ತಾಳಿಕೋಟೆಯಲ್ಲಿ ಶರಣ ಸಾಹಿತ್ಯ ಪರಿಷತ್ ದಿಂದ ಉಪನ್ಯಾಸ ಕಾರ್ಯಕ್ರಮ
ತಾಳಿಕೋಟಿ: ಬಸವಾದಿ ಶರಣರು ಕೊಟ್ಟುಹೋದ ವಚನಗಳು ಬದುಕಿನ ನೈಜ ಉದ್ದೇಶವನ್ನು ತಿಳಿಸುತ್ತವೆ. ವಚನಗಳು ಸರ್ವಕಾಲಿಕ ಸತ್ಯಗಳಾಗಿದ್ದು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ಶಿಕ್ಷಕ ರುದ್ರೇಶ ಕಿತ್ತೂರ ಹೇಳಿದರು.
ಸೋಮವಾರ ಸಂಜೆ ಪಟ್ಟಣದ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕ ಘಟಕ ಯುವ ಘಟಕ ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶರಣರ ಅನುಭಾವದಿಂದ ರಚನೆಯಾದ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. 12ನೇ ಶತಮಾನದಲ್ಲಿ ಕಲ್ಯಾಣ ಅನುಭವ ಮಂಟಪದಲ್ಲಿದ್ದ ಬಸವಾದಿ ಶರಣರು ಸಮಾಜದಲ್ಲಿರುವ ಅಸ್ಪೃಶ್ಯತೆ ಅಸಮಾನತೆ ಹಾಗೂ ಆಧ್ಯಾತ್ಮಿಕ ಶೋಷಣೆಯನ್ನು ಹೋಗಲಾಡಿಸಲು ಜೀವದ ಹಂಗು ತ್ವರೆದು ಶ್ರಮಿಸಿದರು. ಅವರು ಸಮಾಜದಲ್ಲಿರುವ ಮೌಢ್ಯಗಳನ್ನು ವಿರೋಧಿಸಿದರು. ಶರಣರ ವಚನಗಳು ವೈಚಾರಿಕತೆಯಿಂದ ಕೂಡಿದ್ದು ಅದರಲ್ಲಿ ಹೃದಯಕ್ಕೆ ತಟ್ಟುವ ವಿಷಯಗಳಿವೆ ಅವುಗಳನ್ನು ಅರ್ಥೈಸಿಕೊಳ್ಳುವ ಅಗತ್ಯ ಇದೆ ಎಂದ ಅವರು ಬಸವಾದಿ ಶರಣರು ಕಾಯಕ ಹಾಗೂ ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ ಅವರ ಬದುಕು ನಮಗೆ ದಾರಿ ದೀಪವಾಗಬೇಕು ಎಂದರು. ಶರಣ ಪರಮಣ್ಣ ಹೆಬ್ಬಾಳ ಮಾತನಾಡಿ, ವಚನಗಳು ಕೇವಲ ಹೇಳುವುದಕ್ಕೆ ಕೇಳುವುದಕ್ಕೆ ಮತ್ತು ಹಾಡುವದಕ್ಕೆ ಸೀಮಿತವಾಗದೇ ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವಂಥಾಗಬೇಕು ಎಂದರು.
ಶಸಾಪ ತಾಲೂಕ ಘಟಕದ ಅಧ್ಯಕ್ಷ ಅಶೋಕ ಹಂಚಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಬಸವಾದಿ ಶರಣರು ನಮ್ಮ ಬದುಕಿನ ಪ್ರೇರಕ ಶಕ್ತಿಗಳಾಗಬೇಕು ಅವರು ನುಡಿದಂತೆ ನಡೆದು ತೋರಿಸಿದವರಾಗಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಡೆದು ನಮ್ಮ ಬದುಕು ಸಾರ್ಥಕ ಮಾಡಿಕೊಳ್ಳಬೇಕಾಗಿದೆ ಎಂದ ಅವರು ದತ್ತಿನಿಧಿಗಳು ಪರಿಷತ್ ನ ಪ್ರಮುಖ ಆರ್ಥಿಕ ಮೂಲಗಳಾಗಿವೆ ಸಹಕಾರಕ್ಕಾಗಿ ತಾವು ಮುಂದೆ ಬರಬೇಕು ಎಂದರು.
ಈ ಸಮಯದಲ್ಲಿ ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಶಸಾಪ ನಿಕಟ ಪೂರ್ವ ಅಧ್ಯಕ್ಷ ಜಿ.ಎಸ್.ಜಮ್ಮಲದಿನ್ನಿ, ಯುವ ಘಟಕಾದ್ಯಕ್ಷ ಜಗದೀಶ ಬಿಳೇಭಾವಿ, ಈರಯ್ಯಮಠ, ಖಾಜಾಹುಸೇನ ಮುಲ್ಲಾ, ಡಾ.ನಜೀರ ಕೊಳ್ಯಾಳ, ಈರಣ್ಣ ಕಲಬುರ್ಗಿ, ಶಿವಲಿಂಗಪ್ಪ ಪಾಲ್ಕಿ, ಸೋಮಶೇಖರಯ್ಯ ಹಿರೇಮಠ, ರಾಮನಗೌಡ ಪಾಟೀಲ, ಶಿಕ್ಷಕ ಗೋನಾಳ ಮತ್ತೀತರರು ಇದ್ದರು.
ಶರಣ ಪ್ರಭು ಸಣ್ಣಕ್ಕಿ ಪ್ರಾರ್ಥಿಸಿದರು. ಶಿಕ್ಷಕ ಗುಂಡುರಾವ ಧನಪಾಲ ಸ್ವಾಗತಿಸಿದರು. ಶರಣ ಸಿದ್ದು ಕರಡಿ ನಿರೂಪಿಸಿದರು. ಸಿದ್ದನಗೌಡ ಚೌದ್ರಿ ವಂದಿಸಿದರು.

