೨೮ ಜನ ಸದಸ್ಯರಲ್ಲಿ ೧೯ ಸದಸ್ಯರು ನಿಲುವಳಿ ಪರ ಮತದಾನ | ತೀವ್ರ ಬಂದೋಬಸ್ತ | ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ತೀವೃ ಕುತೂಹಲ ಕೆರಳಿಸಿದ್ದ ಇಲ್ಲಿನ ಗ್ರಾ.ಪಂ. ಅಧ್ಯಕ್ಷೆ ಮಾಲಾ ಅಶೋಕ ಮೋಟಗಿಯವರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿಲುವಳಿಗೆ ಜಯ ದೊರೆತಿದ್ದು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ.
ಸ್ಥಳಿಯ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಉಪ-ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅಧ್ಯಕ್ಷತೆಯಲ್ಲಿ ಶನಿವಾರ ಮುಂಜಾನೆ ನಡೆದ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ಪರ್ಯಾಲೋಚನಾ ಸಭೆಯಲ್ಲಿ ಗ್ರಾ.ಪಂ. ಒಟ್ಟು ೨೮ ಜನ ಸದಸ್ಯರಲ್ಲಿ ೨೩ ಜನ ಸದಸ್ಯರು ಹಾಜರಿದ್ದು ೧೯ ಜನ ಸದಸ್ಯರು ನಿಲುವಳಿ ಪರ ಮತದಾನ ಮಾಡಿದರೆ ನಾಲ್ವರು ವಿರುದ್ದ ಮತ ನೀಡಿದರು. ನಿಲುವಳಿಗೆ ಅಗತ್ಯವಿದ್ದ (೨/೩ ಅನುಪಾತದಂತೆ) ೧೯ ಜನ ಸದಸ್ಯರು ಅವಿಶ್ವಾಸ ಮಂಡನೆಯ ಪರ ಮತ ನೀಡಿದ್ದರಿಂದ ಉಪ-ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸದರೀ ಅಧ್ಯಕ್ಷರು ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದು ಅವರು ಅಧ್ಯಕ್ಷರಾಗಿ ಮುಂದುವರಿಯುವಂತಿಲ್ಲವೆಂದು ಘೋಷಿಸಿದರು. ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ, ಉಪ ತಹಶೀಲ್ದಾರ ಸಂತೋಷ ರಬಕವಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪಾ ಪಟ್ಟಿಹಾಳ, ಕಂದಾಯ ನಿರೀಕ್ಷಕ ಎಂ.ಐ ಮಠಪತಿ, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ ಉಪಸ್ಥಿತರಿದ್ದರು
ತೀವೃ ಬಂದೋಬಸ್ತ; ಚಿಮ್ಮಡ ಗ್ರಾ.ಪಂ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡನೆಯಾಗಿದ್ದು ತೀವೃ ಬಂದೋಬಸ್ತ ಏರ್ಪಡಿಸಲಾಗಿತ್ತು. ಬನಹಟ್ಟಿ ಸಿಪಿಐ ಸಂಜೀವ ಬಳಗಾರ, ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ, ಜಮಖಂಡಿ ಸಿಪಿಐ ಮಲ್ಲಪ್ಪಾ ಮಡ್ಡಿ ಬನಹಟ್ಟಿ ಠಾಣಾಧಿಕಾರಿ ಶಾಂತಾ ಹಳ್ಳಿ ಸೇರಿದಂತೆ ಮುಧೋಳ, ಜಮಖಂಡಿ, ತೇರದಾಳ, ಸಾವಳಗಿ ಮಹಾಲಿಂಗಪೂರ ಠಾಣಾಧಿಕಾರಿಗಳೊಂದಿಗೆ ನೂರಾರು ಜನ ಪೋಲಿಸ್ ಸಿಬ್ಬಂದಿಗಳಿಂದ ಗ್ರಾಮ ಪಂಚಾಯತಿ ಸುತ್ತ ತೀವೃ ಭದ್ರತೆ ನೀಡಲಾಗಿತ್ತು. ಅಲ್ಲದೇ ೨೦ಕ್ಕೂ ಹೆಚ್ಚು ಖಾಸಗೀ ಅಂಗರಕ್ಷಕ ಪಡೆಯನ್ನು ಗ್ರಾ.ಪಂ. ಸದಸ್ಯರು ತಮ್ಮ ರಕ್ಷಣೆಗೆ ಕರೆತಂದಿದ್ದರು.
ಅವಿಶ್ವಾಸ ಮಂಡನೆಗೆ ಜಯ ಸಿಗುತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಗ್ರಾಮದ ಹಲವೆಡೆ ಗುಲಾಲು, ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು
ವಿಜಯೋತ್ಸವದಲ್ಲಿ ಜಿ.ಪಂ. ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಶಂಕರ ಬಟಕುರ್ಕಿ. ಪರಪ್ಪಾ ಪಾಲಭಾವಿ, ಬೀರಪ್ಪಾ ಹಳೆಮನಿ, ಪರಪ್ಪಾ ನೇಸೂರ, ಬಸವರಾಜ ಕುಂಚನೂರ, ವಿಜಯಕುಮಾರ ಪೂಜಾರಿ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಆನಂದ ಕವಟಿ, ಪ್ರಕಾಶ ಪಾಟೀಲ, ಮನೋಜ ಹಟ್ಟಿ ಸೇರಿದಂತೆ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.