ಎಲ್ಲ ಧರ್ಮದವರಲ್ಲಿ ಸಾಮರಸ್ಯ ಬೆಸೆಯುವ, ಮನಸ್ಸುಗಳನ್ನು ಹೆಣೆಯುವ ಬೆಸುಗೆಯ ಕಥೆ
ವಿಜಯಪುರ: ಧರ್ಮದಂಗಲ್ ಕಾಣುತ್ತಿರುವ ಈ ದಿನಗಳಲ್ಲಿ ಕೋಮು ಸಾಮರಸ್ಯವನ್ನು ಬೆಸೆಯುವ, ರೈತರ ಸಮಸ್ಯೆ ಮತ್ತು ಹಸಿವಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಮನೋಜ್ಞ ಚಿತ್ರವಾಗಿ “ರಂಜಾನ್” ಸಿನಿಮಾ ಮೂಡಿಬಂದಿದ್ದು, ಏ.21ರಂದು ರಾಜ್ಯದಾದ್ಯಂತ ತೆರೆಕಾಣಲಿದೆ ಎಂದು ರಂಜಾನ್ ಚಿತ್ರದ ನಾಯಕ, (ಸಿಲ್ಲಿಲಲ್ಲಿ ಧಾರವಾಹಿಯ ಗೋವಿಂದ ಖ್ಯಾತಿಯ ನಟ) ಹಾಗೂ ಕೆಎಎಸ್ ಅಧಿಕಾರಿ ಸಂಗಮೇಶ ಉಪಾಸೆ ಹೇಳಿದರು.
ನಗರದ ಮಧುವನ ಹೊಟೇಲ್ ಸಭಾಂಗಣದಲ್ಲಿ ಶನಿವಾರ “ರಂಜಾನ್” ಸಿನಿಮಾದ ಟ್ರೇಲರ್ ಬಿಡುಗಡೆ ಹಾಗೂ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ರಂಜಾನ್” ಸಿನಿಮಾ ಹಿರಿಯ ಸಾಹಿತಿ ಫಕೀರ ಮಹ್ಮದ ಕಟ್ಟಾಡಿ ಅವರ “ನೊಂಬು” ಕಥೆ ಆಧಾರಿತ ಚಿತ್ರ. ನೊಂಬು ಎಂದರೆ ಹಸಿವು, ಉಪವಾಸ ಎಂದರ್ಥ, ಹಸಿವಿಗೆ ಯಾವುದೇ ಜಾತಿ ಇಲ್ಲ. ಇದು ಎಲ್ಲ ಜಾತಿ, ಧರ್ಮದವರನ್ನೂ ಕಾಡುತ್ತದೆ. ಈ ಚಿತ್ರ ಮುಖ್ಯವಾಗಿ ಮನುಷ್ಯತ್ವದ ಹಸಿವನ್ನು ತೆರೆದಿಡುತ್ತದೆ. ಹಸಿವಿಗೆ ಮೂಲ ಕಾರಣ ರೈತರ ಸ್ಥಿತಿ-ಗತಿ. ರೈತರು ಸುಭೀಕ್ಷರಾಗಿದ್ದರೆ ಬಡತನ, ಹಸಿವು ಇರೋಲ್ಲ. ಈ ನಾಡಿನ ರೈತರ ಸಮಸ್ಯೆಗಳೆಲ್ಲ ಅಂತ್ಯ ಕಂಡರೆ ಎಲ್ಲ ಹಸಿವು ನೀಗುತ್ತದೆ ಎಂಬುದೇ ಈ ಸಿನಿಮಾದ ಮುಖ್ಯ ತಿರುಳಾಗಿದೆ ಎಂದರು.
ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಘಟನೆಗಳು ಆಗಾಗ ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಸಾಮಾಜಿಕ ಕಳಕಳಿ ಅಗತ್ಯವೆಂದು ಈ ‘ನೊಂಬು’ ಕಥೆಯನ್ನು ಆಯ್ಕೆ ಮಾಡಿದೆ. ‘ರಂಜಾನ್’ ಸಿನಿಮಾದಲ್ಲಿ ಎಲ್ಲ ಧರ್ಮದ ಜನರಲ್ಲಿ ಸಾಮರಸ್ಯ ಬೆಸೆಯುವ ಹಾಗೂ ಮನಸ್ಸುಗಳನ್ನು ಹೆಣೆಯುವ ಬೆಸುಗೆಯ ಕಥೆ ಇದೆ. ಭಾವೈಕ್ಯತೆಯ ಸಂದೇಶವನ್ನು ಸಾರುವ, ಎಲ್ಲ ಜಾತಿ-ಧರ್ಮ, ಪಕ್ಷ-ಪಂಗಡವನ್ನೂ ಮೀರಿಸುವ ಸಿನಿಮಾ ಆಗಿ ‘ರಂಜಾನ್’ ಮೂಡಿಬಂದಿದೆ. ಎಂದರು.
