರತಿಕ್ರಿಯೆ ದೊರೆಯದಿದ್ದಾಗ ತುಸು ಸಮಯ ನಿಮಗೆ ನೀವೇ ನೀಡಿಕೊಂಡು ಮುಂದಾಗುವ ಬದಲಾವಣೆಗಳನ್ನು ಗಮನಿಸಿ.
ಮನಸ್ಸಿಗೆ ಅಹಿತವನ್ನುಂಟು ಮಾಡುವ ವಿಷಯಗಳನ್ನು ದೂರವಿಡಿ, ಎಲ್ಲರನ್ನೂ ಕ್ಷಮಿಸಿ. ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿ ನಗುನಗುತ್ತಾ ಬದುಕನ್ನು ಸಾಗಿಸಿ. ಅದೆಷ್ಟೇ ಸಂಕಟ, ನೋವು, ನಿರಾಶೆಗಳನ್ನು ನೀವು ಅನುಭವಿಸಿದ್ದರೂ ನಾಳೆ ನಿಮ್ಮೊಂದಿಗಿದೆ ಎಂಬ ಭರವಸೆ ಬದುಕಿನಲ್ಲಿ ಇದ್ದರೆ ಸಾಕು.
ಬದುಕಿನ ಈ ನಶ್ವರತೆಯನ್ನು ಅರಿತವರಿಗೆ ಈ ಹಿಂದೆ ಬಾಳಿದಷ್ಟು ದಿನಗಳನ್ನು ಮುಂದೆ ತಾನು ಬಾಳುವುದಿಲ್ಲ ಎಂಬುದರ ಅರಿವಾಗಿದ್ದು ನಮ್ಮಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ.
ಇದೀಗ ಅತ್ಯಂತ ಪ್ರೀತಿ ಪಾತ್ರರಾದ ವಯೋವೃದ್ಧರ ವಿದಾಯಗಳು ನಮ್ಮನ್ನು ಕಂಗೆಡಿಸುವುದಿಲ್ಲ.. ಎಲ್ಲರೂ ಒಂದಲ್ಲ ಒಂದು ದಿನ ಶಾಶ್ವತವಾಗಿ ಈ ಲೋಕದಿಂದ ವಿದಾಯ ಹೇಳಬೇಕು.. ನಾವು ಕೂಡ ಆ ಸಾಲಿನಲ್ಲಿದ್ದೇವೆ ಎಂಬ ನಿಷ್ಠುರ ಸತ್ಯದ ಅನಾವರಣ ನಮಗೆ ಆಗುತ್ತದೆ.
ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುವುದಿಲ್ಲ ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲುವುದಿಲ್ಲ ಎಂಬ ಗಾದೆಯ ಮಾತಿನಂತೆ
ಯಾರ ಮರಣದಿಂದಲೂ ಈ ಪ್ರಪಂಚ ನಿಂತು ಹೋಗುವುದಿಲ್ಲ ಎಂಬ ನಿಷ್ಠುರ ಸತ್ಯವನ್ನು ಅರಗಿಸಿಕೊಂಡರೆ ನಾನಿಲ್ಲದೆ ಅವರ ಬದುಕೇನು? ಎಂಬ ಪ್ರಶ್ನೆ ಅನವಶ್ಯಕ ಎಂಬುದರ ಅರಿವಾಗುತ್ತದೆ.
ನನ್ನೆದುರಿಗಿರುವ ವ್ಯಕ್ತಿಯ ಸಿರಿ ಸಂಪತ್ತು, ಅಧಿಕಾರ ಮತ್ತು ಸ್ಥಾನಮಾನಗಳು ನನ್ನನ್ನು ಭಯಪಡಿಸುವುದಿಲ್ಲ
ಅತಿ ದೊಡ್ಡ ಶ್ರೀಮಂತನೊಂದಿಗೆ ನಯ ವಿನಯದಿಂದಲೂ, ನನಗಿಂತ ಕೆಳಗಿರುವವರೊಂದಿಗೆ ನಿಕೃಷ್ಟವಾಗಿಯೂ ನಾನು ವರ್ತಿಸಬಾರದು ಎಂಬ ಅರಿವು ನನಗಿದೆ.
