ವಿಜಯಪುರ: ನಗರದಲ್ಲಿ ಭೂಮಾಪಿಯಾದವರದ್ದೆ ದರ್ಬಾರ ಆಗಿತ್ತು. ಅದನ್ನು ಸಂಪೂರ್ಣ ಬಂದ್ ಮಾಡಿರುವೆ. ಎಲ್ಲೇ ಖಾಲಿ ಜಾಗ ಇದ್ದರೂ, ಓಣಿಯ ಜನರನ್ನು ಸೇರಿಸಿ ಉದ್ಯಾನ, ಸಮುದಾಯ ಭವನ, ಓಪನ್ ಮಾಡಲಾಗುವುದು ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.
ನಗರ ಮತಕ್ಷೇತ್ರ ವ್ಯಾಪ್ತಿಯ ಶಾಸ್ತ್ರೀ ನಗರದಲ್ಲಿ ಸೋಮವಾರ ಮತಯಾಚನೆ ನಡೆಸಿ ಮಾತನಾಡಿದ ಅವರು, ವಿಜಯಪುರಕ್ಕೆ ಕಳೆದ ಐದು ವರ್ಷಗಳಲ್ಲಿ ನೂರಾರು ಕೋಟಿ ಅನುದಾನ ತರುವ ಮೂಲಕ ಜನರ ನಿರೀಕ್ಷೆ ಮೀರಿ ಅಭಿವೃದ್ಧಿ ಕಾರ್ಯ ಮಾಡಿರುವೆ. ದೇಶದಲ್ಲಿ ವಿಜಯಪುರ ಕೂಡ ಸ್ಮಾರ್ಟ್ ಸಿಟಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಬಿಟ್ಟರೆ, ಅತೀ ಹೆಚ್ಚು ಓಪನ್ ಜಿಮ್ ಇರುವುದು ವಿಜಯಪುರ ನಗರದಲ್ಲೇ. ಮುಖ್ಯ ರಸ್ತೆಗಳಲ್ಲದೇ ಕಾಲೊನಿ/ಬಡಾವಣೆಗಳ ಆಂತರಿಕ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸುವ ಮೂಲಕ ಸುಗಮ ಸಂಚಾರದ ಜೊತೆಗೆ ಧೂಳಿನಿಂದ ಮುಕ್ತ ಮಾಡಲಾಗಿದೆ. ಇತಿಹಾಸದಲ್ಲೇ ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ಆಗಿರಲಿಲ್ಲ ಎಂದರು.
ಜೀವನದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ಬಡವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಸ್ಲಂ ಗಳಲ್ಲಿ 4558 ಮನೆಗಳು ಹಾಗೂ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ 3750 ಮಂಜೂರು ಮಾಡಿಸಲಾಗಿದೆ. ಸರ್ಕಾರಕ್ಕೆ ತುಂಬಬೇಕಾದ ವಂತಿಗೆ ಹಣ ಭರಿಸಲಾಗದ 100 ಬಡವರಿಗೆ ತಲಾ ಒಂದು ಲಕ್ಷ ವೈಯಕ್ತಿಕವಾಗಿ ತುಂಬಿದ್ದೇನೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿರಿಯ ನಾಗರಿಕರು, ಮಹಿಳೆಯರು, ಯುವಕರು ಇದ್ದರು.