ಸಿನಿಮಾದ ಕಥೆಗೆ ತಕ್ಕಂತೆ ದಕ್ಷಿಣ ಕನ್ನಡದ ಹಲವೆಡೆ ಮಸೀದಿ, ದರ್ಗಾ, ಕಬರಸ್ತಾನ ಮತ್ತು ಮದರಸಾಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಆ ಭಾಗದ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಮಸೀದಿ, ದರ್ಗಾದಲ್ಲಿ ಚಿತ್ರೀಕರಣ ಮಾಡಲು ಮೌಲ್ವಿಗಳು ಅವಕಾಶ ಮಾಡಿಕೊಟ್ಟರಲ್ಲದೇ ನೈಜ ಮೌಲ್ವಿಗಳೇ ಚಿತ್ರದಲ್ಲಿ, ನಟಿಸಿರುವುದು ವಿಶೇಷವಾಗಿದೆ. ಇತ್ತ ಕಮರ್ಷಿಯಲ್, ಅತ್ತ ಕಲಾತ್ಮಕವಲ್ಲದ ‘ರಂಜಾನ್’ ಚಿತ್ರ ಕುಟುಂಬ ಪರಿವಾರದೊಂದಿಗೆ ನೋಡುವಂತಹ ಸದಭಿರುಚಿಯ ಸಂಗೀತಮಯ ಚಿತ್ರವಾಗಿ ಮೂಡಿ ಬಂದಿದ್ದು ಕನ್ನಡಿಗರು ಈ ಚಿತ್ರವನ್ನು ನೋಡಿ ಬೆಂಬಲಿಸುತ್ತಾರೆAಬ ಆತ್ಮ ವಿಶ್ವಾಸ ತಮಗಿದೆ ಎಂದು ನಾಯಕ ನಟ ಸಂಗಮೇಶ ಉಪಾಸೆ ವಿಶ್ವಾಸ ವ್ಯಕ್ತಪಡಿಸಿದರು.
‘ಸಿಲ್ಲಿ-ಲಲ್ಲಿ” ಧಾರಾವಾಹಿಯಲ್ಲಿ ನನ್ನ ಕಂಪೌ0ಡರ ಗೋವಿಂದ ನ ಪಾತ್ರ ನಾಡಿನ 6ಕೋಟಿ ಜನರ ಗಮನ ಸೆಳೆದಿತ್ತು. ಆದರೆ ‘ರಂಜಾನ್’ ಚಿತ್ರದಲ್ಲಿ ಹಾಸ್ಯ ಬಿಟ್ಟು ಗಂಭೀರವಾದ ಪಾತ್ರಕ್ಕೆ ಹೊರಳಿದ್ದೇನೆ. ತುಂಬ ಜವಾಬ್ದಾರಿಯುತ ಪಾತ್ರ ಇದಾಗಿದ್ದು ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ ತೃಪ್ತಿ ನನಗಿದೆ.
‘ರಂಜಾನ್’ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ ರಂಜಾನ ಆಗಿ ನಾನು ನಟಿಸಿದ್ದು, ನನ್ನ ಅಮಾಯಕ ಮಡದಿಯ ಪಾತ್ರಕ್ಕಾಗಿ ಹುಡುಕಾಟ ನಡೆಸಿದಾಗ ನನ್ನ ಧರ್ಮಪತ್ನಿ, ಪ್ರೇಮಾವತಿಯೇ ಅದಕ್ಕೆ ಸೂಕ್ತ ಎನಿಸಿ ಆ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಲಾಯಿತು. ಇನ್ನು ಚಿತ್ರದಲ್ಲಿ ನನ್ನ ಮಗಳ ಪಾತ್ರದಲ್ಲಿ ನನ್ನ ಪುತ್ರಿ ಇಶಾನ್ಯ ಸಹ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.
