ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಬಸವೇಶ್ವರ ವೃತ್ತದಿಂದ ಇಂದಿರಾ ವೃತ್ತದವರೆಗೆ ಬೀದಿ ಬದಿ ವ್ಯಾಪರಸ್ಥರು ತಮಗೆ ನಿಗದಿಪಡಿಸಿದ ಜಾಗೆಯಲ್ಲಿ ಮಾತ್ರ ವ್ಯಾಪಾರ ನಡೆಸಬೇಕು. ಅ೧೭ ರಿಂದ ತಳ್ಳುಗಾಡಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿರ್ಣಯ ಮೀರಿ ನಡೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಹೇಳಿದರು.
ಪಟ್ಟಣದ ಪುರಸಭೆ ಸಬಾಭವನದಲ್ಲಿ ಟ್ರಾಫಿಕ್ ಸಮಸ್ಯೆ ಮುಕ್ತಿಗಾಗಿ ಪುರಸಭೆ ವತಿಯಿಂದ ಆಯೋಜಿಸಲಾಗಿದ್ದ ಬೀದಿ ಬದಿ ವ್ಯಾಪಾರಸ್ಥರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಸವೇಶ್ವರ ವೃತ್ತದಿಂದ ಸಿದ್ರಾಮೇಶ್ವರ ವೃತ್ತದವರೆಗೆ ಸಾಕಷ್ಟು ಟ್ರಾಫಿಕ್ ಸಮಸ್ಯೆಯಾಗುತ್ತಿರುವದರಿಂದ ಎಲ್ಲ ವ್ಯಾಪಾರಿಗಳಿಗೆ ಒಂದೆಡೆ ಸ್ಥಳ ನಿಗದಿ ಮಾಡಲಾಗಿತ್ತು. ವ್ಯಾಪಾರಸ್ಥರು ದೀಪಾವಳಿಯವರೆಗೆ ಅವಕಾಶ ಕೇಳಿದ್ದರಿಂದ ಗಾಡಿಗಳಿಲ್ಲದೇ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ತಮಗೆ ನಿಗದಿಪಡಿಸಿದ ಜಾಗೆಗಿಂತ ಮುಂದೆ ಬಂದರೆ ದಂಡ ವಿಧಿಸಲಾಗುವದು. ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಲು ಹಳೆಯ ನ್ಯಾಯಾಲಯದ ಬಳಿ ಮತ್ತು ಹಳೆಯ ಪೊಲೀಸ್ ಕ್ವಾರ್ಟರ್ಸ ಜಾಗೆಯನ್ನು ನಿಗದಿಪಡಿಸಿದ್ದೇವೆ. ಅಲ್ಲಿಯೇ ಪಾರ್ಕ ಮಾಡಬೇಕು. ದೀಪಾವಳಿಯ ಬಳಿಕ ಇನ್ನಷ್ಟು ನಿಯಮಗಳನ್ನು ರೂಪಿಸಿ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವದಾಗಿ ತಿಳಿಸಿದರು.
ಪುರಸಭೆ ಮುಖ್ಯಾಧಿಖಾರಿ ಮಲ್ಲನಗೌಡ ಬಿರಾದಾರ ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರ ಸಂಘದವರ ಒಮ್ಮತದ ಅಭಿಪ್ರಾಯದಂತೆ ಒಂದು ಕುಟುಂಬಕ್ಕೆ ಒಂದು ಜಾಗೆಯಂತೆ ಬೀದಿ ಬದಿ ವ್ಯಾಪಾರ ನಡೆಸಲು, ಸಂಚಾರಕ್ಕೆ ತೊಂದರೆಯಾಗದಂತೆ ದೀಪಾವಳಿಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ಜವಾಬ್ದಾರಿಯನ್ನ ಸಂಘದ ಅಧ್ಯಕ್ಷರು ನಿರ್ವಹಿಸಬೇಕು. ಈ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು. ಯಾವುದೇ ರೀತಿಯ ತೊಂದರೆಯಾದಲ್ಲಿ ಅದಕ್ಕೆ ನಿವೇ ಹೊಣೆಗಾರರು. ಸಂಚಾರಕ್ಕೆ ತೊಂದರೆ ಮಾಡುವದಾಗಲೀ. ಬೀದಿಗೆ ಬಂದು ವ್ಯಾಪಾರ ನಡೆಸುವದಾಗಲೀ ಮಾಡಿದರೆ ಮುಲಾಜಿಲ್ಲದೆ ಕ್ರಮ ಕೊಳ್ಳುತ್ತೇವೆ ಎಂದರು.
ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹೆಬೂಬ ಎಲೆಗಾರ ಮಾತನಾಡಿ ಸಭೆಯ ನಿರ್ಣದಂತೆ ನಾವು ನಡೆದುಕೊಳ್ಳುತ್ತೇವೆ. ಒಂದು ಕುಟುಂಬಕ್ಕೆ ಒಂದೇ ಸ್ಥಳ ನಿಗದಿಪಡಿಸುವಲ್ಲಿ ಪ್ರಾಮಾಣಿಕವಾಗಿರುತ್ತೇನೆ. ದೀಪಾವಳಿಯವರೆಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ಎಲ್ಲ ವ್ಯಾಪಾರಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸುವೆ ಎಂದರು.
ಇದೇ ವೇಳೆ ಬೀದಿಬದಿ ವ್ಯಾಪಾರಿಗಳಿಗೆ ಸಿಗುವ ಲೋನ್ ಸೇರಿದಂತೆ ಇತರೆ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಎಎಸ್‌ಐ ಸಾಲಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಕೆಪಿಸಿಸಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಬ್ಲಾಕ್ ಅಧ್ಯಕ್ಷ ಮಹೆಬೂಬ ಕುಳಗೇರಿ, ಆಸೀಪ ನಿಡಗುಂದಿ, ಪರಶುರಾಮ ನಾಲತವಾಡ, ಸಂತೋಷ ವಡ್ಡರ ಸೇರಿದಂತೆ ಹಲವು ವ್ಯಾಪಾರಸ್ಥರು ಇದ್ದರು.