– ಗುರುರಾಜ ಕೆ.ಪಟ್ಟಣಶೆಟ್ಟಿ
ಯಾದಗೀರ: ಮೊದಲೆಲ್ಲ ಜನರೇ ಚಿತ್ರ ಮಂದಿರ ಹುಡುಕಿಕೊಂಡು ಹೋಗುತಿದ್ದರು. ಈಗ ಬದಲಾದ ಕಾಲದಲ್ಲಿ ಮೊಬೈಲ ಇಂಟರನೆಟ್ ಸಹಾಯದಿಂದ ಕ್ಷಣಾರ್ಧದಲ್ಲಿ ಜಗತ್ತನ್ನೇ ನೋಡುವ ಕಾಲಘಟದಲ್ಲಿ ಜನ ಚಿತ್ರಮಂದಿರಕ್ಕೆ ಹೋಗುವುದೇ ಕಡಿಮೆಯಾಗಿದೆ. ಚಿತ್ರಮಂದಿರವೇ ಜನರ ಬಳಿಗೆ ತೆಗೆದುಕೊಂಡು ಬರುವ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ ಪ್ರಶಾಂತ ಶೆಟ್ಟಿಯವರು.
ಸುಮಾರು ಹದಿನಾಲ್ಕುನೂರು ಚದುರಡಿ ಅಳತೆಯಲ್ಲಿ ಇನ್ನೂರು ಜನ ಆಸನವುಳ್ಳ ಕಬ್ಬಿಣ, ಪ್ಲೈವುಡ್ ಹಾಗೂ ಅಧುನಿಕ ತಂತ್ರಜ್ಞಾನ ಬಳಸಿ ನೊಡುಗರಿಗೆ ಬೆರಗಾಗುವ ಹಾಗೆ ಟೂರಿಂಗ ಟಾಕೀಜ್ ನಿರ್ಮಿಸಿದ್ದಾರೆ. ಇದಕ್ಕೆ ಸರಿ ಸುಮಾರು ಇಪ್ಪತ್ತೆರಡು ಲಕ್ಷ ರೂ ತಗುಲಿದ್ದು, ಇದು ನಾಲ್ಕು ಎ.ಸಿ ಹೊಂದಿದೆ. ವಿದ್ಯುತ್ ಕೈ ಕೊಟ್ಟಾಗ ಜನರೇಟರ್ ಸೌಲಭ್ಯ ಹಾಗೂ ಉತ್ತಮ ಗುಣಮಟ್ಟದ ಡಿ ಟಿ ಎಚ್ ಸೌಂಡ್ ಸಿಸ್ಟಂ ಹೊಂದಿದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಾಗಿಸುವಂತಿದ್ದು ಜೋಡಣೆಯೂ ಸುಲಭವಾಗಿದೆ. ಜೋಡಣೆಗೆ ಸರಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಹಣ ಕೆಲಸಗಾರರಿಗೇ ಬೇಕಾಗುವುದಂತೆ.
ಇಂತಹ ಸುಸಜ್ಜಿತವಾದ ಟೂರಿಂಗ್ ಟಾಕೀಜ ಭಾರತದ ಚಿತ್ರರಂಗದಲ್ಲೇ ಇದೇ ಮೊದಲು. ಎಲ್ಲೂ ಇಲ್ಲ ಇಂತಹ ಅಪರೂಪದ ಟಾಕೀಜ.