ಈ ಜಗತ್ತು ಮತ್ತು ಸಮಯ ಯಾರಿಗಾಗಿಯೂ ಕಾಯುವುದಿಲ್ಲವಾದ್ದರಿಂದ ಕಾಲದ ಓಟಕ್ಕೆ ತಕ್ಕಂತೆ
ಓಡುವುದನ್ನು ಬಿಟ್ಟು ನನಗೆ ಸಂತಸ ನೀಡುವ ಸಂಗತಿಗಳತ್ತ ಗಮನ ಹರಿಸುತ್ತಿದ್ದೇನೆ. ನನ್ನ ಸುತ್ತಣ ಸಮಾಜದ ಜನರಿಗೆ ಚಿಕ್ಕ ಪುಟ್ಟ ಸಹಾಯಗಳನ್ನು
ಮಾಡುವ ಮೂಲಕ ಅವರ ಮುಖದಲ್ಲಿ ಸಮಾಧಾನದ ನಗೆ ಚೆಲ್ಲುವುದನ್ನು ಕಂಡು ತೃಪ್ತಳಾಗುತ್ತೇನೆ
ವಾದಿಸಲೆಂದೇ ಬಂದ ವ್ಯಕ್ತಿಗೆ ನಾನು ಉತ್ತರವನ್ನು ನೀಡದೆ ತಣ್ಣನೆ ಪ್ರತಿಕ್ರಿಯೆ ನೀಡಿ ನನ್ನ ಮಾನಸಿಕ ಶಾಂತಿಯನ್ನು ಉಳಿಸಿಕೊಳ್ಳುತ್ತೇನೆ. ಆಡಿದ ಮಾತುಗಳು ಗಾಳಿಯಲ್ಲಿ ತೇಲಿ ಹೋಗಬಹುದು ಆದರೆ
ಖಡ್ಗಕ್ಕಿಂತ ಹರಿತವಾದ ಆ ಮಾತುಗಳು ಚುಚ್ಚದೆಯೇ ಘಾಸಿ ಮಾಡಬಲ್ಲವು
ನನಗಿಂತ ಹಿರಿಯರು ಮತ್ತು ನನಗಿಂತ ಚಿಕ್ಕ ಮಕ್ಕಳ ಮಾತುಗಳನ್ನು ಪ್ರೀತಿಯಿಂದ ಆಲಿಸುತ್ತೇನೆ. ಮಕ್ಕಳ ಮನಸ್ಸಿನಲ್ಲಿ ಕಲ್ಮಶ ಇರುವುದಿಲ್ಲ ಮತ್ತು ಹಿರಿಯರ ಬಾಯಿಗೆ ಸೋಸುವಿಕೆ ಇಲ್ಲದ ನಿಷ್ಟುರವಾದರೂ ಕಹಿ ಸತ್ಯವನ್ನು ಅವರು ಹೇಳಬಲ್ಲರು.
ವ್ಯಕ್ತಿಯು ಧರಿಸಿರುವ ಮೌಲ್ಯಯುತ ಬಟ್ಟೆಗಳು ಮತ್ತು ಮತ್ತಿತರ ವಸ್ತುಗಳ ಮೇಲಲ್ಲದೇ, ಆತ ಬದುಕಿನಲ್ಲಿ ಅಳವಡಿಸಿಕೊಂಡಿರುವ ಮೌಲ್ಯಗಳಿಂದ ಆತನ ವ್ಯಕ್ತಿತ್ವವನ್ನು ಗುರುತಿಸುತ್ತೇನೆ.
ನನ್ನ ನಂತರ ನನ್ನ ಹೆಸರಿನಲ್ಲಿರುವ ಸ್ಥಿರ ಚರ ಆಸ್ತಿಗಳಿಗೆ ಯಾರು ವಾರಸದಾರರಾಗಿರಬೇಕು ಎಂಬುದರ ಕುರಿತು ಈಗಾಗಲೇ ಬರೆದಿಟ್ಟಿದ್ದು ಅದಕ್ಕೆ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮಾಡಿಟ್ಟಿದ್ದು ನನ್ನ ಮರಣದ ನಂತರ ನನ್ನ ಅಂತ್ಯಕ್ರಿಯೆ ಹೇಗೆ ನಡೆಯಬೇಕು ಎಂಬುದರ ಕುರಿತು ನನಗೆ ಖಚಿತವಾದ ನಿಲುವು ಇದ್ದು ಅದರ ಕುರಿತು ಕೂಡ ನಾನು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನನ್ನ ಉತ್ತರಾಧಿಕಾರಿಗಳಿಗೆ ಪತ್ರ
ಬರೆದು ಇಟ್ಟಿದ್ದೇನೆ.
