ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಕಲಚೇತನರು ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆತ್ಮವಿಶ್ವಾಸದಿಂದ ಬದುಕು ನಡೆಸುವಂತೆ ಅವಕಾಶ ಕಲ್ಪಿಸುವುದು ಸಮಾಜ ಹಾಗೂ ಸರಕಾರದ ಜವಾಬ್ದಾರಿ ಎಂದು ಸರಕಾರಿ ಪಪೂ ಕಾಲೇಜಿನ ಉಪನ್ಯಾಸಕ ಬಸನಗೌಡ ಬಿರಾದಾರ ಹೇಳಿದರು.
ಪಟ್ಟಣದ ದಿವ್ಯಚೇತನ ವಿಶೇಷ ಬುದ್ಧಿಮಾಂಧ್ಯ ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ದಿನಾಚರಣೆ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಗವಿಕಲ ಮಕ್ಕಳ ಸಬಲೀಕರಣಕ್ಕಾಗಿ ಅನೇಕ ಶಾಲಾ-ಕಾಲೇಜು ಹಾಗೂ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಕಾಲದಲ್ಲಿ ವಿಕಲಚೇತನರಿಗೆ ವಿದ್ಯಾಭ್ಯಾಸದ ಅವಕಾಶಗಳ ಜೊತೆಗೆ ಕೌಶಲ್ಯಾಭಿವೃದ್ಧಿಯ ಕಲಿಕೆಯು ಅವರ ಬದುಕಿನಲ್ಲಿ ಸಾಧನೆ ಮಾಡುವಂತಹ ಭರವಸೆ ಮೂಡಿಸುತ್ತಿದೆ. ಅಂಗವಿಕಲ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ಅಂದಾಗ ಅವರಲ್ಲಿರುವ ಅದಮ್ಯ ಶಕ್ತಿ ಇದೆ ಎಂಬುದನ್ನು ನಿರೂಪಿಸಲು ಸಾಧ್ಯ ಎಂದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷೆ ಆರ್.ಎಂ.ಯಾಳಗಿ ಮಾತನಾಡಿ, ವಿಕಲಚೇತನರು ಸಹ ಮಾನವರೆ ಅವರಿಗೂ ಭಾವನೆಗಳಿವೆ. ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಯದರ್ಶಿ ಎಂ.ಕೆ.ಯಾಳಗಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಜ್ಯೋತಿ ಪಾಟೀಲ, ಶಾಲೆ ಮುಖ್ಯಗುರು ಎಸ್.ಎಸ್.ಪಾಟೀಲ, ಸುನಿತಾ ತೇಲಿ, ನಜತ್‌ಪರವಿನ್ ಶೇಖ್, ಮಲ್ಲಿಕಾರ್ಜುನ ಹೆಬ್ಬಾಳ ಸೇರಿದಂತೆ ಅಂಕವಿಕಲ ಮಕ್ಕಳು, ಪಾಲಕರು ಇದ್ದರು.

