ವಿಜಯಪುರ: ನಗರ ಮತಕ್ಷೇತ್ರದಿಂದ ಈ ಬಾರಿ ಭಾರತೀಯ ಜನತಾ ಪಕ್ಷದಿಂದ ನನಗೇ ಟಿಕೆಟ್ ಸಿಗುತ್ತದೆಂಬ ನನ್ನ ಅಪಾರ ನಿರೀಕ್ಷೆ ಹುಸಿಯಾಯಿತು. ಇದರಿಂದ ನಾನು ಸಾಕಷ್ಟು ನೊವು, ಮಾನಸಿಕ ತೊಂದರೆ ಅನುಭವಿಸಿದರೂ ಪಕ್ಷ ತೊರೆಯದೇ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಸ್ಪಷ್ಠಪಡಿಸಿದರು.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದಿಂದ ಟಿಕೆಟ್ ಸಿಗದಿದ್ದಾಗ ನನ್ನ ಬೆಂಬಲಿಗರಿಗೆ, ಕಾರ್ಯಕರ್ತರಿಗೂ ನೋವಾಗಿದ್ದು ನಿಜ. ಬೆಂಬಲಿಗರ ಸಭೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವಂತೆ ಒತ್ತಡವೂ ಹೆಚ್ಚಾಗಿತ್ತು. ಅಲ್ಲದೇ ಬೇರೆ ಪಕ್ಷದಿಂದ ಟಿಕೆಟ್ ನೀಡುವ ಪ್ರಸ್ತಾಪವೂ ಬಂದಿತ್ತು. ಆದರೆ ನಾನು ದೇಶ ಮೊದಲು ಎಂಬ ಸಿದ್ಧಾಂತ ನಂಬಿಯೇ ಬಿಜೆಪಿ ಪಕ್ಷವನ್ನು ಸೇರಿದವನು. ಕಳೆದ ಬಾರಿ ಟಿಕೆಟ್ ನಿರಾಕರಣೆಯಾದರೂ ನನಗೆ ಪಕ್ಷವೇ ಮುಖ್ಯ; ಅಧಿಕಾರವಲ್ಲ ಎಂಬ ಸಿದ್ಧಾಂತ ನನ್ನದು. ಕಳೆದ 30ವರ್ಷಗಳಿಂದ ನಿರಂತರ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವೆ. ಪಕ್ಷದ ಟಿಕೆಟ್ ಸಿಗದಿದ್ದಾಗ ನೋವಾದರೂ ಉಳಿದ ನಾಯಕರಂತೆ ಪಕ್ಷಾಂತರ ಮಾಡಲು ಮನಸ್ಸು ಒಪ್ಪಲಿಲ್ಲ. ಅಧಿಕಾರದ ಹಪಾಹಪಿ ನನಗಿಲ್ಲ ಎಂದರು.
ನನ್ನ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿತ್ತು. ಹೀಗಾಗಿ ನಾನು ಆ ವಿಚಾರದಿಂದಲೂ ಹಿಂದೆ ಸರಿದೆ ಎಂದರು.
ಯಾರೋ ಒಬ್ಬ ವ್ಯಕ್ತಿಗಾಗಿ ನಾನು ನನ್ನ ಪಕ್ಷವನ್ನು ದೂಷಿಸಿ ಪಕ್ಷ ತೊರೆಯುವುದಿಲ್ಲ. ಅಲ್ಲದೆ ಟಿಕೆಟ್ ಬದಲಾಗಿ ಪಕ್ಷದಿಂದ ನಾನೇನೂ ಬಯಸಿಲ್ಲ. ಈವರೆಗೆ ಮುಖ್ಯಮಂತ್ರಿ ಸೇರಿದಂತೆ ಯಾವ ನಾಯಕರೂ ನನ್ನೊಂದಿಗೆ ಮಾತನಾಡಿಲ್ಲ. ಯಾವ ಆಶ್ವಾಸನೆಯನ್ನು ಕೊಟ್ಟಿಲ್ಲ ಎಂದು ಅಪ್ಪು ಪಟ್ಟಣಶೆಟ್ಟಿ ಸ್ಪಷ್ಠಪಡಿಸಿದರು.
ಯತ್ನಾಳರ ಪರ ಪ್ರಚಾರ ಮಾಡೊಲ್ಲ
ಶಾಸಕ ಬಸನಗೌಡ ಪಾಟೀಲ ಯತ್ನಾಳರ ಪರ ವಿಜಯಪುರ ನಗರ ಕ್ಷೇತ್ರದಲ್ಲಿ ತಾವು ಪ್ರಚಾರ ಮಾಡದಿರಲು ನಿರ್ಧರಿಸಿದ್ದಾಗಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸ್ಪಷ್ಠಪಡಿಸಿದರು.