ನನ್ನಿಡೀ ಜೀವಮಾನದ ಗಳಿಕೆ ಮತ್ತು ಉಳಿಕೆಗಳಾದ ನನ್ನ ಬಟ್ಟೆ,ಆಸ್ತಿ,ಒಡವೆಗಳನ್ನು ನನ್ನ ಮಕ್ಕಳು ಮತ್ತು ಸೊಸೆಯಂದಿರಿಗೆ ಸಮಾನವಾಗಿ ಹಂಚುವ ಪ್ರಕ್ರಿಯೆಯಲ್ಲಿ ಈಗಾಗಲೇ ತೊಡಗಿದ್ದೇನೆ.
ತಮ್ಮ ದುಶ್ಚಟಗಳನ್ನು ನನ್ನ ಮೇಲೆ ಹೇರಲು ಪ್ರಯತ್ನಿಸುವ ಸ್ನೇಹಿತರಿಂದ ದೂರವಾಗುತ್ತಿದ್ದೇನೆ.. ಮನಸ್ಸಿಗೆ ಮುದ ನೀಡುವ ಬಾಲ್ಯ ಸ್ನೇಹಿತರ ಸಹವಾಸ ಮಾತ್ರ ನನ್ನೊಂದಿಗೆ ಇದೆ
ನಾನು ಯಾರೊಂದಿಗೂ ಸ್ಪರ್ಧೆಯನ್ನು ನಡೆಸುತ್ತಿಲ್ಲ ಅತ್ಯಂತ ಸರಳ ಜೀವನ ನನ್ನದಾಗಿದ್ದು ನಾನು ಸಂತಸದಿಂದ ಇದ್ದರೆ ಮಾತ್ರ ಬೇರೆಯವರನ್ನು ಕೂಡ ಸಂತೋಷಗೊಳಿಸಲು ಸಾಧ್ಯ ಎಂಬ ಅರಿವು ನನಗಿದೆ.
ಜೀವನ ಅಮೂಲ್ಯವಾದದು ಇದನ್ನು ಮನದುಂಬಿ ಜೀವಿಸಬೇಕು.. ನಾವಾರು ಇಲ್ಲಿ ಶಾಶ್ವತವಾಗಿ ಇಲ್ಲಿ ಇರುವುದಿಲ್ಲ
ಪ್ರಕೃತಿಯೊಂದಿಗಿನ ಒಡನಾಟದಲ್ಲಿ, ಸಕಲ ಜೀವಿಗಳಲ್ಲಿಯೂ ದಯೆ ಮತ್ತು ಶಾಂತಿಯನ್ನು ಹೊಂದಿ ನಮ್ಮ ಕೈಲಾದಷ್ಟು ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು..ಅದುವೇ ಮನಃಶಾಂತಿಯ ಮಂತ್ರವಾಗಿರಬೇಕು.
ಜಗತ್ತಿನ ಎಲ್ಲ ಮಾನವ ಜೀವಿಗಳು ಆಶಾಶ್ವತವಾದ ಈ ಬದುಕಿನಲ್ಲಿ ಶಾಶ್ವತವಾದ ನೆಮ್ಮದಿ ನೆಲೆಸಲು ಅಗತ್ಯ ಕ್ರಮಗಳನ್ನು ಇಂದಿನಿಂದಲೇ ಕೈಗೊಳ್ಳುವ ಮೂಲಕ ಬದುಕನ್ನು ಅದ್ಭುತವಾಗಿ ಕಟ್ಟಿಕೊಂಡು ಅನುಭವಿಸಲಿ
ಎಂಬ ಆಶಯದೊಂದಿಗೆ..