ವಿಜಯಪುರ: ಬುಧವಾರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಟೆಕಡೆಗಲ್ಲಿಯಲ್ಲಿರುವ ಸರಕಾರಿ ಉರ್ದು ಶಾಲೆ ನಂ.೫ಗೆ ಭೇಟಿ ನೀಡಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಪರಿಶೀಲನೆ ನಡೆಸಿ, ಮಕ್ಕಳಿಗೆ ಪಾಠ ಬೋಧನೆ ಮಾಡಿದರು.
ಶಾಲೆಯ ಶಿಕ್ಷಕರಿಂದ ಶಾಲೆಯಲ್ಲಿ ಕುರಿತಾಗಿ ಮಾಹಿತಿ ಪಡೆದುಕೊಂಡ ಅವರು, ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ನೋಡಿಕೊಳ್ಳುವ ಮೂಲಕ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳಿಗೆ ಶುಚಿತ್ವ, ಶಿಸ್ತು ಮತ್ತು ಅಧ್ಯಯನ ಮಹತ್ವದ ಬಗ್ಗೆ ತಿಳಿಸಿಕೊಡಬೇಕು ಎಂದು ಸೂಚಿಸಿದ ಅವರು ಶಾಲೆಯ ಹಲವು ಕಡತ ಮತ್ತು ವಹಿಗಳನ್ನು ಪರಿಶೀಲಿಸಿದರು.
ನಗರದ ಟೆಕಡೆಗಲ್ಲಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಆಹಾರದ ವೇಳಾಪಟ್ಟಿಯಂತೆ ಗುಣಮಟ್ಟದ ಆಹಾರ ವಿತರಿಸಲು ಕ್ರಮ ವಹಿಸಬೇಕು, ದಾಖಲಾತಿಗಳ ನಿರ್ವಹಣೆ, ಪಾಲಕರ ಸಭೆಯ ಮಾಹಿತಿ, ಆಗಾಗ ಕಡ್ಡಾಯವಾಗಿ ಸಭೆಗಳನ್ನು ಹಮ್ಮಿಕೊಂಡು ಇಲಾಖೆ ಯೋಜನೆಗಳ ಸದುಪಯೋಗದ ಬಗ್ಗೆ ಸಾರ್ವಜನಿಕರಿಗೆ ವಿವರವಾಗಿ ಮಾಹಿತಿಯನ್ನು ನೀಡಬೇಕು. ಮಕ್ಕಳ ಉತ್ತಮ ಬೆಳವಣಿಗೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ ಈ ದಿಶೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಮಕ್ಕಳಿಂದ ಶಾಲಾ ಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಹಾಡು ಮತ್ತು ಅಭಿನಯ ಗೀತೆಯನ್ನು ಕೇಳಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವ್ವಾಣ ಸೇರಿದಂತೆ ಶಿಕ್ಷಕರು, ಅಧಿಕಾರಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

