ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಲಕ್ಷ ನುಡಿಮುತ್ತುಗಳನ್ನು ಬರೆದ ಯುವ ಸಾಹಿತಿ ಭೀಮರಾಯ ಹೂಗಾರ ಅವರು ಮಂಡ್ಯದಲ್ಲಿ ಡಿ.೨೦ ರಿಂದ ೨೨ ರವರೆಗೆ ಹಮ್ಮಿಕೊಂಡಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂಗವಾಗಿ ತಮ್ಮ ಬೈಕ್ ಮೂಲಕ ಡಿ.೧೪ ರಿಂದ ಹೂವಿನಹಿಪ್ಪರಗಿಯಿಂದ ಬೆಳಗ್ಗೆ ೭ ಗಂಟೆಗೆ ತುಮಕೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.
ಯುವ ಸಾಹಿತಿ ಭೀಮರಾಯ ಹೂಗಾರ ಶುಕ್ರವಾರ ಸಂಜೆ ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಸಮ್ಮೇಳನದಂಗವಾಗಿ ವಿಶ್ವ ಹುಟ್ಟು ಸಾವು ಎಂಬ ಪುಸ್ತಕ ರಚಿಸಿದ್ದೇನೆ. ಡಿ.೧೫ ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಈ ಪುಸ್ತಕವನ್ನು ಸಿದ್ದಗಂಗಾಶ್ರೀಗಳಿಂದ ಬಿಡುಗಡೆಗೊಳಿಸಿದ ನಂತರ ಬೆಂಗಳೂರ ಮಾರ್ಗವಾಗಿ ಬೆಂಗಳೂರಿನಲ್ಲಿರುವ ಲೀಲಾವತಿ ಸ್ಮಾರಕ, ಪುನೀತ ರಾಜಕುಮಾರ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಸ್ತಕವನ್ನು ಅರ್ಪಿಸಿದ ನಂತರ ನಟ ಶಿವರಾಜಕುಮಾರ ಅವರಿಗೆ ಪುಸ್ತಕವನ್ನು ನೀಡುತ್ತೇನೆ. ನಂತರ ಕನ್ನಡ ವಾಣಿಜ್ಯ ಚಲನಚಿತ್ರ ಮಂಡಳಿಗೆ ಬಿಡುಗಡೆಗೊಂಡ ಪುಸ್ತಕವನ್ನು ನೀಡಲಾಗುವದು. ಸಮ್ಮೇಳನದಂಗವಾಗಿ ಮಂಡ್ಯದಲ್ಲಿ ಡಿ.೧೭ ರಂದು ಹಮ್ಮಿಕೊಂಡಿರುವ ಮ್ಯಾರಾಥಾನ್ ಓಟದಲ್ಲಿ ಭಾಗವಹಿಸಿದ ನಂತರ ಪುಸ್ತಕ ಪ್ರಚಾರ ಕೈಗೊಳ್ಳುತ್ತೇನೆ. ನಂತರ ಸಮ್ಮೇಳನದಲ್ಲಿ ನಾನು ರಚಿಸಿರುವ ಪುಸ್ತಕಗಳ ಪ್ರಚಾರ, ಮಾರಾಟ ಮಾಡುತ್ತೇನೆ. ಸಮ್ಮೇಳನ ಮುಗಿಸಿ ಬರುವಾಗ ಮೈಸೂರಿನಲ್ಲಿರುವ ನಟ ದಿ.ವಿಷ್ಣುವರ್ಧನ ಸ್ಮಾರಕಕ್ಕೆ ಭೇಟಿ ನೀಡಿ ಹೊಸ ಪುಸ್ತಕ ಪ್ರಚಾರ ಯಾತ್ರೆ ಮುಕ್ತಾಯಗೊಳಿಸುತ್ತೇನೆ ಎಂದರು.