ಶಾಸಕ ಯತ್ನಾಳ ಅವರು ಈವರೆಗೂ ನನ್ನನ್ನು ಸಂಪರ್ಕಿಸಿಲ್ಲ. ನನ್ನನ್ನು ಪ್ರಚಾರಕ್ಕೂ ಕರೆದಿಲ್ಲ. ಅವರೇ ಸ್ಟಾರ್ ಪ್ರಚಾರಕರಾಗಿರುವ ಕಾರಣ ಅವರಿಗೆ ನನ್ನ ಅವಶ್ಯಕತೆ ಇಲ್ಲದಿರಬಹುದು ಎಂದು ವ್ಯಂಗ್ಯವಾಗಿ ನುಡಿದ ಅವರು, ಯತ್ನಾಳರು ಕರೆದರೆ ಅವರ ಪರ ಪ್ರಚಾರ ಮಾಡಲು ನಿರ್ಧರಿಸಿದ್ದೆ. ಆದರವರು ನನ್ನನ್ನು ಹಾಗೂ ನನ್ನ ಬೆಂಬಲಿಗರನ್ನೂ ಸಂಪರ್ಕಿಸಲಿಲ್ಲ. ಅವರಿಗೆ ಪ್ರಚಾರ ಮಾಡಲು ಅವರ ಸಿದ್ಧಸಿರಿ ಬ್ಯಾಂಕಿನ ಸಿಬ್ಬಂದಿ ಇದ್ದಾರೆ. ಅವರು ಕರೆಯದೇ ಹೋಗಲು ನಾನು ಲಜ್ಜೆಗೆಟ್ಟಿಲ್ಲ. ನಿನ್ನೆಯವರೆಗೂ ಅವರ ಆಹ್ವಾನಕ್ಕೆ ಕಾದೆ. ಆದರೆ ಇನ್ನು ಮುಂದೆ ಅವರು ಕರೆದರೂ ನಾನು ಪ್ರಚಾರಕ್ಕೆ ಹೋಗೊಲ್ಲ. ಜಿಲ್ಲೆಯ ಉಳಿದ 7 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳುವೆ ಎಂದು ಅಪ್ಪು ಪಟ್ಟಣಶೆಟ್ಟಿ ತಮ್ಮ ನಿರ್ಧಾರ ತಿಳಿಸಿದರು.
ಕಾರು ವಿವಾದಕ್ಕೆ ಪ್ರತಿಕ್ರಿಯೆ
ತಾವು ವಿರೋಧ ಪಕ್ಷದವರ ಕಾರಿನಲ್ಲಿ ಹೋಗಿರುವ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅಪ್ಪು ಪಟ್ಟಣಶೆಟ್ಟಿ, ವಿರೋಧಿಗಳ ಆರೋಪದಲ್ಲಿ ಹುರುಳಿಲ್ಲ. ನಾನು ಅಂದು ಬಳಸಿದ ಕಾರು ಸ್ನೇಹಿತ ಅನೀಲ ಹಾವಳೆ ಅವರದು, ನನ್ನ ಕಾರು ಬೇರೆಡೆ ಕಳಿಸಿದ್ದರಿಂದ ನಾನೇ ಅವರಿಗೆ ಹೇಳಿ ತರಿಸಿದ್ದೆ. ನನ್ನ ಪಕ್ಷ ನಿಷ್ಠೆಯ ಕುರಿತು ಯಾರೂ ನನಗೆ ಪ್ರಶ್ನಿಸುವ ಅಗತ್ಯವಿಲ್ಲ. ವಿರೋಧ ಪಕ್ಷದವರೊಂದಿಗೆ ಕೈ ಜೋಡಿಸುವಷ್ಟು ಥರ್ಡ ಕ್ಲಾಸ್ ಮನುಷ್ಯ ನಾನಲ್ಲ. ದಡ್ಡನಂತೂ ಮೊದಲೇ ಅಲ್ಲ. ನನ್ನ ಮೇಲೆ ಆರೋಪಕ್ಕೆ ಯಾವುದೇ ಕಾರಣಗಳೂ ಸಿಗುತ್ತಿಲ್ಲವಾದ್ದರಿಂದ ನನ್ನ ವಿರೋಧಿಗಳು ಇಂತಹ ಕ್ಷÄಲ್ಲಕ ಸಂಗತಿಗಳನ್ನು ವೈರಲ್ ಮಾಡುತ್ತಿದ್ದಾರೆ ಎಂದರು.