ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಇತ್ತೀಚಿಗೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ೪೩ ನೇ ಬಾಲಕ ಮತ್ತು ಬಾಲಕಿಯರ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ ಐದನೇ ಸೆಮಿಸ್ಟರ್ ವಿದ್ಯಾರ್ಥಿ ಶಬ್ಬೀರ ಅಹ್ಮದ್ ಶಹಾಬಾದಿ ಅವರು ಭಾಗವಹಿಸಿ ಹೈ ಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ಅಂತರ ವಿಶ್ವ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾನೆ. ಅಷ್ಟೇ ಅಲ್ಲ ಇದೇ ವಿದ್ಯಾರ್ಥಿಯೂ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದು ಕಾಲೇಜಿನ ಕಿರ್ತಿ ಹೆಚ್ಚಿಸಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ಪ್ರಾಚಾರ್ಯ ಮಾಣಿಕರಾವ್ ಕುಲಕರ್ಣಿ ಮಾತನಾಡಿ, ವಿಶ್ವವಿದ್ಯಾಲಯದ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹೈ ಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ಅಂತರ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿರುವುದು ಅತ್ಯಂತ ಖುಷಿ ತಂದಿದೆ ಎಂದರು.
ದೈಹಿಕ ಶಿಕ್ಷಣ ವಿಭಾಗದ ಡಾ.ಕವಿತಾ ರಾಠೋಡ ಮಾತನಾಡಿ, ಕಲಬುರಗಿಯ ವಿಶ್ವವಿದ್ಯಾಲಯದಲ್ಲಿ ನಡೆದ ಸ್ಪರ್ಧೆಯಲ್ಲಿ ಹೈ ಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಓಡಿಸ್ಸಾ ರಾಜ್ಯದಲ್ಲಿ ನಡೆಯಲಿರುವ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.
ವಿದ್ಯಾರ್ಥಿಯ ಅಮೋಘ ಸಾಧನೆಗೆ ಕ್ರೀಡಾ ಸಂಯೋಜಕ ಡಾ.ಮಹ್ಮದ ಯುನೂಸ್ ಹಾಗೂ ಸಿಬ್ಬಂದಿ ಕಾರ್ಯದರ್ಶಿ ಎಂ.ಎಸ್.ರಾಜೇಶ್ವರಿ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿದ್ದಾರೆ.

