ಇಂಡಿ: ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಟ್ಟಲಾಗುವ ನಿಂಬೆ ಸಂಸ್ಕಾರಣಾ ಘಟಕಕ್ಕೆ 205ಕೋಟಿ ರೂ ಬಿಡುಗಡೆಯಾಗಿದ್ದು, ಸಧ್ಯದಲ್ಲಿಯೇ ಕಟ್ಟಡ ಕಾರ್ಯ ಪ್ರಾರಂಭಿಸಲಾಗುವದೆ0ದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್. ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ವಿಭಾಗದ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ದ್ವಿತಿಯ ಕೃಷಿ ಪದ್ದತಿ ಅನುಸರಿಸುತ್ತಿದ್ದು ಕೃಷಿ ಉತ್ಪಾದನೆಯಲ್ಲಿ ಮೌಲ್ಯ ವರ್ಧನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ನಿಂಬೆ ಮೌಲ್ಯವರ್ಧನೆ ಮುಖಾಂತರ ನಿಂಬೆ ರಸ, ಉಪ್ಪಿನಕಾಯಿ, ಕ್ಯಾಂಡಿ ಸೇರಿದಂತೆ ಹತ್ತು ಹಲವು ಪ್ರಕಾರದ ಮೌಲ್ಯವರ್ಧನೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದರು.
ಯುವಕರಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿಂಬೆ ಮೌಲ್ಯವರ್ಧನೆ ಕುರಿತು ತರಬೇತಿ ನೀಡಲಾಗುವದು. ಮತ್ತು ರೈತರು ನಿಂಬೆ ತಂದು ಸಂಸ್ಕರಣೆ ಮಾಡಿಕೊಳ್ಳಬಹುದು ಎಂದರು.
ಸರಕಾರ ಒಂದು ಜಿಲ್ಲೆ ಒಂದು ಬೆಳೆ ಆಯ್ಕೆ ಮಾಡಿದ್ದು, ನಿಂಬೆ ವಿಜಯಪುರ ಜಿಲ್ಲೆಯ ಬೆಳೆಯಾಗಿ ಆಯ್ಕೆಯಾಗಿದೆ ಎಂದ ಅವರು, ರೈತರಿಗೆ ಒಂದೇ ಬೆಳೆಯಿಂದ ಜೀವನೋಪಾಯ ಹೆಚ್ಚಿಸಿಕೊಳ್ಳಲು ಆಗುವದಿಲ್ಲ. ಹೀಗಾಗಿ ಕೃಷಿಯ ಜೊತೆಗೆ ಇತರ ಕಸುಬುಗಳಾದ ಹೈನುಗಾರಿಕೆ, ಕುರಿಸಾಕಾಣಿಕೆ, ಕೊಳಿಸಾಕಾಣಿಕೆ, ಮೀನುಗಾರಿಕೆ ದಂತಹ ಕಸಬು ಮಾಡಿದರೆ ಹೆಚ್ಚು ಆದಾಯ ಗಳಿಸಲು ಸಾದ್ಯ ಎಂದರು.
ಬೀಜೋತ್ಪಾದನೆ ಮಾಡಿದರೆ ರೈತರು ಆದಾಯ ಹೆಚ್ಚಿಸಿಕೊಳ್ಳಬಹುದು, ವಿಶ್ವದಲ್ಲಿಯೇ ಧಾರವಾಡ ಕೇಂದ್ರ ಬೀಜೋತ್ಪಾದನೆಗೆ ಮೊದಲ ಸ್ಥಾನದಲ್ಲಿದೆ ಎಂದರು. ಮಣ್ಣಿನ ಮಾದರಿ ಪರೀಕ್ಷಿಸಿ ಮಣ್ಣಿನ ಗುಣಧರ್ಮ, ಕ್ಷಾರ, ಪೋಷಕಾಂಶಗಳ ಕೊರತೆ, ಯಾವ ಬೆಳೆಗೆ ಎಷ್ಟು ಗೊಬ್ಬರ ಹಾಕಬೇಕು, ಸಸ್ಯ ಸಂರಕ್ಷಣೆ ತೋರಿಸಿದಲ್ಲಿ ಸಲಹೆ ನೀಡಲಾಗುತ್ತದೆ ಎಂದರು.
ಸಂಶೋಧನಾ ನಿರ್ದೇಶಕ ಬಿ.ಡಿ. ಬಿರಾದಾರ, ವಿಸ್ತರಣಾ ನಿರ್ದೇಶಕ ಎ.ಎಸ್. ವಸ್ತçದ, ಬೀಜ ಘಟಕದ ಮುಖ್ಯ ಅಧಿಕಾರಿ ರವಿ ಹಂಜಿ, ಪ್ರಗತಿಪರ ರೈತ ಅವಿನಾಶ ದೇಶಪಾಂಡೆ ಮತ್ತು ಕೆವಿಕೆ ಮುಖ್ಯಸ್ಥ ಡಾ.ಶಿವಶಂಕರ ಮೂರ್ತಿ, ಡಾ.ಸವಿತಾ ಮಾತನಾಡಿದರು.