ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಾನೂನಿನ ಅರಿವು ಹೊಂದಬೇಕು. ಕಾನೂನು ಉಲ್ಲಂಘನೆ ಮಾಡುವುದು ಅಪರಾಧವಾಗುತ್ತದೆ ಎಂಬ ತಿಳುವಳಿಕೆ ಇರಬೇಕು ಎಂದು ಪಿ.ಎಸ್.ಐ ಐ.ಎಂ.ದುಂಡಸಿ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಉನ್ನತ ಗುರಿಯನ್ನಿಟ್ಟುಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಗುರು ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಪ್ರಾಪ್ತ ಬಾಲಕ, ಬಾಲಕಿಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಪೋಕ್ಸೊ ಕಾಯ್ದೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾದರೆ ಹಾಗೂ ಅಂತಹವರಿಗೆ ಸಹಾಯ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಮಾಜದಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಡಿ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ತಿಳಿದುಕೊಂಡರೆ ನೆಮ್ಮದಿಯ ಜೀವನ ನಡೆಸಲು ಪೂರಕವಾಗುತ್ತದೆ. ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ತಡೆಯಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಹಾಗೂ ಕಾನೂನಿನ ಮಹತ್ವ ಅರಿತುಕೊಳ್ಳಬೇಕು ಎಂದು ಹೇಳಿದರು.
ಎ.ಎಸ್.ಐ ಎ.ಎಚ್.ರೆಡ್ಡಿ, ಹೆಡ್ ಕಾನ್ಸಟೆಬಲ್ ಬಿ.ಜಿ.ಅಚನೂರ, ಉಪನ್ಯಾಸಕರಾದ ಜಿ.ಎಸ್.ಡೋಮನಾಳ, ದೇಶಪಾಂಡೆ.ಎಚ್.ಎ, ಮಲ್ಲಮ್ಮ, ಸವಿತಾ ಬಿ.ಜಿ, ರಾಜೀವ ಯರಡೋಣಿ, ಕಾಶೀನಾಥ ಅವಟಿ, ಎಚ್.ಡಿ.ಬಿರಾದಾರ ಇದ್ದರು.
ಉಪನ್ಯಾಸಕ ಪ್ರಕಾಶ ಮಸಬಿನಾಳ ಸ್ವಾಗತಿಸಿದರು. ಮಲ್ಲಿಕಾರ್ಜುನ ಹೂಗಾರ ನಿರೂಪಿಸಿದರು. ಎಸ್.ಎಸ್.ಸಜ್ಜನ ವಂದಿಸಿದರು.

