ಬಸವನಬಾಗೇವಾಡಿ: ಮತಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲರು ಪಟ್ಟಣದಲ್ಲಿ ಪುರಸಭೆಯಿಂದ ಕೈಗೊಂಡಿರುವ ಮೆಗಾಮಾರುಕಟ್ಟೆ, ಬಸವ ಭವನ, ಪುರಸಭೆ ನೂತನ ಕಟ್ಟಡ, ಜಿ ಪ್ಲಸ್ ಒನ್ ಮನೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇತರೆಡೆ ಮಾದರಿಯಾಗುವಂತೆ ಕೈಗೊಳ್ಳಲಾಗಿದೆ ಎಂದು ಕಾಮಗಾರಿಗಳ ಬಗ್ಗೆ ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ ರಹೀಂ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವ ಜನ್ಮಸ್ಥಳ ಬಸವನಬಾಗೇವಾಡಿಗೆ ಪ್ರಥಮ ಬಾರಿಗೆ ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ ರಹೀಂ ಖಾನ್ ಅವರು ಮಂಗಳವಾರ ಸಂಜೆ ಆಗಮಿಸಿ ಮತಕ್ಷೇತ್ರದ ಶಾಸಕ, ಸಕ್ಕರೆ ಮತ್ತು ಕಬ್ಬು ನಿರ್ದೇಶನಾಲಯ, ಕೃಷಿ ಮಾರುಕಟ್ಟೆ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಅವರು ಪುರಸಭೆಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವ ಶಿವಾನಂದ ಪಾಟೀಲರೊಂದಿಗೆ ವೀಕ್ಷಿಸಿದ ನಂತರ ಪುರಸಭೆಯ ಸಭಾಂಗಣದಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆಯಿಂದ ಈ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಶ್ಲಾಘನೀಯ. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತಂದು ಅವರಿಂದ ಈ ಕಾಮಗಾರಿಗಳನ್ನು ಉದ್ಘಾಟನೆಯಾಗುವಂತೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮತ್ತೆ ಈ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಮತ್ತೊಮ್ಮೆ ವೀಕ್ಷಿಸುತ್ತೇನೆ ಎಂದರು.
ಪಟ್ಟಣದಲ್ಲಿರುವ ಉದ್ಯಾನವನದ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ವಹಿಸುತ್ತೇನೆ. ಪಟ್ಟಣದ ಅಭಿವೃದ್ಧಿ ಸಹಕಾರ ನೀಡುವುದಾಗಿ ಹೇಳಿದ ಅವರು ರಾಜ್ಯದಲ್ಲಿ ಶೇ. ೭೦ ರಷ್ಟು ಡೆಂಗ್ಯೂ ನಿಯಂತ್ರಣಕ್ಕೆ ಬಂದಿದೆ ಎಂದರು. ರಿಂಗ್ ರಸ್ತೆ ನಿರ್ಮಾಣ, ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೆ ಏರಿಸುವ ಕುರಿತಂತೆ ಮುಂದಿನ ದಿನಗಳಲ್ಲಿ ಸಂಬಂಧಿಸಿದಂತೆ ಗಮನ ಹರಿಸುವ ಭರವಸೆ ನೀಡಿದರು.
ಸಭೆಃ ಸಚಿವ ಶಿವಾನಂದ ಪಾಟೀಲರು ಮಾಡಿರುವ ಕಾಮಗಾರಿಗಳನ್ನು ಅಧಿಕಾರಿಗಳು ಉಳಿಸಿಕೊಂಡು ಹೋಗುವ ಪರಿಜ್ಞಾನ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಪುರಸಭೆಯಲ್ಲಿ ಮುಖ್ಯಾಧಿಕಾರಿಗಳಿಂದ ಹಿಡಿದು ಯಾವುದೇ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಹೋದರೆ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪುರಸಭೆಯ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಸಚಿವರು ಎಚ್ಚರಿಸಿದರು. ಪುರಸಭೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸಚಿವ ಶಿವಾನಂದ ಪಾಟೀಲ ಅವರು ಇದುವರೆಗೂ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳಿಗೆ ಟೆಂಡರ್ ಯಾಕೆ ಕರೆದಿಲ್ಲ ಎಂದು ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದ ಅವರು, ಬಸವ ಭವನವನ್ನು ಸ್ವಚ್ಛವಾಗಿ ಇಡುವ ಕಡೆಗೆ ಗಮನ ಹರಿಸಬೇಕು. ಪುರಸಭೆಯ ಎಲ್ಲ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಗಮನ ಹರಿಸಬೇಕು. ಅಭಿಯಂತರ ಸಂತೋಷ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ರೀತಿಯಾಗದಂತೆ ಗಮನ ಹರಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.
ವಿಜಯಪುರದಿಂದ ಸಂಜೆ ಆಗಮಿಸಿದ ಅವರು ಮೊದಲಗೆ ಇವಣಗಿ ರಸ್ತೆಯಲ್ಲಿರುವ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ತೆರಳಿ ಅಲ್ಲಿ ಕೈಗೊಂಡಿರುವ ಕಾರ್ಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾಮಾರುಕಟ್ಟೆ ತೆರಳಿ ಮೆಗಾಮಾರುಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳನ್ನು ವೀಕ್ಷಿಸಿದರು. ಸಚಿವ ಶಿವಾನಂದ ಪಾಟೀಲ ಅವರು ಮೆಗಾಮಾರುಕಟ್ಟೆಯ ಬಗ್ಗೆ ಸಮಗ್ರ ವಿವರ ಮಾಹಿತಿಯನ್ನು ನೀಡಿದರು. ಬಸವ ಭವನಕ್ಕೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ನೂತನ ಪುರಸಭೆಯ ಕಟ್ಟಡಕ್ಕೆ ತೆರಳಿ ಪ್ರತಿಯೊಂದು ಕೋಣೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಪೌರಾಡಳಿತ ನಿರ್ದೇಶಕ ಪ್ರಭುಲಿಗ ಕವಳಿಕಟ್ಟಿ, ಜಿಲ್ಲಾ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಪುರಸಭೆಯ ಸದಸ್ಯರು, ಸಿಬ್ಬಂದಿಗಳು, ವಿವಿಧ ಅಧಿಕಾರಿಗಳು, ಮುಖಂಡರು ಇದ್ದರು.
ದರ್ಶನ: ಪಟ್ಟಣದ ಆರಾಧ್ಯ ದೈವ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ನಂತರ ಬಸವ ಜನ್ಮ ಸ್ಮಾರಕಕ್ಕೆ ಬೇಟಿ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

