ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ರಾಷ್ಟ್ರದ ಅತಿ ದೊಡ್ಡ ಸಂಘಟನೆ | ೨೫ ರಾಜ್ಯಗಳಲ್ಲಿ ಸಂಘದ ಮಾನ್ಯತೆ
ಆಲಮಟ್ಟಿ: ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್) ನವದೆಹಲಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಧಾರವಾಡದ ಬಸವರಾಜ ಗುರಿಕಾರ ಹಾಗೂ ಕಾರ್ಯದರ್ಶಿಯಾಗಿ ಆಲಮಟ್ಟಿಯ ಚಂದ್ರಶೇಖರ ನುಗ್ಗಲಿ ಆಯ್ಕೆಯಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಕೇರಳದ ಎರ್ನಾಕುಲಂನಲ್ಲಿ ನಡೆದ ಚುನಾವಣೆಯ ಪ್ರಕ್ರಿಯೆ ಅಂತಿಮ ದಿನ ಸೊಮವಾರ ಆಯ್ಕೆಯಾದರು.
ದೇಶದ ೨೩ ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಸದಸ್ಯತ್ವ ಹೊಂದಿರುವ ಈ ಸಂಘಟನೆ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಸಂಘಟನೆ. ದೇಶದ ೨೫ ರಾಜ್ಯಗಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಗಳು ಈ ಸಂಘದ ಮಾನ್ಯತೆ ಪಡೆದಿದ್ದು ವಿಶೇಷ.
೧೮೭ ದೇಶಗಳ ಶಿಕ್ಷಕರ ಅಂತರಾಷ್ಟ್ರೀಯ ಶಿಕ್ಷಕರ ಸಂಘಟನೆಯಾಗಿರುವ “ಎಜುಕೇಶನ್ ಇಂಟರ್ ನ್ಯಾಶನಲ್’ ಜತೆ ಅಖಿಲ ಭಾರತ ಪ್ರಾಥಮಿಕಶಳ ಶಿಕ್ಷಕರ ಫೆಡರೇಷನ್ ಸಂಯೋಜನೆ ಹೊಂದಿದೆ.
ಇಂತಹ ಮಹತ್ವದ ಸಂಘಟನೆಯ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಇದೇ ಮೊದಲ ಬಾರಿ. ಎರಡು ದಿನಗಳ ಕಾಲ ನಡೆದ ಚುನಾವಣೆಯಲ್ಲಿ ೨೫ ರಾಜ್ಯಗಳ ಆಯಾ ಸಂಘಟನೆಗಳ ೨೪೭ ಪ್ರತಿನಿಧಿಗಳು ಚುನಾವಣೆಯಲ್ಲಿ ಭಾಗಿಯಾಗಿದ್ದರು. ಹಿಮಾಚಲ ಪ್ರದೇಶದ ಪ್ರೆಮಸಿಂಗ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಕರ್ನಾಟಕದ ಪ್ರಥಮ ವ್ಯಕ್ತಿ:
ಎಐಪಿಟಿಎಫ್ ನ ೭೫ ವರ್ಷಗಳ ಸಂಘಟನೆಯ ಇತಿಹಾಸದಲ್ಲಿ ಧಾರವಾಡದ ಬಸವರಾಜ ಗುರಿಕಾರ ಆಯ್ಕೆಯಾಗಿದ್ದು, ಕರ್ನಾಟಕದ ಮೊದಲ ವ್ಯಕ್ತಿ ಎಂಬುವದ್ಮ ವಿಶೇಷ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಮೂರು ಬಾರಿ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಕಾರ್ಯದರ್ಶಿಯಾಗಿ ಕರ್ನಾಟಕದ ಚಂದ್ರಶೇಖರ ನುಗ್ಗಲಿ:
ಎಐಪಿಟಿಎಫ್ ನ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಯಾಗಿ ಓರಿಸ್ಸಾದ ಕಮಲಾಕಾಂತ ತ್ರಿಪಾಠಿ, ಖಜಾಂಚಿಯಾಗಿ ಉತ್ತರಪ್ರದೇಶದ ಉಮಾಶಂಕರ ಹಿರಿಯ ಉಪಾಧ್ಯಕ್ಷರಾಗಿ ಹರಿಗೋವಿಂದನ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ-೧ ಆಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಚಂದ್ರಶೇಖರ ನಗ್ಗಲಿ ಆಯ್ಕೆಯಾಗಿದ್ದು ವಿಶೇಷ. ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ ಶಿಕ್ಷಕರ ಸಂಘಟನೆಯ ಕಾರ್ಯದರ್ಶಿಯಾಗಿದ್ದು ಅವರ ಸಾಧನೆ.