ಧರ್ಮಾತೀತವಾಗಿ ಮತ್ತು ಕಾಲಾತೀತವಾಗಿ ಮೂಡಿ ಬಂದ ‘ರಂಜಾನ್’ ಚಿತ್ರದ ಸಾಹಿತ್ಯ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ನಾನೇ ಬರೆದಿದ್ದು, ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಪಂಚಾಕ್ಷರಿ ಸಿ.ಇ. ನಿರ್ದೇಶಿಸಿದ್ದಾರೆ. ಕೆ.ಎಂ. ಇಂದ್ರ ಅವರು ಸಂಗೀತ ನೀಡಿದ್ದು, ಸ್ಥಳಿಯ ಮಡಿವಾಳಪ್ಪ ಗೋಗಿ ನಿರ್ಮಾಪಕರಾಗಿದ್ದಾರೆ.
-ಸಂಗಮೇಶ ಉಪಾಸೆ, ಚಿತ್ರನಟ, ಬರಹಗಾರ
‘ರಂಜಾನ್’ ಎಂದರೆ ಕೇವಲ ಊಟ, ಉಪವಾಸ ಬಿಡುವುದಲ್ಲ, ಇಂದ್ರೀಯಗಳನ್ನು ನಿಗ್ರಹಿಸಿಕೊಳ್ಳುವುದು. ನಮ್ಮೆಲ್ಲರ ಮಾಲೀಕ ಒಬ್ಬನೇ ಇದ್ದು ಹಿಂದು-ಮುಸ್ಲಿರು ಸಹೋದರರಂತೆ ಬಾಳಿದರೆ ಈ ದೇಶದಲ್ಲಿ ಶಾಂತಿ ನೆಮ್ಮದಿ ಸಾಧ್ಯ. ‘ರಂಜಾನ್’ ಸಿನಿಮಾ ಇದು ಎಲ್ಲರಿಗೋಸ್ಕರ ಇರುವ ಚಿತ್ರ. ಮನುಷ್ಯತ್ವ ಬಹಿರಂಗಗೊಳಿಸಲು, ವಿಶ್ವ ಬಂಧುತ್ವ ಸಾರಲು, ಭಾವೈಕ್ಯತೆ ಮೂಡಲು ಸಹಕಾರಿಯಾಗಬಲ್ಲ “ರಂಜಾನ್” ನಂತಹ ಅರ್ಥಪೂರ್ಣ ಸಿನಿಮಾ ಬರಲು ಕಾರಣರಾದ ಕೆಎಎಸ್ ಅಧಿಕಾರಿ ಸಂಗಮೇಶ ಉಪಾಸೆ ಅಭಿನಂದನಾರ್ಹರು. ‘ರಂಜಾನ’ ಇದೊಂದು ಜೀವನ ಪರಿಶುದ್ಧಗೊಳಿಸುವ ಚಲನಚಿತ್ರವೆಂದರೆ ತಪ್ಪಾಗಲಿಕ್ಕಿಲ್ಲ.
-ಡಾ. ಸೈಯ್ಯದ ಎಫ್.ಎಚ್.ಇನಾಮದಾರ ಗುರೂಜಿ( ಬಾಬಾ), ಪೀಠಾಧಿಪತಿ, ಹಜರತ ಸೈಯ್ಯದ ಶಾಹ ಹುಸೇನಪೀರ ಖಾದ್ರಿ-ಚಿಪ್ತಿ (ರ.ಅ)
ಎಲ್ಲ ಧರ್ಮಗಳ ಸಾರವೂ ಒಂದೇ. ಮಾನವೀಯತೆ ಸಾರುವ, ಸಾಮಾಜಿಕ ಕಳಕಳಿಯ ಚಿತ್ರ ‘ರಂಜಾನ’ ಆಗಿದ್ದು ಇಂತಹ ಚಿತ್ರವನ್ನು ಕನ್ನಡಿಗರು ನೋಡಿ ಪ್ರೋತ್ಸಾಹಿಸಬೇಕಿದೆ. ಚಿತ್ರದ ಎಲ್ಲ ಹಾಡುಗಳು ಅರ್ಥಗರ್ಭಿತವಾಗಿದ್ದು ಈ ಚಿತ್ರ ಅಭೂತಪೂರ್ವ ಯಶಸ್ಸು ಕಂಡು, ಈ ಚಿತ್ರತಂಡದಿAದ ಇನ್ನೂ ಇಂತಹ ಸಾಮಾಜಿಕ ಸಂದೇಶ ನೀಡುವ ಉತ್ತಮ ಚಿತ್ರಗಳ ನಿರ್ಮಾಣಕ್ಕೆ ಉತ್ತೇಜನ ಸಿಗಲಿ.
-ಚಂದ್ರಯ್ಯ ಮಹಾಸ್ವಾಮಿಗಳು
ಮೂಲ ಮಹಾಸಂಸ್ಥಾನ ಮಠ, ಬಬಲಾದಿ-ಝಂಜರವಾಡ