ಅಫಜಲಪುರದಲ್ಲಿ ೧೦ ಕೋಟಿ ವೆಚ್ಚದ ಮಿನಿ ವಿಧಾನಸೌಧ ಕಾಮಗಾರಿಗೆ ಆರಂಭದಲ್ಲೇ ಅವಗಢ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ೨೦೨೨-೨೩ನೇ ಸಾಲಿನ ೪೦೫೯ ಅಪೆಂಡಿಕ್ಸ್ ಹಡ್‌ನಲ್ಲಿ ೧೦೨.೩೯ ಲಕ್ಷ ವೆಚ್ಚದಲ್ಲಿ ಅಫಜಲಪುರ ಪಟ್ಟಣದ ಹೊರ ವಲಯದ ಕಲಬುರಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ನಿರ್ಮಾಣವಾಗುತ್ತಿರುವ ಮಿನಿ ವಿಧಾನ ಸೌಧ ಕಟ್ಟಡ ಮೂರನೇ ಮಹಡಿಯ ಮೇಲ್ಛಾವಣ ಗಾಗಿ ಅಳವಡಿಸಿದ್ದ ಸಲಕರಣೆಗಳು ಕುಸಿದು ನಾಲ್ವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಬುಧವಾರ ಸಂಜೆ ೫.೩೦ರ ಸುಮಾರಿಗೆ ಜರುಗಿದೆ.
ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ೫೦ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು ಮೂರನೇ ಮಹಡಿ ಹಾಗೂ ಮಿನಿ ವಿಧಾನಸೌಧದ ಮುಂಭಾಗದ ಮೇಲ್ಛಾವಣ ಹಾಕುವುದಕ್ಕಾಗಿ ಕಬ್ಬಿಣದ ರಾಡ್, ಪ್ಲೌಡ್ ಸಹಿತ ಅಗತ್ಯ ಸಾಮಗ್ರಿಗಳನ್ನು ಜೋಡಿಸುವ ಕೆಲಸ ಭರದಿಂದ ನಡೆದಿತ್ತು. ಬೆಳಿಗ್ಗೆಯಿಂದ ಎಲ್ಲವು ಜೋಡಿಸಿ ಇನ್ನೇನು ಕೆಲಸ ಮುಗಿಸಿ ಮನೆಗಳತ್ತ ತೆರಳಬೇಕೆನ್ನುವಷ್ಟರಲ್ಲಿ ಈ ಅವಗಢ ಸಂಭವಿಸಿ ಅದರೊಳಿಗೆ ನಾಲ್ಕು ಜನ ಕಾರ್ಮಿಕರು ಸಿಲುಕಿಕೊಳ್ಳುವಂತಾಯಿತು. ನಾಲ್ವರ ಪೈಕಿ ಒರ್ವನ ಸ್ಥಿತಿ ಗಂಭೀರವಾಗಿದ್ದು ಉಳಿದವರಿಗೆಲ್ಲಾ ತಲೆ, ಬೆನ್ನು, ಹೊಟ್ಟೆ, ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇನ್ನುಳಿದ ಕಾರ್ಮಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳು ಕಾರ್ಮಿಕರನ್ನು ಪಟ್ಟಣದ ಸಿದ್ದಗಂಗಾ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಅಂಬುಲೇನ್ಸ್ ಮೂಲಕ ಕರೆದೊಯ್ಯಲಾಗಿದೆ.
ಘಟನೆಯನ್ನು ಕಣ್ಣಾರೆ ಕಂಡ ಸಾರ್ವಜನಿಕರು ಇಷ್ಟುದೊಡ್ಡ ಕಾಮಗಾರಿ ಮಾಡುವ ಕಾರ್ಮಿಕರಿಗೆ ಭದ್ರತೆ ಇಲ್ಲದೆ ಕೆಲಸ ಮಾಡಿಸುತ್ತಿರುವುದು ಎಷ್ಟು ಸರಿ? ಅದೃಷ್ಟಕ್ಕೆ ಯಾವುದೇ ಜೀವ ಹೋಗಿಲ್ಲ. ಒಂದು ವೇಳೆ ಕಾರ್ಮಿಕರ ಜೀವಕ್ಕೆ ಕುತ್ತು ಬಂದಿದ್ದರೆ ಯಾರು ಹೊಣೆ ಹೊರುತ್ತಿದ್ದರು? ಎಂದು ಜನ ಮಾತನಾಡಿಕೊಳ್ಳುವಂತಾಯಿತು.

ನೊಂದ ಕಾರ್ಮಿಕರು ಅಳಲು
“ನಾನು ನಿತ್ಯ ಕೆಲಸ ಮಾಡಿ ಮನೆಗೆ ಹೋಗುತ್ತಿದ್ದೇವು, ಇವತ್ತಿನ ದಿನವೂ ಯಾವ ಅವಗಢ ಸಂಭವಿಸುತ್ತದೆಂದು ನಮಗೆ ತಿಳಿದಿರಲಿಲ್ಲ. ಇನ್ನೇನು ಕೆಲಸ ಮುಗಿಸಿ ಮನೆಗೆ ಹೋಗಬೇಕೆನ್ನುವಷ್ಟರಲ್ಲಿ ಹೀಗಾಗಿದ್ದು ನಮಗೆಲ್ಲ ಆತಂಕ ಹೆಚ್ಚಿಸಿದೆ. ಕೂಲಿಕೆಲಸ ಮಾಡಿಯೇ ಮನೆ ನಡೆಸುವ ನಮಗೆ ಇಂತಹ ಸಮಸ್ಯೆ ಆದಾಗ ಬಹಳ ಕಷ್ಟವಾಗುತ್ತದೆ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು.