ಪ್ರಶಾಂತ ಶೆಟ್ಟಿ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿಯ ಶೇಡ್ಗಾರಿನವರು. ಇವರು ಕಳೆದ ವರ್ಷ ಫೆಬ್ರುವರಿ ಹದಿನಾರರಂದು ಅದ್ದೂರಿಯಾಗಿ ಕೃಷ್ಣ ಚಿತ್ರಮಂದಿರ ಲೋಕಾರ್ಪಣೆಗೊಳಿಸಿ ಅವರೇ ನಾಯಕ ನಟನಾಗಿ ನಟಿಸಿದ ನಾನ್ ರೌಡಿ ಚಲನಚಿತ್ರ ಪ್ರದರ್ಶಿಸುವ ಮೂಲಕ ವಿನೂತನ ಪ್ರಯೋಗ ಹಾಗೂ ಹೊಸ ಉದ್ಯಮಕ್ಕೆ ಕಾಲಿಟ್ಟರು. ಅವರ ದುರಾದೃಷ್ಟಕ್ಕೆ ಚಿತ್ರ ಸೋಲುಕಂಡಿತು. ಸುಮಾರು ಎಂಬತ್ತು ಲಕ್ಷದಲ್ಲಿ ಚಿತ್ರ ನಿರ್ಮಿಸಿ ಹನ್ನೆರಡು ಲಕ್ಷ ಖರ್ಚುಮಾಡಿ ಬಿಡುಗಡೆಗೊಳಿಸಿದ್ದರು. ಇದನ್ನು ರಾಜ್ಯಾದ್ಯಂತ ಕೇವಲ ಎಂಟನೂರು ಜನ ಮಾತ್ರ ವೀಕ್ಷಿಸಿದ್ದರಂತೆ. ಚಿತ್ರದ ಸೋಲಿಗೆ ಸಕಾಲಕ್ಕೆ ಚಿತ್ರಮಂದಿರ ಸಿಗದ ಕಾರಣವೂ ಒಂದಂತೆ. ಅದೇ ಸಮಯದಲ್ಲಿ ಹೊಳೆದಿದ್ದೇ ಸಂಚಾರಿ ಚಿತ್ರಮಂದಿರ ನಿರ್ಮಿಸುವ ಯೋಚನೆ. ಆಗ ರೂಪಗೊಂಡಿದ್ದೇ ಕೃಷ್ಣ ಸಂಚಾರಿ ಚಿತ್ರಮಂದಿರ.
ಕಳೆದ ಎರಡು ಮೂರು ದಿನಗಳಿಂದ ಯಾದಗೀರ ನಗರದ ವಣಕೇರಿ ಲೇಔಟಿನಲ್ಲಿ ಸದ್ದಿಲ್ಲದೇ ಹಲವಾರು ಕಾರ್ಮಿಕರು ಹಗಲು ರಾತ್ರಿಯೆನ್ನದೇ ತಯಾರಿಸುತಿದ್ದಾರೆ.
ಇದು ಅವರ ಎರಡನೇ ಕ್ಯಾಂಪ್ ಆಗಿದೆ. ಆಸಕ್ತ ವಿತರಕರಿಗೆ ದಿನದ ಲೆಕ್ಕದಲ್ಲಿ ಬಾಡಿಗೆಯೂ ನೀಡುವರಂತೆ. ಇದೇ ಇಪ್ಪತ್ತೊಂದರಂದು ಯಾದಗೀರ ನಗರದ ನಗರಸಭೆ ಆಯುಕ್ತರು, ಸಿನಿ ಹಾಗೂ ಧಾರಾವಾಹಿ ಕಲಾವಿದರೂ ಆಗಿರುವ ಸಂಗಮೇಶ ಉಪಾಸೆಯವರು ನಟಿಸಿರುವ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ರಮಜಾನ್ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಅದಕ್ಕೋಸ್ಕರ ಯಾದಗೀರ ನಗರದಲ್ಲೂ ಪ್ರದರ್ಶನಕ್ಕೆ ಕೃಷ್ಣಾ ಟೂರಿಂಗ್ ಟಾಕೀಜ ಸಜ್ಜಾಗುತ್ತಿದೆ. ಜಿಲ್ಲಾ ಕೇಂದ್ರವಾದರೂ ಒಂದು ಸುಸಜ್ಜಿತವಾದ ಚಿತ್ರಮಂದಿರವಿಲ್ಲದ ಕಾರಣ ಚಿತ್ರಮಂದಿರವೇ ನಗರಕ್ಜೆ ತಂದಿದ್ದಾರೆ. ಬನ್ನಿ ಇದರೊಂದಿಗೆ ರಂಜಾನ್ ಚಿತ್ರ ವೀಕ್ಷಿಸೋಣ.